ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾಸರಗೋಡು: ವಿಗ್ರಹ ಕಳ್ಳರಿಂದ ಕಳ್ಳತನವಾದ ಪುರಾತನ ವಿಗ್ರಹ ವಶ - ಮೂವರ ಬಂಧನ

ಕಾಸರಗೋಡು: ವಿಗ್ರಹ ಕಳ್ಳರಿಂದ ಕಳ್ಳತನವಾದ ಪುರಾತನ ವಿಗ್ರಹ ವಶ - ಮೂವರ ಬಂಧನ

Sat, 17 Oct 2009 02:52:00  Office Staff   S.O. News Service

ಕಾಸರಗೋಡು, ಅ.16: ತ್ರಿಪುಣಿತ್ತರ ಪೊಲೀಸರು ಗುರುವಾರ ನಡೆಸಿದ ಕಾರ್ಯಾ ಚರಣೆಯಲ್ಲಿ ಬೃಹತ್ ವಿಗ್ರಹ ಕಳವು ಜಾಲದ ಮೂವರು ಆರೋಪಿಗಳನ್ನು ಬಂಧಿಸಿದ್ದು, ಕೋಟ್ಯಂತರ ರೂ. ಮೌಲ್ಯದ ಬೃಹತ್ ಗಾತ್ರದ ಪಂಚಲೋಹದ ವಿಗ್ರಹವನ್ನು ವಶಪಡಿಸಿಕೊಂಡಿದ್ದಾರೆ.

 

ಬಂಧಿತ ಆರೋಪಿಗಳನ್ನು ಉಡುಪಿ ಬೆಳಪುವಿನ ಪ್ರಕಾಶ್ ಭಟ್(೩೯), ಮಂಗಳೂರು ಅಶೋಕ ನಗರ ನಿವಾಸಿ ರಾಜೇಶ್(೨೩) ಹಾಗೂ ಆರ್.ಕೆ.ಕಂಪೌಂಡ್ ನಿವಾಸಿ ಅಖಿಲ್(೨೦) ಎಂದು ಗುರುತಿಸಲಾ ಗಿದೆ. ಓರ್ವ ಆರೋಪಿ ಈ ಸಂದರ್ಭದಲ್ಲಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

 17ksr2.jpg

ತ್ರಿಪುಣಿತ್ತರ ರೈಲ್ವೆ ನಿಲ್ದಾಣದ ಬಳಿ ವಿಗ್ರಹಗಳನ್ನು ಮಾರಾಟ ಮಾಡಲು ಯತ್ನಿಸಿದ ಆರೋಪಿಗಳನ್ನು ಮಫ್ತಿಯಲ್ಲಿ ತೆರಳಿದ ಪೊಲೀಸರು ಖರೀದಿಯ ನಾಟಕವಾಡಿ ಬಂಧಿಸಿದ್ದಾರೆ. 

ಆರೋಪಿಗಳಿಂದ ವಶಪಡಿಸಿಕೊಂಡ ವಿಗ್ರಹವು ೪೦೦ ವರ್ಷ ಪುರಾತನವಾದುದು ಎನ್ನಲಾಗಿದ್ದು, ಇದನ್ನು ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದ ಬಳಿಯಿರುವ ದೇವಳವೊಂದರಿಂದ ಕಳವುಗೈದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದು ಕೋಟ್ಯಂತರ ರೂ. ಬೆಲೆ ಬಾಳುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳು ದಕ್ಷಿಣ ಭಾರತದಲ್ಲಿನ ಬೃಹತ್ ವಿಗ್ರಹ ಕಳವು ಜಾಲದ ಏಜೆಂಟರಾಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಪೊಲೀಸ್ ಕಾರ್ಯಾಚರಣೆಯ ವೇಳೆ ತಪ್ಪಿಸಿ ಕೊಂಡ ಆರೋಪಿಯಿಂದ ನಕಾಶೆಯೊಂದನ್ನು ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ಗುರುವಾಯೂರು ಕ್ಷೇತ್ರ, ಕೋಟಯಂ ಹಾಗೂ ಕಲ್ಲಿಕೋಟೆಯ ಕೆಲವು ದೇವಳಗಳ ವಿಗ್ರಹಗಳನ್ನು ಕಳವುಗೈಯ್ಯಲು ಗುರುತು ಮಾಡಲಾಗಿದೆ ಎಂದು ಹೇಳಲಾಗಿದೆ.

ಅಲ್ಲದೇ ತೇಕ್ಕಡಿ, ತ್ರಿಶ್ಶೂರು, ಕೋಟಯಂ ಮೊದಲಾದೆಡೆಗಳಲ್ಲಿನ ಕೆಲವು ಹೊಟೆಲ್‌ಗಳ ಹೆಸರು, ದೂರವಾಣಿ ಸಂಖ್ಯೆಗಳನ್ನು ದಾಖಲಿಸಲಾಗಿವೆ. ಪುರಾತನ ವಸ್ತುಗಳನ್ನು ಮಾರಾಟ ಮಾಡುವ ಸ್ಥಳಗಳನ್ನು ನಕಾಶೆಯಲ್ಲಿ ಗುರುತಿಸಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳಪುವಿನ ಮೂವರು ವಿಚಾರಣೆಗೆ 

ವಿಗ್ರಹ ಕಳವು ಪ್ರಕರಣಕ್ಕೆ ಸಂಬಂಧಿಸಿ ಉಡುಪಿಯ ಬೆಳಪು ನಿವಾಸಿ ಪ್ರಶಾಂತ್ ಶೆಣೈ, ಕಾಪುವಿನ ಮಜೂರು ಚಂದ್ರನಗರ ನಿವಾಸಿ ಕರೀಂ ಸಾಹೇಬ್ ಹಾಗೂ ಕಟಪಾಡಿ ನಿವಾಸಿ ಜಗದೀಶ್ ಎಂಬವರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿರುವು ದಾಗಿ ತ್ರಿಪುಣಿತ್ತರ ಪೊಲೀಸರು ತಿಳಿಸಿದ್ದಾರೆ. 

ತನಿಖೆಗಾಗಿ ವಶಕ್ಕೆ ತೆಗೆದುಕೊಂಡವರಿಂದ ವಿಗ್ರಹ ಕಳವಿಗೆ ಸಂಬಂಧಿಸಿ ಮಹತ್ತರವಾದ ಸುಳಿವುಗಳು ಲಭಿಸುವ ನಿರೀಕ್ಷೆ ಇದೆ ಎಂದು ಪೊಲೀಸರು ಹೇಳಿದ್ದಾರೆ. ಈ ಜಾಲದ ಕುರಿತ ತನಿಖೆಯನ್ನು ತ್ರಿಪುಣಿತ್ತರ ಪೊಲೀಸರು ಉಡುಪಿ ಪೊಲೀಸರಿಗೆ ವಿಸ್ತರಿಸಿದ್ದಾರೆ ಎನ್ನಲಾಗಿದೆ 


Share: