ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಹುಬ್ಬಳ್ಳಿ: ಗೋಶಾಲೆಯಲ್ಲಿ ವಿಶ್ವಾಸಘಾತುಕತನ - ಗೋರಕ್ಷೆಯ ಹೆಸರಿನಲ್ಲಿ ಗೋಹತ್ಯೆ

ಹುಬ್ಬಳ್ಳಿ: ಗೋಶಾಲೆಯಲ್ಲಿ ವಿಶ್ವಾಸಘಾತುಕತನ - ಗೋರಕ್ಷೆಯ ಹೆಸರಿನಲ್ಲಿ ಗೋಹತ್ಯೆ

Fri, 22 Jan 2010 12:36:00  Office Staff   S.O. News Service
ಹುಬ್ಬಳ್ಳಿ, ಜನವರಿ 22: ಹಿಂದೂಗಳಿಗೆ ಪವಿತ್ರವಾದ ಗೋವುಗಳನ್ನು ರಕ್ಷಿಸಲು ಸುಮಾರು ನೂರಕ್ಕೂ ಹೆಚ್ಚು ವರ್ಷಗಳ ಹಿಂದೆ ಸ್ಥಾಪಿತವಾಗಿದ್ದ ಗೋಶಾಲೆಯ ಹಿಂದಿನ ಕರಾಳ ಕೃತ್ಯ ಈಗ ಬಯಲಾಗಿದೆ.  ಗೋರಕ್ಷಣೆಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಲೂಟಿ ಮಾಡುತ್ತಿರುವುದು ಹಾಗೂ ರಕ್ಷಿಸಬೇಕಾದ ಗೋವುಗಳನ್ನೇ ಕೊಂದು ಮಾಂಸ ಮಾರಾಟ ಮಾಡಿ ಹಣ ಮಾಡುತ್ತಿರುವ ಹೇಯ ಕೃತ್ಯ ಬೆಳಕಿಗೆ ಬಂದಿದೆ.

ಹುಬ್ಬಳ್ಳಿಯಿಂದ ಸುಮಾರು ಹನ್ನೆರೆಡು ಕಿ.ಮೀ ದೂರದಲ್ಲಿದೆ ಪರಾಸ್ಪುರ. ಈ ಗ್ರಾಮದಲ್ಲಿದೆ 1903 ರಲ್ಲಿ ಸ್ಥಾಪಿಸಲಾದ ಗೋಶಾಲೆ ಪಾಂಜಾರಪೋಳ ಗೋವುಗಳ ರಕ್ಷಣೆಗೆಂದು ನಿರ್ಮಿಸಲಾಗಿದ್ದು ಇಂದು ಗೋವುಗಳನ್ನೇ ಕೊಲ್ಲುವ ಕಸಾಯಿಖಾನೆಯಾಗಿ ಮಾರ್ಪಟ್ಟಿದೆ. ರಕ್ಷಿಸಬೇಕಾದ ಗೋರಕ್ಷಕರೇ ಕಟುಕರಾಗಿ ಭಾರೀ ಹಣವನ್ನು ವಂಚಿಸುತ್ತಿರುವ ಕಳವಳಕಾರಿ ಘಟನೆ ವರದಿಯಾಗಿದೆ. 
16_hubli_gaushala_8.jpg
ಈ ತಾಣದಲ್ಲಿ ಹಲವು ನೇತಾರರನ್ನು ಹಾಗೂ ಸಾರ್ವಜನಿಕ ಪ್ರತಿನಿಧಿಗಳನ್ನು ಆಹ್ವಾನಿಸಲಾಗುತ್ತಿದ್ದು ಸರ್ಕಾರೀ ಕಾರ್ಯವಿಧಾನಗಳನ್ನು ನಿರ್ವಹಿಸಲಾಗುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ. ಆದರೆ ವಾಸ್ತವವಾಗಿ ಹಿಂಬಾಗಿಲಿನಿಂದ ಕೊಂದ ಗೋವುಗಳ ಮಾಂಸ, ಮೂಳೆ ಹಾಗೂ ಚರ್ಮಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ. 

ಈ ಗೋಶಾಲೆಯ ಕುಕೃತ್ಯದ ಹಿಂದಿರುವ ಸಮಾಜಘಾತುಕ ಶಕ್ತಿಯಲ್ಲಿ ಎಷ್ಟು ಜನರಿದ್ದಾರೆ ಹಾಗೂ ರಾಜ್ಯದಲ್ಲಿ ಮತ್ತು ರಾಜ್ಯದ ಹೊರಗೆ ಇವರ ಜಾಲ ಎಷ್ಟಿದೆ ಎಂಬುದು ಒಂದು ರಹಸ್ಯವಾಗಿದೆ.  
16_hubli_gaushala_7.jpg
 
ಪಾಂಜಾರಪೋಳ ಗೋಶಾಲೆಯ ಇತಿಹಾಸ: ೧೯೦೩ ರಲ್ಲಿ ಗೋವುಗಳ ರಕ್ಷಣೆಗೆಂದು ಈ ಗೋಶಾಲೆಯನ್ನು ಸ್ಥಾಪಿಸಲಾಗಿತ್ತು. ಅಂದಿನ ದಿನಗಳಿಂದ ಇಂದೂ ಸುತ್ತಮುತ್ತಲ ರೈತರು ಹಾಗೂ ಸಹೃದಯಿ ನಾಗರಿಕರು ಗೋವುಗಳ ರಕ್ಷಣೆಗಾಗಿ ತಮ್ಮಿಂದಾದ ದೇಣಿಗೆ ನೀಡುತ್ತಾ ಬಂದಿದ್ದಾರೆ. ರೈತರು ತಾವು ಬೆಳೆದ ಹುಲ್ಲು, ಮೇವು ಇತ್ಯಾದಿಗಳನ್ನು ದೇಣಿಗೆ ನೀಡಿದರೆ ಇತರರು ತಮ್ಮಿಂದಾದ ಧನಸಹಾಯ ಹಾಗೂ ಗೋವುಗಳಿಗೆ ಅವಶ್ಯವಾದ ಇನ್ನಿತರ ಸರಂಜಾಮುಗಳನ್ನು ಒದಗಿಸುತ್ತಿದ್ದರು. 
16_hubli_gaushala_4.jpg
 
ಸಮಯ ಸರಿದಂತೆ ಗೋಶಾಲೆಯ ಸಮಿತಿಯೂ ಹೊಸಬರಿಂದ ತುಂಬಿತು. ಸೇವಾಭಾವನೆಯ ಕೊರತೆಯಿದ್ದ ಅವರಲ್ಲಿ ಕೆಲವರಿಗೆ ಹೆಚ್ಚಿನ ಹಣ ಮಾಡುವ ದುರಾಸೆ ಮೂಡಿಬಂದು ತಮ್ಮ ಜೇಬುಗಳನ್ನು ಭರ್ತಿಮಾಡಿಕೊಳ್ಳುವ ನಿಟ್ಟಿನಲ್ಲಿ ಚಿಂತನೆಗೆ ಪ್ರಾರಂಭಿಸಿದರು. ಕಾಲಕ್ರಮೇಣ ಗೋಶಾಲೆಯ ಹೆಸರಿನಲ್ಲಿ ಬೇರೆ ಕೃತ್ಯಗಳ ಮೂಲಕ ಸುಲಭ ಧನಲಾಭ ಮಾಡಬಹುದೆಂದು ಕಂಡುಕೊಂಡು ಆಪ್ರಕಾರ ಗೋವುಗಳ ಹತ್ಯೆಗೂ ಮೊದಲಾದರು. ದಿನಸರಿದಂತೆ ಈ ಜಾಲ ವಿಸ್ತರಿಸುತ್ತಾ ಹೋಗಿ ಇಂದು ಒಂದು ದೊಡ್ಡ ಜಾಲವಾಗಿ ಮಾರ್ಪಟ್ಟಿದೆ. 

೧೯೦೩ ರಲ್ಲಿ ಪ್ರಾರಂಭವಾದ ಈ ಗೋಶಾಲೆಗೆ ಆ ಭೂಮಿಯ ಮಾಲಿಕರು ಬಿಟ್ಟುಕೊಟ್ಟ ಭೂಮಿಯ ವಿಸ್ತೀರ್ಣ ೧೧.೩ ಎಕರೆಗಳು.  ಪ್ರಾರಂಭದಲ್ಲಿ ಈ ಗೋಶಾಲೆಯಲ್ಲಿ ಮುದಿಯಾದ, ರೋಗಪೀಡಿತ ಹಾಗೂ ಅಂಗವಿಕಲವಾದ ಗೋವುಗಳಿಗೆ ರಕ್ಷಣೆ ಹಾಗೂ ಪೋಷಣೆ ನೀಡಲಾಗುತ್ತಿತ್ತು.  ಪಶುವೈದ್ಯರು ನಿಗದಿತವಾಗಿ ಆಗಮಿಸಿ ಅಗತ್ಯವಾದ ಶುಶ್ರೂಶೆಯನ್ನೂ ನೀಡುತ್ತಿದ್ದರು. ಕೇವಲ ಗೋವುಗಳಿಗೆ ಮಾತ್ರವಲ್ಲದೆ ಎಮ್ಮೆ, ಕುದುರೆ, ಕತ್ತೆ ಮೊದಲಾದ ಪ್ರಾಣಿಗಳಿಗೂ ಸಮಾನವಾದ ಸೇವೆ ನೀಡಲಾಗುತ್ತಿತ್ತು.  ಅಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಒಟ್ಟು ಹದಿನಾಲ್ಕು ಇದೇ ಮಾದರಿಯ ಗೋಶಾಲೆಗಳನ್ನು ಸ್ಥಾಪಿಸಲಾಗಿತ್ತು.
 
16_hubli_gaushala_1.jpg
16_hubli_gaushala_2.jpg 

ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ಬಳಿಕ ಭಾರತ ಸರ್ಕಾರದ ಪ್ರಾಣಿದಯಾ ಸಂಸ್ಥೆಯ ಸ್ಥಾಪನೆಯಾಯಿತು.  ಸಂಸ್ಥೆಯ ಸ್ಥಾಪನೆಯ ಬಳಿಕ ದೇಶದಲ್ಲಿರುವ ಗೋಶಾಲೆಗಳು ಎಷ್ಟಿವೆ ಹಾಗೂ ಯಾವ ಸ್ಥಿತಿಯಲ್ಲಿವೆ ಎಂಬ ಮಾಹಿತಿಗಳನ್ನು ಕಲೆಹಾಕುವುದು ಸರ್ಕಾರ ಒಪ್ಪಿಸಿದ ಪ್ರಥಮ ಕೆಲಸವಾಗಿತ್ತು.  ಈ ಮಾಹಿತಿಯ ಮೇರೆಗೆ ಪ್ರತಿ ಗೋಶಾಲೆಗೆ ಅಗತ್ಯವಾದ ಹಣವನ್ನು ಸರ್ಕಾರವೇ ಅನುದಾನದ ರೂಪದಲ್ಲಿ ಬಿಡುಗಡೆ ಮಾಡಿತ್ತು. ಆ ಪ್ರಕಾರ ಇಂದಿನವರೆಗೂ ದೇಶದ ಪ್ರತಿ ಗೋಶಾಲೆಗೆ ಸರ್ಕಾರದಿಂದ ಅನುದಾನ ದೊರೆಯುತ್ತಾ ಬಂದಿದೆ.  ಹುಬ್ಬಳ್ಳಿಯ ಪಾಂಜಾರಪೋಳ ಗೋಶಾಲೆಗೆ ಪ್ರತಿವರ್ಷ ದೊರಕುತ್ತಿರುವ ಅನುದಾನ ಹತ್ತು ಲಕ್ಷ ರೂಪಾಯಿಗಳು.   

ಗೋಶಾಲೆಯ ಕಾರ್ಯವಿಧಾನಗಳಿಗಾಗಿ ಸರ್ಕಾರದ ಅನುದಾನದ ಹೊರತಾಗಿ ಸಾರ್ವಜನಿಕರು ನೀಡುವ ದೇಣಿಗೆ, ದಾನವಾಗಿ ನೀಡುವ ಪಶು ಆಹಾರವಸ್ತುಗಳು ಸರ್ಕಾರದ ಹಣವನ್ನು ಉಳಿಸುತ್ತಿದ್ದವು. ಗೋವುಗಳಿಗೆ ನೀಡುತ್ತಿರುವ ಸೇವೆಯನ್ನು ಶ್ಲಾಘಿಸಿ ದೇಶದ ವಿವಿಧ ಭಾಗಗಳಿಂದ ಅಭಿಮಾನಿಗಳು ದೇಣಿಗೆಯನ್ನು ಸಂಗ್ರಹಿಸಿ ಅಥವಾ ದಾನಿಗಳು ನೇರವಾಗಿ ನೀಡುತ್ತಿದ್ದರು. ಈ ರೀತಿಯಾಗಿ ಸಂಗ್ರಹವಾದ ಹಣ ಅಪಾರ ಪ್ರಮಾಣದಲ್ಲಿದ್ದ ಕಾರಣ ಗೋಶಾಲೆಯಲ್ಲಿ ನಿಧಾನವಾಗಿ ಅಕ್ರಮ ಚಟುವಟಿಕೆಗಳು ಪ್ರಾರಂಭವಾದವು. ಗೋವುಗಳ ಹೆಸರಿನಲ್ಲಿ ಹೆಚ್ಚಿನ ಖರ್ಚು ತೋರಿಸಿ ಹಣವನ್ನು ಜೇಬಿಗಿಳಿಸಲಾಯಿತು. ದಿನಕಳೆದಂತೆ ಅಕ್ರಮ ಚಟುವಟಿಕೆಗಳಿಗೆ ಹೆಚ್ಚಿನ ಹಣದ ಅಗತ್ಯಬಿದ್ದ ಕಾರಣ ಗೋಶಾಲೆಗೆ ಸೇರಿದ ಖಾಲಿ ಜಾಗವನ್ನು ಮಾರಾಟ ಮಾಡಲು ಪ್ರಯತ್ನಿಸಲಾಯಿತು. ಆದರೆ ದತ್ತಕವಾಗಿ ಬಂದಂತಹ ಈ ಜಮೀನಿನ ಮಾರಾಟ ಸಾಧ್ಯವಿಲ್ಲ ಎಂದು ತಿಳಿದಾಗ ಮುಂದಿನ ತೊಂಭತ್ತೊಂಭತ್ತು ವರ್ಷಗಳ ಅವಧಿಗೆ ವಿದ್ಯುತ್ ನಗರ ಬಡಾವಣೆಗೆ ಗುತ್ತಿಗೆ ನೀಡಲಾಗಿತ್ತು. ಅಂದಿನ ದಿನಗಳಲ್ಲಿ ಪ್ರತಿ ಗುಂಟೆಗೆ ಒಂದು ಸಾವಿರ ರೂ. ಬಾಡಿಗೆ ನಿಗದಿಪಡಿಸಲಾಗಿತ್ತು. ಈ ಜಾಗದಲ್ಲಿ ಕಾಲೋನಿಯೊಂದು ಎದ್ದುಬಂದು ಗೋಶಾಲೆಯ ರಕ್ಷಕರು ನಿಗದಿತವಾಗಿ ಬಾಡಿಗೆ ವಸೂಲಿ ಮಾಡುತ್ತಿದ್ದರು. 

ಈ ರೀತಿ ಸಂಗ್ರಹವಾದ ಅಪಾರ ಹಣ ಗೋಶಾಲೆಯ ರಕ್ಷಕ ಮಂಡಳಿಯ ಸದಸ್ಯರಿಗೆ ಹಂಚಿಹೋಗುತ್ತಿತ್ತು. ಈ ಅಕ್ರಮ ಕಾರ್ಯವನ್ನು ಸಕ್ರಮಗೊಳಿಸಲು ಬ್ಯಾಂಕಿನಲ್ಲಿ ಎರೆಡು ಖಾತೆಗಳ ರೂಪದಲ್ಲಿ ವಿಲೇವಾರಿ ಮಾಡಲಾಗುತ್ತಿತ್ತು. ಒಂದು ಖಾತೆ ರಾಮನ ಹೆಸರಿನಲ್ಲಿದ್ದರೆ ಇನ್ನೊಂದು ಕೃಷ್ಣನ ಹೆಸರಿನಲ್ಲಿದೆ. ರಾಮನ ಹೆಸರಿನಲ್ಲಿ ಗೋಶಾಲೆಗೆ ಹಾಗೂ ಸರ್ಕಾರಕ್ಕೆ ನೀಡುವ ದಾಖಲೆಗೆ ಅನುಗುಣವಾಗಿಯೂ ಕೃಷ್ಣನ ಹೆಸರಿನ ಖಾತೆಯ ಹಣ ಸ್ವಂತ ಜೇಬುಗಳನ್ನು ಭರ್ತಿಮಾಡಲೂ ಉಪಯೋಗಿಸಲಾಗುತ್ತಿದೆ. 

ಇಂದು ಗುತ್ತಿಗೆ ಭೂಮಿಯ ಮೇಲೆ ಮನೆ ಕಟ್ಟಿಕೊಂಡಿರುವವರು ಭೂಮಾಲಿಕರಾಗಿ ತಿರುಗುತ್ತಿದ್ದರೆ ಅವರವಲ್ಲಿ ಕೆಲವರು ಗುತ್ತಿಗೆ ಪಡೆದ ಭೂಮಿಯನ್ನು ಇನ್ನೊಬ್ಬರಿಗೆ ಗುತ್ತಿಗೆ ನೀಡಿ ಪರಿಸ್ಥಿತಿ ಗೋಜಲು ಮಾಡಿಟ್ಟಿದ್ದಾರೆ. ಈ ಭೂಮಿಯಿಂದ ಬರುವ ಬಾಡಿಗೆ ಹಣದ ಬಗ್ಗೆ ಗೋರಕ್ಷಕರಲ್ಲಿಯೇ ಭಿನ್ನಾಭಿಪ್ರಾಯವಿದ್ದು ಈಗ ಎರೆಡು ಬಣಗಳಾಗಿ ಒಡೆದಿದೆ. ಈ ಬಣಕ್ಕೆ ತಿಳಿಯದಂತೆ ಅವರೂ ಅವರಿಗೆ ತಿಳಿಯದಂತೆ ಇವರೂ ಹೆಚ್ಚೂ ಕಡಿಮೆ ಗೋಶಾಲೆಯ ಅರ್ಧಕ್ಕಿಂತಲೂ ಹೆಚ್ಚು ಭೂಮಿಯನ್ನು ಗುತ್ತಿಗೆಗೆ ನೀಡಿಬಿಟ್ಟಿದ್ದಾರೆ. 

೧೯೭೯ ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಎಸ್.ಆರ್. ಬೊಮ್ಮಾಯಿ ಯವರು ಈ ಪ್ರಕರಣದ ಮಧ್ಯೆ ಪ್ರವೇಶಿಸಿ ಎಲ್ಲರಿಗೂ ಸಮಾಧಾನವಾಗುವಂತಹ ಸಂಧಾನ ನಡೆಸಿದ್ದರು. ಬಳಿಕ ಶ್ರೀ ಯೆಗರಾಜ ಕೋವಾಡರನ್ನು ಸಂಸ್ಥೆಯ  ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಅವರ ಆಡಳಿತಾವಧಿಯಲ್ಲಿ ಪ್ರತಿ ಎಕರಿಗೆ ಇಪ್ಪತ್ತು ಸಾವಿರ ರೂ. ಬೆಲೆಯಲ್ಲಿ ಹದಿನೈದು ಎಕರೆ ಗುಡ್ಡಗಾಡು ಪ್ರದೇಶವನ್ನು ಖರೀದಿಸಲಾಯಿತು. ಗೋಶಾಲೆಗೆಂದು ಆ ಭೂಮಾಲಿಕರು ಅಗ್ಗದ ದರದಲ್ಲಿ ತಮ್ಮ ಭೂಮಿಯನ್ನು ನೀಡಿದ್ದರು.  ಇಂದಿನ ಬೆಲೆ ಈ ಭೂಮಿಗೆ ಸುಮಾರು ಹತ್ತು ಕೋಟೆ ರೂಪಾಯಿಗಳು.  

ಎಂದಿನಂತೆ ಸಹೃದಯೀ ನಾಗರಿಕರು ಗೋಶಾಲೆಗೆ ತಮ್ಮ ದೇಣಿಗೆ ಹಾಗೂ ಪಶುಆಹಾರದ ದಾನಗಳನ್ನು ಮುಂದುವರೆಸಿದರು.  ಆದರೆ ಹಣದಾಸೆಯ ಹಲವು ದುರುಳರು ಹೆಚ್ಚಿನ ಹಣದಾಸೆಗಾಗಿ ರಕ್ಷಿಸಬೇಕಾದ ಗೋವುಗಳನ್ನೇ ಕೊಂದು ಮಾರಾಟಮಾಡತೊಡಗಿದರು.  ಗೋವುಗಳ ಮಾಂಸ, ಮೂಳೆ ಹಾಗೂ ಚರ್ಮ ನಿಗದಿತವಾಗಿ ಗೋಶಾಲೆಯಿಂದ ಹೊರಹೋಗತೊಡಗಿತು.  ಗೋಶಾಲೆಯಲ್ಲಿ ನಡೆಯುತ್ತಿರುವ ಅಕ್ರಮದ ಲಾಭವನ್ನು ಪಡೆದ ಕೆಲವು ರೈತರು ಗೋಶಾಲೆಗೆ ಸೇರಿದ ಭೂಮಿಯಲ್ಲಿ ಕೃಷಿ ಪ್ರಾರಂಭಿಸಿದರು.  ದಿನದಿಂದ ದಿನಕ್ಕೆ ಈ ಕ್ಷೇತ್ರ ವಿಸ್ತರಿಸುತ್ತಾ ಇಂದು ಗೋಶಾಲೆ ಕೇವಲ ಇಪ್ಪತ್ತಡಿ ಹತ್ತಡಿ ವಿಸ್ತೀರ್ಣದ ಕಛೇರಿಯಾಗಿ ಉಳಿದಿದೆ. ಗೋಶಾಲೆಯ ಒಳಗಣ ಕಲಹಗಳಿಂದ ರೋಸಿಹೋದ ದಾನಿಗಳು ತಮ್ಮ ದೇಣಿಗೆಗಳನ್ನು ನಿಲ್ಲಿಸಿದರು.  

ಸಮಿತಿಯಲ್ಲಿ ಒಟ್ಟು ಇಪ್ಪತ್ತೆರೆಡು ಸದಸ್ಯರಿದ್ದಾರೆ. ಗೋಶಾಲೆ ತೋರಿಸುವ ದಾಖಲೆಗಳ ಪ್ರಕಾರ ಪ್ರತಿತಿಂಗಳ ವೆಚ್ಚ ರೂ. ಎರೆಡೂವರೆ ಲಕ್ಷ. ವಿದ್ಯುತ್ ನಗರದಿಂದ ಬರುವ ಆದಾಯ ಒಂದೂವರೆ ಲಕ್ಷ. ಇನ್ನುಳಿದ ಒಂದು ಲಕ್ಷ ರೂ. ದೇಣಿಗೆಗಳಿಂದ ಸಂಗ್ರಹವಾದ ಮೊತ್ತ. ಅಲ್ಲಿಗೆ ಲೆಕ್ಕ ಸರಿಸಮ. 

16_hubli_gaushala_9.jpg
ಆದರೆ ಅಧ್ಯಕ್ಷರ ಪ್ರಕಾರ ಪ್ರಸ್ತುತ ಗೋಶಾಲೆ ಹೊಂದಿರುವ ಮೂಲಧನ ಹದಿನೈದು ಲಕ್ಷ  ರೂ. ಹತ್ತು ಸಿಬ್ಬಂದಿ ಗೋಶಾಲೆಯ ಲೆಕ್ಕಪತ್ರ ನೋಡಿಕೊಂಡರೆ ನಲವತ್ತು ಜನರು ಗೋಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.  ಒಟ್ಟು ಐವತ್ತಕ್ಕೂ ಹೆಚ್ಚು ಕುಟುಂಬಗಳು ಗೋಶಾಲೆಯನ್ನೇ ಜೀವನಕ್ಕಾಗಿ ಅವಲಂಬಿಸಿವೆ.  ಹಲವರಿಗೆ ಗೋಶಾಲೆಯ ಚಟುವಟಿಕೆಗಳಲ್ಲಿ ಯಾವುದೇ ಉತ್ಸಾಹವಿಲ್ಲದಿರುವುದರಿಂದ ಗೋಶಾಲೆಯ ಸರಿಯಾದ ನಿರ್ವಹಣೆ ಆಗುತ್ತಿಲ್ಲ. 

೨೦೦೨ ರಲ್ಲಿ ಪಾಂಜಾರಪೋಳ ಗೋಶಾಲೆಯನ್ನು ಪಾರಸ್ಪುರ ಗೋಶಾಲೆ ಎಂದು ಮರುನಾಮಕರಣ ಮಾಡಲಾಯಿತು. ಗೋಶಾಲೆಯ ಒಟ್ಟು ಏಳು ಗುಂಟೆ ಭೂಮಿಯನ್ನು ಉದ್ಯಮಿ ದಾಂಡೇಲಿ ಮುನ್ನಾ ಭಾಯಿ ಎಂಬುವರಿಗೆ ೯೯ ವರ್ಷಗಳ ಅವಧಿಗಾಗಿ ನೀಡಲಾಯಿತು.  ಪ್ರತಿಗುಂಟೆಗೆ ನಾಲ್ಕು ಲಕ್ಷದಂತೆ ಒಟ್ಟು ಇಪ್ಪತ್ತೆಂಟು ಲಕ್ಷ ರೂ ಬೆಲೆ ಜಾಸ್ತಿಯಾಯಿತೆಂದು ಮುನ್ನಾಭಾಯಿ ರಾಗತೆಗೆದಾಗ ಒಪ್ಪಂದದಲ್ಲಿ ಕೊಂಚ ಮಾರ್ಪಾಡು ಮಾಡಿ ಸಮಿತಿಯ ಸದಸ್ಯರಲ್ಲೊಬ್ಬರಾದ ಮುಕೇಶ್ ಪುವಾಡಿ ಎಂಬುವರು ಪ್ರತಿ ಗುಂಟೆಗೆ ಆರು ಲಕ್ಶ ರೂ ಪ್ರಕಾರ ಏಳು ಗುಂಟೆಗೆ ನಲವತ್ತೆರೆಡು ಲಕ್ಷ ರೂ. ನೀಡಿದ್ದಾರೆ. 

ಈ ರೀತಿಯಾಗಿ ಗುತ್ತಿಗೆಗೆ ಪಡೆದ ಭೂಮಿಯನ್ನು ಹೇಗಾದರೂ ಮಾಡಿ ತಮ್ಮ ಹೆಸರಿಗೆ ಬರೆಸಿಕೊಳ್ಳುವ ಇರಾದೆಯಿಂದ ಒಂದು ಬೆಲೆಗೆ ಕೊಂಚ ಭೂಮಿಯನ್ನು ಮುನ್ನಾಭಾಯಿಗೆ ಮುಕೇಶ್ ಮಾರಿದರು. ಕಾನೂನಿನ ಪ್ರಕಾರ ಗುತ್ತಿಗೆ ಪಡೆದ ಭೂಮಿಯನ್ನು ಇನ್ನೊಬ್ಬರಿಗೆ ಮಾರುವಂತಿಲ್ಲ.  ಆದರೆ ಈಗ ಜಮೀನಿನ ಸ್ವಾಮ್ಯದ ಕುರಿತಾದ ವ್ಯಾಜ್ಯ ಬಿಡಿಸಲಾಗದ ಕಗ್ಗಂಟಾಗಿದೆ. 

ಈ ಬಗ್ಗೆ ಅಧ್ಯಕ್ಷ ಮೇಘರಾಜ್, ಕಾರ್ಯದರ್ಶಿ ಹಳಿಯಾಳ, ಸುಪರ್ ವೈಸರ್ ಗಳಾದ ಶಂಕರನ್ ಮಾನುಲಿ, ರಮೇಶ್ ಬಾಫ್ನಾ, ಮೆಂದರಸಾಂಘಿ, ಪಾರಸ್ಮಲ್ ಚಿಯಾನ್ ಮತ್ತು ಚಡ್ಢಾರವರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಗೋಶಾಲೆಯ ಮೇಲ್ವಿಚಾರಕ ವೀರಾಪಾಕ್ಷಿಯವರ ಪ್ರಕಾರ ದಿನಗೂಲಿ ಆಧಾರದ ಮೇಲೆ ಹದಿನಾರು ಜನರು ಕಾರ್ಯನಿರ್ವಹಿಸುತ್ತಿದ್ದಾರೆ. ಗಂಡಸರಿಗೆ ರೂ. ಎಂಭತ್ತು ಹಾಗೂ ಹೆಂಗಸರಿಗೆ ಐವತ್ತು ರೂ. ನೀಡಲಾಗುತ್ತಿದೆ. ಖಾಯಂ ಕೆಲಸಗಾರರೂ ಕೆಲವರಿದ್ದಾರೆ. 

ಗೋಶಾಲೆಗೆ ಸೇರಿದ ಒಟ್ಟು ಐವತ್ತೊಂದು ಎಕರೆ ಜಾಗದಲ್ಲಿ ಇಂದು ಗೋವುಗಳಿಗೆ ಮೇಯಲು ಸಿಗುತ್ತಿರುವುದು ಎರೆಡು ಎಕರೆ ಮಾತ್ರ.  ಆರು ಎಕರೆ ಜಾಗದಲ್ಲಿ ಇನ್ನೂರು ತೆಂಗಿನಮರ, ಐವತ್ತೊಂತು ಚಿಕ್ಕು ಮರ, ನೂರೈವತ್ತು ಮಾವಿನ ಮರ, ಐವತ್ತೊಂದು ಬೀಟೆಮರಗಳಿವೆ.  ಗೋವುಗಳಿಗೆ ತಂಪಾದ ವಾತಾವರಣ ನೀಡಲೆಂದು ಈ ಮರಗಳನ್ನು ನೆಡಲಾಗಿತ್ತು ಎಂದು ಮೇಘರಾಜ್ ತಿಳಿಸುತ್ತಾರೆ.  

ಆದರೆ ಈ ಪ್ರದೇಶಕ್ಕೆ ಭೇಟಿ ನೀಡಿದವರಿಗೆ ನೆಲದಲ್ಲಿ ಚೆದುರಿ ಬಿದ್ದಿರುವ ಮೂಳೆಗಳು, ಕೊಳೆತ ಮಾಂಸ, ಚರ್ಮಗಳು ಬೇರೆಯೇ ಕಥೆ ಹೇಳುತ್ತವೆ.  ತಾಜಾ ಮೂಳೆಗಳಿಗಾಗಿ ಬೀದಿನಾಯಿಗಳು ಕಚ್ಚಾಡುವ ದೃಶ್ಯ ಸಮಾನ್ಯವಾಗಿದೆ.  ನಾರುತ್ತಿರುವ ಮಾಂಸದ ವಾಸನೆಯಿಂದ ಮನುಷ್ಯರಾದವರು ಮೂಗುಮುಚ್ಚಿಕೊಳ್ಳದೇ ಗೋಶಾಲೆಗೆ ಪ್ರವೇಶಿಸಲಾಗದ ಪರಿಸ್ಥಿತಿಯಲ್ಲಿದೆ.
16_hubli_gaushala_6.jpg
16_hubli_gaushala_5.jpg 
 
16_hubli_gaushala_3.jpg
ಈ ಗೋಶಾಲೆಯ ಕುಕೃತ್ಯವನ್ನು ಬಯಲಿಗೆಳೆಯಲು ತಕ್ಷಣ ತನಿಖೆ ನಡೆಸುವ ಅಗತ್ಯವಿದೆ.
 
 
 
ವಿಶೇಷ ವರದಿ ಹಾಗೂ ಚಿತ್ರಗಳು: ಸೈಯದ್ ಮುಹಮ್ಮದ್ ಶಾಹಿದ್ ಕಾಜ಼ಿ, ಹುಬ್ಬಳ್ಳಿ 
 

Share: