ಹಣ ಬಲದಿಂದ ಚುನಾವಣೆ ಎದುರಿಸುವವರು ಕಳ್ಳರಿಗಿಂತ ಕೀಳು: ಕಾರ್ಮಿಕ ನಾಯಕ ಮೈಕೆಲ್ ಫೆರ್ನಾಂಡಿಸ್ ಆಕ್ರೋಶ
ಉಡುಪಿ, ಮೇ 3: ಹಣ ಹಂಚಿ ಚುನಾವಣೆಯಲ್ಲಿ ಗೆದ್ದು, ಬಳಿಕ ಕೋಟ್ಯಂತರ ಹಣವನ್ನು ಲೂಟಿ ಮಾಡುವವರು ಸಾಮಾನ್ಯ ಕಳ್ಳರಿಗಿಂತ ಕೀಳು ಎಂದು ರಾಜ್ಯ ಕಾರ್ಮಿಕ ನಾಯಕ, ಹೋರಾಟಗಾರ ಮೈಕೆಲ್ ಫೆರ್ನಾಂಡಿಸ್ ಕಟುವಾಗಿ ಟೀಕಿಸಿದ್ದಾರೆ.
ಆಮಿಷ, ಒತ್ತಾಯಗಳ ಬಗ್ಗೆ ಮತದಾರರನ್ನು ಜಾಗತಗೊಳಿಸುವ ನಿಟ್ಟಿನಲ್ಲಿ ‘ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ’ ಎಂಬ ಘೋಷಣೆಯೊಂದಿಗೆ ಗ್ರಾಮ ಪಂಚಾಯತ್ ಹಕ್ಕೋತ್ತಾಯ ಆಂದೋಲನ ಸಮಿತಿ ರವಿವಾರ ಉಡುಪಿಯ ಸರ್ವಿಸ್ ಬಸ್ ನಿಲ್ದಾಣದ ಬಳಿ ಆಯೋಜಿಸಿದ್ದ ‘ಮತದಾರರ ಸ್ವಾಭಿಮಾನಿ ಹೋರಾಟ’ ಒಂದು ದಿನದ ಸತ್ಯಾಗ್ರಹದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಈಗಿನ ರಾಜಕಾರಣಿಗಳು ಹಣ ನೀಡಿ ಜಯಿಸಬೇಕೆ ಹೊರತು ಅವರಿಗೆ ಬೇರೆ ಯಾವುದೇ ನೈತಿಕತೆ ಇಲ್ಲ. ಅವರ ಉದ್ದೇಶ ಜನಪರ ಕೆಲಸ ಮಾಡುವುದಲ್ಲ. ಸ್ವಾರ್ಥ ಜೀವನಕ್ಕಾಗಿ ಅವರು ಮತದಾರರಿಗೆ ಹಣ ನೀಡಿ ತಮ್ಮ ಗುರಿ ಸಾಧಿಸುತ್ತಿದ್ದಾರೆ ಎಂದರು.
ಪ್ರತಿಯೊಬ್ಬ ರಾಜಕಾರಣಿ ಕಳ್ಳ ಎಂಬುದು ಗೊತ್ತಿದ್ದರೂ ನಾವು ಪ್ರತಿ ಬಾರಿಯೂ ಅವರನ್ನೇ ಆರಿಸುತ್ತಿದ್ದೇವೆ. ಆದುದರಿಂದ ಮೊದಲು ನಾವು ಎಚ್ಚರಗೊಳ್ಳಬೇಕು. ಇಲ್ಲದಿದ್ದರೆ ಈ ವ್ಯವಸ್ಥೆ ಸರಿಪಡಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು. ಅಭಿವದ್ಧಿ ಹೆಸರಿನಲ್ಲಿ ಅಮೆರಿಕಾ ದಿಂದ ಹಣ ತರುತ್ತಾರೆ. ಆದರೆ ಇದರಿಂದ ಜನರಿಗೆ ಉಪಯೋಗವಿಲ್ಲ. ಅದರ ಬದಲು ಅವರೆ ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ ಎಂದು ಫೆರ್ನಾಂಡಿಸ್ ಆರೋಪಿಸಿದರು.
ಸಮಾಜವಾದಿ ಮಹಿಮಾ ಪಟೇಲ್ ಮಾತನಾಡಿ, ಇಂದು ಮತದಾರರು ಅಭ್ಯರ್ಥಿ ಗಳಿಂದ ಹಣ ಪಡೆದು ಅವರಿಗೆ ಮತ್ತಷ್ಟು ಹಣ ಲೂಟಿ ಮಾಡಲು ಅವಕಾಶ ಮಾಡಿಕೊಡು ವುತ್ತಿರುವುದು ದುರಂತ. ಈ ವ್ಯವಸ್ಥೆಯಲ್ಲಿ ಪರಿವರ್ತನೆ ಕಾಣಬೇಕಾದರೆ ಮೊದಲು ನಾವು ಬದಲಾಗಬೇಕು. ಮತದಾರರು ಪ್ರಾಮಾಣಿಕ ಮತದಾನ ಮಾಡಲು ಮುಂದಾಗಬೇಕೆಂದರು.
ಸತ್ಯಾಗ್ರಹ ಬೆಳಗ್ಗೆಯಿಂದ ಸಂಜೆಯವರೆಗೆ ನಡೆಯಿತು. ಈ ಸಂದರ್ಭದಲ್ಲಿ ಆಂದೋಲನ ಸಂಯೋಜನಾ ಸಮಿತಿಯ ನಂದನಾ ರೆಡ್ಡಿ, ರಾಜ್ಯ ಸಂಯೋಜಕಿ ಕಷಾ ಎಂ.ಎಂ., ಸಂಚಾಲಕ ದಾಮೋದರ್ ಆಚಾರ್ಯ, ಬಳಕೆದಾರರ ವೇದಿಕೆಯ ಸಂಚಾಲಕ ದಾಮೋದರ್ ಐತಾಳ್, ಅಶೋಕ್ ಬಳಿಗಾರ್ ಮೊದಲಾದವರು ಉಪಸ್ಥಿತರಿದ್ದರು.
ನೋಟು ಸುಟ್ಟರು!
ಚುನಾವಣೆಯಲ್ಲಿ ಹಣ ಹಂಚಿಕೆ ಮಾಡಿ ಮತದಾರರನ್ನು ಖರೀದಿಸುವ ಪ್ರವತ್ತಿ ಕೊನೆಯಾಗಬೇಕೆಂದು ಹೋರಾಟಗಾರ ಮೈಕೆಲ್ ಫೆರ್ನಾಂಡಿಸ್ 10ರೂ. ನೋಟು ಸುಟ್ಟು ಸಾಂಕೇತಿಕ ಆಕ್ರೋಶ ವ್ಯಕ್ತಪಡಿಸಿದರು.
‘ನೋಟು ಸುಡುವುದು: ಕಾನೂನು ಪ್ರಕಾರ ತಪ್ಪು. ಆದರೂ ಚುನಾವಣೆಯಲ್ಲಿ ಹಣ ನೀಡುವ ಪ್ರವತ್ತಿ ನಿಲ್ಲಬೇಕೆಂಬ ಕಾರಣಕ್ಕಾಗಿ ಸುಟ್ಟಿದ್ದೇನೆ.. ಪೊಲೀಸರು ಕೇಸು ಹಾಕುವುದಾದರೆ ನಾನು ಸಿದ್ಧನಿದ್ದೇನೆ. ಅದೇ ರೀತಿ ಅವರು ಚುನಾವಣೆಯಲ್ಲಿ ಹಣ ಹಂಚುವವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಿ’ ಎಂದರು ಚುನಾವಣೆಯಲ್ಲಿ ಕೋಟ್ಯಂತರ ರೂ. ಹಣ ಚೆಲ್ಲುತ್ತಿದ್ದಾರೆ. ಇದು ಇಡೀ ರಾಜಕೀಯ ವ್ಯವಸ್ಥೆಗೆ ದಕ್ಕೆ ಉಂಟು ಮಾಡಿದೆ. ಅದನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ನೋಟುಗಳನ್ನು ಸುಟ್ಟಿದ್ದೇನೆ ಎಂದು ಅವರು ತಿಳಿಸಿದರು.