ಬೆಂಗಳೂರು,ಜನವರಿ 18:ರಾಜ್ಯ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ರೈತರ ನೇತೃತ್ವದ ನಾಗರಿಕ ಸರ್ಕಾರ ಅಸ್ಧಿತ್ವಕ್ಕೆ ತರುವ ನಿರ್ಣಾಯಕ ಹೋರಾಟದ ನೇತೃತ್ವವನ್ನು ತಾವೇ ವಹಿಸಿಕೊಳ್ಳುವುದಾಗಿ ಇಂದಿಲ್ಲಿ ಘೋಷಿಸಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಬರುವ ತಿಂಗಳು ರೈತರ ಬೃಹತ್ ಸಮಾವೇಶ ಆಯೋಜಿಸುವುದಾಗಿ ಹೇಳಿದ್ದಾರೆ.
ಪಕ್ಷದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸಿಪಿಎಂ ಮುಖಂಡ ಜ್ಯೋತಿ ಬಸು ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಗಳು ನಡೆಸುತ್ತಿರುವ ಭೂ ಕಬಳಿಕೆ ವಿರುದ್ಧ ಹೋರಾಟ ತೀವ್ರಗೊಳಿಸುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಭೂಕಬಳಿಕೆ ಹೆಚ್ಚಾಗಿದೆ. ರೈತರ ಭೂಮಿಯನ್ನು ಮನಸೋ ಇಚ್ಚೆ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ಇದನ್ನು ನೋಡಿ ತಾವು ರಾಜ್ಯದಲ್ಲಿ ಹುಟ್ಟಬಾರದಿತ್ತು ಎಂದು ಹಲವಾರು ಬಾರಿ ಹೇಳಿದ್ದೇನೆ. ಇದರ ಹಿಂದೆ ಇರುವ ನೋವನ್ನು ಅರ್ಥಮಾಡಿಕೊಳ್ಳಬೇಕು ಎಂದು ನುಡಿದರು.
ಭೂಕಬಳಿಕೆದಾರರ ವಿರುದ್ಧದ ಹೋರಾಟ ಇಂದಿನ ದಿನಗಳಲ್ಲಿ ತೀರಾ ಅಗತ್ಯವಾಗಿದೆ. ಇದಕ್ಕಾಗಿ ಮುಂದಿನ ತಿಂಗಳು ರೈತ ಪರ ಹೋರಾಟಗಾರು, ರೈತರ ಬೃಹತ್ ಸಮಾವೇಶ ಕರೆದು ಹೋರಾಟದ ರೂಪುರೇಷೆಗಳನ್ನು ನಿರ್ಧರಿಸುವುದಾಗಿ ತಿಳಿಸಿದರು.
ಭೂಕಬಳಿಕೆ ವಿರುದ್ಧ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ. ಇಡೀ ದೇಶದಲ್ಲಿ ಹೋರಾಟ ಅಗತ್ಯವಾಗಿದೆ. ನೈಸ್ ಸಂಸ್ಧೆ ವಿರುದ್ಧ ತಾವು ನಡೆಸುತ್ತಿರುವ ಹೋರಾಟ ಸ್ವಾರ್ಥದಿಂದ ಕೂಡಿಲ್ಲ. ಇದೂ ಕೂಡ ಭೂ ಕಬಳಿಕೆದಾರರ ವಿರುದ್ಧದ ಹೋರಾಟವೇ ಎಂದು ವಿಶ್ಲೇಷಿಸಿದರು.
ನೈಸ್ ಸಂಸ್ಧೆಯ ಭೂಕಬಳಿಕೆ ವಿರುದ್ಧ ತಾವು ಆರಂಭಿಸಿರುವ ಹೋರಾಟಕ್ಕೆ ಬಿಡುವೇ ಇಲ್ಲ. ಆದರೆ ಎಡಪಂಥೀಯ ಮುಖಂಡ ಜ್ಯೋತಿ ಬಸು ನಿಧನದ ಹಿನ್ನೆಲೆಯಲ್ಲಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಲು ಕೊಲ್ಕತ್ತಾಗೆ ತೆರಳುತ್ತಿದ್ದು, ಎರಡು ದಿನ ಮಾತ್ರ ನೈಸ್ ಹೋರಾಟದಲ್ಲಿ ಭಾಗಿಯಾಗಲಾರೆ. ತದನಂತರ ಹೋರಾಟ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದರು.
ಇದಕ್ಕೂ ಮುನ್ನ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ದೇವೇಗೌಡ, ಜ್ಯೋತಿಬಸು ಅವರಿಂದಾಗಿ ತಾವು ಪ್ರಧಾನಿಯಾಗಬೇಕಾಯಿತು. ಅವರೊಬ್ಬ ನಿಸ್ವಾರ್ಥ ಹೋರಾಟಗಾರ, ದುಡಿಯುವ ವರ್ಗದ ಬಗ್ಗೆ ಅಪಾರ ಕಳಕಳಿ ಹೊಂದಿದ್ದರು ಎಂದು ಸ್ಮರಿಸಿದರು.
ಮಾಜಿ ಸಚಿವ ಪಿ.ಜಿ.ಆರ್ ಸಿಂಧ್ಯಾ ಮಾತನಾಡಿ, ಜ್ಯೋತಿಬಸು ಅವರನ್ನು ಕೇವಲ ಎಡಪಂಥೀಯ ಮುಖಂಡರಷ್ಟೇ ಅಲ್ಲದೇ ಬಲಪಂಥೀಯ ಮುಖಂಡರೂ ಕೂಡ ಒಪ್ಪಿಕೊಳ್ಳುವಂತಹ ವ್ಯಕ್ತಿತ್ವವಿತ್ತು ಎಂದು ಬಣ್ಣಿಸಿದರು.