ಕಾರವಾರ : ಜಿಲ್ಲೆಯಲ್ಲಿ ಪ್ರವಾಸೋದ್ಯಮ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸಲು ವಿವಿಧ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಜೊತೆಗೆ ಜಿಲ್ಲಾಡಳಿತವು ಸಮನ್ವಯತೆಯಿಂದ ಕಾರ್ಯನಿರ್ವಸುತ್ತದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಅಲಗೇರಿ ನಾಗರಿಕ ವಿಮಾನ ನಿಲ್ದಾಣ ಹಾಗೂ ತದಡಿ ಬಂದರು ಯೋಜನೆಯ ಕಾರ್ಯಾನುಷ್ಠಾನದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾರವಾರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ದೃಷ್ಠಿಯಿಂದ ಜಿಲ್ಲೆಯಲ್ಲಿ ನಾಗರಿಕ ವಿಮಾನ ನಿಲ್ದಾಣ ಹಾಗೂ ಇಕೋ-ಟೂರಿಸಂ ಗೆ ಪ್ರಾಶಸ್ತ್ಯ ನೀಡಲಾಗುತ್ತಿದ್ದು, ಇದರಿಂದ ಜಿಲ್ಲೆಯಲ್ಲಿ ಮನೋರಂಜನೆ, ಉದ್ಯೋಗ ಇನ್ನಿತರ ಚಟುವಟಿಕೆ ನಡೆಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಯೋಜನೆಯಿಂದ ಕೆಲವು ಗ್ರಾಮಗಳು ಅನಾನುಕೂಲಕ್ಕೆ ಒಳಗಾಗಬಹುದು ಆದ್ದರಿಂದ ಅಂತಹ ಗ್ರಾಮಗಳ ಸ್ಥಳಾಂತರ ಹಾಗೂ ಬದಲಿ ಜಾಗದ ವ್ಯವಸ್ಥೆ ಮತ್ತು ಪರಿಹಾರ ಕಲ್ಪಿಸಲಾಗುವುದು. ಯೋಜನೆಯಿಂದ ರಸ್ತೆ ಪಥಗಳು ಬದಲಾವಣೆ ಸಾದ್ಯತೆ ಇರುವುದರಿಂದ ಕಂದಾಯ ಇಲಾಖೆ, ಅರಣ್ಯ ಇಲಾಖೆ, ಭೂ ದಾಖಲೆ ಮತ್ತು ಮಾಪನ ಇಲಾಖೆ ಹಾಗೂ ನೇವಲ್ ಸಿಬ್ಬಂದಿಗಳು ಜೊತೆಗೂಡಿ ಸರ್ವೇ ಕಾರ್ಯವನ್ನು ಕೈಗೊಳ್ಳಬೇಕು, ಮಿಸ್ಸಿಂಗ್ ಸರ್ವೇ ನಂಬರನ್ನು ಗುರುತಿಸಿ ವರದಿ ನೀಡುವ ಕಾರ್ಯವಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತದಡಿ ಇಕೋ-ಟೂರಿಸಂ ಹಬ್ ಯೋಜನೆಗೆ ಸಂಬಂಧಿಸಿದಂತೆ 4 ಇಲಾಖೆ ಅಧಿಕಾರಿಗಳು ಜಾಗೆಗಳ ದಾಖಲೆ ಸಂಗ್ರಹಿಸಿ ಸರ್ವೇ ಮಾಡಿಸಬೇಕು.
ಯೋಜನೆಯಿಂದ ಬಾಧಿತವಾಗುವ ಹಳ್ಳಿಗಳ ಗಡಿರೇಖೆ ಗುರ್ತಿಸುವ ಕೆಲಸವಾಗಬೇಕು. ಸರ್ವೇ ಮಾಡಲು ಅನುಕೂಲವಿರುವ ಪ್ರದೇಶಗಳನ್ನು ಮೊದಲು ಸರ್ವೇ ಮಾಡಿ ತದನಂತರ ಸರ್ವೇಗೆ ಅನಾನುಕೂಲವಿರುವ ಪ್ರದೇಶಗಳನ್ನು ಪರ್ಯಾಯ ವ್ಯವಸ್ಥೆ ಜಿಪಿಎಸ್ ಮ್ಯಾಪಿಂಗ್ ಮೂಲಕ ಸರ್ವೇ ಮಾಡಬೇಕು. ಇಕ್ಕಟ್ಟಾದ ರಸ್ತೆಗಳನ್ನು ಅಗಲಿಸುವ ಕಾರ್ಯ ಮಾಡಬೇಕು ಇದರಿಂದ ಜಿಲ್ಲೆಯ ಜನತೆಗೆ ಅಷ್ಟೇ ಅಲ್ಲದೇ ಪ್ರವಾಸಿಗರಿಗೂ ಅನುಕೂಲವಾಗಲಿದ್ದು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳೆಯಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.
ಬಳಿಕ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಡಾ. ಶೈಲೇಂದ್ರ. ಕೆ. ಬೆಲ್ದಾಳೆ ಮಾತನಾಡಿ, ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಹಾಗೂ ಇಕೋ- ಟೂರಿಸಂಗೆ ಬೆಂಬಲಿಸುವುದರಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಜೊತೆಗೆ ಜಿಲ್ಲೆಯ ಜನತೆಗೆ ಉದ್ಯೋಗ, ಮನೋರಂಜನೆ, ಮೂಲಭೂತ ಸೌಲಭ್ಯಗಳು ದೊರೆಯಲಿವೆ. ಉತ್ತರ ಕನ್ನಡದ ಕಾರವಾರದಿಂದಲೇ ಪ್ರವಾಸೋದ್ಯಮ ಚಟುವಟಿಕೆ ಪ್ರಾರಂಭವಾದರೆ ಜಿಲ್ಲೆಗೆ ಹೆಚ್ಚು ಅನುಕೂಲವಾಗುತ್ತದೆ. ಬೇರೆ ಬೇರೆ ಪ್ರದೇಶಗಳಿಂದ ಕಾರವಾರಕ್ಕೆ ಅಥವಾ ಜಿಲ್ಲೆಗೆ ಬರಬೇಕಾದರೆ ಅನ್ಯ ರಾಜ್ಯದ ಮೂಲಕ ಜಿಲ್ಲೆ ಪ್ರವೇಶಿಸುವ ಬವಣೆ ತಪ್ಪಲಿದೆ ಎಂದು ತಿಳಿಸಿದ ಅವರು ಜಿಲ್ಲೆಗೆ ಡಿಸ್ನಿಲ್ಯಾಂಡ್, ಇಕೋ-ಟೂರಿಸಮ್ ಹಬ್, ಗಾರ್ಡನ್ನಂತಹ ಯೋಜನೆಯನ್ನು ಜಿಲ್ಲೆಗೆ ತರುವ ಉದ್ದೇಶವಿದ್ದು ಪ್ರವಾಸೋದ್ಯಮವನ್ನು ಉತ್ತೇಜಿಸಲು ಎಲ್ಲ ರೀತಿಯ ಕ್ರಮವನ್ನು ವಹಿಸಲಾಗುವುದೆಂದು ಹೇಳಿದರು.
ಸಭೆಯಲ್ಲಿ ಕೆಎಸ್ಐಐಡಿಸಿ ವ್ಯವಸ್ಥಾಪಕ ಡಾ. ಎಂ.ಆರ್. ರವಿ, ಕೆಎಸ್ಐಐಡಿಸಿ ಈಡಿ ಡಿ.ಪಿ. ಪ್ರಕಾಶ, ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.