ಕಾರವಾರ : ಅಮೃತ ಮಹೋತ್ಸವದ ಆಚರಣೆ ಅಂಗವಾಗಿ ಕೇಂದ್ರ ಸರ್ಕಾರವು ಹೊರಡಿಸಿರುವ 'ಹರ್ ಘರ್ ತಿರಂಗಾ' ಅಭಿಯಾನದಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ನಾಗರಾಜ್ ಕುರಿಕಾಯರ್ ನರೇಗಾ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಧ್ವಜಗಳನ್ನು ವಿತರಿಸಿ, ಮಾಹಿತಿ ನೀಡಿದರು.
ಮುಂಡಗೋಡ ತಾಲೂಕಿನ ಕೋಡಂಬಿ ಗ್ರಾಮ ಪಂಚಾಯತ್ ನ ಹಳ್ಳದಮನಿ ಅರಣ್ಯ ಟ್ರೆಂಚ್ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಧ್ವಜಗಳನ್ನು ನೀಡಿ ಮಾತನಾಡಿದ ಅವರು ಅಗಷ್ಟ 13ರ ಬೆಳಿಗ್ಗೆಯಿಂದ ಅಗಷ್ಟ 15ರ ಸಂಜೆಯವರೆಗೆ ಸಕಲ ಗೌರವ ಹಾಗೂ ಶಿಸ್ತಿನಿಂದ ಸ್ವಾತಂತ್ರೋತ್ಸವ ಆಚರಿಸಲಾಗುತ್ತಿದೆ. ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜಕ್ಕೆ ಯಾವುದೇ ರೀತಿಯ ಅಪಮಾನವಾಗದಂತೆ ಎಚ್ಚರಿಕೆ ವಹಿಸಿ ರಾಷ್ಟ್ರ ಧ್ವಜಕ್ಕೆ ಗೌರವ ಸಮರ್ಪಿಸಬೇಕು ಎಂದರು.
ನಿಮ್ಮ ಕುಟುಂಬದೊಂದಿಗೆ ಸೇರಿ ಧ್ವಜಾರೋಹಣ ನಡೆಸಲು ಮೊದಲ ಅವಕಾಶವಿದು. ಇದು ನಮ್ಮೆಲ್ಲರ ದಿನವಾಗಿದೆ. ಹಬ್ಬದಂತೆ ಸಂಭ್ರಮಿಸಲು ದೇಶವೇ ಕಾತರದಿಂದ ಕಾಯುತ್ತಿದೆ. ನರೇಗಾ ಕೂಲಿಕಾರರ ಮನೆಯಲ್ಲಿಯೂ ಅಮೃತ ಮಹೋತ್ಸವದ ಕಹಳೆ ಮೊಳಗುತ್ತಿರಲಿ ಎಂದು ತಾಲೂಕು ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ ಹೇಳಿದರು.
ಈ ಸಂದರ್ಭದಲ್ಲಿ 34 ಕೂಲಿಕಾರರು ಸೇರಿದಂತೆ ಬಿಎಫ್ ಟಿ ಗಣಪತಿ ಪವಾರ್, ಕಾಯಕ ಮಿತ್ರರು ಕೃಷ್ಣಪ್ಪ ಕೊರಗಾರ್ ಇದ್ದರು.