ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕೇಂದ್ರ ನೌಕರರ ತುಟ್ಟಿಭತ್ತೆ ಶೇ.4ರಷ್ಟು ಹೆಚ್ಚಳ ಸಾಧ್ಯತೆ

ಕೇಂದ್ರ ನೌಕರರ ತುಟ್ಟಿಭತ್ತೆ ಶೇ.4ರಷ್ಟು ಹೆಚ್ಚಳ ಸಾಧ್ಯತೆ

Mon, 06 Feb 2023 19:17:35  Office Staff   Vb

ಹೊಸದಿಲ್ಲಿ: ಒಪ್ಪಿತ ಸೂತ್ರಕ್ಕನುಗುಣ ವಾಗಿ ಕೇಂದ್ರ ಸರಕಾರವು ತನ್ನ ಒಂದು ಕೋಟಿಗೂ ಹೆಚ್ಚಿನ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ತೆಯನ್ನು ಈಗಿನ ಶೇ.38ರಿಂದ ಶೇ.42ಕ್ಕೆ ಹೆಚ್ಚಿಸುವ ಸಾಧ್ಯತೆಯಿದೆ.

ಕಾರ್ಮಿಕ ಸಚಿವಾಲಯದ ಘಟಕವಾಗಿ ರುವ ಲೇಬರ್‌ ಬ್ಯೂರೊ ಕೈಗಾರಿಕಾ ಕಾರ್ಮಿಕರಿಗಾಗಿ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ-ಐಡಬ್ಲ್ಯು)ವನ್ನು ಪ್ರತೀ ತಿಂಗಳು ಬಿಡುಗಡೆಗೊಳಿಸುತ್ತದೆ. ಇತ್ತೀಚಿನ ಸೂಚ್ಯಂಕದ ಆಧಾರದಲ್ಲಿ ಉದ್ಯೋಗಿ ಗಳು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ತೆಯನ್ನು ನಿರ್ಧರಿಸ ಲಾಗುತ್ತದೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಆಲ್ ಇಂಡಿಯಾ ರೈಲ್ವೆಮೆನ್ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಶಿವ ಗೋಪಾಲ ಮಿಶ್ರಾ ಅವರು, 2022 ಡಿಸೆಂಬರ್‌ನ ಸಿಪಿಐ-ಐಡಬ್ಲ್ಯು 2023, ಜ.1ರಂದು ಬಿಡುಗಡೆಗೊಂಡಿದೆ.

ಅದರಂತೆ ತುಟ್ಟಿಭತ್ತೆಯನ್ನು ಶೇ.4.3 ರಷ್ಟು ಹೆಚ್ಚಿಸಬೇಕಾಗುತ್ತದೆ. ಆದರೆ ತುಟ್ಟಿಭತ್ತೆಯನ್ನು ಹೆಚ್ಚಿಸುವಾಗ ಸರಕಾರವು ಪೂರ್ಣಾಂಕವನ್ನು ಮಾತ್ರ ಪರಿಗಣಿಸುತ್ತದೆ. ಹೀಗಾಗಿ ತುಟ್ಟಿಭತ್ತೆ ನಾಲ್ಕು ಶೇಕಡಾವಾರು ಅಂಕಗಳೊಂದಿಗೆ ಶೇ.42ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದರು.

ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು ತುಟ್ಟಿಭತ್ತೆ ಏರಿಕೆಯ ಪ್ರಸ್ತಾವವನ್ನು ಸಿದ್ಧಪಡಿಸಿ ಅದನ್ನು ಅನುಮೋದನೆಗಾಗಿ ಕೇಂದ್ರ ಸಂಪುಟಕ್ಕೆ ಸಲ್ಲಿಸುತ್ತದೆ ಎಂದರು.

ತುಟ್ಟಿಭತ್ತೆ ಏರಿಕೆಯು 2023, ಜ.1ರಿಂದ ಅನ್ವಯಗೊಳ್ಳಲಿದೆ. ಪ್ರಸಕ್ತ ಒಂದು ಕೋಟಿಗೂ ಅಧಿಕ ಕೇಂದ್ರ ಸರಕಾರಿ ಉದ್ಯೋಗಿಗಳು ಮತ್ತು ಪಿಂಚಣಿದಾರರು ಶೇ.38ರಷ್ಟು ತುಟ್ಟಿಭತ್ತೆಯನ್ನು ಪಡೆಯುತ್ತಿದ್ದಾರೆ.

ಈ ಹಿಂದೆ 2022, ಸೆ.28ರಂದು ತುಟ್ಟಿಭತ್ತೆಯನ್ನು ಪರಿಷ್ಕರಿಸಲಾಗಿದ್ದು, 2022, ಜು.1ರಿಂದ ಜಾರಿಗೊಂಡಿತ್ತು. ತುಟ್ಟಿಭತ್ತೆಯನ್ನು ವರ್ಷಕ್ಕೆ ಎರಡು ಬಾರಿ ಪರಿಷ್ಕರಿಸಲಾಗುತ್ತದೆ.


Share: