ಕಾರವಾರ: ಕಾರ್ಮಿಕರ ಅಬಿವೃದ್ಧಿಗಾಗಿ ರಾಜ್ಯ ಕಾರ್ಮಿಕ ಇಲಾಖೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ತಂದಂತಹ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಲಭ್ಯವಾಗಬೇಕು ಎನ್ನುವ ನಿಟ್ಟಿನಲ್ಲಿ ವಿವಿಧ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುತ್ತಿದೆ. ಇದೇ ಮೊದಲ ಬಾರಿಗೆ ಸ್ಕೇಟಿಂಗ್ ಮೂಲಕ ಯೋಜನೆಗಳ ಕುರಿತು ಜನರಿಗೆ ಮಾಹಿತಿ ನೀಡುವ ಕಾರ್ಯಕ್ಕೆ ಕಾರ್ಮಿಕ ಇಲಾಖೆ ಮುಂದಾಗಿದ್ದು, ಇಂಥದ್ದೊಂದು ವಿನೂತನ ಪ್ರಯತ್ನಕ್ಕೆ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಶುಕ್ರವಾರ ಚಾಲನೆ ನೀಡಲಾಗಿದೆ.
40 ಮಂದಿ ಸ್ಕೇಟಿಂಗ್ ವಿದ್ಯಾರ್ಥಿಗಳು, ಕಾರವಾರದಿಂದ ಬೆಂಗಳೂರಿನವರೆಗೆ ಸ್ಕೇಟಿಂಗ್ ನಲ್ಲಿ ತೆರಳುವುದರೊಂದಿಗೆ ಕಾರ್ಮಿಕ ಇಲಾಖೆಯ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಿದ್ದಾರೆ. ಕಾರವಾರದಿಂದ ಬೆಂಗಳೂರಿನವರೆಗೆ ಸುಮಾರು 600 ಕಿಲೋ ಮೀಟರ್ ದೂರದವರೆಗೆ ವಿದ್ಯಾರ್ಥಿಗಳ ತಂಡ ಸ್ಕೇಟಿಂಗ್ ಮೂಲಕ ತೆರಳಲಿದೆ. ಕಾರವಾರದಿಂದ ಆರ೦ಭವಾಗಿ ಯಲ್ಲಾಪುರ, ಶಿರಸಿ, ಶಿವಮೊಗ್ಗ, ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ತಲುಪಲಿದ್ದಾರೆ. ಈ ವೇಳೆ ಸಂಚರಿಸುವ ಮಾರ್ಗಗಳಲ್ಲಿ ಕಾರ್ಮಿಕ ಇಲಾಖೆಯ ಯೋಜನೆಗಳ ಕುರಿತ ಫಲಕಗಳನ್ನ ಸ್ಕೇಟಿಂಗ್ ವಿದ್ಯಾರ್ಥಿಗಳು ಪ್ರದರ್ಶಿಸಲಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆರಂಭವಾದ ಈ ಸ್ಟೇಟಿಂಗ್ ಜಾಗೃತಿ ರ್ಯಾಲಿಗೆ ಜಿಲ್ಲಾ ಪಂಚಾಯತ್ ಸಿಇಓ ಎಂ.ಪ್ರಿಯಾಂಗಾ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ವಿದ್ಯಾರ್ಥಿಗಳು ಕಾರವಾರ ನಗರದಲ್ಲಿ ಕಾರ್ಮಿಕ ಇಲಾಖೆಯ ಫಲಕಗಳನ್ನ ಹಿಡಿದು ಒಂದು ಸುತ್ತು ಸ್ನೇಟಿಂಗ್ ಮಾಡುವ ಮೂಲಕ ಜಾಗೃತಿ ಮೂಡಿಸಿದರು.
ಇನ್ನು ಈ ಜಾಗೃತಿ ರ್ಯಾಲಿಯಲ್ಲಿ ಕಾರವಾರದ 25 ಮಂದಿ ಸೇರಿ ರಾಜ್ಯದ ವಿವಿಧೆಡೆ 40 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಈ 4) ಮಂದಿಯನ್ನು 10 ವಿದ್ಯಾರ್ಥಿಗಳಂತೆ 4 ತಂಡಗಳಾಗಿ ವಿಂಗಡಿಸಲಾಗಿದೆ. ಒಂದೊಂದು ತಂಡ ಹೆದ್ದಾರಿಯಲ್ಲಿ ಸುಮಾರು ಅರ್ಧ ಗಂಟೆವರೆಗೆ ಸೈಟಿಂಗ್ ಮಾಡಿ ಬಸ್‌ನಲ್ಲಿ ವಿಶ್ರಾಂತಿ ಪಡೆಯಲಿದ್ದು, ನಂತರ ಎರಡನೇಯ ತಂಡ ಅಲ್ಲಿಂದ ಮತ್ತೆ ಅರ್ಧಗಂಟೆ ರ್ಯಾಲಿಯನ್ನ ಮುಂದುವರಿಸಿಕೊಂಡು ಹೋಗಲಿದೆ. ಹೀಗೆ ನಾಲ್ಕು ತಂಡಗಳು ಒಂದಾದ ಮೇಲೆ ಒಂದರಂತೆ ಸಂಚರಿಸಲಿವೆ.
ಕಾರವಾರದಿಂದ ಹೊರಟ ಸ್ಕೇಟಿಂಗ್ ರ್ಯಾಲಿಯನ್ನ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ತಮ್ಮ ಕ್ಷೇತ್ರ ಯಲ್ಲಾಪುರದಲ್ಲಿ ಬರಮಾಡಿಕೊಳ್ಳಲಿದ್ದು, ಅಲ್ಲಿ ವಾಸ್ತವ್ಯದ ಬಳಿಕ ಮತ್ತೆ ಹಸಿರು ನಿಶಾನ ತೋರಿಸಿ ಮುಂದ ಕಳುಹಿಸಲಿದ್ದಾರೆ. ದಿನಕ್ಕೆ ಸುಮಾರು 150 ಕಿಲೋ ಮೀಟ ರ್ ಕ್ರಮಿಸುವ ಗುರಿಯನ್ನ ಈ ರ್ಯಾಲಿ ಹೊಂದಿದ್ದು ಮೇ 12ರಂದು ಬೆಂಗಳೂರು ತಲುಪುವ ಸ್ಕೇಟಿಂಗ್ ರ್ಯಾಲಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಬರಮಾಡಿಕೊಳ್ಳಲಿದ್ದಾರೆ. ಅಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನ ಸಹ ವಿತರಿಸಲ್ಲಿದು ಸ್ಕೇಟಿಂಗ್ ವಿದ್ಯಾರ್ಥಿಗಳು ಸಹ ಉತ್ಸಾಹದಿಂದಲೇ ಈ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ.