ಮುಂಬೈ, ನ.೯: ಮಹಾರಾಷ್ಟ್ರದ ವಿಧಾನಸಭೆ ಹಿಂದೆಂದೂ ಕಾಣದ ನಾಚಿಕೆಗೇಡಿನ ಘಟನೆಗೆ ಸೋಮವಾರ ಸಾಕ್ಷಿಯಾಯಿತು. ಮರಾಠಿ ಹೋರಾಟಗಾರ ರಾಜ್ ಠಾಕ್ರೆ ಪಕ್ಷದ ಶಾಸಕರು ಅಸೆಂಬ್ಲಿಯೊಳಗೇ ಮತ್ತೊಬ್ಬ ಶಾಸಕಗೆ ಥಳಿಸಿ ಗೂಂಡಾಗಿರಿ ನಡೆಸಿದರು.
ಆ ಮೂಲಕ, ನಮ್ಮ ಪಕ್ಷದ ತಾಕತ್ತೇನು ಎಂಬುದನ್ನು ನಮ್ಮವರು ಅಸೆಂಬ್ಲಿಯೊಳಗೆ ತೋರಿಸುತ್ತಾರೆ ಎಂದಿದ್ದ ರಾಜ್ ಠಾಕ್ರೆ ಮಾತನ್ನು ‘ನಿಜ’ ಮಾಡಿದರು!
ಸಮಾಜವಾದಿ ಪಕ್ಷದ ಶಾಸಕ ಅಬು ಅಜ್ಮಿ ಮರಾಠಿಯಲ್ಲಿ ಪ್ರಮಾಣವಚನ ಸ್ವೀಕರಿಸದೆ ಹಿಂದಿಯಲ್ಲಿ ಸ್ವೀಕರಿಸಿದ್ದು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಶಾಸಕರ ಸಿಟ್ಟಿಗೆ ಕಾರಣ. ಹಿಂದಿಯಲ್ಲಿ ಶಪಥ ವಿರೋಧಿಸಿ ಹಲ್ಲೆ ನಡೆಸಿದ ನಾಲ್ವರು ಎಂಎನ್‌ಎಸ್ ಶಾಸಕರನ್ನು ಸದನದಲ್ಲೇ ನಿರ್ಣಯ ಕೈಗೊಂಡು ೪ ವರ್ಷಗಳ ಅವಧಿಗೆ ಅಮಾನತುಗೊಳಿಸಲಾಯಿತು. ಇದು ಹೊಸ ವಿಧಾನಸಭೆಯ ಮೊದಲ ಅಧಿವೇಶನದ ಮೊದಲ ದಿನ.
ಅಮಾನತಾದ ಎಂಎನ್‌ಎಸ್ ಶಾಸಕರು: ಶಿಶಿರ್ ಶಿಂಧೆ, ಸದಾ ೨ ಕೆಜಿ ಚಿನ್ನಾಭರಣ ಧರಿಸಿರುವ ರಮೇಶ್ ವಂಜಾಲೆ, ರಾಮ್ ಕದಂ, ವಸಂತ್ ಗೀತೆ.
ಪೋಡಿಯಂ ಕೆಡವಿ ಗುದ್ದಿದರು: ಅಬು ಅಜ್ಮಿ ಹಿಂದಿಯಲ್ಲಿ ಶಪಥ ಸ್ವೀಕರಿಸಲು ಆರಂಭಿಸುತ್ತಿದ್ದಂತೆ ಆಸನಗಳಿಂದ ಎದ್ದ ಎಂಎನ್‌ಎಸ್ ಶಾಸಕರು ಪೋಡಿಯಂ ಬಳಿ ತೆರಳಿ ಅದನ್ನು ಎಳೆದು ಕೆಡವಿದರು. ಅಜ್ಮಿ ವಿರೋಧಿಸಿದಾಗ ಒಂದಿಬ್ಬರು ಅವರ ಎದೆ ಹಾಗೂ ಭುಜದ ಮೇಲೆ ಹಲ್ಲೆ ನಡೆಸಿದರು. ಮುಖ್ಯಮಂತ್ರಿ ಅಶೋಕ್ ಚವಾಣ್ ಅವರೇ ಎದ್ದುಹೋಗಿ ಶಾಸಕರನ್ನು ನಿಯಂತ್ರಿಸಿದರು. ಇದೇ ವೇಳೆ ಮಧ್ಯಪ್ರವೇಶಿಸಿದ ಪಿಡಬ್ಲ್ಯುಪಿ ಶಾಸಕಿ ಮೀನಾಕ್ಷಿ ಪಾಟೀಲ್ ಎಂಬುವರ ಜೊತೆ ಎಂಎನ್‌ಎಸ್ ಶಾಸಕರು ಅನುಚಿತವಾಗಿ ನಡೆದುಕೊಂಡರು ಎನ್ನಲಾಗಿದೆ.
ಘಟನೆಗೆ ಬಿಜೆಪಿ ಹಾಗೂ ಶಿವಸೇನೆ ಹೊರತುಪಡಿಸಿ ಬೇರೆಲ್ಲಾ ಪಕ್ಷಗಳಿಂದ ತೀವ್ರ ಖಂಡನೆ ವ್ಯಕ್ತವಾಗಿದೆ. ರಾಜ್ ಠಾಕ್ರೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸೂಚನೆಯನ್ನು ದೆಹಲಿ ಕಾಂಗ್ರೆಸ್ ನೀಡಿದೆ. ಅದೇ ವೇಳೆ, ಪ್ರಕರಣದ ವಿಡಿಯೋ ಚಿತ್ರಿಕೆ ವೀಕ್ಷಿಸಿದ ನಂತರ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಮುಖ್ಯಮಂತ್ರಿ ಅಶೋಕ್ ಚವಾಣ್ ತಿಳಿಸಿದ್ದಾರೆ. ಇದು ಶಾಸಕರು ಸದನದಲ್ಲಿ ನಡೆಸಿದ ಗೂಂಡಾಗಿರಿ ಎಂದೂ ಚವಾಣ್ ಹೇಳಿದ್ದಾರೆ.
ಮೊದಲೇ ಎಚ್ಚರಿಕೆ ನೀಡಿತ್ತು!: ಎಲ್ಲಾ ೨೮೭ ಶಾಸಕರೂ ಸೋಮವಾರ ಮರಾಠಿಯಲ್ಲೇ ಪ್ರಮಾಣವಚನ ಸ್ವೀಕರಿಸಬೇಕು. ಇಲ್ಲವಾದರೆ ಪರಿಸ್ಥಿತಿ ಎದುರಿಸಲು ಸಿದ್ಧರಾಗಿರಬೇಕು ಎಂದು ಈ ಹಿಂದೆಯೇ ರಾಜ್ ಠಾಕ್ರೆ ಎಚ್ಚರಿಕೆ ನೀಡಿದ್ದರು. ಆದರೆ, ಕಾಂಗ್ರೆಸ್ ಶಾಸಕ ಸಿದ್ದಿಖಿ ಇಂಗ್ಲಿಷ್‌ನಲ್ಲೂ, ಬಿಜೆಪಿಯ ಗಿರೀಶ್ ಮಹಾಜನ್ ಸಂಸ್ಕೃತದಲ್ಲೂ ಶಪಥ ಪಠಿಸಿದರು. ಆಗ ಸುಮ್ಮನಿದ್ದ ಎಂಎನ್‌ಎಸ್ ಸದಸ್ಯರು ಅಜ್ಮಿ ಹಿಂದಿಯಲ್ಲಿ ಪ್ರಮಾಣವಚನ ಆರಂಭಿಸಿದಂತೆ ಮುಗಿಬಿದ್ದು ಕೋಲಾಹಲ ಸೃಷ್ಟಿಸಿದರು.
ಮುಂಬೈ ಸುತ್ತಮುತ್ತ ಹಿಂಸಾತ್ಮಕ ಪ್ರತಿಭಟನೆ
ಮುಂಬೈ: ಅಜ್ಮಿ ಮೇಲಿನ ಹಲ್ಲೆಯಿಂದ ಮಹಾರಾಷ್ಟ್ರದ ವಿವಿಧೆಡೆ ಹಿಂಸಾತ್ಮಕ ಪ್ರತಿಭಟನೆಗಳು ಆರಂಭವಾಗಿವೆ. ಸಮಾಜವಾದಿ ಪಕ್ಷದ ಕಾರ್ಯಕರ್ತರು ಹಲ್ಲೆ ಖಂಡಿಸಿ ಮುಂಬೈನ ಶಿವಾಜಿನಗರ, ಹೊರವಲಯದ ಥಾಣೆ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಆಗ ಕಲ್ಲು ತೂರಾಟ, ಲಾಠಿ ಪ್ರಹಾರ ನಡೆದಿದೆ. ಪುಣೆ ಹಾಗೂ ನಾಸಿಕ್‌ನಲ್ಲಿ ಎಂಎನ್‌ಎಸ್ ಕಾರ್ಯಕರ್ತರೂ ಅಜ್ಮಿ ಅವರ ಪ್ರತಿಕೃತಿ ದಹಿಸಿ ಪ್ರತಿಭಟಿಸಿದ್ದಾರೆ.
ನಡೆದಿದ್ದೇನು?
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಹೊಸ ಸರ್ಕಾರದ ಶಾಸಕರು ಪ್ರಮಾಣ ವಚನ ಸ್ವೀಕರಿಸುತ್ತಿದ್ದರು. ಎಸ್ಪಿ ಶಾಸಕ ಅಬು ಆಜ್ಮಿ ಹಿಂದಿ ಯಲ್ಲಿ ಪ್ರಮಾಣವಚನ ಸ್ವೀಕರಿಸಲು ಆರಂಭಿಸಿದರು. ತಕ್ಷಣ ಎಂಎನ್ನೆಎಸ್ ಶಾಸಕರು ಮರಾಠಿಯಲ್ಲಿ ಶಪಥಗೈಯುವಂತೆ ಆಗ್ರಹಿಸಿ ಸದನದ ಬಾವಿಗೆ ನುಗ್ಗಿದರು. ಅವರ ಮುಂದಿದ್ದ ಮೈಕ್ ಕಿತ್ತೆಸೆದು, ಹಲ್ಲೆ ನಡೆಸಿ ದರು. ಬಳಿಕ ಸಸ್ಪೆಂಡ್ ಆದರು.
ನನಗೆ ಮರಾಠಿ ಬರಲ್ಲ, ಹಾಗಾಗಿ ಹಿಂದಿ ಬಳಸಿದೆ. ನನ್ನ ತಾಯಿಯಷ್ಟೇ ಮರಾಠಿಯನ್ನು ಗೌರವಿಸುವೆ.
-ಅಬು ಅಜ್ಮಿ, ಎಸ್ಪಿ ಶಾಸಕ
ಮರಾಠಿ ಬರಲ್ಲ ಎಂಬ ಅಜ್ಮಿ ಸಬೂಬು ಒಪ್ಪಲಾಗದು. ಇಷ್ಟು ದಿನಗಳಾದರೂ ನಾಲ್ಕು ಸಾಲು ಮರಾಠಿ ಕಲಿಯಲು ಅವರಿಗೇನಾಗಿತ್ತು?
-ರಾಮ್ ಕದಮ್, ಎಮ್ಮೆನ್ನೆಸ್
ಸೌಜನ್ಯ: ಕನ್ನಡಪ್ರಭ