ಭಟ್ಕಳ, ಅಕ್ಟೋಬರ್ 31:ನೆರೆ ಪರಿಹಾರ ಹಂಚಿಕೆಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗಿದ್ದು, ತಾಲೂಕಿನಲ್ಲಿ ಅಗತ್ಯ ಕಾಮಗಾರಿಗಳನ್ನು ಕೈ ಬಿಡಲಾಗಿದೆ ಎಂದು ಸದಸ್ಯ ಪರಮೇಶ್ವರ ದೇವಾಡಿಗ ತಾಲೂಕು ಪಂಚಾಯತ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಕುಕನೀರ ಮೊಗೇರ ಭಾಗದಲ್ಲಿ ಸಿಡಿ ಕುಸಿದು ಬೀಳುವ ಸ್ಥಿತಿಯಲ್ಲಿದ್ದು, ಅಧಿಕಾರಿಗಳ ಅನುಮೋದನೆಯ ನಂತರವೂ ಕಾಮಗಾರಿಯನ್ನು ಕಡೆಗಣಿಸಲಾಗಿದೆ.
ಇಂತಹ ತಾರತಮ್ಯಗಳು ತಾಲೂಕನ್ನು ಆವರಿಸಿಕೊಂಡಿದ್ದು, ಸರಕಾರದ ಕಾರ್ಯಕ್ರಮಗಳು ಪೋಲಾಗದಂತೆ ತಡೆಹಿಡಿಯಬೇಕಾಗಿದೆ ಎಂದು ಅವರು ಪ್ರತಿಪಾದಿಸಿದರು. ಬೆಳೆ ಪರಿಹಾರವು ಇದೇ ಹಾದಿ ಹಿಡಿದಿದೆ ಎಂದೂ ಸಭೆಯಲ್ಲಿ ಉಳಿದ ಸದಸ್ಯರು ಪ್ರಸ್ತಾಪಿಸಿದರು. ಸರಕಾರ ಬಾಲ ವಿಕಾಸ ಸಮಿತಿಯನ್ನು ರಚಿಸಿದ್ದು, ಅದರ ಗಮನಕ್ಕೆ ತಾರದೇ ಔಷಧಿ ಹಾಗೂ ಆಟಿಕೆ ಸಾಮಗ್ರಿಗಳನ್ನು ಹುಬ್ಬಳ್ಳಿ ಕಡೆಯಿಂದ ಪೂರೈಸಲಾಗುತ್ತಿದೆ. ಇದೊಂದು ಅಪ್ಪಟ ಮೋಸ ವ್ಯವಹಾರವಾಗಿದ್ದು, ಲಕ್ಷಾಂತರ ರೂಪಾಯಿ ಅಡ್ಡ ಹಾದಿಯಲ್ಲಿ ಖರ್ಚಾಗುತ್ತಿದೆ. ಇದನ್ನು ಇಲ್ಲಿಗೆ ನಿಲ್ಲಿಸುವಂತೆ ಅವರು ಅಧಿಕಾರಿಗಳನ್ನು ಆಗ್ರಹಿಸಿದರು. ಇದಕ್ಕೆ ಸಮ್ಮತಿ ಸೂಚಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ನಾಗೇಶ ರಾವ್ ಇದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.