ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬಂಟ್ವಾಳ: ತರುಣಿಯರ ಸರಣಿ ಹತ್ಯೆ ಪ್ರಕರಣ: ಆರೋಪಿ ಮೋಹನ್‌ಗೆ ನ.13ರ ವರೆಗೆ ನ್ಯಾಯಾಂಗ ಬಂಧನ

ಬಂಟ್ವಾಳ: ತರುಣಿಯರ ಸರಣಿ ಹತ್ಯೆ ಪ್ರಕರಣ: ಆರೋಪಿ ಮೋಹನ್‌ಗೆ ನ.13ರ ವರೆಗೆ ನ್ಯಾಯಾಂಗ ಬಂಧನ

Tue, 03 Nov 2009 03:11:00  Office Staff   S.O. News Service
ಬಂಟ್ವಾಳ, ನ.೨: ಇಪ್ಪತ್ತು ಮಂದಿ ತರುಣಿಯರನ್ನು ವಂಚಿಸಿ ಹತ್ಯೆಗೈದ ಆರೋಪಿ ಮೋಹನ್ ಕುಮಾರ್ ಯಾನೆ ಆನಂದನನ್ನು ಬಂಟ್ವಾಳ ಪೊಲೀಸರು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ.೧೩ರ ವರೆಗೆ ನ್ಯಾಯಾಂಗ ಬಂಧನವಿಧಿಸಲಾಗಿದೆ.

ಕಳೆದ ಅ.೧೮ರಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಆರೋಪಿ ಸಯನೈಡ್ ಕಿಲ್ಲರ್ ಮೋಹನ್ ಕುಮಾರ್, ೧೮ ಯುವತಿಯರನ್ನು ಕೊಲೆಗೈದಿರುವುದನ್ನು ಒಪ್ಪಿಕೊಂಡಿದ್ದ. 

ಬಳಿಕ ಆರೋಪಿಯನ್ನು ಎರಡು ಬಾರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಎರಡು ಬಾರಿಯೂ ನ್ಯಾಯಾಲಯ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು.

ಸೋಮವಾರ ಸಂಜೆ ಪುತ್ತೂರು ಎ‌ಎಸ್ಪಿ ಡಾ.ಚಂದ್ರಗುಪ್ತಾ, ಆರೋಪಿ ಮೋಹನ್ ಕುಮಾರ್‌ನನ್ನು ಬಂಟ್ವಾಳ ಜೆ‌ಎಂಎಫ್‌ಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶ ನಾಗರಾಜ ಅಂಕಸದೊಡ್ಡಿಯವರ ಮುಂದೆ ಹಾಜರುಪಡಿಸಿದ್ದು, ಅವರು ನ.13ರ ವರೆಗೆ ನ್ಯಾಯಾಂಗ ಬಂಧನವಿಧಿಸಿದ್ದಾರೆ.

ತನಿಖೆ ಚುರುಕು: ಎ‌ಎಸ್ಪಿ

ಸರಣಿ ಹತ್ಯೆ ಆರೋಪಿ ಮೋಹನ್ ಕುಮಾರ್ ವಿರುದ್ಧ ಪ್ರಕರಣವನ್ನು ಮತ್ತಷ್ಟು ಚುರುಕುಗೊಳಿಸುವುದಾಗಿ ಪುತ್ತೂರು ಎ‌ಎಸ್ಪಿ ಡಾ.ಚಂದ್ರಗುಪ್ತಾ ತಿಳಿಸಿದ್ದಾರೆ.

ಬಿ.ಸಿ.ರೋಡಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಿಮಾರುವಿನ ಅನಿತಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹಂತಕನಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ತೊಕ್ಕೊಟ್ಟಿನ ಫೈನಾನ್ಸ್‌ಗಳಲ್ಲಿ ಅಡವಿಟ್ಟ ಅನಿತಾಳ ಆಭರಣಗಳನ್ನು  ವಶಪಡಿಸಿಕೊಳ್ಳಲಾಗಿದೆ ಎಂದರು.

ಪೊಳಲಿ ಕರಿಯಂಗಳದ ಶಶಿಕಲಾ ಸಾವಿನ ಬಗ್ಗೆಯೂ ತನಿಖೆ ನಡೆಸಲಾಗಿದ್ದು, ಆರೋಪಿಯನ್ನು ಬಂಟ್ವಾಳ, ಮಂಗಳೂರು, ಹಾಸನ, ಪುತ್ತೂರು, ಮಡಿಕೇರಿ, ಕುಶಾಲನಗರ ಮೊದಲಾದ ಕಡೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ ಎಂದು ಎ‌ಎಸ್ಪಿ ತಿಳಿಸಿದರು.

ವಿಟ್ಲ ಠಾಣಾ ವ್ಯಾಪ್ತಿಯ ಮಿತ್ತೂರು ಹಾಗೂ ಪೆರಾಜೆ ಸಮೀಪದ ಇಬ್ಬರು ಯುವತಿಯರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮುಂದಿನ ದಿನಗಳಲ್ಲಿ ತನಿಖೆ ನಡೆಸಲಾಗುವುದು ಎಂದ ಅವರು, ಅವಶ್ಯ ಬಿದ್ದರೆ ಮತ್ತೆ ಪೊಲೀಸ್ ಕಸ್ಟಡಿಗೆ ಆರೋಪಿಯನ್ನು ಒಪ್ಪಿಸುವಂತೆ ನ್ಯಾಯಾಲಯಕ್ಕೆ ವಿನಂತಿ ಮಾಡುತ್ತೇವೆ ಎಂದರು.

ವೃತ್ತ ನಿರೀಕ್ಷಕ ನಂಜುಂಡೇ ಗೌಡ, ಗ್ರಾಮಾಂತರ ಠಾಣಾಧಿಕಾರಿ ಎಚ್.ಶಿವಪ್ರಕಾಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share: