ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಗುಲಬರ್ಗಾ:೬೦ ಜನರ ನೇತ್ರ ತಪಾಸಣೆ - ೨೦೧೧ರ ಮಾರ್ಚ್ ಅಂತ್ಯಕ್ಕೆ ೪೦ ಕಿ.ಮೀ. ಬೀದರ-ಗುಲಬರ್ಗಾ ರೈಲು ಮಾರ್ಗ ಪೂರ್ಣ

ಗುಲಬರ್ಗಾ:೬೦ ಜನರ ನೇತ್ರ ತಪಾಸಣೆ - ೨೦೧೧ರ ಮಾರ್ಚ್ ಅಂತ್ಯಕ್ಕೆ ೪೦ ಕಿ.ಮೀ. ಬೀದರ-ಗುಲಬರ್ಗಾ ರೈಲು ಮಾರ್ಗ ಪೂರ್ಣ

Sun, 25 Apr 2010 03:13:00  Office Staff   S.O. News Service

ಗುಲಬರ್ಗಾ,ಏ.೨೪.(ಕ.ವಾ.)-ಗುಲಬರ್ಗಾ ಬಾಲನ್ಯಾಯ (ಮಕ್ಕಳ ರಕ್ಷಣೆ ಮತ್ತು ಪೋಷಣೆ) ಕಾಯ್ದೆ ೨೦೦೦ರ ಪ್ರಕರಣ ೨(೧)ರ ಅನ್ವಯ ಅರ್ಹ ವ್ಯಕ್ತಿಗಳ ಆಯ್ಕೆ ಮಾಡಬೇಕಾಗಿದೆ. ಇದಕ್ಕಾಗಿ ಆಸಕ್ತ ಅರ್ಹ ವ್ಯಕ್ತಿಗಳು ತಮ್ಮ ಪೂರ್ಣ ಹೆಸರು, ವಯಸ್ಸು, ಲಿಂಗ, ವಿದ್ಯಾರ್ಹತೆ, ಆದಾಯ, ವಿಳಾಸ, ಖಾಯಂ ಮತ್ತು ಅಂಚೆ ವಿಳಾಸ, ದೂರವಾಣಿ/ ಮೊಬೈಲ್ ಸಂಖ್ಯೆ, ವಿವಾಹಿತ/ ಅವಿವಾಹಿತ, ಮಕ್ಕಳ ಸಂಖ್ಯೆ, ವಿಧವೆ/ ವಿಧುರ, ಹವ್ಯಾಸ, ಸ್ವಯಂ ಸೇವಾ ಸಂಸ್ಥೆಯಿದ್ದಲ್ಲಿ ಸಂಸ್ಥೆಯ ಹೆಸರು ಮತ್ತು ವಿಳಾಸ ಮತ್ತಿತರ ವೈಯಕ್ತಿಕ ವಿವರದ ಅರ್ಜಿಯನ್ನು ಭರ್ತಿಮಾಡಿ ದಿನಾಂಕ: ೪-೫-೨೦೧೦ರೊಳಗೆ ಅಧ್ಯಕ್ಷರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಕೇರ್ ಆಫ್ ಬಾಲಕಿಯರ ಸರ್ಕಾರಿ ಬಾಲಮಂದಿರ ರಾಜ್ಯ ಮಹಿಳಾ ನಿಲಯ ಕಟ್ಟಡ ಆಳಂದ ರಸ್ತೆ ಗುಲಬರ್ಗಾ ಇವರಿಗೆ ಸಲ್ಲಿಸಬೇಕು. ನಿಗದಿತ ಅರ್ಜಿ ನಮೂನೆಗಳನ್ನು ೨೦೧೦ರ ಏಪ್ರಿಲ್ ೨೭ರಿಂದ ಸದರಿ ಸಮಿತಿ ಕಚೇರಿಯಿಂದ ಪಡೆಯಬಹುದು. ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂ: ೦೮೪೭೨-೨೪೪೭೫೬ನ್ನು ಸಂಪರ್ಕಿಸಬಹುದು.

 

 

೬೦ ಜನರ ನೇತ್ರ ತಪಾಸಣೆ ;

 

 

ಗುಲಬರ್ಗಾ,ಏ.೨೪.(ಕ.ವಾ.)-ಗುಲಬರ್ಗಾ ಜಿಲ್ಲೆಯ ಅಫಜಲಪೂರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಈಚೆಗೆ ಜರುಗಿದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ೬೦ ಜನರ ನೇತ್ರ ತಪಾಸಣೆ ಮಾಡಲಾಯಿತು. ಈ ಪೈಕಿ ಅರ್ಹ ೧೦ ಜನರ ಕಣ್ಣಿನ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿದೆ ಎಂದು ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ ಅಧಿಕಾರಿ ಡಾ|| ವರ್ಮಾ ಎಂ.ಎಸ್. ಅವರು ತಿಳಿಸಿದ್ದಾರೆ.

 

 

ಏಪ್ರಿಲ್ ೨೬ ಮತ್ತು ೨೯ಕ್ಕೆ ಉಚಿತ ನೇತ್ರ ತಪಾಸಣಾ ಶಿಬಿರಗಳು

 

 

ಗುಲಬರ್ಗಾ,ಏ.೨೪.(ಕ.ವಾ.)-ಗುಲಬರ್ಗಾ ಅಶೋಕನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ೨೦೧೦ರ ಏಪ್ರಿಲ್ ೨೬ ರಂದು ಹಾಗೂ ಜೇವರ್ಗಿ ತಾಲೂಕಿನ ವಡಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏಪ್ರಿಲ್ ೨೯ ರಂದು ಉಚಿತ ನೇತ್ರ ತಪಾಸಣಾ ಶಿಬಿರಗಳನ್ನು ಏರ್ಪಡಿಸಲಾಗಿದೆ. ಜಿಲ್ಲಾ ಅಂಧತ್ವ ನಿಯಂತ್ರಣ ಸಂಘವು ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ ಈ ಶಿಬಿರಗಳಲ್ಲಿ ಅರ್ಹರ ನೇತ್ರ ಶಸ್ತ್ರಚಿಕಿತ್ಸೆ ನೆರವೇರಿಸಲಾಗುವುದು. ಸಾರ್ವಜನಿಕರು ಈ ಶಿಬಿರಗಳ ಪ್ರಯೋಜನ ಪಡೆಯಬೇಕೆಂದು ಜಿಲ್ಲಾ ಅಂಧತ್ವ ನಿಯಂತ್ರಣ ಸಂಘದ ಕಾರ್ಯಕ್ರಮ ಅಧಿಕಾರಿ ಡಾ|| ವರ್ಮಾ ಎಂ.ಎಸ್. ಅವರು ಕೋರಿದ್ದಾರೆ.

 

 

೨೦೧೧ರ ಮಾರ್ಚ್ ಅಂತ್ಯಕ್ಕೆ ೪೦ ಕಿ.ಮೀ. ಬೀದರ-ಗುಲಬರ್ಗಾ ರೈಲು ಮಾರ್ಗ ಪೂರ್ಣ

ಗುಲಬರ್ಗಾ,ಏ.೨೪.(ಕ.ವಾ.)-ಬೀದರ-ಗುಲಬರ್ಗಾ ರೈಲು ಮಾರ್ಗದ ಹುಮನಾಬಾದವರೆಗಿನ ೪೦ ಕಿ.ಮೀ. ಮಾರ್ಗವನ್ನು ೨೦೧೧ರ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಸೋಲಾಪೂರ ರೇಲ್ವೆ ವಿಭಾಗೀಯ ವ್ಯವಸ್ಥಾಪಕ ಸ್ವಾಮಿನಾಥನ್ ಅವರು ಹೇಳಿದರು.

 

 

ಅವರು ಶುಕ್ರವಾರ ಗುಲಬರ್ಗಾದಲ್ಲಿ ಜರುಗಿದ ಗುಲಬರ್ಗಾ ವಿಭಾಗದ ವಿವಿಧ ರೇಲ್ವೆ ಯೋಜನೆಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

 

ಈ ರೈಲು ಮಾರ್ಗಕ್ಕೆ ಸಂಬಂಧಿಸಿದ ಎರಡು ಹಳ್ಳಿಗಳ ಜಮೀನನ್ನು ಈ ತಿಂಗಳಾಂತ್ಯಕ್ಕೆ ಹಾಗೂ ನಾಲ್ಕು ಹಳ್ಳಿಗಳ ಜಮೀನನ್ನು ಜೂನ್‌ವರೆಗೆ ರೇಲ್ವೆ ಇಲಾಖೆಯ ಸ್ವಾಧೀನಕ್ಕೆ ನೀಡಲಾಗುವುದು. ಈವರೆಗೆ ಒಟ್ಟು ೧೫೬ ಎಕರೆ ಭೂಮಿಯನ್ನು ರೇಲ್ವೆ ಇಲಾಖೆಗೆ ವಹಿಸಲಾಗಿದೆ ಎಂದರು.

 

 

ಚೆನ್ನೈ-ಮುಂಬಯಿ ಜೋಡು ರೈಲು ಮಾರ್ಗವನ್ನು ವಿದ್ಯುದ್ದೀಕರಿಸಲು ಯೋಜಿಸಿದ್ದು, ಗುಲಬರ್ಗಾ-ದೌಂಡ್ ನಡುವೆ ಜೋಡು ರೈಲು ಮಾರ್ಗದೊಂದಿಗೆ ವಿದ್ಯುದ್ದೀಕರಿಸಲಾಗುವುದು. ಸುಮಾರು ೭೦೦ ಕೋಟಿ ರೂ. ಅಂದಾಜು ವೆಚ್ಚದ ಈ ಕಾಮಗಾರಿಯು ಬರುವ ಅಕ್ಟೋಬರದಿಂದ ಪ್ರಾರಂಭವಾಗಿ ಎರಡುವರೆ ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ . ಈಚೆಗೆ ಹೊಸದಾಗಿ ಪ್ರಾರಂಭವಾದ ಪುಣೆ-ಹೈದ್ರಾಬಾದ ಶತಾಬ್ಧಿ ರಜಾ ಎಕ್ಸ್‌ಪ್ರೆಸ್ ರೈಲಿಗೆ ಗುಲಬರ್ಗಾದಲ್ಲಿ ೩ ನಿಮಿಷದ ನಿಲುಗಡೆ ಅವಕಾಶ ಕಲ್ಪಿಸಲಾಗಿದೆ. ಗುಲಬರ್ಗಾ ನಗರದ ಹಳೆ ಜೇವರ್ಗಿ ರಸ್ತೆ ಕೆಳ ಸೇತುವೆ ನಿರ್ಮಾಣ ಕಾರ್ಯ ಈಗಾಗಲೇ ಪ್ರಾರಂಭವಾಗಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಒದಗಿಸಲಾಗುವುದು ಎಂದು ನುಡಿದರು.

 

 

ಗುಲಬರ್ಗಾ ರೈಲು ನಿಲ್ದಾಣದ ಜನದಟ್ಟಣೆಯನ್ನು ಪರಿಗಣಿಸಿ ೪ನೇ ಪ್ಲಾಟ್‌ಫಾರ್ಮ್ ನಿರ್ಮಿಸುವ ಅಗತ್ಯವಿದೆ. ಇದಕ್ಕಾಗಿ ಓವರ್ ಬ್ರಿಜ್ ಬಳಿ ಪ್ರತ್ಯೇಕ ಪ್ರವೇಶ ದ್ವಾರವನ್ನು ನಿರ್ಮಿಸಲಾಗುವುದು. ಗುಲಬರ್ಗಾ ರೈಲು ನಿಲ್ದಾಣದಲ್ಲಿ ಸುಮಾರು ೧ ಕೋಟಿ ರೂ. ವೆಚ್ಚದಿಂದ ವಿವಿಧ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

 

ಈಗಿರುವ ಗೂಡ್ಸ್ ರೈಲು ಶೆಡ್‌ನ್ನು ಹಿರಾಪೂರ-ಡಬರಾಬಾದಿಗೆ ಸ್ಥಳಾಂತರಿಸಲು ರೂಪಿಸಿದ ೩೦ ಕೋಟಿ ರೂ. ರೈಲ್ವೆ ಯೋಜನೆಗೆ ಬೇಕಾಗುವ ೩೦ ಹೆಕ್ಟೇರ್ ಭೂಮಿಯನ್ನು ಹಸ್ತಾಂತರಿಸಲು ಕೂಡಲೇ ಕ್ರಮ ಜರುಗಿಸಲಾಗುವುದು ಎಂದು ಪ್ರಾದೇಶಿಕ ಆಯುಕ್ತ ಡಾ|| ರಜನೀಶ ಗೋಯಲ್ ಅವರು ಹೇಳಿದರು. ಅಫಜಲಪೂರ ರಸ್ತೆಯ ವರ್ತುಲ ರಸ್ತೆಯಲ್ಲಿ ಮೇಲ್ ಸೇತುವೆ ನಿರ್ಮಾಣದ ಪ್ರಸ್ತಾವನೆಗೆ ಸಂಬಂಧಿಸಿದಂತೆ ಅಗತ್ಯ ಠೇವಣಿ ಹಣ ಸಹ ಪಾವತಿಸಿದ್ದು, ಕೂಡಲೇ ಕಾಮಗಾರಿ ಪ್ರಾರಂಭಿಸಬೇಕೆಂದರು. ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಡಾ|| ಶಾಲಿನಿ ರಜನೀಶ್ ಅವರು ಸಭೆಯಲ್ಲಿ ಮಾತನಾಡಿ ಗುಲಬರ್ಗಾ-ದೌಂಡ್ ನಡುವೆ ಚತುಷ್ಪಥ ರೈಲು ಮಾರ್ಗದ ಅಗತ್ಯವಿದ್ದು, ಇದಕ್ಕಾಗಿ ರಾಜ್ಯ ಸರ್ಕಾರ ಶೇ. ೫೦ ರಷ್ಟು ಹಣ ನೀಡಲು ಸಿದ್ಧವಿದೆ. ಉಳಿದ ಅನುದಾನವನ್ನು ರೇಲ್ವೆ ಇಲಾಖೆ ಭರಿಸಬೇಕೆಂದರು. ಮಹಾನಗರ ಪಾಲಿಕೆಯ ಆಯುಕ್ತ ಮನೋಜ್ ಜೈನ್ ಮತ್ತಿತರರು ಸಭೆಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

 

ಗ್ರಾಮ ಪಂಚಾಯತ್ ಚುನಾವಣೆ: ೩೭೯೦ ನಾಮಪತ್ರ ಸ್ವೀಕೃತ

 

ಗುಲಬರ್ಗಾ,ಏ.೨೪.(ಕ.ವಾ.)-ಗುಲಬರ್ಗಾ ಜಿಲ್ಲೆಯ ೨೧೫ ಗ್ರಾಮ ಪಂಚಾಯಿತಿಗಳ ೩೮೩೩ ಸ್ಥಾನಗಳಿಗೆ ಮೇ ೮ ರಂದು ನಡೆಯುವ ಚುನಾವಣೆಗಾಗಿ ಏಪ್ರಿಲ್ ೨೩ ರಂದು ೮೬೬ ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು ೨೬೩೦ ನಾಮಪತ್ರಗಳು ಸ್ವೀಕೃತವಾಗಿದ್ದು, ಈವರೆಗೆ ೧೨೨೯ ಮಹಿಳೆಯರ ನಾಮಪತ್ರಗಳು ಸೇರಿದಂತೆ ಒಟ್ಟು ೩೭೯೦ ನಾಮಪತ್ರಗಳು ಸ್ವೀಕೃತವಾಗಿವೆ ಎಂದು ಜಿಲ್ಲಾಧಿಕಾರಿ ಡಾ|| ಆರ್. ವಿಶಾಲ್ ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ತಾಲೂಕುವಾರು ಸ್ವೀಕೃತವಾದ ನಾಮಪತ್ರಗಳ ಸಂಖ್ಯೆಯ ವಿವರ ಹಾಗೂ ಕಂಸಿನಲ್ಲಿ ಮಹಿಳಾ ಅಭ್ಯರ್ಥಿಗಳಿಂದ ಸ್ವೀಕೃತಗೊಂಡ ನಾಮಪತ್ರಗಳ ವಿವರ ಈ ರೀತಿ ಇವೆ. ಗುಲಬರ್ಗಾ-೮೬೦(೨೮೫), ಆಳಂದ-೪೮೫(೧೪೬), ಅಫಜಲಪೂರ-೫೯೮(೨೧೫), ಜೇವರ್ಗಿ-೫೬೧(೧೮೦), ಸೇಡಂ-೩೦೮(೯೨), ಚಿತ್ತಾಪೂರ-೩೮೩(೧೧೯), ಚಿಂಚೋಳಿ-೫೯೫(೧೯೨).

 


Share: