ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ತಾವೂ ಕಲಿಯಲಿಲ್ಲ.... ಮಕ್ಕಳಿಗೂ ಕಲಿಸಲೊಲ್ಲ..!

ಭಟ್ಕಳ: ತಾವೂ ಕಲಿಯಲಿಲ್ಲ.... ಮಕ್ಕಳಿಗೂ ಕಲಿಸಲೊಲ್ಲ..!

Wed, 18 Nov 2009 19:44:00  Office Staff   S.O. News Service
ಭಟ್ಕಳ, ನವೆಂಬರ್ 18: ರಾಜ್ಯದ ವಿವಿದೆಡೆ ಜನರೆಡೆಗೆ ಆಡಳಿತವನ್ನು ಕೊಂಡೊಯ್ಯುವ ಹಂಬಲದ ‘ಗ್ರಾಮಸಭೆ’ಯ ಕಲ್ಪನೆಗಳು ವಿಕಾರ ರೂಪ ಪಡೆದುಕೊಳ್ಳುತ್ತಿರುವುದರ ನಡುವೆಯೇ ಮಕ್ಕಳಲ್ಲಿ ಅರಿವನ್ನು ಮೂಡಿಸಲು ಸರಕಾರ ಆರಂಭಿಸಿರುವ ‘ಮಕ್ಕಳ ಗ್ರಾಮ ಸಭೆ’ಗಳು ತೀರ ಕಳಪೆಯಾಗುತ್ತಿರುವುದಕ್ಕೆ ಆಕ್ಷೇಪಗಳು ವ್ಯಕ್ತವಾಗುತ್ತಿವೆ.
 
ತಾಲೂಕಿನ ವಿವಿಧ ಗ್ರಾಮಪಂಚಾಯತಗಳು ಸರಕಾರದ ನಿರ್ದೇಶನದಂತೆ ಮಕ್ಕಳ ಗ್ರಾಮಸಭೆಗಳನ್ನು ನಡೆಸುತ್ತಿದ್ದು, ಕೆಲವು ಕಡೆ ಗ್ರಾಮಸಭೆಗಳ ಗಂಧಗಾಳಿಯೂ ಇಣುಕುತ್ತಿಲ್ಲ. ಒಂದೆರಡು ಮಕ್ಕಳಿಂದ ಹಾಡನ್ನು ಹಾಡಿಸಿ ಭಾಷಣ ಮಾಡಿಸಿ ಕೈ ತೊಳೆದು ಕೊಳ್ಳುವ ಸಂಪ್ರದಾಯ ಚಾಲ್ತಿಯಲ್ಲಿದ್ದು, ಕಾಟಾಚಾರದ ಇಂತಹ ಕಾರ್ಯಕ್ರಮಗಳು ಯಾಕಾಗಿ ಎಂಬ ಪ್ರಶ್ನೆ ಹಾಗೆಯೇ ಉಳಿದುಕೊಂಡಿದೆ. ಸರಕಾರ ಹೊರಡಿಸಿದ ಅಜೆಂಡಾದಲ್ಲಿರುವ ಮಕ್ಕಳ ಆರೋಗ್ಯ ಬೆಳವಣಿಗೆಯ ಕುರಿತು ಚರ್ಚಿಸುವುದು, ಪ್ರತಿ 3 ರಿಂದ 6 ವರ್ಷದ ಎಲ್ಲ ಮಕ್ಕಳು ಅಂಗನವಾಡಿ ಹಾಗೂ ಶಾಲೆಯಲ್ಲಿ ದಾಖಲಾಗಿ ಶಿಕ್ಷಣ ಪಡೆಯುವುದು, ಜೀತಪದ್ಧತಿ ಹಾಗೂ ಕೃಷಿ ಕಾರ್ಮಿಕ ವೃತ್ತಿಯಲ್ಲಿ ಮಕ್ಕಳನ್ನು ತೊಡಗಿಸುವವರ ವಿರುದ್ಧ ಜಾಗೃತಿ ಮೂಡಿಸುವುದು, ಹೆಣ್ಣುಮಕ್ಕಳ ಶೋಷಣೆ, ಮಕ್ಕಳ ಮೇಲೆ ಹಲ್ಲೆ ಹಾಗೂ ಅತ್ಯಾಚಾರ ಮುಂತಾದ ಕ್ರೂರ ಘಟನೆಗಳ ಬಗ್ಗೆ ಕ್ರಮ ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ ಮಕ್ಕಳಲ್ಲಿ ಪ್ರಶ್ನೆಗಳನ್ನು ಸೃಷ್ಟಿಸಿ ಅವರಿಂದಲೇ ಉತ್ತರ ಪಡೆಯುವ ಹಾಗೂ ಸ್ಥಳೀಯ ಗ್ರಾಮಪಂಚಾಯತದ ಕಳಕಳಿಯನ್ನು ಬಿಚ್ಚಿಡುವ ಪ್ರಯತ್ನವು ನಡೆಯದಿರುವ ಕುರಿತೂ ಪ್ರಶ್ನೆಗಳು ಸುಳಿದಾಡುತ್ತಿವೆ. ಈ ಕುರಿತು ಗ್ರಾಮಪಂಚಾಯತ ಹಾಗೂ ಶಾಲಾ ಶಿಕ್ಷಕರು ಪರಸ್ಪರ ಸಹಕಾರದೊಂದಿಗೆ ‘ಗ್ರಾಮಸಭೆಗಳ’ ಪೂರ್ಣ ಪರಿಕಲ್ಪನೆಯನ್ನು ಪಸರಿಸಬೇಕಾದ ಅಗತ್ಯವೂ ಕಂಡುಬರುತ್ತಿದೆ.
 
ಇದಕ್ಕೆ ಅಪವಾದವಾಗಿ ಬೈಲೂರಿನ ಮಕ್ಕಳ ಗ್ರಾಮಸಭೆಯು ಕೊನೆಯ ಕ್ಷಣದ ಶಿಕ್ಷಕರ ಜಾಗೃತಿಯೊಂದಿಗೆ ತಕ್ಕಮಟ್ಟಿಗೆ ಯಶಸ್ವಿಯಾಗಿ ಮೂಡಿ ಬಂತು. ವಿದ್ಯಾರ್ಥಿನಿಯೋರ್ವಳು ಜನಗಣತಿಯ ಸಮಯದಲ್ಲಿ ಪಾಠ ಕಳೆದುಕೊಳ್ಳುವ ಬಗ್ಗೆ ಪ್ರಶ್ನೆ ಕೇಳಿದರೆ, ವಿದ್ಯಾರ್ಥಿಯೋರ್ವ ಜೂನ್ ತಿಂಗಳಲ್ಲಿ ನೀಡುವ ಸೈಕಲ್ ಏನಾಯಿತು ಎಂದು ಪ್ರಶ್ನೆ ಕೇಳಿ ಅಧಿಕಾರಿಗಳಿಗೆ ಕೊಂಚ ಬಿಸಿ ಮುಟ್ಟಿಸಿದ ಪ್ರಸಂಗವೂ ನಡೆಯಿತು. ಇನ್ನೋರ್ವ ವಿದ್ಯಾರ್ಥಿಯು ನೀವು ಕೊಟ್ಟ ಸೈಕಲ್‌ನ್ನು ಈ ರಸ್ತೆಯ ಮೇಲೆ ಓಡಿಸಬಹುದೇ ಎಂದು ರಸ್ತೆ ಸಂಕಟವನ್ನು ತೆರೆದಿಟ್ಟ. ಬೈಲೂರು ಹೈಸ್ಕೂಲ್ ವಿದ್ಯಾರ್ಥಿ ಧನಂಜಯ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯ ಮೇಲೆ ನೋಡೆಲ್ ಅಧಿಕಾರಿ ಹಾಗೂ ಅಕ್ಷರ ದಾಸೋಹ ಕಾರ್ಯಕ್ರಮದ ಸಹಾಯಕ ನಿರ್ದೇಶಕ ಪಿ.ಜೆ.ಫರ್ನಾಂಡೀಸ್, ಆಯುರ್ವೇದ ವೈದ್ಯರಾದ ಸತೀಶ ನಾಯ್ಕ, ಬಿ‌ಎಚ್‌ಇ ಎಮ್.ಪಿ.ಭಂಡಾರಿ, ಪಂಚಾಯತ ಸದಸ್ಯರಾದ ಮೋಹನ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
 

Share: