ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ನವದೆಹಲಿ: ಸರಕಾರದಿಂದ ಹಜ್ ಸಬ್ಸಿಡಿ ರದ್ದು?; ಮುಸ್ಲಿಮರಿಂದ ಸ್ವಾಗತ

ನವದೆಹಲಿ: ಸರಕಾರದಿಂದ ಹಜ್ ಸಬ್ಸಿಡಿ ರದ್ದು?; ಮುಸ್ಲಿಮರಿಂದ ಸ್ವಾಗತ

Tue, 13 Apr 2010 17:23:00  Office Staff   S.O. News Service

ನವದೆಹಲಿ, ಮಂಗಳವಾರ, 13 ಏಪ್ರಿಲ್ 2010 : ತೀವ್ರ ಟೀಕೆಗೆ ಗುರಿಯಾಗುತ್ತಿರುವ ಹಜ್ ಯಾತ್ರಾ ಸಹಾಯಧನವನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಹಂತಹಂತವಾಗಿ ಕಡಿಮೆಗೊಳಿಸುತ್ತಾ ರದ್ದುಪಡಿಸಲು ಚಿಂತನೆ ನಡೆಸುತ್ತಿದೆ ಎಂದು ವರದಿಗಳು ಹೇಳಿದ್ದು, ಮುಂಚೂಣಿಯಲ್ಲಿರುವ ಮುಸ್ಲಿಮರು ಇದನ್ನು ವ್ಯಾಪಕವಾಗಿ ಸ್ವಾಗತಿಸಿದ್ದಾರೆ. ಆದರೆ ಯಾತ್ರಾ ಕಾರ್ಯಕ್ರಮದಲ್ಲಿ ಪಾರದರ್ಶಕತೆಯಿರಬೇಕು ಮತ್ತು ಖಾಸಗೀಕರಣಗೊಳಿಸಬೇಕು ಎನ್ನುವುದು ಅವರ ಬಯಕೆ.

ಸಬ್ಸಿಡಿಗೆ ಯಾರೂ ಬೇಡಿಕೆ ಸಲ್ಲಿಸುತ್ತಿಲ್ಲ. ವ್ಯಕ್ತಿಯೊಬ್ಬ ದೈಹಿಕವಾಗಿ ಮತ್ತು ಆರ್ಥಿಕವಾಗಿ ಸದೃಢನಾಗಿದ್ದರೆ ಮಾತ್ರ ಹಜ್ ಯಾತ್ರೆ ಕಡ್ಡಾಯವೆನಿಸುತ್ತದೆ. ಒಂದು ವೇಳೆ ಸರಕಾರ ಸಬ್ಸಿಡಿಯನ್ನು ರದ್ದು ಮಾಡಲು ಮುಂದಾದರೆ, ನಾನೇ ಮೊದಲು ಅದನ್ನು ಸ್ವಾಗತಿಸುತ್ತೇನೆ ಎಂದು ಜಮಾತ್ ಉಲೇಮಾ ಇ ಹಿಂದ್ ವಕ್ತಾರ ಮೌಲಾನಾ ಅಬ್ದುಲ್ ಹಮೀದ್ ನೊಮಾನಿ ತಿಳಿಸಿದ್ದಾರೆ.

ಇಸ್ಲಾಮಿಕ್ ಕಾನೂನು ಇಂತಹ ಸಹಾಯಧನಕ್ಕೆ ಅವಕಾಶ ನೀಡುತ್ತದೆಯೇ ಎಂದು ಅವರಲ್ಲಿ ಪ್ರಶ್ನಿಸಿದಾಗ, ಇತರ ಸಮುದಾಯಗಳಂತೆ ಭಾರತೀಯ ಮುಸ್ಲಿಮರು ಕೂಡ ಸರಕಾರಕ್ಕೆ ತೆರಿಗೆ ಸಲ್ಲಿಸುತ್ತಿರುವುದರಿಂದ ಅವರು ಸಂಪನ್ಮೂಲದಿಂದ ಭಾಗ ತೆಗೆದುಕೊಳ್ಳಲು ಹಕ್ಕು ಹೊಂದಿದ್ದಾರೆ ಎಂದರು.

ಯಾವುದೇ ಸರಕಾರಿ ಅಧಿಕಾರಿ ಅಥವಾ ರಾಜಕಾರಣಿ ತನ್ನ ಕಿಸೆಯಿಂದ ಈ ಹಣವನ್ನು ನೀಡುತ್ತಿಲ್ಲ. ಸಬ್ಸಿಡಿ ಎನ್ನುವುದು ಯಾವುದೇ ರೀತಿಯಲ್ಲಿ ನಿಷಿದ್ಧವಲ್ಲ. ಆದರೆ ಯಾತ್ರೆಗೆ ಸಹಾಯಧನ ನೀಡುವ ಮೂಲಕ ಬಳಸಲ್ಪಡುವ ಹಣವನ್ನು ಹಜ್‌ನಷ್ಟೇ ಪ್ರಾಮುಖ್ಯವಾಗಿರುವ ಇತರ ಅಗತ್ಯಗಳಿಗಾಗಿ ಬಳಸಬಹುದು ಎಂದು 1919ರಲ್ಲಿ ಸ್ಥಾಪನೆಗೊಂಡಿರುವ ಭಾರತದ ಮುಸ್ಲಿಂ ಸಂಘಟನೆಗಳಲ್ಲಿ ಒಂದಾಗಿರುವ ಜಮಾತ್ ಮುಖ್ಯಸ್ಥ ನೊಮಾನಿ ಅಭಿಪ್ರಾಯಪಟ್ಟಿದ್ದಾರೆ.

ಸೌದಿ ಅರೇಬಿಯಾದಲ್ಲಿನ ಪವಿತ್ರ ನಗರಗಳಾದ ಮೆಕ್ಕಾ ಮತ್ತು ಮದೀನಾಗಳಿಗೆ ಯಾತ್ರೆ ಕೈಗೊಳ್ಳುವ ಮುಸ್ಲಿಮರ ವಾಯುಯಾನಕ್ಕೆ ಬಹುಕೋಟಿ ರೂಪಾಯಿಗಳನ್ನು ಬಳಸುತ್ತಿರುವ ಸರಕಾರ ಹಂತ-ಹಂತವಾಗಿ ಕಡಿಮೆ ಮಾಡುವ ಪ್ರಸ್ತಾಪ ಹೊಂದಿದೆ ಎಂದು ಸರಕಾರ ಹೇಳಿದೆ ಎನ್ನಲಾಗಿದ್ದು, ಆ ಬಳಿಕ ಮುಸ್ಲಿಮರಿಂದ ಈ ಪ್ರತಿಕ್ರಿಯೆ ಬಂದಿದೆ.

2008ರಲ್ಲಿ ಸರಕಾರವು ಒಂದು ಲಕ್ಷದಷ್ಟು ಮುಸ್ಲಿಂ ಯಾತ್ರಾರ್ಥಿಗಳಿಗಾಗಿ 826 ಕೋಟಿ ರೂಪಾಯಿಗಳನ್ನು ವ್ಯಯಿಸಿತ್ತು.

ಈ ಪ್ರಸ್ತಾಪವನ್ನು ನಾಗರಿಕ ವಾಯುಯಾನ ಸಚಿವಾಲಯ, ಹಣಕಾಸು ಮತ್ತು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯಕ್ಕೆ ಪ್ರತಿಕ್ರಿಯೆ ತಿಳಿಸಲು ಹಜ್ ಯಾತ್ರೆಯ ಉಸ್ತುವಾರಿ ನೋಡಿಕೊಳ್ಳುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಕಳುಹಿಸಿದೆ.

ಸರಕಾರದ ಪ್ರಸ್ತಾಪವನ್ನು ನೊಮಾನಿ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದ ಹಲವು ಧರ್ಮಗುರುಗಳು ಸ್ವಾಗತಿಸಿದ್ದಾರೆ. ಆದರೆ ಇಲ್ಲಿ ಪಾರದರ್ಶಕತೆಯ ವ್ಯವಸ್ಥೆ ಇರಬೇಕೆನ್ನುವುದು ಅವರ ಆಶಯ.

ಸರಕಾರವು ಮುಸ್ಲಿಮರ ಪರವಾಗಿ ಏನೂ ಮಾಡುತ್ತಿಲ್ಲ ಎನ್ನುವುದನ್ನು ನೀವು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ದೆಹಲಿ ಜಾಮಾ ಮಸೀದಿಯ ಶಾಹಿ ಇಮಾಮ್ ಅಹ್ಮದ್ ಬುಖಾರಿ ಹೇಳುತ್ತಾರೆ.

ಏರ್ ಇಂಡಿಯಾದ ಕೆಟ್ಟ ಸೇವೆಯ ಬಗ್ಗೆ ಅರಿವಿರುವುದರ ಹೊರತಾಗಿಯೂ ಅದೇ ವಿಮಾನದಲ್ಲಿ ಪ್ರಯಾಣ ಮಾಡಬೇಕೆಂದು ಯಾರಾದರೂ ಯಾಕೆ ಬಯಸುತ್ತಾರೆ ಎಂದು ಪ್ರಶ್ನಿಸುವ ಅವರು, ಸಬ್ಸಿಡಿ ಯೋಜನೆಯ ಹೆಸರಿನಲ್ಲಿ ಸರಕಾರವು ಆದಾಯ ಸಂಗ್ರಹಿಸುತ್ತಿದೆ. ಅದನ್ನು ಹೆಚ್ಚುವರಿ ದರ ವಿಧಿಸುವ ಟಿಕೆಟುಗಳಿಗೆ ಡಿಸ್ಕೌಂಟ್ ರೂಪದಲ್ಲಿ ನೀಡಲಾಗುತ್ತದೆ ಎಂದು ಆರೋಪಿಸಿದ್ದಾರೆ.

ಅದೇ ಹೊತ್ತಿಗೆ ಸರಕಾರಕ್ಕೆ ಸವಾಲು ಹಾಕಿರುವ ಬುಖಾರಿ, ಹಜ್ ಯಾತ್ರೆಗಾಗಿ ಜಾಗತಿಕ ವಿಮಾನಯಾನ ಸಂಸ್ಥೆಗಳಿಂದ ಬಿಡ್ಡಿಂಗ್ ಆಹ್ವಾನಿಸಬೇಕು. ಖಂಡಿತಾ ಏರ್ ಇಂಡಿಯಾ ದರಗಳಿಗಿಂತ ಕಡಿಮೆ ದರದಲ್ಲಿ ಟಿಕೆಟುಗಳು ದೊರೆಯುತ್ತವೆ. ಪ್ರಸಕ್ತ ಏರ್ ಇಂಡಿಯಾವು ಹಜ್ ಟಿಕೆಟಿಗಾಗಿ 40,000 ರೂಪಾಯಿ ವಿಧಿಸುತ್ತದೆ. ಆದರೆ ಸೌದಿ ಅರೇಬಿಯಾಕ್ಕೆ ಇತರ ವಿಮಾನಗಳ ಮೂಲಕ ಹೋದರೆ ಕೇವಲ 20,000 ರೂಪಾಯಿ ಮಾತ್ರ ಟಿಕೆಟು ಎಂದು ವಿವರಿಸಿದ್ದಾರೆ.


Share: