ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಮಂಗಳೂರು: ಅಕ್ಟೋಬರ್ 25-30 ನಡುವೆ ಮಂಗಳೂರಿನಿಂದ ಹೊರಡಲಿರುವ ಏಳುನೂರು ಹಜ್ ಯಾತ್ರಾರ್ಥಿಗಳು

ಮಂಗಳೂರು: ಅಕ್ಟೋಬರ್ 25-30 ನಡುವೆ ಮಂಗಳೂರಿನಿಂದ ಹೊರಡಲಿರುವ ಏಳುನೂರು ಹಜ್ ಯಾತ್ರಾರ್ಥಿಗಳು

Thu, 22 Oct 2009 03:14:00  Office Staff   S.O. News Service
ಮಂಗಳೂರು, ಅ. 21: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಕೊಡಗು ಜಿಲ್ಲೆಗಳಿಂದ ಪ್ರಥಮ ಬಾರಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅ.೨೫ರಿಂದ ೩೦ರವರೆಗೆ ೭೦೦ ಮಂದಿ ಯಾತ್ರಾರ್ಥಿಗಳು ಹಜ್ಜ್‌ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಮಂಗಳೂರು ಹಜ್ಜ್ ಶಿಬಿರದ ಅಧ್ಯಕ್ಷ, ಜಿಲ್ಲಾ ವಕ್‌ಮಂಡಳಿ ಅಧ್ಯಕ್ಷ ಹಾಜಿ ವೈ. ಮುಹಮ್ಮದ್ ಕುಂಞಿ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಬಜ್ಪೆ ವಿಮಾನ ನಿಲ್ದಾಣದ ಸಮೀಪದ ಅನ್ಸಾರ್ ಆಂಗ್ಲ ಮಾಧ್ಯಮ ವಿದ್ಯಾ ಸಂಸ್ಥೆಯಲ್ಲಿ ಹಜ್ಜ್ ಯಾತ್ರಿಗಳಿಗೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಅ.೨೪ ರಂದು ಮಧ್ಯಾಹ್ನ ೩ ಗಂಟೆಗೆ ಅನ್ಸಾರ್ ಶಾಲಾ ಮೈದಾನದಲ್ಲಿ ಹಜ್ಜ್ ಶಿಬಿರ ಉದ್ಘಾಟ ನೆಗೊಳ್ಳಲಿದ್ದು, ಮಂಗಳೂರು ಖಾಝಿ ಅಲ್‌ಹಾಜಿ ಸಿ.ಎಂ. ಅಬ್ದುಲ್ಲಾ ಮುಸ್ಲಿಯಾರ್ ಚೆಂಬರಿಕ ದುವಾ ನೆರವೇರಿಸಲಿದ್ದಾರೆ. ಸಹಾಯಕ ಖಾಝಿ ಅಲ್ ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್‌ಉಪಸ್ಥಿತರಿರುವರು.

ರಾಜ್ಯ ಹಜ್ಜ್ ಸಮಿತಿ ಅಧ್ಯಕ್ಷ ಎಸ್. ಮುಹಮ್ಮದ್ ಗೌಸ್ ಬಾಷಾ ಅಶ್ರಫಿಯವರ ಅಧ್ಯಕ್ಷತೆಯಲ್ಲಿ ಹಜ್ಜ್, ವಕ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಡಾ. ಮುಮ್ತಾಝ್ ಅಲಿಖಾನ್ ಶಿಬಿರವನ್ನು ಉದ್ಘಾಟಿಸುವರು. ಹಜ್ಜ್ ಯಾತ್ರಾ ವಿಮಾನ ಯಾನ ಅ. ೨೫ರಂದು ಬೆಳಗ್ಗೆ ೯ ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಪ್ರಥಮ ಬಾರಿಗೆ ಮಂಗಳೂರಿನಿಂದ ಕಲ್ಲಿಕೋಟೆಗೆ ತೆರಳಿ ಅಲ್ಲಿಂದ ಜಿದ್ದಾಗೆ ವಿಮಾನ ಪ್ರಯಾಣಿಸಲಿದೆ. ಮುಂದಿನ ವರ್ಷದಿಂದ ಮಂಗಳೂರಿನಿಂದ ಜಿದ್ದಾಗೆ ನೇರ ವಿಮಾನ ಯಾನವನ್ನು ಕೇಂದ್ರ ಸರಕಾರ ಕಲ್ಪಿಸುವ ಭರವಸೆ ತಮಗಿದೆ. ಈ ಆರು ದಿನಗಳಲ್ಲಿ ಮಧ್ಯಾಹ್ನ ೧೨:೪೫ಕ್ಕೆ ವಿಮಾನ ಹೊರಡಲಿದೆ. ಪ್ರಥಮ ವಿಮಾನ ಯಾನ ಉದ್ಘಾಟನಾ ಸಮಾರಂಭದಲ್ಲಿ ಉಳ್ಳಾಲ ಖಾಝಿ ತಾಜುಲ್ ಉಲಮಾ, ಅಸಯ್ಯದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ತಂಳ್ ದುವಾ ನೆರವೇರಿಸಲಿದ್ದಾರೆ. ಉಡುಪಿ ಸಂಯುಕ್ತ ಖಾಝಿ ಬೇಕಲ ಇಬ್ರಾಹೀಂ ಮುಸ್ಲಿಯಾರ್ ಉಪಸ್ಥಿತರಿರುವರು. ವಿದೇಶಾಂಗ ಸಚಿವ ಎಸ್. ಎಂ.ಕೃಷ್ಣ ಉದ್ಘಾಟನೆ ನೆರವೇರಿಸಲಿದ್ದು, ಕೇಂದ್ರ ಕಾನೂನು ಸಚಿವ ಡಾ.ಎಂ. ವೀರಪ್ಪ ಮೊಯ್ಲಿ, ರಾಜ್ಯ ಹಜ್ಜ್ ಸಚಿವ ಡಾ. ಮುಮ್ತಾಝ್ ಅಲಿ ಖಾನ್, ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೆಮಾರ್, ಉಡುಪಿ ಜಿಲ್ಲಾ ಉಸ್ತು ವಾರಿ ಸಚಿವ ಡಾ.ವಿ.ಎಸ್. ಆಚಾರ್ಯ, ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಲೋಕಸಭಾ ಸದಸ್ಯರಾದ ಡಿ.ವಿ. ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್ ಭಾಗವಹಿಸಲಿದ್ದಾರೆ. ಜೊತೆಗೆ ಜಿಲ್ಲೆಯ ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ವಿವಿಧ ನಿಗಮ ಮಂಡ ಳಿಯ ಅಧ್ಯಕ್ಷರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿ ದ್ದಾರೆ ಎಂದು ವೈ. ಮುಹಮ್ಮದ್ ಕುಂಞಿ ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಹಜ್ಜ್ ಶಿಬಿರದ ಉಪಾಧ್ಯಕ್ಷ ಹಾಜಿ ಅಝೀಝ್ ಬೈಕಂಪಾಡಿ, ಕಾರ್ಯದರ್ಶಿ ಹಾಜಿ ಎಸ್.ಎಂ. ರಶೀದ್, ಸದಸ್ಯ ಹುಸೈನ್ ಸಲಾಫಿ ಉಪಸ್ಥಿತರಿದ್ದರು.


Share: