ಬೆಂಗಳೂರು, ಡಿ.೬ ಮುಂದಿನ ಶೈಕ್ಷಣಿಕ ವರ್ಷದಿಂದಲೂ ‘ಕಂಗ್ಲಿಷ್’ ಶಾಲೆಗಳು ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮದಲ್ಲೇ ಶಿಕ್ಷಣ ನೀಡುತ್ತವೆ. ಆದರೆ, ಇದಕ್ಕೆ ಸರ್ಕಾರದ ಅನುಮತಿ ಇರುವುದಿಲ್ಲ.
ಸರ್ಕಾರದ ಅನುಮತಿ ಇಲ್ಲದಿದ್ದರೂ ಹೈಕೋರ್ಟ್ ಪೂರ್ಣ ಪೀಠದ ತೀರ್ಪು ತಮ್ಮ ಪರವಾಗಿದೆ. ಇದಕ್ಕೆ ಸುಪ್ರೀಂ ಕೋರ್ಟ್ ಕೂಡ ತಡೆಯಾಜ್ಞೆ ನೀಡಿಲ್ಲ ಎಂಬ ಕಾರಣದಿಂದಾಗಿ ಆಂಗ್ಲ ಮಾಧ್ಯಮದಲ್ಲೇ ತರಗತಿಗಳನ್ನು ಮುಂದುವರೆಸಲು ಖಾಸಗಿ ಶಾಲಾ ಆಡಳಿತ ಮಂಡಳಿಗಳು ನಿರ್ಧರಿಸಿವೆ.
ಖಾಸಗಿ ಶಾಲೆಗಳು ಕನ್ನಡ ಮಾಧ್ಯಮಕ್ಕೆ ಸರ್ಕಾರದಿಂದ ಅನುಮತಿ ಪಡೆದು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿವೆ ಎಂಬ ಕಾರಣಕ್ಕೆ ಅವು ಈಗಲೂ ಕಂಗ್ಲಿಷ್ ಶಾಲೆಗಳಾಗಿಯೇ ಉಳಿದಿವೆ. ಏಕೆಂದರೆ ಯಾವುದೇ ಶಾಲೆಗಳಿಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಸರ್ಕಾರ ಇನ್ನೂ ಅನುಮತಿ ನೀಡಿಲ್ಲ. ಆದರೂ ಸರ್ಕಾರಕ್ಕೆ ಸೆಡ್ಡು ಹೊಡೆದಿರುವ ಈ ಶಾಲೆಗಳು ಆಂಗ್ಲ ಮಾಧ್ಯಮದಲ್ಲೇ ತರಗತಿ ನಡೆಸಲು ಮುಂದಾಗಿವೆ.
ಇವಿಷ್ಟು ವಿವಾದದ ಹಿನ್ನೆಲೆ: ಒಂದನೇ ತರಗತಿಯಿಂದ ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕೆಂಬ ರಾಜ್ಯ ಸರ್ಕಾರದ ಭಾಷಾ ನೀತಿಯನ್ನು ಹೈಕೋರ್ಟ್ ಪೂರ್ಣ ಪೀಠ ರದ್ದುಪಡಿಸಿದೆ. ಸುಪ್ರೀಂ ಕೋರ್ಟ್ ಕೂಡ ಈ ತೀರ್ಪಿಗೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ.
ಈ ಮಧ್ಯೆ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುವವರಿಗೆ ಪೂರ್ಣ ಪೀಠದ ತೀರ್ಪಿನ ಅನ್ವಯ ಅನುಮತಿ ನೀಡಬೇಕೆಂದು ಹೈಕೋರ್ಟ್ ಹಲವಾರು ಬಾರಿ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆದರೂ ಆಂಗ್ಲ ಮಾಧ್ಯಮ ಶಾಲೆಗಳಿಗೆ ಅನುಮತಿ ನೀಡದ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣಗಳು ದಾಖಲಾಗಿವೆ. ಇದಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.
ಫೆಬ್ರವರಿಯಲ್ಲಿ ಅಂತಿಮ ವಿಚಾರಣೆ: ಈ ಮಧ್ಯೆ ಒಂದನೇ ತರಗತಿಯಿಂದ ಮಾತೃಭಾಷಾ ಮಾಧ್ಯಮದಲ್ಲೇ ಶಿಕ್ಷಣ ನೀಡಬೇಕೆಂಬ ಆದೇಶ ರದ್ದುಗೊಳಿಸಿದ ಹೈಕೋರ್ಟ್ ಪೂರ್ಣ ಪೀಠದ ತೀರ್ಪಿನ ವಿರುದ್ಧ ಸರ್ಕಾರ ಸಲ್ಲಿಸಿರುವ ವಿಶೇಷ ಮೇಲ್ಮನವಿಯ ಅಂತಿಮ ವಿಚಾರಣೆಯನ್ನು ಫೆಬ್ರವರಿಯಲ್ಲಿ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಒಂದು ವೇಳೆ ಫೆಬ್ರವರಿಯಲ್ಲಿ ಸುಪ್ರಿಂ ಕೋರ್ಟ್ ವಿಚಾರಣೆ ಪೂರ್ಣಗೊಳಿಸಿ ಯಾವುದೇ ತೀರ್ಪು ನೀಡಿದರೂ, ಈಗಾಗಲೇ ಕನ್ನಡ ಮಾಧ್ಯಮದಲ್ಲಿ ಅನುಮತಿ ಪಡೆದು ಆಂಗ್ಲ ಮಾಧ್ಯಮದಲ್ಲಿ ತರಗತಿಗಳನ್ನು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು ಹೊಸದಾಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಅನುಮತಿ ಪಡೆಯಲೇಬೇಕು.
ರಾಜ್ಯ ಸರ್ಕಾರ ಅಸಹಾಯಕ: ಇಷ್ಟೆಲ್ಲಾ ಇದ್ದರೂ ಕನ್ನಡ ಮಾಧ್ಯಮಕ್ಕೆ ಅನುಮತಿ ಪಡೆದು ಆಂಗ್ಲ ಮಾಧ್ಯಮದಲ್ಲಿ ತರಗತಿ ನಡೆಸುತ್ತಿರುವ ಖಾಸಗಿ ಆಡಳಿತ ಮಂಡಳಿಗಳ ಮಾನ್ಯತೆ ರದ್ದುಗೊಳಿಸಿದರೂ ಹೈಕೋರ್ಟ್ ಮಾನ್ಯತೆ ರದ್ದು ಆದೇಶವನ್ನು ವಜಾ ಮಾಡಿ ಹೊಸದಾಗಿ ಅನುಮತಿ ನೀಡುವಂತೆ ಆದೇಶಿಸಿದೆ. ಹೀಗಾಗಿ ತಪ್ಪು ಮಾಡಿದರೂ ಶಿಕ್ಷಣ ಸಂಸ್ಥೆಗಳು ಪಾರಾಗುತ್ತಿದ್ದು, ಇದನ್ನು ನೋಡಿಯೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ಸರ್ಕಾರವಿದೆ.
೨೦೧೦-೧೧ನೇ ಶೈಕ್ಷಣಿಕ ಸಾಲಿನಿಂದ ತರಗತಿಗಳನ್ನು ನಡೆಸಬೇಕಾದರೆ ಅದಕ್ಕೆ ೨೦೦೯ರ ಅ.೩೧ರೊಳಗೆ ಸರ್ಕಾರದಿಂದ ಅನುಮತಿ ಪಡೆಯಬೇಕು. ಆದರೆ, ಇದುವರೆಗೆ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸರ್ಕಾರ ಅನುಮತಿ ನೀಡಿಲ್ಲ. ಒಂದು ವೇಳೆ ಸುಪ್ರೀಂ ಕೋರ್ಟ್ ೨೦೧೦-೧೧ನೇ ಸಾಲಿನಿಂದ ಆಂಗ್ಲ ಮಾಧ್ಯಮ ಶಾಲೆಗಳಿಗೆ ಅನುಮತಿ ನೀಡುವಂತೆ ಆದೇಶಿಸಿದರೆ ಸರ್ಕಾರ ಈ ಆದೇಶ ಪಾಲಿಸಬೇಕು. ಇಲ್ಲವಾದಲ್ಲಿ ಕಾನೂನು ಪ್ರಕಾರ ೨೦೧೧ನೇ ಸಾಲಿನಿಂದಲೇ ಆಂಗ್ಲ ಮಾಧ್ಯಮ ತರಗತಿ ಆರಂಭಿಸಬೇಕಾಗುತ್ತದೆ.
ಇಷ್ಟಾದರೂ ಪೋಷಕರ ಬೆಂಬಲ ಹಾಗೂ ನ್ಯಾಯಾಲಯದ ತೀರ್ಪಿನ ನೆರಳಲ್ಲಿ ಖಾಸಗಿ ಆಡಳಿತ ಮಂಡಳಿಗಳು ೨೦೧೦-೧೧ನೇ ಸಾಲಿನಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ಮುಂದುವರೆಸಲು ನಿರ್ಧರಿಸಿವೆ. ಸರ್ಕಾರ ಮಾತ್ರ ಏನೂ ಮಾಡಲು ಸಾಧ್ಯವಾಗದೆ ಕೈ ಕೈ ಹಿಸುಕಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿದೆ.
ಪ್ರತಿಕ್ರಿಯೆಗಳು
ಸರ್ಕಾರದ ಭಾಷಾ ಮಾಧ್ಯಮ ನೀತಿಯನ್ನು ಹೈಕೋರ್ಟ್ ಪೂರ್ಣಪೀಠ ರದ್ದುಗೊಳಿಸಿದೆ. ಸುಪ್ರೀಂ ಕೋರ್ಟ್ ಇದಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಹೀಗಾಗಿ ೨೦೧೦-೧೧ನೇ ಸಾಲಿನಲ್ಲೂ ಆಂಗ್ಲ ಮಾಧ್ಯಮ ತರಗತಿಗಳನ್ನೇ ಮುಂದುವರೆಸಲಾಗುವುದು.
-ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಒಕ್ಕೂಟ
-----
ಸರ್ಕಾರ ಒಂದನೇ ತರಗತಿಯಿಂದ ಆಂಗ್ಲ ಶಿಕ್ಷಣಕ್ಕೆ ಅನುಮತಿ ನೀಡಿಲ್ಲ. ಹೀಗಿರುವಾಗ ಕಾನೂನು ಉಲ್ಲಂಘಿಸಿ ಶಾಲೆ ನಡೆಸಲು ಹೇಗೆ ಸಾಧ್ಯ? ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು.
-ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು.
ಸೌಜನ್ಯ:-ಪ್ರದೀಪ್ಕುಮಾರ್ ಎಂ., ಕನ್ನಡಪ್ರಭ