ಚಿಕ್ಕಬಳ್ಳಾಪುರ ಡಿ.5 : ಹಲವಾರು ಶೈಕ್ಷಣಿಕ ಕನಸುಗಳನ್ನು ಹೊತ್ತು ಚಿಕ್ಕಬಳ್ಳಾಪುರದ ಡಿ.ಡಿ.ಪಿ.ಐ ಉಪನಿರ್ದೇಶಕನಾಗಿ ಅಧಿಕಾರ ವಹಿಸಿಕೊಂಡ ನನಗೆ ಇಂದಿನ ಶಿಕ್ಷಕ ಸಮುದಾಯದ ಅತಿ ಹೆಚ್ಚಿನ ಸಹಕಾರದಿಂದಾಗಿ ಜಿಲ್ಲೆಯಲ್ಲಿ ಪ್ರಗತಿ ಸಾಧಿಸಿದ್ದೇ ಅಲ್ಲದೆ ನನ್ನ ಕನಸುಗಳನ್ನು ನನಸಾಗಿಸಿಕೊಳ್ಳಲು ಚಿಕ್ಕಬಳ್ಳಾಪುರ ಜಿಲ್ಲೆ ಸಹಕಾರಿಯಾಗಿದ್ದಿದು ಅತೀವ ಸಂತಸವನ್ನು ತಂದಿದೆ ಎಂದು ಇಲ್ಲಿಂದ ದಾವಣಗೆರೆ ಜಿಲ್ಲೆಗೆ ವರ್ಗಾವಣೆಗೊಂಡಿರುವ ಉಪನಿರ್ದೇಶಕ ಬೆಳ್ಳಶಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.
ಅವರು ಇಂದು ಡಿ.ಡಿ.ಪಿ.ಐ ಅಖೇರಿಯ ಸಿಬ್ಬಂದಿಯ ವತಿಯಿಂದ ಡಿ.ಡಿ.ಪಿ.ಐ ಕಛೇರಿಯಲ್ಲಿ ಏರ್ಪಡಿಸಿದ್ದ ಬೀಳ್ಕೊಡಿಗೆ ಸಮಾರಂಭದಲ್ಲಿ ಮಾತನಾಡುತ್ತಾ, ನನ್ನ ಶೈಕ್ಷಣಿಕ ಪ್ರಗತಿಯ ಕನಸುಗಳ ಸಾಕಾರದ ಪ್ರಯೋಗಕ್ಕಾಗಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ನಾನು ಬಳಸಿಕೊಂಡಿದ್ದು, ಯಾವುದೇ ಭೋದಕ ಅಥವಾ ಬೋದಕೇತರ ಸಿಬ್ಬಂದಿ ಬೇಸರವನ್ನು ತೋರ್ಪಡಿಸದೇ ನನ್ನ ಯೋಜನೆಗಳಿಗೆ ಸ್ಪಂಧಿಸಿದ್ದು, ರಾಜ್ಯ ಮಾದರಿಯಾಗಲು ಕಾರಣ ಕರ್ತರಾಗಿದ್ದಾರೆ. ಇಂತಹ ಜಿಲ್ಲೆಯನ್ನು ಬಿಟ್ಟು ಹೋಗಲು ಮನಸಿಲ್ಲದಿದ್ದರೂ ಸಹ ಸರಕಾರಿ ಆದೇಶಕ್ಕೆ ಓಗುಟ್ಟು ನಾನು ಇಲ್ಲಿಂದ ನಿರ್ಗಮಿಸಬೇಕಾಗಿದೆ ಎಂದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗಗಳ ಜನಾಂಗದ ಮಕ್ಕಳೇ ಹೆಚ್ಚಾಗಿರುವ ಈ ಜಿಲ್ಲೆಯಲ್ಲಿ ಪ್ರತಿಯೊಬ್ಬ ಅಧಿಕಾರಿಯ ಹೆಚ್ಚಿನ ಶ್ರಮ ಅತ್ಯಗತ್ಯವಾಗಿದೆ ಎಂದು ಅವರು ನಮ್ಮ ಈಗಿನ ಶ್ರಮವನ್ನು ಈಗಲೇ ಪಡೆಯುವುದು ಅಸಾಧ್ಯದ ಮಾತಾಗಿದ್ದು, ಮುಂದಿನ ದಿನಗಳಲ್ಲಿ ಇದರ ಫಲವನ್ನು ಕಾಣ ಬಹುದಾಗಿದೆ ಎಂದು ಬೆಳ್ಳಶೆಟ್ಟಿ ಅಭಿಪ್ರಾಯಪಟ್ಟರು.
ನೂತನ ಉಪನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿರುವ ಸಿ.ಯು.ಚಂದ್ರಶೇಖರ್ ಮಾತನಾಡಿ, ಬೆಳ್ಳಶೆಟ್ಟಿಯವರು ನೂತನವಾಗಿ ಜಿಲ್ಲೆಯಾಗಿ ರೂಪಾಂತರಗೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಅಭಿವೃದ್ದಿಗೆ ಸಾಕಷ್ಟು ಶ್ರಮಿಸಿದ್ದು, ಇನ್ನೂ ಕೆಲಕಾಲ ಅವರ ಸೇವೆ ಈ ಜಿಲ್ಲೆಗೆ ಅವಶ್ಯಕವಾಗಿತ್ತೆಂಬುದು ನನ್ನ ಅಭಿಪ್ರಾಯವಾಗಿದೆ. ನಿವೃತ್ತಿಯ ಆಸುಪಾಸಿನಲ್ಲಿರುವ ನನ್ನ ಸೇವೆಗಿಂತ ಅಭಿವೃದ್ದಿಯನ್ನೇ ಕನಸಾಗಿಸಿಕೊಂರುವ ಬೆಳ್ಳಶೆಟ್ಟಿಯವರ ಸೇವೆ ಈ ಜಿಲ್ಲೆಗೆ ಪೂರಕಾಗಿತ್ತೆಂದು ಅಭಿಪ್ರಾಯಪಟ್ಟರು.
ನಾನೂ ಸಹ ಪ್ರಗತಿಯನ್ನೇ ಗುರಿಯನ್ನಾಗಿಟ್ಟುಕೊಂಡು ಕಾರ್ಯ ನಿರ್ವಹಿಸುವುದಾಗಿಯೂ ಆದರೆ ನಮ್ಮಿಬ್ಬರ ಕಾರ್ಯ ವೈಕರಿಯು ವ್ಯತ್ಯಾಸವಾಗಬಹುದಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ವರ್ಗಾವಣೆಗೊಂಡಿರುವ ಬೆಳ್ಳಶೆಟ್ಟಿರವರನ್ನು ಕಛೇರಿ ಸಿಬ್ಬಂದಿ ಶಾಲು ಹೊದಿಸಿ ಸನ್ಮಾನಿಸುವುದುರ ಮೂಲಕ ಬೀಳ್ಕೊಟ್ಟು ನೂತನ ಡಿ.ಡಿ.ಪಿ.ಐ ಸಿ.ಯು.ಚಂದ್ರಶೇಖರ್ರವರನ್ನು ಸ್ವಾಗತಿಸಿದರು.
ಚಾಲಕನಿಗೂ ಸಹ ಕೃತಜ್ಞತೆ ಸಲ್ಲಿಸಿದ ಬೆಳ್ಳಶೆಟ್ಟಿ : ಕಾರ್ಯದ ವತಿಯಿಂದ ನನ್ನ ಪಾಲಿನ ರಜೆಯನ್ನೂ ಹಾಕದೇ ಕಾರ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಈ ನೂತನ ಜಿಲ್ಲೆಯಲ್ಲಿದ್ದು, ಅದನ್ನೂ ನಿರ್ವಹಿಸುವ ಕೆಲವು ಸಂದರ್ಭಗಳಲ್ಲಿ ಹಗಲು ರಾತ್ರಿ ದುಡಿಯಬೇಕಾದ ಪರಿಸ್ಥಿತಿಯಿದ್ದು ವಾಹನ ಚಾಲಕರಾಗಲೀ, ಸಿಬ್ಬಂದಿಯಾಗಲೀ ಒಂದಿಷ್ಟು ಬೇಸರಿಸಿಕೊಳ್ಳದೆ ಸಹಕಾರ ನೀಡಿದ್ದು, ನಾನು ನನ್ನ ಕೆಲಸದಲ್ಲಿ ಯಶಸ್ವಿಯಾಗಲು ಕಾರಣವಾಯಿತು. ಈ ಸಂದರ್ಭದಲ್ಲಿ ಚಾಲಕ ಲಕ್ಷ್ಮಣ್ ಸಹ ಮಧ್ಯ ರಾತ್ರಿಯವರೆಗೆ ನನ್ನೊಂದಿಗಿದ್ದು, ಕಾರ್ಯ ನಿರ್ವಹಣೆಗೆ ಸಹಕಾರ ನೀಡಿದ್ದಾರೆಂದು ಬೆಳ್ಳಶೆಟ್ಟಿ ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು. ಪತ್ರಾಂಕಿತ ವ್ಯವಸ್ಥಾಪಕರಾದ ಮುನಿಕೃಷ್ಣಯ್ಯ ಸ್ವಾಗತಿಸಿ, ನಿರೂಪಿಸಿದರು. ವಿಷಯ ಪರಿವೀಕ್ಷಕ ಉಸ್ಮಾನ್ ಸಾಬ್ ವಂದಿಸಿದರು.
ಕಾಂಗ್ರೇಸ್ ಮುಖಂಡ ಯಲುವಹಳ್ಳಿ ಎನ್.ರಮೇಶ್ ಹೂ ಮಾಲೆ ಹಾಕಿ ಅಭಿನಂದಿಸಿದರು.