ಮೈಸೂರು, ಏ. ೨೪ (ಕರ್ನಾಟಕ ವಾರ್ತೆ) - ಆರೋಗ್ಯ ತುರ್ತು ಸೇವೆಯ ’೧೦೮’ ವಾಹನಗಳ ಮೈಸೂರು ಜಿಲ್ಲೆಯ ಚಾಲಕರು ಇಂದು ಬೆಳಗಿನ ಜಾವದಿಂದ ಮುಷ್ಕರಕ್ಕೆ ಮುಂದಾದರು. ಇದರಿಂದಾಗಿ ಗ್ರಾಮೀಣ ಭಾಗಗಳಲ್ಲಿನ ಜನರು ತುರ್ತು ಸೇವೆಗಳಿಗೆ ಪರದಾಡುವಂತಾಯಿತು. ಈ ನಿಟ್ಟಿನಲ್ಲಿ ತ್ವರಿತವಾಗಿ ಕ್ರಮ ಜಾರಿಗೊಳಿಸಿದ ಮೈಸೂರು ಜಿಲ್ಲಾಡಳಿತವು ಅಗತ್ಯ ಕ್ರಮಗಳಿಗೆ ಮುಂದಾಗುತ್ತಿದ್ದಂತೆ ವಾಹನ ಚಾಲಕರುಗಳು ಮುಷ್ಕರ ಹಿಂತೆಗೆದುಕೊಂಡು ತಮ್ಮ ಕರ್ತವ್ಯಗಳ ನಿಗದಿತ ಪ್ರದೇಶಗಳಿಗೆ ತೆರಳಿದರು.
ಮಧ್ಯಾಹ್ನ ೧೨ ಗಂಟೆಯ ವೇಳೆಗೆ ಅಪರ ಜಿಲ್ಲಾಧಿಕಾರಿಗಳಾದ ಡಾ: ಸಿ.ಜಿ. ಬೆಟ್ಟಸೂರ ಮಠ ಅವರು ಮುಷ್ಕರ ನಿರತ ವಾಹನ ಚಾಲಕರನ್ನು ಕರೆದು ಅವರ ಸಮಸ್ಯೆಗಳನ್ನು ಕುರಿತಂತೆ ವಿವರವಾಗಿ, ಸಾವಧಾನವಾಗಿ ಚರ್ಚಿಸಿದರು. ಅವರ ಸಮಸ್ಯೆಗಳಿಗೆ ತಮ್ಮ ಸಹಾನುಭೂತಿಯನ್ನು ತಿಳಿಸಿದರಾದರೂ ಈಗಾಗಲೇ ಗ್ರಾಮೀಣ ಪ್ರದೇಶಗಳಿಂದ ಆರೋಗ್ಯ ತುರ್ತು ಸೇವೆಗೆ ಬರುತ್ತಿರುವ ದೂರವಾಣಿ ಕರೆಗಳು ಹಾಗೂ ಮುಷ್ಕರದಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ಮನದಟ್ಟು ಮಾಡಿಕೊಡುವಲ್ಲಿ ಯಶಸ್ವಿಯಾದರು.
ಮುಷ್ಕರ ನಿರತರ ಬೇಡಿಕೆಗಳ ಬಗ್ಗೆ ರಾಜ್ಯ ಸರ್ಕಾರ ಈಗಾಗಲೇ ಚರ್ಚಿಸುತ್ತಿದ್ದು ಪರಿಹಾರದ ಭರವಸೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವೂ ಮುಷ್ಕರ ನಿರತರ ಬೇಡಿಕೆಗಳ ಬಗ್ಗೆ ಸಹಾನುಭೂತಿಯಿಂದ ಪರಿಗಣಿಸಲು ರಾಜ್ಯ ಸರ್ಕಾರಕ್ಕೆ ಅಗತ್ಯ ಶಿಫಾರಸ್ಸು ಮಾಡುವ ಭರವಸೆಯನ್ನು ಅಪರ ಜಿಲ್ಲಾಧಿಕಾರಿ ಡಾ: ಸಿ.ಜಿ. ಬೆಟ್ಟಸೂರ ಮಠ್ ನೀಡಿದರು.
ಮುಷ್ಕರ ಮಾಡುವವರು ಕಾನೂನಿನ್ವಯ ಸರ್ಕಾರಿ ವಾಹನಗಳನ್ನು ತಮ್ಮ ನಿಗಧಿತ ಸ್ಥಳದಿಂದ ಅಕ್ರಮವಾಗಿ ತಂದಿರುವ ಬಗ್ಗೆ, ಸಾರ್ವಜನಿಕರ ನೋವಿಗೆ ಅಗತ್ಯ ಸ್ಪಂದನ ನೀಡದಿರುವ ಬಗ್ಗೆ ವಾಹನ ಚಾಲಕರಿಗೆ ಮನದಟ್ಟು ಮಾಡಿ ವಾಹನ ಚಾಲನೆ ಸಾಧ್ಯವಾಗದಿದ್ದರೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ರಾಜು, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶ್ರೀ ಸಿದ್ದರಾಮಯ್ಯ, ಮೈಸೂರು ನಗರ ಸಹಾಯಕ ಪೋಲೀಸ್ ಆಯುಕ್ತ ಕೃಷ್ಣವರ್ಧನ್ ಅವರುಗಳು ವಾಹನ ಚಾಲಕರಿಗೆ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಅರಿವು ಮೂಡಿಸಿದರು.
ವಾಹನ ಚಾಲಕರು ತೀರ್ಮಾನಕ್ಕೆ ಬರಲು ಮದ್ಯಾಹ್ನ ೨.೩೦ರವರೆಗೆ ಕಾಲಾವಕಾಶ ಕೇಳಿದರು.
ಅಪರ ಜಿಲ್ಲಾಧಿಕಾರಿ ಡಾ: ಸಿ.ಜಿ. ಬೆಟ್ಟಸೂರ ಮಠ ಊಟಕ್ಕೂ ತೆರಳದೆ ಮುಷ್ಕರ ನಿರತರ ತೀರ್ಮಾನಕ್ಕೆ ಕಾದು ಕುಳಿತರು. ಮದ್ಯಾಹ್ನ ೩.೩೦ ಗಂಟೆಯಾದರೂ ವಾಹನ ಚಾಲಕರು ಯಾವುದೇ ತೀರ್ಮಾನಕ್ಕೆ ಬರಲಿಲ್ಲ. ಗ್ರಾಮೀಣ ಭಾಗಗಳಿಂದ ಆರೋಗ್ಯ ಸೇವೆ ೧೦೮ ಅಗತ್ಯತೆ ಬಗ್ಗೆ ಬೇಡಿಕೆ ದೂರವಾಣಿ ಬರುವುದು ಹೆಚ್ಚುತ್ತಲೇ ಹೋಯಿತು. ಪರ್ಯಾಯ ಅಂಬ್ಯುಲೆಸ್ಸ್ ವ್ಯವಸ್ಥೆ ಹಾಗೂ ಪರ್ಯಾಯ ಚಾಲಕರ ವ್ಯವಸ್ಥೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಅಪರ ಜಿಲ್ಲಾಧಿಕಾರಿಗಳು ಮುಷ್ಕರ ನಿರತ ವಾಹನ ಚಾಲಕರು ಹಾಗೂ ವಾಹನಗಳ ಬಳಿಗೆ ತೆರಳಿ ಅಂತಿಮ ಎಚ್ಚರಿಕೆ ನೀಡಿದರು ಹಾಗೂ ಅಗತ್ಯ ಕಠಿಣ ಕ್ರಮಕ್ಕೆ ಸಿದ್ಧಗೊಂಡರು.
ಕೂಡಲೇ ’೧೦೮’ ತುರ್ತು ಸೇವೆಯ ವಾಹನ ಚಾಲಕರು ಮುಷ್ಕರ ಕೈಬಿಟ್ಟು ತಮ್ಮ ವಾಹನಗಳೊಂದಿಗೆ ತಮಗೆ ನಿಗದಿಪಡಿಸದ ಕರ್ತವ್ಯದ ಸ್ಥಳಕ್ಕೆ ತೆರಳಿದರು.
ಸ್ಥಳದಲ್ಲಿದ್ದ ನೂರಾರು ಜನರು ಜಿಲ್ಲಾಡಳಿತ ಗ್ರಾಮೀಣ ಜನರ ನೋವಿಗೆ ತ್ವರಿತ ಗತಿಯಲ್ಲಿ ಮಿಡಿದದ್ದು ಕಂಡು ಹರ್ಷಚಿತ್ತರಾದರೆ, ಕೆಲವರು ಅಪರ ಜಿಲ್ಲಾಧಿಕಾರಿಗಳನ್ನು ಅಭಿನಂದಿಸಲು ಮರೆಯಲಿಲ್ಲ.
ಸಾರಿಗೆ ಸಚಿವರ ಮೈಸೂರು ಭೇಟಿ
ಮೈಸೂರು, ಏ. ೨೪ (ಕರ್ನಾಟಕ ವಾರ್ತೆ) - ಮಾನ್ಯ ಸಾರಿಗೆ ಸಚಿವ ಶ್ರೀ ಆರ್. ಅಶೋಕ್ ಅವರು ಏಪ್ರಿಲ್ ೨೫ರಂದು ಮೈಸೂರಿಗೆ ಆಗಮಿಸಲಿದ್ದಾರೆ. ಅಂದು ಸಂಜೆ ೪.೩೦ಕ್ಕೆ ಮೈಸೂರಿಗೆ ಆಗಮಿಸಿ ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ಡಾ: ರಾಜ್ ನೆನಪಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಜೆ ೫.೩೦ಕ್ಕೆ ಮೈಸೂರಿನಿಂದ ಬೆಂಗಳೂರಿಗೆ ತೆರಳುವರು.
ಆಕಾಶವಾಣಿ : ’ಅಮೃತ ಸಿಂಚನ’ ವಿಶೇಷ ಕಾರ್ಯಕ್ರಮ
ಮೈಸೂರು, ಏ. ೨೪ (ಕರ್ನಾಟಕ ವಾರ್ತೆ) - ಮೈಸೂರು ಆಕಾಶವಾಣಿಯ ’ಅಮೃತ ಮಹೋತ್ಸವ’ ಸಂದರ್ಭದಲ್ಲಿ ಪ್ರಸಾರವಾಗುತ್ತಿರುವ ’ಅಮೃತ ಸಿಂಚನ’ ವಿಶೇಷ ಕಾರ್ಯಕ್ರಮ ಸರಣಿಯಲ್ಲಿ ದಿನಾಂಕ ೨೬.೦೪.೨೦೧೦ರ ಸೋಮವಾರದಂದು ಬೆಳಿಗ್ಗೆ ೮.೩೫ ಗಂಟೆಗೆ ’ನಾ ಕಸ್ತೂರಿ’ ಅವರ ಬಗ್ಗೆ ವಿಶೇಷ ರೂಪಕ ಪ್ರಸಾರವಾಗಲಿದೆ. ನಿರ್ಮಾಣ - ಡಾ: ಹೆಚ್.ಕೆ. ರಂಗನಾಥ್.
ಇದು ಆಕಾಶವಾಣಿಯ ಧ್ವನಿಮುದ್ರಣ ಭಂಡಾರದ ಕೊಡುಗೆ ಎಂದು ಆಕಾಶವಾಣಿ ನಿಲಯ ನಿರ್ದೇಶಕ ಡಾ: ಎಂ.ಎಸ್. ವಿಜಂii ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈಲ್ವೆ ಮಂಡಳಿ ಅಧ್ಯಕ್ಷ ಮೈಸೂರು ಭೇಟಿ
ಮೈಸೂರು, ಏ. ೨೪ (ಕರ್ನಾಟಕ ವಾರ್ತೆ) - ಕೇಂದ್ರ ರೈಲ್ವೆ ಮಂಡಳಿ ಅಧ್ಯಕ್ಷರಾದ ಶ್ರೀ ಎಸ್.ಎಸ್. ಖುರಾನಾ ಹಾಗೂ ಪದನಿಮಿತ್ತ ಪ್ರಧಾನ ಕಾರ್ಯದರ್ಶಿಗಳು, ರೈಲ್ವೆ ಮಂತ್ರಾಲಯ ಇವರು ದಿನಾಂಕ ೨೬.೪.೨೦೧೦ರಂದು ಬೆಳಿಗ್ಗೆ ೧೦.೦೦ ಗಂಟೆಗೆ ಮೈಸೂರಿಗೆ ಆಗಮಿಸಲಿದ್ದಾರೆ. ಬೆಳಿಗ್ಗೆ ೧೦ ರಿಂದ ೧೧ರವರೆಗೆ ಮೈಸೂರು ರೈಲ್ವೆ ನಿಲ್ದಾಣದ ತಪಾಸಣೆ ನಡೆಸುವ ಅವರು ೧೧.೦೦ ರಿಂದ ೧೧.೩೦ರವರೆಗೆ ಮೈಸೂರಿನ ರೈಲ್ವೆ ವಿಭಾಗೀಯ ವ್ಯವಸ್ಥಾಪಕರ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸುವರು. ೧೧.೩೦ ರಿಂದ ೧.೩೦ಕ್ಕೆ ಚಾಮುಂಡಿ ಬೆಟ್ಟ ಹಾಗೂ ಮೈಸೂರು ಅರಮನೆಗೆ ಭೇಟಿ ನೀಡುವರು. ಮಧ್ಯಾಹ್ನ ೩.೩೦ ರಿಂದ ರಾತ್ರಿ ೮ರವರೆಗೆ ಶ್ರೀರಂಗಪಟ್ಟಣ, ರಂಗನತಿಟ್ಟು ಹಾಗೂ ಕೆ.ಆರ್.ಎಸ್.ಗೆ ಭೇಟಿ ನೀಡಿ ರಾತ್ರಿ ೧೧.೪೫ಕ್ಕೆ ಮೈಸೂರಿನಿಂದ ನಿರ್ಗಮಿಸುವರು.