ಮೂಲ್ಕಿ, ಅ.16: ದಿನ ಪತ್ರಿಕೆಯೊಂದರಲ್ಲಿ ಪ್ರಕಟವಾದ ಕಪೋಲ ಕಲ್ಪಿತ ವರದಿಯ ಪ್ರತಿಯೊಂದನ್ನು ಸರ್ವಿಸ್ ಬಸ್ಸಿನಲ್ಲಿ ಅಂಟಿಸಿರುವುದನ್ನು ಯುವಕರ ಗುಂಪೊಂದು ಆಕ್ಷೇಪಿಸಿದ ಘಟನೆ ಶುಕ್ರವಾರ ಬೆಳಗ್ಗೆ ಇಲ್ಲಿನ ಕಾರ್ನಾಡಿನಲ್ಲಿ ನಡೆದಿದೆ.

ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ‘ಲವ್ ಜಿಹಾದ್’ ಕುರಿತ ಪ್ರಚೋದನಕಾರಿ ವರದಿಯ ಪ್ರತಿಯನ್ನು ಮೂಲ್ಕಿಯಿಂದ ಕಿನ್ನಿಗೋಳಿ ಮೂಲಕ ಬಿ.ಸಿ.ರೋಡ್ಗೆ ತೆರಳುವ ‘ಲೇಡಿ ಆಫ್ ವೈಲೆಂಕನಿ’ ಸರ್ವಿಸ್ ಬಸ್ನ ಚಾಲಕನ ಸೀಟಿನ ಹಿಂಬದಿಯಲ್ಲಿ ಅಂಟಿಸಲಾಗಿತ್ತು. ಬಸ್ಸು ಬೆಳಗ್ಗೆ ಮೂಲ್ಕಿಯಿಂದ ಕಾರ್ನಾಡು ಬಸ್ ನಿಲ್ದಾಣಕ್ಕೆ ಬಂದಾಗ ಯುವಕರ ತಂಡವೊಂದು ಬಸ್ಸನ್ನು ತಡೆದು ಕರಪತ್ರ ಅಂಟಿಸಿರುವುದಕ್ಕೆ ಬಸ್ ಚಾಲಕ, ನಿರ್ವಾ ಹಕರನ್ನು ತರಾಟೆಗೆ ತೆಗೆದುಕೊಂಡಿದೆ ಎನ್ನಲಾಗಿದೆ. ಬಳಿಕ ತಂಡವು ಬಸ್ಸನ್ನು ಮೂಲ್ಕಿ ಪೊಲೀಸ್ ಠಾಣೆಗೆ ತೆಗೆದು ಕೊಂಡು ಹೋಗಿದೆ.
ಕಪೋಲ ಕಲ್ಪಿತ ವರದಿಯ ಕರ ಪತ್ರ ತೆಗೆಯುವಂತೆ ಹಾಗೂ ಅಂಟಿಸಿದವರ ವಿರುದ್ಧ ಕ್ರಮ ಕೈಗೊಳ್ಳುವ0ತೆ ಆಗ್ರಹಿಸಿದ ಯುವಕರ ವಿರುದ್ಧವೇ ಮೂಲ್ಕಿ ಇನ್ಸ್ಪೆಕ್ಟರ್ ಶಿವ ಪ್ರಕಾಶ್ ನಾಯಕ್ ಮತ್ತು ಸಬ್ ಇನ್ಸ್ಪೆಕ್ಟರ್ ಸುದರ್ಶನ್ ದೂರು ದಾಖಲಿಸಿಕೊಂಡು ಆರು ಮಂದಿ ಯನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.

ಬಂಧನಕ್ಕೆ ಒಳಗಾದವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಮಧ್ಯೆ ಪ್ರಕರಣದ ಕುರಿತು ಸ್ಥಳೀಯ ವಾಗಿ ಹಬ್ಬಿದ ಗಾಳಿ ಸುದ್ದಿಯ ಕಾರಣ ಮೂಲ್ಕಿ ಠಾಣೆಯ ಎದುರು ಜಮಾಯಿ ಸಿದ್ದ ಸಾರ್ವಜನಿಕರನ್ನು ಚದುರಿಸಲು ಲಾಠಿ ಚಾರ್ಜ್ ನಡೆಸಲಾಯಿತು. ಪ್ರಕರಣಕ್ಕೆ ಸಂಬಂಧಿಸಿ ಕೆ.ಎಸ್.ರಾವ್ ನಗರದ ಅಬ್ದುಲ್ ಹಮೀದ್ (೨೮), ಕಾರ್ನಾಡು ಸರಕಾರಿ ಶಾಲೆಯ ಬಳಿಯ ನಿವಾಸಿಗಳಾದ ಹುಸೈನ್ (೩೦), ಹಸನ್ ಮುಬಾರಕ್ (೩೦), ಕಿಲ್ಪಾಡಿಯ ಅಬೂಬಕರ್ ಸಿದ್ದೀಕ್ (೩೦), ದರ್ಗಾ ರಸ್ತೆ ನಿವಾಸಿ ರಿಝ್ವಾನ್ (೨೩), ಗಾಂಧಿ ಮೈದಾನದ ಬಳಿಯ ಶಮೀಮ್ ಅಖ್ತರ್ (೨೪) ಬಂಧನಕ್ಕೊಳಗಾಗಿದ್ದು ಅಶ್ರಫ್, ಇಸ್ಮಾಯೀಲ್, ಮುಬಾರಕ್, ಆಸಿಫ್, ಸದ್ದಾಂ, ರಹ್ಮಾನ್, ಬಶೀರ್, ಶರೀಫ್, ರಿಝ್ವಾನ್ ಎಂಬವರು ಸೇರಿದಂತೆ ೫೦ ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಮೂಲ್ಕಿ ಠಾಣೆಗೆ ಪಣಂಬೂರು ವಿಭಾಗದ ಡಿವೈಎಸ್ಪಿ ಗಿರೀಶ್ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ.