ಬೆಂಗಳೂರು, ಜನವರಿ 4:ಸದಾನಂದಗೌಡರಿಂದ ತೆರವಾಗುತ್ತಿರುವ ರಾಜ್ಯ ಬಿಜೆಪಿ ಪಕ್ಷದ ನೊಗ ಹೊರಲು ಈ ತಿಂಗಳ 27 ರಂದು ನೂತನ ಸಾರಥಿಯ ಆಗಮನವಾಗಲಿದೆ.
ಸ್ವತ: ಈ ವಿಷಯ ತಿಳಿಸಿದ ಪಕ್ಷದ ರಾಜ್ಯಾಧ್ಯಕ್ಷ ಸದಾನಂದಗೌಡ ರಾಜ್ಯ ಬಿಜೆಪಿ ನೂತನ ಅಧ್ಯಕ್ಷರ ಚುನಾವಣೆ ಈ ತಿಂಗಳ 27 ರಂದು ನಡೆಯಲಿದೆ. ಅಂದು ಹೊಸ ಅಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ ಎಂದು ಹೇಳಿದರು.
ಅಧ್ಯಕ್ಷ ಆಯ್ಕೆ ಪ್ರಕ್ರಿಯೆ ಡಿಸೆಂಬರ್‌ನಲ್ಲೇ ಪೂರ್ಣಗೊಳ್ಳಬೇಕಿತ್ತು. ವಿಧಾನಪರಿಷತ್ ಚುನಾವಣೆ ಕಾರಣ ಒಂದು ತಿಂಗಳ ತಡವಾಗಿದೆ, 27 ರಂದು ಹೊಸ ಅಧ್ಯಕ್ಷರು ಬರುವುದು ಖಚಿತ ಎಂದು ಹೇಳಿದರು.
ಈಗಿನ ನಿಗಮ-ಮಂಡಳಿಗಳ ಅಧ್ಯಕ್ಷರ ರಾಜೀನಾಮೆ ಪಡೆದು ಹೊಸದಾಗಿ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು. ನಿಗಮ-ಮಂಡಳಿ ಅಧ್ಯಕ್ಷರ ನೇಮಕಾತಿ ಸಂದರ್ಭದಲ್ಲಿ ಹಿರಿಯ ಶಾಸಕರಿಗೆ ಹೆಚ್ಚಿನ ಆಧ್ಯತೆ ನೀಡುವುದಾಗಿ ಅವರು ಹೇಳಿದರು.