ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮಂಗಳೂರು: "ನನ್ನ ಹೆಸರು ರಹೀಂ" ಎಂದಿದಕ್ಕೇ ಕಸ್ತೂರಿ ವಾಹಿನಿ ವರದಿಗಾರನಿಗೆ ಪೊಲೀಸ್ ಆತಿಥ್ಯ !

ಮಂಗಳೂರು: "ನನ್ನ ಹೆಸರು ರಹೀಂ" ಎಂದಿದಕ್ಕೇ ಕಸ್ತೂರಿ ವಾಹಿನಿ ವರದಿಗಾರನಿಗೆ ಪೊಲೀಸ್ ಆತಿಥ್ಯ !

Tue, 23 Feb 2010 02:57:00  Office Staff   S.O. News Service

ಅಂದು ಫೆಬ್ರವರಿ 13. ಮುತಾಲಿಕ್ ಮೇಲಿನ ಕಪ್ಪು ಮಸಿ ಪ್ರಕರಣದ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆ ರಾಜ್ಯ ಬಂದ್ಗೆ ಕರೆ ನೀಡಿತ್ತು. ಹಿಂದಿನ ದಿನವೂ ಬಂದ್ ಆಚರಿಸಿದ್ದ ಮಂಗಳೂರಿಗೆ ಇದು ಎರಡನೇ ದಿನ ಬಂದ್ನ ಕಹಿ ರುಚಿ. ಕೆಲ ದಿನಗಳ ಹಿಂದಷ್ಟೇ ಕರ್ತವ್ಯಕ್ಕೆ ಆಗಮಿಸಿದ್ದ ಕಸ್ತೂರಿ ಚಾನೆಲ್ಲಿನ ವರದಿಗಾರ ರಹೀಂ ತಮ್ಮ ವಾಸ್ತವ್ಯಕ್ಕಾಗಿ ಕೈಕಂಬದಲ್ಲಿರುವ ಅಕ್ಕನ ಮನೆಗೆ ತೆರಳಿದ್ದರು. ಬಂದ್ ಹಿನ್ನೆಲೆಯಲ್ಲಿ ನಗರಕ್ಕೆ ಬರಲು ವಾಹನಕ್ಕೆ ಕಾಯುತ್ತಿದ್ದರು.

 

 

ಆಗ ಅಲ್ಲಿಗೆ ಬಂದ ಬಜಪೆ ಪೊಲೀಸ್ ಠಾಣೆಯ ಎಸ್ಐ ಪ್ರಮೋದ್ ಕುಮಾರ್ ಮುಸ್ಲಿಂ ಎಂಬ ಕಾರಣಕ್ಕೆ ರಹೀಂ ಮೇಲೆ ದುಂಡಾವರ್ತನೆ ತೋರಿದ್ದಾರೆ.

 

 

ತಮ್ಮ ಗುರುತು ಪತ್ರವನ್ನು ತೋರಿಸಿದ ನಂತರವೂ ಜೀಪಿನಲ್ಲಿ ಕುಳ್ಳಿರಿಸಿ ಸ್ಟೇಷನಿಗೆ ಕರೆದೊಯ್ದ ಪ್ರಮೋದ್, ಮೂರು ಗಂಟೆಗಳ ಕಾಲ ಕಾನೂನು ಬಾಹಿರವಾಗಿ ಠಾಣೆಯ ಇತರ ಆರೋಪಿಗಳ ಜೊತೆ ಸೆಲ್ ನಲ್ಲಿ ಹಾಕಿದರು. ಮೊಬೈಲ್ ಸ್ವಿಚ್ ಆಫ್ ಮಾಡಿ ನಿನ್ನ ಕೆರಿಯರ್ ಹಾಳು ಮಾಡುತ್ತೇನೆ ಎಂಬ ಬೆದರಿಕೆಯನ್ನೂ ಹಾಕಿದರು.

 

 

ಈ ಅಧಿಕಾರಿ ಹೀಗೆ ವರ್ತಿಸಿರುವು ಇದೇ ಮೊದಲಲ್ಲ. ಇಂತಹ ಹಲವು ಪ್ರಕರಣಗಳು ನಡೆದಿವೆ. ಪೊಲೀಸ್ ಅಧಿಕಾರಿ ಪ್ರಮೋದ್ ಕುಮಾರ್ ಸಚಿವ ಕೃಷ್ಣ ಪಾಲೇಮಾರ್ ರವರ ನಿಕಟವರ್ತಿ, ಎಲ್ಲಕ್ಕಿಂತ ಹೆಚ್ಚಾಗಿ ಆರ್ಎಸ್ಎಸ್ನ ಕಟ್ಟಾ ಕಾರ್ಯಕರ್ತ. ಹಾಗಾಗಿ ಪೊಲೀಸ್ ಅಧಿಕಾರಿಗಳೂ ವಿಧಿ ಇಲ್ಲದೆ ಈತನನ್ನು ರಕ್ಷಿಸಲೇ ಬೇಕಾದ ಪರಿಸ್ಥಿತಿ ಬಂದಿದೆ.

 

 

ಪತ್ರಕರ್ತನ ಮೇಲಿನ ಪೊಲೀಸ್ ದೌರ್ಜನ್ಯ ಹಾಗೂ ಪ್ರಮೋದ್ ಅವರ ವರ್ತನೆಯನ್ನು ಖಂಡಿಸಿ ಐಜಿಪಿ ಕಚೇರಿ ಮುಂದೆ ಪತ್ರಕರ್ತರು ಪ್ರತಿಭಟನೆ ನಡೆಸಿದರು. ಬಳಿಕ ಮನವಿ ಸಲ್ಲಿಸಲಾಯಿತು. ಘಟನೆಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಭರವಸೆ ನೀಡಿದ ಐಜಿಪಿ ಗೋಪಾಲ್ ಹೊಸೂರು, ಎಸ್ಪಿ ಮಟ್ಟದ ಅಧಿಕಾರಿಯಿಂದ ತನಿಖೆ ನಡೆಸುವುದಾಗಿ ಹೇಳಿದರು. ತಪ್ಪಿತಸ್ಥರೆಂದು ಕಂಡುಬಂದರೆ ತಕ್ಷಣ ಅಮಾನತು ನಡೆಸಿ ಪ್ರಮೋದ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

 

 

ಕೋಮು ಸೂಕ್ಷ್ಮ ಜಿಲ್ಲೆ ಎಂದು ಮೊದಲೇ ಕುಖ್ಯಾತಿ ಪಡೆದುಕೊಂಡಿರುವ ದಕ್ಷಿಣ ಕನ್ನಡದಲ್ಲಿ ಪ್ರಮೋದ್ ಕುಮಾರ್ ಅವರಂತಹ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ದುಂಡಾವರ್ತನೆ ಎಗ್ಗಿಲ್ಲದೆ ಸಾಗಿದೆ. ಈಗಾಗಲೇ ಹಲವಾರು ಪ್ರಕರಣಗಳಿಂದ ಸಾಕಷ್ಟು ಕುಖ್ಯಾತಿ ಗಳಿಸಿರುವ ಪ್ರಮೋದ್ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಪತ್ರಕರ್ತರು ಒತ್ತಾಯಿಸಿದ್ದಾರೆ.ಪತ್ರಕರ್ತ ರಹೀಂ ಪ್ರಕರಣದಲ್ಲಿ ನಿಷ್ಠುರ ಕ್ರಮ ವಹಿಸಲು ಆಗ್ರಹಿಸಿ ಸಿಪಿಐ(ಎಂ) ನಿಯೋಗವು ಕಾಂ.ಬೃಂದಾ ಕಾರಟ್ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಆಗ್ರಹಿಸಿತು. ನಿಯೋಗದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಸ್.ವೈ.ಗುರುಶಾಂತ್, ಜಿ.ಸಿ.ಬಯ್ಯಾರೆಡ್ಡಿ, ಜನವಾದಿಯ ಕೆ.ಎಸ್.ವಿಮಲಾ ಇದ್ದರು.

 

 

ಸೌಜನ್ಯ: ಜನಶಕ್ತಿ

 


Share: