ಧಾರವಾಡ : ಜಿಲ್ಲೆಯಲ್ಲಿ ಕೋಟ್ಪಾ-2003 ಕಾಯ್ದೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಆದರೂ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ನಿಷೇಧಿತ ಪ್ರದೇಶಗಳಲ್ಲಿ ಧೂಮಪಾನ ಮಾಡುತ್ತಿರುವುದು ಕಂಡು ಬರುತ್ತಿದೆ. ಆರೋಗ್ಯ ಮತ್ತು ಪೊಲೀಸ್ ಹಾಗೂ ಪಾಲಿಕೆಯ ಸಿಬ್ಬಂದಿಗಳ ಮೂಲಕ ಕಾಯ್ದೆ ಉಲ್ಲಂಘಿಸುವವರ ವಿರುದ್ಧ ಕೋಟ್ಪಾ-2003 ಕಾಯ್ದೆಯಡಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಆರೋಗ್ಯ ಮಿಷನ್ ಸಭೆಯಲ್ಲಿ ಜಿಲ್ಲೆಯಲ್ಲಿ ಕೋಟ್ಪಾ ಕಾಯ್ದೆ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಆರೋಗ್ಯ ಇಲಾಖೆಯಿಂದ ಸೂಕ್ತ ತಿಳುವಳಿಕೆ ಮತ್ತು ಕೋಟ್ಪಾ ಕಾಯ್ದೆಯ ಕುರಿತು ಪ್ರಚಾರ ಫಲಕ ಪೋಸ್ಟರ್‍ಗಳನ್ನು ನೀಡಿದ್ದರೂ ಸಹ ಕೆಲವು ಪಾನ ಮಸಾಲಾ ಅಂಗಡಿಗಳು, ಕಿರಾಣಿ ಅಂಗಡಿಗಳು, ರಸ್ತೆ ಬದಿಯ ಚಹಾ ಹಾಗೂ ಇತರೆ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯಾಪಾರಸ್ಥರು ಗಂಭೀರವಾಗಿ ಪರಿಗಣಿಸದೆ ಕಾಯ್ದೆ ಉಲ್ಲಂಘಿಸುತ್ತಿರುವ ಕುರಿತು ವರದಿಯಾಗುತ್ತಿದೆ. ನಿಯಮ ಉಲ್ಲಂಘಿಸುವವರ ವಿರುದ್ದ ಮತ್ತು ಧೂಮಪಾನ ಸಂಬಂಧಿತ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳ ವ್ಯಾಪಾರ ಪರವಾನಿಗೆಯನ್ನು ಅಮಾನತ್ತುಗೊಳಿಸಲು ಕ್ರಮವಹಿಸಬೇಕೆಂದು ಅವರು ಹೇಳಿದರು.
ಜಿಲ್ಲಾ ಸಮೀಕ್ಷಣಾಧಿಕಾರಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮಾಧಿಕಾರಿ ಡಾ. ಸುಜಾತಾ ಹಸವೀಮಠ ಅವರು ವರದಿ ಮಂಡಿಸಿ, ಮಾತನಾಡಿ, ಏಪ್ರೀಲ್-2022 ರಿಂದ ಜೂನ್ – 2022 ರವರೆಗೆ ಆರೋಗ್ಯ ಇಲಾಖೆ, ಆಹಾರ ಸುರಕ್ಷತಾ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಕೋಟ್ಪಾ-2003 ಕಾಯ್ದೆಯಡಿಯಲ್ಲಿ ಧಾರವಾಡ ಜಿಲ್ಲೆಯಾದ್ಯಂತ ಒಟ್ಟು 346 ಪ್ರಕರಣಗಳನ್ನು ದಾಖಲಿಸಿ ರೂ.35540 ಗಳ ದಂಡ ವಿಧಿಸಲಾಗಿದೆ.
ಅದರಲ್ಲಿ ಧಾರವಾಡ ತಾಲೂಕಿನಲ್ಲಿ ಸೆಕ್ಷನ್ 4 ಮತ್ತು ಸೆಕ್ಷನ್ 6(ಎ) ಅಡಿಯಲ್ಲಿ ಒಟ್ಟು 4 ದಾಳಿಗಳನ್ನು ಕೈಗೊಂಡು 68 ಪ್ರಕರಣಗಳನ್ನು ದಾಖಲಿಸಿ ರೂ. 6950 ಗಳ ದಂಡ ವಿಧಿಸಲಾಯಿತು. ಹುಬ್ಬಳ್ಳಿ ತಾಲೂಕಿನಲ್ಲಿ ಸೆಕ್ಷನ್ 4 ಮತ್ತು ಸೆಕ್ಷನ್ 6(ಎ) ಅಡಿಯಲ್ಲಿ ಒಟ್ಟು 7 ದಾಳಿಗಳನ್ನು ಕೈಗೊಂಡು 180 ಪ್ರಕರಣಗಳನ್ನು ದಾಖಲಿಸಿ ರೂ. 18340 ಗಳ ದಂಡ ವಿಧಿಸಲಾಯಿತು. ಕುಂದಗೋಳ ತಾಲೂಕಿನಲ್ಲಿ ಸೆಕ್ಷನ್ 4 ಮತ್ತು ಸೆಕ್ಷನ್ 6(ಎ) ಅಡಿಯಲ್ಲಿ ಒಟ್ಟು 2 ದಾಳಿಗಳನ್ನು ಕೈಗೊಂಡು 35 ಪ್ರಕರಣಗಳನ್ನು ದಾಖಲಿಸಿ ರೂ. 3400 ಗಳ ದಂಡ ವಿಧಿಸಲಾಯಿತು. ಕಲಘಟಗಿ ತಾಲೂಕಿನಲ್ಲಿ ಸೆಕ್ಷನ್ 4 ಮತ್ತು ಸೆಕ್ಷನ್ 6(ಎ) ಅಡಿಯಲ್ಲಿ ಒಟ್ಟು 2 ದಾಳಿಗಳನ್ನು ಕೈಗೊಂಡು 37 ಪ್ರಕರಣಗಳನ್ನು ದಾಖಲಿಸಿ ರೂ. 3650 ಗಳ ದಂಡ ವಿಧಿಸಲಾಯಿತು. ಮತ್ತು ನವಲಗುಂದ ತಾಲೂಕಿನಲ್ಲಿ ಸೆಕ್ಷನ್ 4 ಮತ್ತು ಸೆಕ್ಷನ್ 6(ಎ) ಅಡಿಯಲ್ಲಿ ಒಟ್ಟು 1 ದಾಳಿಗಳನ್ನು ಕೈಗೊಂಡು 26 ಪ್ರಕರಣಗಳನ್ನು ದಾಖಲಿಸಿ ರೂ. 3200 ಗಳ ದಂಡ ವಿಧಿಸಲಾಯಿತು ಎಂದು ತಿಳಿಸಿದರು.
ಸಾರ್ವಜನಿಕರು ಪಾಲಿಸಬೇಕಾದ ಕೋಟ್ಪಾ -2003 ರ ಕಾಯ್ದೆ ನಿಯಮಗಳು:
ಸೆಕ್ಷನ್ 4: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ- ಈ ಕಾಯಿದೆಯ ಪ್ರಕಾರ ಯಾವುದೇ ವ್ಯಕ್ತಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಅಪರಾಧ. ಸಾರ್ವಜನಿಕ ಸ್ಥಳ ಅಂದರೆ ಸಾಮಾನ್ಯವಾಗಿ ಸಾರ್ವಜನಿಕರು ಭೇಟಿ ನೀಡುವ ಸರ್ಕಾರಿ ಕಛೇರಿಗಳು, ಆಸ್ಪತ್ರೆಗಳು, ರೆಸ್ಟೋರೆಂಟ್‍ಗಳು, ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು, ಸ್ಥಳಗಳಾಗಿರುತ್ತವೆ. ಸಾರ್ವಜನಿಕ ಸ್ಥಳದಲ್ಲಿ ಸಿಗರೇಟು ಸೇದುವ ಯಾವುದೇ ವ್ಯಕ್ತಿಗೆ ಪ್ರತಿ ಉಲ್ಲಂಘನೆಗೆ ರೂ.200 ರ ವರೆಗೆ ದಂಡ ವಿಧಿಸಬಹುದು.
ಸೆಕ್ಷನ್ 5: ತಂಬಾಕು ಉತ್ಪನ್ನಗಳ ನೇರ ಹಾಗು ಪರೋಕ್ಷ ಜಾಹೀರಾತು, ಉತ್ತೇಜನ, ಪ್ರಾಯೋಜಕತೆ ನಿಷೇಧ- ಈ ಅಧಿನಿಯಮದಂತೆ, ತಂಬಾಕು ಉತ್ಪನ್ನಗಳ ನೇರ ಹಾಗು ಪರೋಕ್ಷ ಜಾಹೀರಾತು, ಉತ್ತೇಜನ, ಪ್ರಾಯೋಜಕತೆ ನಿಷೇಧಿಸಲಾಗಿದೆ. ತಂಬಾಕು ಉತ್ಪನ್ನಗಳ ಮಾರಾಟ ಮಾಡುವ ಅಂಗಡಿಗಳಲ್ಲಿ (Poiಟಿಣ oಜಿ Sಚಿಟe) ತಂಬಾಕು ಉತ್ಪನ್ನಗಳನ್ನು ಶೋಕೇಸ್ ಗಳ ಮೂಲಕ ಪ್ರದರ್ಶನ ಮಾಡುವಂತ್ತಿಲ್ಲ. ತಂಬಾಕು ಉತ್ಪನ್ನಗಳ ಜಾಹೀರಾತು ಫಲಕಗಳನ್ನ, ಬಿತ್ತಿ ಪತ್ರಗಳನ್ನು, ಎಲ್.ಸಿ.ಡಿ. ಟಿ.ವಿ ಗಳನ್ನು ಅಂಗಡಿಯಲ್ಲಿ ಪ್ರದರ್ಶನ ಮಾಡುವಂತ್ತಿಲ್ಲ. ತಂಬಾಕು ಉತ್ಪನ್ನಗಳ ಗೋಡೆ ಬರಹ, ಹೋರ್ಡಿಂಗ್ಸ್‍ಗಳ ಮೂಲಕ ಜಾಹೀರಾತುಗಳನ್ನು ಮಾಡುವಂತಿಲ್ಲ. ದೃಶ್ಯ ಹಾಗೂ ಮುದ್ರಣ ಮಾಧ್ಯಮದ ಮೂಲಕ ತಂಬಾಕು ಉತ್ಪನ್ನಗಳ ಜಾಹೀರಾತು ಮಾಡುವಂತಿಲ್ಲ ಇದನ್ನು ಉಲ್ಲಂಘಿಸುವವರ ವಿರುದ್ಧ ಎರಡು ವರ್ಷದ ಶಿಕ್ಷೆ ಅಥವಾ ರೂ.1000 ದಂಡ ಅಥವಾ ಎರಡನ್ನು ವಿಧಿಸಬಹುದು. ವ್ಯಕ್ತಿಯು ಎರಡನೇ ಬಾರಿ ತಪ್ಪಿತಸ್ಥನಾಗಿದ್ದರೆ ದಂಡವು ರೂ.5000 ಮತ್ತು ಶಿಕ್ಷೆಯ ಅವಧಿ 5 ವರ್ಷ. ಶಿಕ್ಷೆಯ ಪ್ರಮಾಣವನ್ನು ಕೋರ್ಟ್ ನಿರ್ಧರಿಸುತ್ತದೆ.
ಸೆಕ್ಷನ್ 6: ತಂಬಾಕು ಉತ್ಪನ್ನಗಳು ಅಪ್ರಾಪ್ತ ವಯಸ್ಕರಿಗೆ (18 ವರ್ಷದೊಳಗಿನ ಮಕ್ಕಳು) ಸೇವನೆ ಮಾಡಬಾರದೆನ್ನುವ ಉದ್ದೇಶದಿಂದ ಈ ನಿಯಮವನ್ನು ಅಳವಡಿಸಲಾಗಿದೆ- ಸೆಕ್ಷನ್ 6(ಚಿ) ಪ್ರಕಾರ, ಅಪ್ರಾಪ್ತ ವಯಸ್ಕರಿಗೆ ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ ಹಾಗೂ ಅಪ್ರಾಪ್ತ ವಯಸ್ಕರಿಂದ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲಾಗಿದೆ.
ಸೆಕ್ಷನ್ 6(b) ಪ್ರಕಾರ : ಶಿಕ್ಷಣ ಸಂಸ್ಥೆಗಳ 100 ಗಜ ಅಥವಾ ಯಾರ್ಡ ಅಂತರದ ಒಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ. ಈ ನಿಯಮವನ್ನು ಉಲ್ಲಂಘಿಸಿದ ವ್ಯಕ್ತಿಗೆ ರೂ.200ರ ವರೆಗೆ ದಂಡ ವಿಧಿಸಲಾಗುತ್ತದೆ.
ಸೆಕ್ಷನ್ 7: ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ ಮೇಲೆ ನಿರ್ಧಿಷ್ಠ ಆರೋಗ್ಯದ ಎಚ್ಚರಿಕೆಗಳ ಸಂದೇಶಗಳಿಲ್ಲದೆ ಮಾರಾಟ ಮಾಡುವುದರ ನಿಷೇಧ- ನಿಯಮ ಉಲ್ಲಂಘಿಸುವ ಉತ್ಪಾದಕರಿಗೆ ಮೊದಲ ಉಲ್ಲಂಘನೆ 2 ವರ್ಷ ಜೈಲು ಶಿಕ್ಷೆ ಅಥವಾ ರೂ.5,000 ದಂಡ ಮತ್ತು ಎರಡನೆಯ ಉಲ್ಲಂಘನೆ 5 ವರ್ಷ ಜೈಲು ಶಿಕ್ಷೆ ಅಥವಾ ರೂ.10,000 ದಂಡ ವಿಧಿಸಲಾಗುತ್ತದೆ. ತಂಬಾಕು ಉತ್ಪನ್ನಗಳ ಮಾರಾಟ ಅಥವಾ ಚಿಲ್ಲರೆ ವ್ಯಾಪಾರದ ಮೊದಲ ಉಲ್ಲಂಘನೆ 2 ವರ್ಷ ಜೈಲು ಶಿಕ್ಷೆ ಅಥವಾ ರೂ.1000 ದಂಡ ಮತ್ತು ಎರಡನೆಯ ಉಲ್ಲಂಘನೆ 5 ವರ್ಷ ಜೈಲು ಶಿಕ್ಷೆ ಅಥವಾ ರೂ.3000 ದಂಡ ವಿಧಿಸಲಾಗುತ್ತದೆ ಎಂದು ಸಭೆಯಲ್ಲಿ ವಿವರಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಬಿ.ಸಿ.ಕರಿಗೌಡರ ಸೇರಿದಂತೆ ಜಿಲ್ಲಾ ಆರೋಗ್ಯ ಮಿಷನ್ ಸದಸ್ಯರು, ವೈದ್ಯರು, ಕಂದಾಯ ಇಲಾಖೆ, ಮಹಾನಗರ ಪಾಲಿಕೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.