ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾಲೇಜಿ‌ನಲ್ಲಿ ವಿಡಿಯೋ ಪ್ರಕರಣವನ್ನ ಎಸ್‌ಐಟಿಗೆ ವಹಿಸುವ ಪ್ರಶ್ನೆ ಇಲ್ಲ : ಸಿಎಂ ಸಿದ್ದರಾಮಯ್ಯ

ಕಾಲೇಜಿ‌ನಲ್ಲಿ ವಿಡಿಯೋ ಪ್ರಕರಣವನ್ನ ಎಸ್‌ಐಟಿಗೆ ವಹಿಸುವ ಪ್ರಶ್ನೆ ಇಲ್ಲ : ಸಿಎಂ ಸಿದ್ದರಾಮಯ್ಯ

Wed, 02 Aug 2023 02:45:03  Office Staff   SO News

ಮಂಗಳೂರು : ಉಡುಪಿಯ ಖಾಸಗಿ ಕಾಲೇಜಿನಲ್ಲಿ ನಡೆದ ವಿಡಿಯೋ ಪ್ರಕರಣವನ್ನ ಎಸ್‌ಐಟಿ ಗೆ ವಹಿಸುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಪೊಲೀಸರು  ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ತನಿಖೆಯನ್ನು ಡಿವೈಎಸ್ಪಿ ಮಟ್ಟದ ಅಧಿಕಾರಿ ಮಾಡುತ್ತಿದ್ದಾರೆ.
ಕೇಂದ್ರ ಮಹಿಳಾ ಆಯೋಗದ ಸದಸ್ಯರು ಆಗಮಿಸಿ ತನಿಖೆ ಕೈಗೊಂಡು ಕಾಲೇಜಿನ ಶೌಚಾಲಯದಲ್ಲಿ ಕ್ಯಾಮರಾ ಇರಲಿಲ್ಲ ಎಂದು ಹೇಳಿದ್ದಾರೆ. ತನಿಖೆಯಾಗಿ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಗೃಹ ಸಚಿವರ ಹೇಳಿಕೆ ಸಮರ್ಥಿಸಿದ ಅವರು,  ಕಾಲೇಜಿನ ವಿದ್ಯಾರ್ಥಿಗಳು ತಮಾಷೆ ಮಾಡಿರಬಹುದು ಎಂದು ಹೇಳಿರಬಹುದು. ಆದರೆ ಪ್ರಕರಣ ದಾಖಲಾಗಿದ್ದು, ಎಫ್. ಐ.ಆರ್. ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದರು. 

ಕರಾವಳಿ ಭಾಗಕ್ಕೆ ನೀಡಿರುವ ಸೌಲಭ್ಯಗಳನ್ನು ಬಜೆಟ್ ನಲ್ಲಿ ತಿಳಿಸಲಾಗಿದೆ. ಜುಲೈ ತಿಂಗಳಲ್ಲಿ ಉಡುಪಿ, ಮಂಗಳೂರು, ಕರಾವಳಿ ಪ್ರದೇಶದಲ್ಲಿ ಮಳೆಯಾಗಿದ್ದು, ಹಾನಿಯಾಗಿರುವ ಪ್ರದೇಶಗಳನ್ನು ವೀಕ್ಷಿಸಲು ಹಾಗೂ ಪ್ರಗತಿ ಪರಿಶೀಲನಾ ಸಭೆ ನಡೆಸಲು ಆಗಮಿಸಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ನೈತಿಕ ಪೊಲೀಸ್‌ಗಿರಿ ಯಾರೇ ಮಾಡಿದರೂ ಕೂಡ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತೆ. ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳುವಂತಿಲ್ಲ ಎಂದು ಪೊಲೀಸರಿಗೆ ಸೂಚಿಸಲಾಗಿದೆ ಎಂದರು.

ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಿಬಿಐ ನ್ಯಾಯಾಲಯದಲ್ಲಿ ಇತ್ಯರ್ಥವಾಗಿದೆ. ಅವರ ಪೋಷಕರು ಹಾಗೂ ಹೋರಾಟಗಾರರು ಈ ಪ್ರಕರಣದ ಮರುತನಿಖೆಗೆ ಒತ್ತಾಯಿಸಿದ್ದಾರೆ. ಕಾನೂನಿನ ಪ್ರಕಾರ ಏನು ಕ್ರಮ ಕೈಗೊಳ್ಳಬಹುದೆಂದು ವಿಚಾರ ಮಾಡಲಾಗುದು. ಕಾನೂನಿನ ಪ್ರಕಾರ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ ಎಂದರು. 

ಅಧಿಕಾರಿಗಳಿಂದ ಲೋಪವಾಗಿದೆ ಎಂದು ತೀರ್ಪಿನಲ್ಲಿ ಉಲ್ಲೇಖವಿರುವ ಬಗ್ಗೆ ಉತ್ತರಿಸಿ , ತೀರ್ಪು ಓದಿದ ನಂತರ ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದರೆ ಸಲ್ಲಿಸಲಾಗುವುದು ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧ ಅಥವಾ ವ್ಯಕ್ತಿಯ ವಿರುದ್ಧವಾಗಿ ಅನಗತ್ಯವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿದರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಎಂದರು.


Share: