ಬೆಂಗಳೂರು,ಜನವರಿ 11:ತುಮಕೂರು, ಗುಲ್ಬರ್ಗಾ ಸೇರಿದಂತೆ ಹಲವೆಡೆ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅವ್ಯವಹಾರ ನಡೆದಿದ್ದು, ಅಂತಹವರ ಮೇಲೆ ಕ್ರಮ ಕ್ರಿಮಿನಲ್ ಪ್ರಕರಣ ಹೂಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ ಶೆಟ್ಟರ್ ಇಂದಿಲ್ಲಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆಯಲ್ಲಿ ಕೆಲವು ಕಡೆ ಅವ್ಯವಹಾರ ನಡೆದಿರುವುದು ನಿಜವಾದರೂ ಶೇಕಡಾ ತೊಂಭತ್ತೈದರಷ್ಟು ಪ್ರಮಾಣದಲ್ಲಿ ಯೋಜನೆ ಯಶಸ್ವಿಯಾಗಿ ಜಾರಿಯಾಗಿದೆ. ಹೀಗಾಗಿ ಅವ್ಯವಹಾರ ನಡೆದಿದೆ ಎಂಬ ಕಾರಣಕ್ಕಾಗಿ ಇಡೀ ಯೋಜನೆಗೆ ಅಡ್ಡಗಾಲು ಹಾಕುವ ಕೆಲಸ ನಡೆಯಬಾರದು ಎಂದು ಹೇಳಿದರು.
ಉದ್ಯೋಗ ಖಾತ್ರಿ ಯೋಜನೆಗೆ ಅಗತ್ಯವಾಗಿರುವ ಹಣವನ್ನು ಒದಗಿಸಲು ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದ್ದು ಈ ಹಿನ್ನೆಲೆಯಲ್ಲಿ ತಕ್ಷಣವೇ ಹಣ ಒದಗಿಸುವಂತೆ ಕೇಂದ್ರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರನ್ನು ಒತ್ತಾಯಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಪಸಕ್ತ ವರ್ಷ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ೨೪೮೬ ಕೋಟಿ ರೂ ವೆಚ್ಚ ಮಾಡುವ ಗುರಿಯಿದ್ದು, ಕೇಂದ್ರ ಸರ್ಕಾರ ತ್ವರಿತಗತಿಯಲ್ಲಿ ಹಣ ಬಿಡುಗಡೆ ಮಾಡಿದರೆ ಹೆಚ್ಚು ಅನುಕೂಲವಾಗಲಿದೆ ಎಂದರು.
ಈ ಹಿನ್ನೆಲೆಯಲ್ಲಿಯೇ ತಾವು ದೆಹಲಿಗೆ ತೆರಳುತ್ತಿದ್ದು ನಾಳೆ ಕೇಂದ್ರದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವರನ್ನು ಭೇಟಿಮಾಡುತ್ತೇವೆ. ಇದಾದ ನಂತರ ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಪ್ರಧಾನಿ ಮನ್‌ಮೋಹನ್‌ಸಿಂಗ್ ಜತೆ ಚರ್ಚಿಸಲು ದೆಹಲಿಗೆ ಹೋದಾಗ ಅವರ ಬಳಿಯೂ ಈ ಕುರಿತಂತೆ ಮಾತುಕತೆ ನಡೆಸುವುದಾಗಿ ಅವರು ವಿವರಿಸಿದರು.
ಯೋಜನೆ ಮತ್ತಷ್ಟು ಯಶಸ್ವಿಯಾಗಿ ಜಾರಿಯಾಗಲು ಜನಪ್ರತಿನಿಧಿಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದ ಅವರು,ಶಾಸಕರು, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರು ಯೋಜನೆಯ ಉಸ್ತುವಾರಿಯನ್ನು ನಡೆಸಬೇಕೆಂದರು ಹೇಳಿದರು.
ಇದೊಂದು ಅತ್ಯುತ್ತಮ ಯೋಜನೆ ಎಂದು ಬಣ್ಣಿಸಿದ ಅವರು, ಇದು ಎಲ್ಲ ದೃಷ್ಟಿಯಿಂದಲೂ ಮುಂದುವರಿಯುವ ಅಗತ್ಯವಿದೆ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟ ಪಡಿಸಿದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬರುವ ದೂರುಗಳ ಪರಿಶೀಲನೆಗೆ ಜಿಲ್ಲಾ ಮಟ್ಟದಲ್ಲಿ ಓಂಬುಡ್ಸ್‌ಮನ್‌ಗಳನ್ನು ನೇಮಕ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಈ ವ್ಯವಸ್ಥೆ ಜಾರಿಗೆ ಬಂದರೆ ಉದ್ಯೋಗ ಖಾತ್ರಿ ಯೋಜನೆ ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ಬರಲು ಅನುಕೂಲವಾಗಲಿದೆ ಎಂದು ಅಭಿಪ್ರಾಯಿಸಿದರು.
ಪಿಡಿಓ ಹುದ್ದೆಗಳನ್ನು ಭರ್ತಿ ಮಾಡಲು ಇದ್ದ ನ್ಯಾಯಾಲಯದ ಅಡ್ಡಿ ಇದೀಗ ನಿವಾರಣೆಯಾಗಿದ್ದು ಸದ್ಯದಲ್ಲೇ ಈ ಹುದ್ದೆಗಳ ಭರ್ತಿ ಕಾರ್ಯ ನಡೆಯಲಿದೆ ಎಂದು ಶೆಟ್ಟರ್ ವಿವರಿಸಿದರು.