ವಿಜಾಪುರ, ಏಪ್ರೀಲ್ ೨೭ - ಜಿಲ್ಲೆಯ ಪುರಾತತ್ವ ಸಂರಕ್ಷಿತ ಸ್ಮಾರಕಗಳು ಹಾಗೂ ಪುರಾತತ್ವ ಅವಶೇಷಗಳ ನೂರು ಮೀಟರ್ ವ್ಯಾಪ್ತಿಯಲ್ಲಿ ಕಟ್ಟಡಗಳ ರಿಪೇರಿ, ನಿರ್ಮಾಣ ಕಾಮಗಾರಿಗಳನ್ನು ಅನುಮತಿ ಇಲ್ಲದೆ ನಡೆಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆರ್. ಶಾಂತರಾಜ್ ಆದೇಶ ಹೊರಡಿಸಿದ್ದಾರೆ.
ಮಾರ್ಚ ೨೦೧೦ ರಿಂದ ಜಾರಿಗೊಳಿಸಲಾದ ಭಾರತೀಯ ಪುರಾತನ ಸ್ಮಾರಕಗಳು ಹಾಗೂ ಪುರಾತತ್ವ ಅವಶೇಷಗಳ ನೆಲೆ ಕಾಯ್ದೆಯ ಪ್ರಕಾರ ಯಾವುದೇ ರಾಷ್ಟ್ರೀಯ ಸ್ಮಾರಕ ಮತ್ತು ಅದರ ಜಾಗೆಯ ಮಿತಿಯಿಂದ ೧೦೦ ಮೀಟರ್ ಸುತ್ತಳತೆಯ ಪ್ರದೇಶವು ನಿಷೇಧಿತ ಪ್ರದೇಶವೆಂದು ಘೋಷಿಸಲ್ಪಟ್ಟಿದೆ.
ಸದರಿ ಪ್ರದೇಶದಲ್ಲಿ ಯಾವುದೇ ಹೊಸಕಟ್ಟಡ ಕಾಮಗಾರಿ ಹಾಗೂ ನೆಲೆಗಳ ವಿರೂಪತೆ ಮಾಡುವುದು, ಇದ್ದಂತಹ ಕಟ್ಟಡಗಳ ರಿಪೇರಿ ಕೆಲಸಗಳನ್ನು ಮಾಡುವುದುನ್ನು ನಿಷೇಧಿಸಲಾಗಿದೆ. ಹಾಗೂ ಕಟ್ಟಡದ ೧೦೦ ಮೀ. ನಂತರದ ೨೦೦ ಮೀ. ಸುತ್ತಳತೆಯ ಜಾಗೆಯು ನಿಯಂತ್ರಿತ ಪ್ರದೇಶವೆಂದು ಘೋಷಿಸಲ್ಪಟ್ಟಿರುತ್ತದೆ. ಈ ಸುತ್ತಳತೆಯ ನಿಯಂತ್ರಿತ ಪ್ರದೇಶದಲ್ಲಿ ೧೯೯೨ ಕ್ಕಿಂತ ಮುಂಚೆಯೆ ಅಸ್ತಿತ್ವದಲ್ಲಿದ್ದ ಕಟ್ಟಡಗಳ ದುರಸ್ತಿಯಂತಹ ಕಾರ್ಯಗಳನ್ನು ಭಾರತೀಯ ಪುರಾತತ್ವ ಸರ್ವೆಕ್ಷಣ ಪ್ರಾಧಿಕಾರದಿಂದ ಕಡ್ಡಾಯವಾಗಿ ಅನುಮತಿ ಪಡೆದು ಕೈಗೊಳ್ಳಬಹುದಾಗಿದೆ.
ನಿಷೇಧಿತ ಪ್ರದೇಶದಲ್ಲಿ ಭಾರತೀಯ ಪುರಾತತ್ವ ಸರ್ವೆಕ್ಷಣಾ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೇ ಹಾಗೂ ಇಲಾಖೆಯ ಗಮನಕ್ಕೆ ತರದೆ ಕಟ್ಟಡದ ಕಾಮಗಾರಿ ಕೆಲಸ ಮತ್ತು ಅವಶೇಷಗಳ ನೆಲೆಗಳನ್ನು ಅಗೆಯುವದಾಗಲಿ ಹಾಳುಮಾಡುವುದಾಗಲಿ ಮಾಡಿದರೆ ೨ ವರ್ಷದ ಜೈಲುವಾಸದ ಜೊತೆಗೆ ರೂ. ೧.೦೦ ಲಕ್ಷದವರೆಗೆ ಕಾಯ್ದೆಯಂತೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಲಾಗಿದೆ.
ಕಾಯ್ದೆಯನ್ನು ಉಲ್ಲಂಘನೆಮಾಡಿ ಬೇಜವಾಬ್ದಾರಿಯಿಂದ ಅಥವಾ ದುರೋದ್ದೇಶದಿಂದ ನಿಷೇಧಿತ ಮತ್ತು ನಿಯಂತ್ರಿತ ಪ್ರದೇಶದಲ್ಲಿ ಕಟ್ಟಡ ಕಾಮಗಾರಿ ನಡೆಸಲು ಅವಕಾಶ ಮಾಡಿಕೊಡುವ ಸಂಬಂಧಿಸಿದ ಅಧಿಕಾರಿಗಳಿಗೆ ೩ ವರ್ಷದ ಜೈಲು ಶಿಕ್ಷೆ ಮತ್ತು ದಂಡಕ್ಕೆ ಗುರಿಪಡಿಸಲಾಗುತ್ತದೆ. ಕಾರಣ ಸಾರ್ವಜನಿಕರು ಹಾಗೂ ಇಲಾಖಾಧಿಕಾರಿಗಳು ರಾಷ್ಟ್ರೀಯ ಸಂರಕ್ಷಿತ ಸ್ಮಾರಕಗಳ ಸುತ್ತಮುತ್ತ ನಿಯಂತ್ರಿದ ಪ್ರದೇಶಗಳಲ್ಲಿ ಕಾನೂನಿನ ವ್ಯತಿರಿಕ್ತವಾಗಿ ಕಟ್ಟಡಗಳನ್ನು ಕಟ್ಟಬಾರದೆಂದು ಹಾಗೂ ಉತ್ತೇಜಿಸಬಾರದೆಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.