ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ಬರಲಿದ್ದಾಳೆ ಭಾವನಾ - ಕೇಬಲ್ ಟೀವಿ ಕುರಿತು ಹೆಚ್ಚಿನ ವಿವರಗಳು

ಭಟ್ಕಳ: ಬರಲಿದ್ದಾಳೆ ಭಾವನಾ - ಕೇಬಲ್ ಟೀವಿ ಕುರಿತು ಹೆಚ್ಚಿನ ವಿವರಗಳು

Wed, 03 Mar 2010 17:17:00  Office Staff   S.O. News Service

ಭಟ್ಕಳ, ಮಾರ್ಚ್ 3; ಇಲ್ಲಿನ ಸಾಕ್ಷಿ ಎಂಟರ್‌ಪ್ರೈಸಸ್‌ನವತಿಯಿಂದ ಸ್ಥಳೀಯ ಕೇಬಲ್‌ನಲ್ಲಿ ಭಟ್ಕಳದ ಸಾಮಾಜಿಕ,ಸಾಂಸ್ಕೃತಿಕ ಸೇರಿದಂತೆ ವಿವಿಧ ಕ್ಷೇತ್ರದ ಕಾರ್ಯಕ್ರಮಗಳನ್ನು ದೃಶ್ಯವೈಭವದ ಮೂಲಕ ಬಿಂಬಿಸುವ ಭಾವನಾ ನಮ್ಮ ವಾಹಿನಿ ಸದ್ಯದಲ್ಲೇ ಆರಂಭಗೊಳ್ಳಲಿದೆ.

 

ಈ ಕುರಿತು ಕರೆದ ಪತ್ರಿಕಾಗೋಷ್ಟಿಯಲ್ಲಿ ಹೆಚ್ಚಿನ ಮಾಹಿತಿ ನೀಡಿದ ಸಾಕ್ಷಿ ಎಂಟರ್‌ಪ್ರೈಸಸ್‌ನ ಮುಖ್ಯಸ್ಥ ಭವಾನಿಶಂಕರ ನಾಯ್ಕ, ಭಟ್ಕಳದ ಜನರು ಸ್ಥಳೀಯವಾಗಿ ನಡೆಯುವ ವಿವಿಧ ಕಾರ್ಯಕ್ರಮಗಳನ್ನು ಇನ್ನು ಮುಂದೆ ಕೇಬಲ್‌ನಲ್ಲಿ ಪ್ರಸಾರವಾಗುವ ಭಾವನಾ ನಮ್ಮ ವಾಹಿನಿಯಲ್ಲಿ ವೀಕ್ಷಿಸಬಹುದಾಗಿದೆ. ವಾಹಿನಿಯನ್ನು ಅತಿ ಶೀಘ್ರದಲ್ಲಿ ಆರಂಭಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದು, ಎಲ್ಲಾ ತಯಾರಿಗಳೂ ಭರದಿಂದ ಸಾಗಿದೆ. ನೂತನವಾಗಿ ಆರಂಭಗೊಳ್ಳುವ ವಾಹಿನಿಯ ಪ್ರಸಾರ ಕರಾವಳಿ ಕೇಬಲ್‌ನಲ್ಲಿ ಪ್ರತಿನಿತ್ಯ ಬೆಳಿಗ್ಗೆ ೬ರಿಂದ ರಾತ್ರಿ ೧೦ ರ ವರೆಗೆ ನಡೆಸಲುದ್ದೇಶಿಸಲಾಗಿದೆ. ಇದರಲ್ಲಿ ತಾಲೂಕಿನ

 

ಎಲ್ಲಾ ಧರ್ಮಗಳ ಧಾರ್ಮಿಕ ಕೇಂದ್ರಗಳ ಪರಿಚಯ,ಭಕ್ತಿ ಸುಧೆ, ಕೃಷಿಗೆ ಸಂಬಂಧಪಟ್ಟ ಮಾಹಿತಿಗಳು, ಶಿಕ್ಷಣ, ಆರೋಗ್ಯ, ಕಾನೂನು ಮಾಹಿತಿಗಳು, ಸ್ಥಳೀಯ ಅಡುಗೆಗಳನ್ನು ತಯಾರಿಸುವ ಹೊಸ ರುಚಿ ಕಾರ್ಯಕ್ರಮ,ಯುವಜನರು ಹಾಗೂ ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮ, ಅಧಿಕಾರಿಗಳು, ಗಣ್ಯರ ಪರಿಚಯ, ತಾಲೂಕಿನ ಗ್ರಾಮಗಳ ಚಿತ್ರಣವನ್ನು ಬಿಂಬಿಸುವ ನಮ್ಮೂರು, ಮಕ್ಕಳ ಕಾರ್ಯಕ್ರಮ, ನೃತ್ಯ ವೈಭವ, ಹಾಡು,ಡಾನ್ಸ, ಸೇರಿದಂತೆ ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ನಿರ್ಧರಿಸಲಾಗಿದೆ. ಕರಾವಳಿ ಕೇಬಲ್‌ನಲ್ಲಿ ಪ್ರಸಾರವಾಗುವ ನಮ್ಮ ವಾಹಿನಿಯನ್ನು ಗೊರ್ಟೆಯಿಂದ ಮಂಕಿಯವರೆಗಿನ ಜನರು ವೀಕ್ಷಿಸಬಹುದಾಗಿದೆ. ವಾಹಿನಿಯಲ್ಲಿ ಗುಣಮಟ್ಟದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬೇಕೆಂಬ ಆಶಯ ನಮ್ಮದಾಗಿದ್ದು, ಈಗಾಗಲೇ ಭಟ್ಕಳ ತಾಲೂಕಿಗೆ ಸಂಬಂಧಪಟ್ಟಂತೆ ದೃಶ್ಯವೈಭವವನ್ನು ಹೊಂದಿರುವ ಭಾವಾಂತರಂಗ ಎಂಬ ಮುನ್ನುಡಿ ಗೀತೆಯನ್ನೂ ಸಹ ರಚಿಸಲಾಗಿದೆ. ಭಟ್ಕಳಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನೇ ಪ್ರಸಾರ ಮಾಡುವುದರಿಂದ ಇಲ್ಲಿನ ಸ್ಥಳೀಯ ಪ್ರತಿಭೆಗಳಿಗೆ ಅನುಕೂಲವಾಗಲಿದೆ. ಅದರಂತೆ ತಾಲೂಕಿಗೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಮಾಡಿಕೊಡಲು ಯಾರೇ ಮುಂದೆ ಬಂದರೂ ಸಹ ಅವರಿಗೆ ನಮ್ಮ ವಾಹಿನಿಯಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ವಾಹಿನಿಯಲ್ಲಿ ಕಾರ್ಯಕ್ರಮ ನಿರ್ವಹಣೆ ಮಾಡಲು ಆಸಕ್ತಿ ಇರುವವರೂ ಸಹ ನಮ್ಮನ್ನು(೯೪೪೯೨೮೮೨೮೭, ೯೪೪೯೫೫೯೫೨೩)ಸಂಪರ್ಕಿಸಬಹುದಾಗಿದೆ ಎಂದ ಅವರು ನೂತನವಾಗಿ ಆರಂಭಗೊಳ್ಳುವ ಭಾವನಾ ನಮ್ಮ ವಾಹಿನಿಗೆ ಎಲ್ಲರ ಸಹಕಾರ ಅಗತ್ಯ ಎಂದರು. ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕ ಶಂಕರ ನಾಯ್ಕ, ಕ್ಯಾಮರಾಮೆನ್ ಕೆ ಪಿ ಮಣಿ,ಶಿರಾಲಿ ಕೇಬಲ್ ನೆಟ್‌ವರ್ಕನ್ ಕಿರಣ್ ಶೆಟ್ಟಿ ಉಪಸ್ಥಿತರಿದ್ದರು.

 


Share: