ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಆಹಾರದ ಹಕ್ಕು ಆಂದೋಲನ : ಮತ್ತೊಂದು ಹೆಜ್ಜೆಯತ್ತ

ಆಹಾರದ ಹಕ್ಕು ಆಂದೋಲನ : ಮತ್ತೊಂದು ಹೆಜ್ಜೆಯತ್ತ

Fri, 08 Jan 2010 14:25:00  Office Staff   S.O. News Service

ದಕ್ಷಿಣ ಭಾರತದಲ್ಲಿ ಶೇಕಡಾವಾರು ಲೆಕ್ಕದಲ್ಲಿ ಅತಿಹೆಚ್ಚು ಪ್ರಮಾಣದ ಬಡವರನ್ನು ಹೊಂದಿರುವ ರಾಜ್ಯ ಯಾವುದು ಎಂದರೆ ಉತ್ತರ ಕರ್ನಾಟಕ ರಾಜ್ಯ ಎಂಬುದೇ ಆಗಿದೆ. ಯೋಜನಾ ಆಯೋಗವು ನೇಮಿಸಿದ ತಜ್ಞರ ಸಮಿತಿಯು ವರದಿಯನ್ನು ನೀಡಿದ್ದು ವಿವರಗಳು ಹೊರಬಿದ್ದಿವೆ. ಸುರೇಶ್ ತೆಂಡೂಲ್ಕರ್ ನೇತೃತ್ವದ ಸಮಿತಿ ಕಂಡುಕೊಂಡ ಅಂಶಗಳು ಇಂತಿವೆ.

ಕರ್ನಾಟಕದಲ್ಲಿ ಒಟ್ಟಾರೆ ಶೇ.33.4 ರಷ್ಟು ಜನರು ಬಡತನರೇಖೆಯ ಕೆಳಗಿದ್ದಾರೆ. (ಗ್ರಾಮೀಣ ಭಾಗದಲ್ಲಿ ಶೇ.37.5 ನಗರ ಪ್ರದೇಶದಲ್ಲಿ ಶೇ.25.9) ಕರ್ನಾಟಕದ ನಂತರದ ಸ್ಥಾನ ತಮಿಳುನಾಡಿಗೆ. ಆ ನಂತರ ಆಂಧ್ರಪ್ರದೇಶಕ್ಕೆ ಕೊನೆಯದಾಗಿ ಕೇರಳ.  ಕೇರಳದಲ್ಲಿ ಬಡತನದ  ಪ್ರಮಾಣ ಶೇ.19.7 ಇದೆ ಎಂದು ವರದಿ ಹೇಳಿದೆ.
ಈ ಎಲ್ಲಾ ಅಂಕಿ ಸಂಖ್ಯೆಗಳು 2004-05 ರ ಪರಿಸ್ಥಿತಿಯನ್ನು ಬಿಂಬಿಸುವುದು. ಪರಿಸ್ಥಿತಿ ಈಗಾದರೂ ಬಹಳ ಭಿನ್ನವಾಗಿರಲು ಸಾಧ್ಯವಿಲ್ಲ. ಇದೀಗ ರಾಜ್ಯದಲ್ಲಿ ಬರ, ಪ್ರವಾಹಗಳ ನಡುವೆ ಜನತೆ ಮತ್ತಷ್ಟು ಸಂಕಷ್ಟಕ್ಕೆ ದೂಡಲ್ಪಟ್ಟಿದ್ದಾರೆ. ಇದೀಗ ರಾಜ್ಯ ಬಿಜೆಪಿ ಸರ್ಕಾರದ ವಂಚನೆಗೆ  ಸಹ ಗುರಿಯಾಗಿದ್ದಾರೆ.

ಇಷ್ಟು ತೀವ್ರ ಬಡತನವಿರುವ ಇಂತಹ ಸಂದರ್ಭದಲ್ಲಿ ಚುನಾಯಿತ ಸರ್ಕಾರ ಹಾಗೂ ಆಳುವ ಸರ್ಕಾರಗಳ ಕರ್ತವ್ಯವೇನು ? ಹಸಿದ ಒಡಲಿಗೆ ಆಹಾರ ಸಿಗುವಂತೆ ಮಾಡಲು ಶ್ರಮಿಸುವುದು, ಸರ್ಕಾರಗಳ ಪ್ರಥಮ ಕರ್ತವ್ಯ. ಇಂತಹ ಸನ್ನಿವೇಶದಲ್ಲಿ ಉತ್ತಮವಾದ, ಎಲ್ಲರಿಗೂ ರೇಷನ್ ಅಗತ್ಯವಾಗಿ ದೊರೆಯುವಂತಹ ಒಂದು ಪಡಿತರ ವ್ಯವಸ್ಥೆ ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆ.

ಉದಾರೀಕರಣ, ಖಾಸಗೀಕರಣವನ್ನು ಅಪ್ಪಿಕೊಂಡಿರುವ ಆಳುವ ಸರ್ಕಾರಗಳು ಈ ನಿಟ್ಟಿನಲ್ಲಿ ತಮ್ಮ ಹೊಣೆ ಹೊರಲು ಸಿದ್ಧವಿಲ್ಲ. ಕೇಂದ್ರ ಯುಪಿಎ ಸರ್ಕಾರವಾದರೋ `ಆಹಾರ ಭದ್ರತಾ ಕಾಯ್ದೆ ಹೆಸರಿನಲ್ಲಿ ಇರುವ ಪಡಿತರ ವ್ಯವಸ್ಥೆಯನ್ನೇ ಅದು ನಾಶ ಮಾಡಲು ಹೊರಟಿದೆ. ರಾಜ್ಯ ಸರ್ಕಾರದ ಹೊಣೆಗೇಡಿತನದ ಪಟ್ಟಿ ದೊಡ್ಡದೇ ಇದೆ.

ಇಂತಹ ಸನ್ನಿವೇಶದಲ್ಲಿ ದೇಶದ ಎಡಪಕ್ಷಗಳು ಆಹಾರದ ಹಕ್ಕಿಗಾಗಿ ರಾಷ್ಟ್ರವ್ಯಾಪಿ ತೀವ್ರ ಆಂದೋಲನಕ್ಕೆ ಮುಂದಾಗಿವೆ. ಕರ್ನಾಟಕದಲ್ಲಿಯೂ ನವೆಂಬರ್ 25 ರಂದು ಎಡಪಕ್ಷಗಳ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಒಂದು ಬೃಹತ್ ರಾಲಿ ನಡೆಯಿತು ಎಂಬುದು ಜನಶಕ್ತಿ ಓದುಗರಿಗೆ ತಿಳಿದಿರುವಂತಹದ್ದೇ. ಆಹಾರ: ಇದೊಂದು ಗಂಭೀರವಾದ ಸಮಸ್ಯೆ. ಈ ಪ್ರಶ್ನೆಯ ಆಧಾರದಲ್ಲಿ ಸಿಪಿಐ(ಎಂ) ಮತ್ತು ಎಡಪಕ್ಷಗಳು ಹೋರಾಟವನ್ನು ಮುಂದಿನ ಹಂತಕ್ಕೊಯ್ಯಲಿವೆ.

ಅಪೂರ್ವ ಸ್ಪಂದನೆ:

ನವೆಂಬರ್ 25 ರ ಬೃಹತ್ ರ್ಯಾಲಿಗೆ ರಾಜ್ಯದ ಜನತೆ ಅಭೂತಪೂರ್ವ ಎನ್ನುವಂತೆ ಸ್ಪಂಧಿಸಿದ್ದಾರೆ. ಯಾಕೆ ಎಂಬ ಪ್ರಶ್ನೆ ಇಲ್ಲಿ ತುಂಬಾ ಮುಖ್ಯವಾಗುತ್ತದೆ.  ಅಗತ್ಯ ವಸ್ತುಗಳ ಬೆಲೆ ಏರುತ್ತಿವೆ. ಬಡವರ ಬದುಕು ಸಂಕಟಮಯವಾಗುತ್ತಿದೆ. ಅಸಹನೀಯವಾಗುತ್ತಿದೆ. ಜನತೆಯನ್ನು ಹಸಿವು ಕಾಡುತ್ತಿದೆ. ಇಂತಹ ಬಡ ವಿಭಾಗಗಳನ್ನು ಎಡಪಕ್ಷಗಳ ಪ್ರಚಾರ ಪ್ರಕ್ಷೋಭೆ ತಲುಪಿದಾಗ ಇಂತಹ ಒಂದು ಕರೆಗೆ ಕಾದಿದ್ದವರಂತೆ ಜನ ಬೀದಿಗೆ ಬಂದಿದ್ದಾರೆ, ಸ್ಪಂದಿಸಿದ್ದಾರೆ. ರಾಲಿಯ ಮೂಲಕ ಒಡಲ ಬೇಗುದಿಯನ್ನು ತೊಡಿಕೊಂಡಿದ್ದಾರೆ. ಬರುವ ಜನ ನಾವು ಆ ಗುಂಪು, ನಾವು ಈ ಗುಂಪು ಎಂಬ ಬೇಧಭಾವಗಳನ್ನು ಬಿಟ್ಟು ಆ ಪಕ್ಷ ಈ ಪಕ್ಷ ಎಂಬ ಗಡಿಗಳನ್ನು ದಾಟಿ ಮುನ್ನುಗ್ಗಿ ಬಂದಿದ್ದಾರೆ. ಇಲ್ಲಿ ಗಮನಿಸಬೇಕಾದ ತುಂಬಾ ಮುಖ್ಯವಾದ ಒಂದು ಅಂಶ ಏನೆಂದರೆ, ಹೋರಾಟ ಸಮಿತಿಗಳ ರಚನೆಯ ಮಹತ್ವ.
ಆಹಾರದ ಆಂದೋಲನ ಒಂದು ಇನ್ನಷ್ಟು ಬಲ ಛಲದಿಂದ ಮುಂದುವರಿದು ಏನನ್ನಾದರೂ ಸಾಧಿಸಬೇಕೆಂದಾದಲ್ಲಿ ತಳಮಟ್ಟದಲ್ಲಿ ಹೋರಾಟ ಸಮಿತಿಗಳ ರಚನೆ ಆದ್ಯತೆಯ ವಿಷಯವಾಗಬೇಕು.

`ಎಲ್ಲರಿಗೂ ರೇಷನ್' ಗಮನ ಸೆಳೆದಿದೆ:

ನವೆಂಬರ್ 25, 2009ರ ಹೋರಾಟಕ್ಕೆ ಬಾರಿ ಜನ ಸ್ಪಂದನೆ ದೊರೆಯಲು ಕಾರಣವಾದ ಮತ್ತೊಂದು ಅಂಶವಿದೆ. ಅದೂ ಸಹ ಗಮನಾರ್ಹವಾದ ಅಂಶವೇ ಹೌದು. ಬಡವರು, ಮಧ್ಯಮವರ್ಗ, ಅನುಕೂಲಸ್ಥರು ಎನ್ನದೇ ಎಲ್ಲರಿಗೂ ರೇಷನ್ ಕಾರ್ಡ್ ಹಾಗೂ ರೇಷನ್ ಸಿಗಬೇಕೆಂಬ ಬೇಡಿಕೆ, ಹಾಗೂ ಒತ್ತಾಯಗಳು ಈ ಹಿಂದೆಯೂ ಇತ್ತಾದರೂ ಈ ನಿರ್ದಿಷ್ಟ ಬೇಡಿಕೆಯನ್ನು ಪ್ರಧಾನ ಬೇಡಿಕೆಯನ್ನಾಗಿಟ್ಟುಕೊಂಡು ಎಡಪಕ್ಷಗಳು-ಹಲವು ಸಾಮೂಹಿಕ ಸಂಘಟನೆಗಳು ಜನರ ನಡುವೆ ತೆರಳಿರುವುದು ಜನರ ಗಮನವನ್ನು ಸೆಳೆದಿದೆ. ಕುಟುಂಬದ ಆದಾಯವನ್ನು ಪರಿಗಣಿಸದೇ ಒಂದೇ ರೀತಿಯಾಗಿ ಎಲ್ಲರಿಗೂ ಆಹಾರ ಧಾನ್ಯ ನೀಡಬೇಕು ಎಂಬ ಬೇಡಿಕೆಗೆ ಗ್ರಾಮೀಣ ಪ್ರದೇಶದ ಮಧ್ಯಮ ರೈತರು, ದೊಡ್ಡ ರೈತರು ಸಹ ಸ್ಪಂದಿಸಿದ್ದಾರೆ. ತೀವ್ರ ಬೆಲೆ ಏರಿಕೆ, ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಈ ವಿಭಾಗಕ್ಕೆ ಬೇಡಿಕೆ ಹೊಸ ಹುರುಪು ನೀಡಿದೆ.

ಹೋರಾಟ ಸಮಿತಿಗಳು ಬಲಗೊಳ್ಳಬೇಕು

ಎಡಪಕ್ಷಗಳು ಎತ್ತಿದ ಬೇಡಿಕೆಗಳು ಹಾಗೂ ಪ್ರಚಾರಾಂದೋಲನಕ್ಕೆ ಆಕರ್ಷಿತರಾದವ ರೆಲ್ಲರಿಗೂ ರಾಲಿ ಇತ್ಯಾದಿಗಳಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಆದರೂ ಅವರು ಪರೋಕ್ಷವಾಗಿ ಹಲವು ರೀತಿಯಲ್ಲಿ ರಾಲಿಯ ಯಶಸ್ಸಿಗೆ ಬೆಂಬಲ, ಸಹಕಾರ ನೀಡಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಈ ಬೇಡಿಕೆ ಇನ್ನಷ್ಟು ಜನಪ್ರಿಯ ಆಗಬೇಕು. ಹೋರಾಟ ಸಮಿತಿಗಳ ರಚಿಸಬೇಕು. ಈ ಹೋರಾಟ ಸಮಿತಿಗಳಲ್ಲಿ ದಲಿತರು, ಹಿಂದುಳಿದ ವಿಭಾಗದ ಜನರು, ಮಹಿಳೆಯರನ್ನು ಅಲ್ಪಸಂಖ್ಯಾತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರಜ್ಞಾಪೂರ್ವಕವಾಗಿ ತೊಡಗಿಸಬೇಕು. ಚಳುವಳಿಕೆ ಇನ್ನಷ್ಟು ಬಲ ತುಂಬಲಿದೆ.

ಮುಂದಿನ ಹಂತದ ಚಳುವಳಿಯ ಬೇಡಿಕೆ ಏನು?:

1. ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಕೇಂದ್ರ ಸರ್ಕಾರದ ಉದ್ದೇಶಿತ ಆಹಾರ ಭದ್ರತಾ ಕಾಯ್ದೆಯಲ್ಲಿ ಗಂಭೀರ ಬದಲಾವಣೆ ಬರಬೇಕು. ಕುಟುಂಬಕ್ಕೆ ಗರಿಷ್ಠ 25 ಕೆ.ಜಿ. ಆಹಾರ ಧಾನ್ಯ ನೀಡಬೇಕೆಂಬ ನಿಯಮ ಹೋಗಬೇಕು. ಕೆ.ಜಿ.ಗೆ ರೂ.2 ನಂತೆ ತಲಾ ಕುಟುಂಬಕ್ಕೆ 35 ಕೆ.ಜಿ. ಆಹಾರಧಾನ್ಯವನ್ನು ನೀಡಲೇಬೇಕು.
2. ಕೇಂದ್ರ ಸರ್ಕಾರ ದೊಡ್ಡ ಹೊಣೆಗಾರಿಕೆ ಹೊರದೇ ಯಾವುದೇ ರಾಜ್ಯ ಸಕರ್ಾರವು ಜನರ ಆಹಾರ ಸಮಸ್ಯೆ ಬಗೆಹರಿಸುವುದು ಸಾಧ್ಯವಿಲ್ಲ. ಆದರೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರವನ್ನು ಆಹಾರದ ಸಬ್ಸಿಡಿ ಭರಿಸುವಂತೆ ಒತ್ತಾಯಿಸಬೇಕಾದ ಕರ್ತವ್ಯವಿದೆ. ಅದಾಗಬೇಕು.

ಇದರ ಜೊತೆಗೆ ಗಮನಿಸಬೇಕಾದ ಅಂಶವೆಂದರೆ ಆಂಧ್ರ, ಕೇರಳಗಳಲ್ಲಿ ತಲಾ ಕೆ.ಜಿ.ಗೆ 2 ರೂ.ನಂತೆ, ತಮಿಳುನಾಡಿನಲ್ಲಿ ತಲಾ ಕೆ.ಜಿ.ಗೆ 1 ರೂ.ನಂತೆ ಅಕ್ಕಿ ನೀಡಲಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ಪಕ್ಷವು ಚುನಾವಣೆಯ ಸಂದರ್ಭದಲ್ಲಿ ಜನತೆಗೆ 2 ರೂ.ಗೆ ಆಹಾರ ಧಾನ್ಯ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಅದು ಜಾರಿಗೆ ಬರಲೇ ಇಲ್ಲ. ಅದೇ ರೀತಿ ಬಿಪಿಎಲ್ ಪಡಿತರ ಚೀಟಿ ಪಡೆಯಲು ಆದಾಯ ಮಿತಿಯನ್ನು ಏರಿಸುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಅದನ್ನು ಕೂಡ ಬಿಜೆಪಿ ಸಕರ್ಾರ ಈಡೇರಿಸಿಲ್ಲ. ಕುಮಾರಸ್ವಾಮಿ ಯವರನ್ನು, ಜೆಡಿ(ಎಸ್) ಪಕ್ಷವನ್ನು ವಚನ ಭ್ರಷ್ಟರೆಂದು ಕರೆದ ಬಿಜೆಪಿಯು ಇಂದು ಜನತೆಗೆ ನೀಡಿದ ವಚನ ಪಾಲಿಸದೇ ವಚನಭ್ರಷ್ಟ ವಾಗಿದೆ. ಈ ನೀತಿಯನ್ನು ಪ್ರತಿಭಟಿಸ ಬೇಕಾಗಿದೆ.

ಕರ್ನಾಟಕ ರಾಜ್ಯದಲ್ಲಿ ಒಟ್ಟು 1,50,70,958 ರೇಷನ್ ಕಾರ್ಡ್ಗಳಿವೆ ಅದರಲ್ಲಿ.... ಅಂತ್ಯೋದಯ ಪಡಿತರ ಚೀಟಿ 11,99,700, ಅಕ್ಷಯ (ಬಿಪಿಎಲ್) 62,69,073, ಎಪಿಎಲ್ 52,97,772, ನೆಮ್ಮದಿ (ಬಿಪಿಎಲ್)2,04,443

ರಾಜ್ಯದಲ್ಲಿರುವ ಬಡತನ ರೇಖೆಯ ಕೆಳಗಿರುವ ಕುಟುಂಬಗಳ ಸಂಖ್ಯೆಯನ್ನು ಕೇಂದ್ರ ಸರ್ಕಾರ ಒಪ್ಪಿಲ್ಲ ಕೇಂದ್ರ ಸರ್ಕಾರ 46 ಲಕ್ಷ ಕುಟುಂಬಗಳನ್ನು ಮಾತ್ರ ಬಿಪಿಎಲ್ ಎಂದು ಪರಿಗಣಿಸಿ ಆಹಾರ ಪೂರೈಸುತ್ತದೆ. ರಾಜ್ಯ ಸರ್ಕಾರವು ಕೇಂದ್ರ ಗುರುತಿಸಿದ್ದಕ್ಕಿಂತ  20,200,300 ಹೆಚ್ಚು ಕುಟುಂಬಗಳನ್ನು ಬಿಪಿಎಲ್ ಎಂದು ಗುರುತಿಸಿದೆ. ಇದೊಂದು ಸ್ವಾಗತಾರ್ಹ ಕ್ರಮವಾಗಿದೆ. ಆದರೆ ಕೇಂದ್ರ ಸರ್ಕಾರದ ಮೇಲೆ ಎಲ್ಲಾ ಬಿಪಿಎಲ್ ಕುಟುಂಬಗಳಿಗೂ ಆಹಾರ ಧಾನ್ಯ ಪೂರೈಸಬೇಕೆಂದು ಹೋರಾಟ ಮಾಡುವುದು ಬಿಟ್ಟು ರಾಜ್ಯ ಸರ್ಕಾರವು ಕೇಂದ್ರವು ಎಪಿಎಲ್ ವಿಭಾಗಕ್ಕೆಂದು ನೀಡುವ ಧಾನ್ಯವನ್ನೇ ಕೇಂದ್ರ ಒಪ್ಪದ ಬಿಪಿಎಲ್ ಕುಟುಂಬಗಳಿಗೆ ಹಂಚುತ್ತಿದೆ. ಇದು ತಪ್ಪಬೇಕು. ಕೇಂದ್ರದಿಂದ ಸೂಕ್ತ ಪಾಲು ಕೇಳುವುದರ ಜೊತೆಗೆ ತೆರಿಗೆ ತೆರಬಹುದಾದ ವಿಭಾಗಗಳಿಂದ ತೆರಿಗೆ ಸಂಗ್ರಹ ಉತ್ತಮಪಡಿಸಿ ಆಹಾರ ಧಾನ್ಯಗಳಿಗೆ ಸೂಕ್ತ ಸಹಾಯಧನ ನೀಡಬೇಕು.

ರಾಜ್ಯ ಸರ್ಕಾರವು ಪಡಿತರ ವಿತರಣೆಗೆ ಯೂನಿಟ್ ಪದ್ಧತಿ ಎಂಬ ಜನವಿರೋಧಿ ನೀತಿಯನ್ನು ಜಾರಿಗೆ ತಂದಿದೆ. ಕುಟುಂಬದ ಸದಸ್ಯರಿಗೆ ಒಬ್ಬರಿಗೆ 4 ಕೆ.ಜಿ.ಯಂತೆ ಆಹಾರ  ಧಾನ್ಯ ವಿತರಿಸಲಾಗುತ್ತದೆ. ಈ ಮೂಲಕ ಮಿಗುತಾಯವಾಗುವ ಆಹಾರ ಧಾನ್ಯವನ್ನು ಇ-ಬಿಪಿಎಲ್ ವಿಭಾಗದ ಕುಟುಂಬಗಳಿಗೆ ಹಂಚಲು ಯತ್ನಿಸುತ್ತಿದೆ. ಇದು ಸಮಸ್ಯೆಗೆ ಒಂದು ಮೂಲ.

ನೆಮ್ಮದಿ ಕೆಡಿಸಿರುವ ನೆಮ್ಮದಿ ಕೇಂದ್ರ:

ಲೋಕಸಭಾ ಚುನಾವಣೆಯ ಕಾಲಕ್ಕೆ ಬಿಜೆಪಿಗೆ ಹೇಗಾದರೂ ಮಾಡಿ ಗೆಲುವು ಸಾಧಿಸುವುದು ಬೇಕಾಗಿತ್ತು. ಈ ನಿಟ್ಟಿನಲ್ಲಿ ಬಿಜೆಪಿಯು ನೆಮ್ಮದಿ ಕೇಂದ್ರ ಎಂದು ಆರಂಭಿಸಿ 23,04,413 ಬಿಪಿಎಲ್ ಕಾರ್ಡ್ ಗಳನ್ನು ಹಂಚಿತು. ಜನರಿಗೆ ಬಿಪಿಎಲ್ ಕಾರ್ಡು ಕೊಟ್ಟು ಆಹಾರ ಕೊಡುವುದು ಉದ್ದೇಶವಾಗಿದ್ದರೆ ಅದನ್ನು ಮೆಚ್ಚಬಹುದಿತ್ತು. ಆದರೆ ಇಲ್ಲಿರುವುದು ಓಟಿನ ರಾಜಕಾರಣ. ತಮ್ಮ ಆದಾಯವನ್ನು ಘೋಷಿಸಿ ಪ್ರಮಾಣಪತ್ರ ಕೊಟ್ಟರೆ ಸಾಕೆಂದು ಹೇಳಿ ಪ್ರಮಾಣಪತ್ರ ಪಡೆಯಲಾಯಿತು. ಈಗ ಚುನಾವಣೆಗಳು ಮುಗಿದ ಮೇಲೆ ಆಹಾರ ನೀಡುವುದನ್ನು ಮುಂದುವರಿಸಲು ಮನಸ್ಸಿಲ್ಲದ ಸರ್ಕಾರ ಏನೇನೋ ನೆಪಗಳನ್ನು ಹೇಳಿ ಆಹಾರ ಧಾನ್ಯ ವಂಚಿಸುತ್ತಿದೆ.

ಪೋಟೋ ಇದ್ದವರಿಗೆ ಮಾತ್ರ ಆಹಾರ ಧಾನ್ಯ ಎಂಬುದು ಈ ನಿಟ್ಟಿನಲ್ಲಿ ಒಂದು ತಂತ್ರವಾಗಿದೆ.  ಜೊತೆಗೆ ತಮ್ಮ ಆದಾಯದ ಬಗೆಗೆ ಹಿಂದೆ ಪ್ರಮಾಣಪತ್ರ ಕೊಟ್ಟವರನ್ನು ಸುಳ್ಳು ಪ್ರಮಾಣಪತ್ರ ಕೊಟ್ಟಿದ್ದಾರೆಂದು, ಈ ಕುರಿತು ಕಾನೂನು ಕ್ರಮ ವಹಿಸುವೆಂದು ಜನರಿಗೆ ಬೆದರಿಕೆ ಒಡ್ಡಲಾಗುತ್ತಿದೆ. ಜೈಲಿಗೆ ಅಟ್ಟುವುದಾಗಿ ಹೆದರಿಸಲಾಗುತ್ತಿದೆ. ಜನರಿಗೆ ನ್ಯಾಯಬದ್ಧವಾದ ಹಕ್ಕಾದ ಜನರಿಗೆ ನ್ಯಾಯಬದ್ಧವಾದ ಹಕ್ಕಾದ ಆಹಾರ ಧಾನ್ಯವನ್ನು ನೀಡುವ ರಾಜಕೀಯ ಇಚ್ಛಾಶಕ್ತಿ ಇಲ್ಲದ ರಾಜ್ಯ ಬಿಜೆಪಿ ಸರ್ಕಾರ ಇಂತಹ ಧೋರಣೆಯನ್ನು ಎಲ್ಲರೂ ಒಟ್ಟುಗೂಡಿ ಪ್ರತಿಭಟಿಸಬೇಕಾಗಿದೆ.

ಸೌಜನ್ಯ: ಜನಶಕ್ತಿ


Share: