| ಕೃಷಿ ಬಿಕ್ಕಟ್ಟು ಮುಗಿದು ಹೋಗಿದೆ. ರೈತರ ಆತ್ಮಹತ್ಯೆಗಳೂ ಕಡಿಮೆಯಾಗಿವೆ ಎಂಬ ಭಾವನೆ ಸಾಮಾನ್ಯವಾಗಿ ಅಲ್ಲಲ್ಲಿ ವ್ಯಕ್ತವಾಗುತ್ತಿದೆ. ಆಳುವ ಸರ್ಕಾರಗಳು ಸಾಮಾನ್ಯವಾಗಿ ಇಂತಹ ಭಾವನೆಯನ್ನು ಪೋಷಿಸುತ್ತವೆ. ವಾಸ್ತವಿಕವಾಗಿ ರೈತರ ಆತ್ಮಹತ್ಯೆಗಳ ಸರಣಿ ನಿಂತಿಲ್ಲ. ಅವ್ಯಾಹತವಾಗಿ ಮುಂದುವರಿದೇ ಇದೆ. ರೈತರ ಆತ್ಮಹತ್ಯೆಗಳ ಪ್ರಶ್ನೆಯಲ್ಲಿ ಕರ್ನಾಟಕವು ಪ್ರಥಮ ಸ್ಥಾನಕ್ಕೆ ಬಂದು ನಿಂತಿದೆ ಎನ್ನುವುದು ಆಘಾತಕರ ಸಂಗತಿಯಾಗಿದೆ. ಈ ಕುರಿತು ಓದಿ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಪಿ.ಸಾಯಿನಾಥ್ರ ಲೇಖನ. |
ರಾಷ್ಟ್ರೀಯ ಅಪರಾಧ ದಾಖಲೆ ಕೇಂದ್ರ (ಎನ್ ಸಿಆರ‍್ಬಿ) ದಾಖಲೆಗಳ ಪ್ರಕಾರ ರೈತರ ಸಾಲ ಮನ್ನಾ ಮಾಡಿದ 2008ರ ವರ್ಷದಲ್ಲಿ ದೇಶದಲ್ಲಿ 16,196 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2007ರ ವರ್ಷಕ್ಕೆ ಹೋಲಿಸಿದರೆ 436 ಆತ್ಮಹತ್ಯೆಗಳು ಮಾತ್ರ ಕಡಿಮೆಯಾಗಿವೆ. `ಈ ಸಂಖ್ಯೆ ಸಮಾಧಾನವಾಗಿರಲು ಎಳ್ಳಷ್ಟೂ ಅವಕಾಶ ನೀಡಿಲ್ಲ ಮತ್ತು ಯಾರೂ ಸಹ ಬೆನ್ನು ತಟ್ಟಿಕೊಳ್ಳುವಂತಿಲ್ಲ' ಎಂದು ಕೃಷಿ ಕ್ಷೇತ್ರದಲ್ಲಿನ ಆತ್ಮಹತ್ಯೆ ಅಂಕಿಅಂಶಗಳಿಗೆ ಸಂಬಂಸಿದಂತೆ ಆಳವಾದ ಅಧ್ಯಯನದಲ್ಲಿ ತೊಡಗಿರುವ ಆರ್ಥಿಕ ತಜ್ಞರಾದ ಕೆ.ನಾಗರಾಜ್ ಹೇಳಿದ್ದಾರೆ. 1990ರಲ್ಲಿದ್ದ ಮತ್ತು 2002ರ ನಂತರದಲ್ಲಿ ಇನ್ನಷ್ಟು ಭೀಕರಗೊಂಡ ರೈತರ ಆತ್ಮಹತ್ಯೆಗಳ ಈ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ. ಅತ್ಯಂತ ನೋವನ್ನು ಉಂಟು ಮಾಡುವ ಸತ್ಯ ಏನೆಂದರೆ, ಈ ಆತ್ಮಹತ್ಯೆಗಳು ಈಗಲೂ ವೇಗವಾಗಿ ಕಡಿಮೆಯಾಗುತ್ತಿರುವ ಕೃಷಿಕರ ಸಂಖ್ಯೆಯಲ್ಲೇ ಸಂಭವಿಸುತ್ತಿರುವುದು.
ಕೃಷಿ ತ್ಯಜಿಸುತ್ತಿದ್ದರೂ...
1991ಮತ್ತು 2001ರ ನಡುವಿನ ಜನಗಣತಿ ಅವಧಿಯಲ್ಲಿ ಸರಿಸುಮಾರು 80 ಲಕ್ಷ ಮಂದಿ ಕೃಷಿಯನ್ನು ತ್ಯಜಿಸಿದ್ದಾರೆ. ಅಲ್ಲಿಂದೀಚೆಗಿನ ಒಂದು ದಶಕದಲ್ಲಿ ಎಷ್ಟು ಮಂದಿ ಕೃಷಿಯನ್ನು ತ್ಯಜಿಸಿದ್ದಾರೆ ಎಂಬುದನ್ನು 2011ರ ಜನಗಣತಿ ತಿಳಿಸಲಿದೆ. ಈ ದಶಕದಲ್ಲಿ ಈ ಸಂಖ್ಯೆಯಲ್ಲಿ ಕಡಿಮೆಯಾಗಿರುವ ಸಾಧ್ಯತೆಗಳು ಇರುವುದಿಲ್ಲ. 2001ರ ನಂತರದಲ್ಲಿ ಕೃಷಿಯನ್ನು ತ್ಯಜಿಸುತ್ತಿರುವವ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಈ 80 ಲಕ್ಷ ಇನ್ನಷ್ಟು ದೊಡ್ಡದಾಗಿರುವ ಸಾಧ್ಯತೆಗಳಿವೆ.
ತಲಾ ಒಂದು ಲಕ್ಷ ರೈತರಲ್ಲಿ ಎಷ್ಟು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ರಾಜ್ಯವಾರು ಸರಾಸರಿ 2001ರ ಸಂಖ್ಯೆಯನ್ನು ಮೀರಿ ಮುನ್ನಡೆದಿದೆ. ಹಾಗಾಗಿ ಹೆಚ್ಚು ವಿಶ್ವಸನೀಯವಾದ 2011ರ ಜನಗಣತಿ ಕೃಷಿಕರ ಸಂಖ್ಯೆಯನ್ನು ತಿಳಿಸಲಿದ್ದು ಈಗ ಮುಂದುವರೆದಿರುವ ಟ್ರೆಂಡ್ಗೆ ಇನ್ನಷ್ಟು ನೋವಿನ ವಿಷಯವನ್ನು ಜಮಾಯಿಸಬಹುದು.
ದೇಶದಲ್ಲಿ ಸಂಭವಿಸುವ ಒಟ್ಟಾರೆ ಆತ್ಮಹತ್ಯೆಗಳ ಭಾಗವಾಗಿ ಕೃಷಿ ಆತ್ಮಹತ್ಯೆಗಳತ್ತ ಗಮನ ಕೇಂದ್ರೀಕರಿಸುವುದು ತಪ್ಪುದಾರಿಗೆ ಎಳೆದಂತಾಗಲಿದೆ. ಏಕೆಂದರೆ ಆ ಲೆಕ್ಕಾಚಾರದಂತೆ ಇತರ ವರ್ಗದ ಆತ್ಮಹತ್ಯೆಗಳೊಂದಿಗೆ ತಾಳೆ ಮಾಡಿ ನೋಡಿದಾಗ ಕೃಷಿ ಆತ್ಮಹತ್ಯೆಗಳ ಸರಾಸರಿ ಸಂಖ್ಯೆ ಕಡಿಮೆ ಯಾಗುತ್ತದೆ. ಹಾಗಾಗಿ ಇಂತಹ ಪದ್ಧತಿ ಅಸಂಬದ್ಧ ಮತ್ತು ಹಾಸ್ಯಾಸ್ಪದ. ಒಂದು ವಿಷಯವನ್ನು ಇಲ್ಲಿ ಪ್ರಮುಖವಾಗಿ ಗಮನಿಸಬೇಕು. ದೇಶದಲ್ಲಿ ಸಂಭವಿಸುತ್ತಿರುವ ಒಟ್ಟಾರೆ ಆತ್ಮಹತ್ಯೆಗಳ ಸಂಖ್ಯೆ (ಕೃಷಿಕರು ಮಾತ್ರವಲ್ಲದೆ ಎಲ್ಲ ವರ್ಗಗಳು) ಯಲ್ಲಿ ಏರಿಕೆ ಕಾಣುತ್ತಿದೆ. ಇತರ ವರ್ಗಗಳ ಜನಸಂಖ್ಯೆಯಲ್ಲಿ ಏರಿಕೆ ಕಾಣುತ್ತಿರುವುದರ ಅನುಪಾತದಲ್ಲಿ ಆತ್ಮಹತ್ಯೆಗಳ ಸಂಖ್ಯೆಯೂ ಏರಿಕೆ ಕಾಣುತ್ತಿದೆ. ಕೃಷಿ ಕ್ಷೇತ್ರದಲ್ಲಿ ಹಾಗಲ್ಲ. ಒಂದೆಡೆ ಕೃಷಿಕರ ಸಂಖ್ಯೆ ಇಳಿಮುಖ ಕಾಣುತ್ತಿದ್ದರೆ ಮತ್ತೊಂದೆಡೆ ಆತ್ಮಹತ್ಯೆಗಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ.
5 ರಾಜ್ಯಗಳಲ್ಲಿ ತೀವ್ರತೆ
ಇಡೀ ದೇಶದ ಒಟ್ಟಾರೆ ಚಿತ್ರಣ ನೋಡಿದಾಗ ರಾಜ್ಯವಾರು ಚಿತ್ರಣ ಮರೆಮಾಚುತ್ತದೆ. ರೈತರ ಆತ್ಮಹತ್ಯೆ ಪ್ರಕರಣಗಳು ಅತಿಹೆಚ್ಚು ಸಂಭವಿಸುತ್ತಿರುವುದು ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ಮಧ್ಯ ಪ್ರದೇಶ ಮತ್ತು ಚತ್ತೀಸ್ಗಡ ರಾಜ್ಯಗಳಲ್ಲಿ. 2003-08ರ ನಡುವೆ ಸಂಭವಿಸಿದ ಒಟ್ಟಾರೆ ಆತ್ಮಹತ್ಯೆಗಳಲ್ಲಿ ಮೂರನೆ ಎರಡರಷ್ಟು ಈ ರಾಜ್ಯಗಳಲ್ಲೇ ಸಂಭವಿಸಿವೆ. ಈ ಐದು ರಾಜ್ಯಗಳನ್ನಷ್ಟೇ ತೆಗೆದುಕೊಂಡರೆ ಕೃಷಿ ಆತ್ಮಹತ್ಯೆಗಳ ಶೇಕಡಾವಾರು ಏರಿಕೆ ಕಂಡಿದೆ. ಈ ಐದು ರಾಜ್ಯಗಳಲ್ಲಿನ ಕೃಷಿಕರ ಆತ್ಮಹತ್ಯೆ ಏರಿಕೆ ಪ್ರಮಾಣ ಇಡೀ ದೇಶಾದ್ಯಂತ ಇತರ ಎಲ್ಲ ವರ್ಗಗಳಲ್ಲಿ ಕಂಡಿರುವ ಏರಿಕೆ ಪ್ರಮಾಣಕ್ಕಿಂತಲೂ ಹೆಚ್ಚಿನದಾಗಿದೆ. ಬಡ ರಾಜ್ಯಗಳಾದ ಮಧ್ಯ ಪ್ರದೇಶ ಮತ್ತು ಚತ್ತೀಸ್ಗಡಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ತುಂಬಾ ಕೆಟ್ಟ ಪರಿಸ್ಥಿತಿ ಏರ್ಪಟ್ಟಿದೆ.
1997-2002ರ ನಡುವೆ ದೇಶಾದ್ಯಂತ ಎಲ್ಲ ವರ್ಗಗಳಲ್ಲಿ ಸಂಭವಿಸಿರುವ 12 ಆತ್ಮಹತ್ಯೆಗಳಿಗೆ ಒಬ್ಬ ರೈತನ ಆತ್ಮಹತ್ಯೆ ಈ ಐದು ರಾಜ್ಯಗಳಲ್ಲಿ ಸಂಭವಿಸಿದೆ. 2003-08ರ ನಡುವಿನ ಅವಯಲ್ಲಿ ಈ ಪ್ರಮಾಣ 10ಕ್ಕೆ ಒಂದರಷ್ಟಿದೆ.
ಎನ್ ಸಿ ಆರ‍್ ಬಿ ಯಲ್ಲಿ ಈಗ 12 ವರ್ಷಗಳ ಕೃಷಿ ಆತ್ಮಹತ್ಯೆಗಳ ಅಂಕಿಸಂಖ್ಯೆಗಳು ಲಭ್ಯವಾಗಲಿವೆ. ವಾಸ್ತವವಾಗಿ ಎನ್ಸಿಆರ್ಬಿ ದಾಖಲೆಗಳಲ್ಲಿ 1995ರ ನಂತರವಷ್ಟೇ ಕೃಷಿಕರ ಆತ್ಮಹತ್ಯೆಗಳು ನಮೂದಾಗಿವೆ. ಅದರಲ್ಲೂ ಕೆಲವು ರಾಜ್ಯಗಳು ಮೊದಲ ಎರಡು ವರ್ಷ ಕೃಷಿ ಆತ್ಮಹತ್ಯೆಗಳನ್ನು ನೀಡಿಲ್ಲ. ಎಲ್ಲ ರಾಜ್ಯಗಳೂ ಕೃಷಿ ಆತ್ಮಹತ್ಯೆಗಳನ್ನು ವರದಿ ಮಾಡಲು ಆರಂಭಿಸಿದ 1997ರ ವರ್ಷ ನಂಬಲರ್ಹವಾದ ಆಧಾರ ವರ್ಷವಾಗಿದೆ.
ಸೂಕ್ತ ಅವಧಿಯ ತುಲನೆ1997-2002
ರ ನಡುವಿನ ಅವಧಿಯಲ್ಲಿ ರೈತರ ಆತ್ಮಹತ್ಯೆಗಳು ಹೇಗೆ ಮತ್ತು ಎಷ್ಟು ಸಂಭವಿಸಿದವು ಎಂಬುದನ್ನು ಮತ್ತು 2003-2008ರ ಅವಧಿಯಲ್ಲಿ ಈ ಆತ್ಮಹತ್ಯೆಗಳು ಎಷ್ಟು ಭೀಕರಗೊಂಡವು ಎಂಬುದನ್ನು ಹೋಲಿಕೆ ಮಾಡಿ ನೋಡಲು ಈ 12 ವರ್ಷಗಳ ಅವಧಿಯ ಅಂಕಿಅಂಶಗಳು ನಮಗೆ ಅನುವು ಮಾಡಿಕೊಡಲಿವೆ. ಈ ಪೂರ್ತಿ 12 ವರ್ಷಗಳೂ ತುಂಬಾ ಕೆಟ್ಟದಾಗಿವೆ. ಆದರೆ ನಂತರ ಆರು ವರ್ಷಗಳು ಮಾತ್ರ ಇನ್ನೂ ಕೆಟ್ಟದಾಗಿವೆ.
ಒಂದು ವರ್ಷದಲ್ಲಿ ಆತ್ಮಹತ್ಯೆಗಳ ಸಂಖ್ಯೆಯಲ್ಲಿ ಏರಿಕೆ ಕಾಣುವುದು ಮತ್ತು ಕಡಿಮೆಯಾಗುವುದನ್ನು ಪರಿಶೀಲಿಸುವುದೆಂದರೆ ಅದು ತಪ್ಪುದಾರಿಗೆ ಎಳೆದಂತಾಗುತ್ತದೆ. 1997-2008ರ ನಡುವಿನ ಅವಧಿಯಲ್ಲಿ ಮೂರು ವರ್ಷ ಅಥವಾ ಆರು ವರ್ಷಗಳ ಅವಧಿಗೆ ಅನುಗುಣವಾಗಿ ಗಮನಿಸುವುದು ಸರಿಯಾಗಿರುತ್ತದೆ. ಉದಾಹರಣೆಗೆ 2005ರಲ್ಲಿ ಮಹಾರಾಷ್ಟ್ರದಲ್ಲಿ ಕೃಷಿ ವಲಯದಲ್ಲಿನ ಆತ್ಮಹತ್ಯೆಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ ಅದರ ನಂತರದ ವರ್ಷದಲ್ಲೇ ಈ ಸಂಖ್ಯೆ ಹಿಂದೆಂದಿಗಿಂತಲೂ ತುಂಬಾ ಕೆಟ್ಟದಾಗಿದೆ. 2006ರಿಂದಲೂ ಮಹಾರಾಷ್ಟ್ರ ಹಲವಾರು ವಿಷಯಗಳಿಗೆ ಗಮನ ಸೆಳೆದಿದೆ. ಆ ವರ್ಷ ಪ್ರಧಾನಿ ಮನಮೋಹನ್ ಸಿಂಗ್ ವಿದರ್ಭ ಪ್ರದೇಶಕ್ಕೆ ಭೇಟಿ ನೀಡಿ 8,14,330 ದಶಲಕ್ಷ ಡಾಲರ್ ಪರಿಹಾರ ಪ್ಯಾಕೇಜ್ ಘೋಷಿಸಿದರು. ಇದರ ನಂತರ ಮುಖ್ಯ ಮಂತ್ರಿ ವಿಲಾಸ್ರಾವ್ ದೇಶ್ ಮುಖ್ ಅವರು ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ 13,246 ದಶಲಕ್ಷ ಡಾಲರ್ ಪರಿಹಾರ ಘೋಷಿಸಿದರು. ಇದರ ನಂತರ ಕೇಂದ್ರ ಸರ್ಕಾರ ನೀಡಿದ 15,201 ದಶಲಕ್ಷ ಡಾಲರ್ ಸಾಲ ಮನ್ನಾ ಯೋಜನೆಯಲ್ಲಿ ಈ ಪ್ರದೇಶದ ರೈತರಿಗೆ 1,954 ದಶಲಕ್ಷ ಡಾಲರ್ ದೊರೆಯಿತು. ಕೇಂದ್ರ ಸರ್ಕಾರದ ಸಾಲ ಮನ್ನಾ ಯೋಜನೆ ವ್ಯಾಪ್ತಿಗೆ ಒಳಗಾಗದ ರೈತರಿಗೆ ರಾಜ್ಯ ಸರ್ಕಾರ 1,346 ದಶಲಕ್ಷ ಡಾಲರ್ ನೀಡಿತು. ಐದು ಎಕರೆಗಿಂತಲೂ ಹೆಚ್ಚು ಕೃಷಿ ಭೂಮಿ ಹೊಂದಿದ್ದು ಈ ಮೇಲಿನ ಸಾಲ ಮನ್ನಾ ಯೋಜನೆ ವ್ಯಾಪ್ತಿಗೆ ಬರದ ರೈತರ ಸಾಲ ಮನ್ನಾ ಮಾಡಲು ಏಕ ಕಂತಿನ ತೀರುವಳಿ (ಒನ್ ಟೈಮ್ ಸೆಟ್ಲ್ಮೆಂಟ್) ಗಾಗಿ ರಾಜ್ಯ ಸರ್ಕಾರ ಮತ್ತೆ 108.5 ದಶಲಕ್ಷ ಡಾಲರ್ ಒದಗಿಸಿತು.
ಸಾಲದ ಪರಿಹಾರ ಕ್ರಮ
ಒಟ್ಟಾರೆಯಾಗಿ 2006, 2007 ಮತ್ತು 2008ರಲ್ಲಿ ಮಹಾರಾಷ್ಟ್ರದಲ್ಲಿ ಕೃಷಿ ಬಿಕ್ಕಟ್ಟಿನ ನಿವಾರಣೆಗಾಗಿ 430 ಕೋಟಿ ಡಾಲರ್ ನೀಡಿದಂತಾಗಿದೆ. ( ಈ ಮಧ್ಯೆ ಸಕ್ಕರೆ ಕಾರ್ಖಾನೆ ಉದ್ಯಮಿಗಳಿಗೆ ನೀಡಿರುವ ವಿವಿಧ ಆರ್ಥಿಕ ಸೌಲಭ್ಯಗಳನ್ನು ಇಲ್ಲಿ ಲೆಕ್ಕ ಹಾಕಿಲ್ಲ). ಕೃಷಿ ಆತ್ಮಹತ್ಯೆಗಳ ಅಂಕಿಅಂಶಗಳು ಆರಂಭಗೊಳಿಸಿ ದಂದಿನಿಂದಲೂ ಇತರ ಪ್ರದೇಶಗಳಿಗೆ ಹೋಲಿಸಿದರೆ ಈ ಮೂರೂ ವರ್ಷಗಳು ಅತ್ಯಂತ ಕೆಟ್ಟ ವರ್ಷ ಗಳಾಗಿವೆ. 2006-08ರ ನಡುವೆ ಮಹಾರಾಷ್ಟ್ರದಲ್ಲಿ ಕೃಷಿ ವಲಯದಲ್ಲಿ 12,493 ಆತ್ಮಹತ್ಯೆಗಳು ಜರುಗಿವೆ. 2002-05ರ ನಡುವಿನ ಸಂಖ್ಯೆಗೆ ಹೋಲಿಸಿದರೆ 600 ಪ್ರಕರಣಗಳು ಹೆಚ್ಚಾಗಿವೆ. 1997-99ರ ನಡುವೆ ಸಂಭವಿಸಿದ 6,745 ಪ್ರಕರಣಗಳಿಗೆ ಹೋಲಿಸಿದರೆ ಶೇಕಡ 85ರಷ್ಟು ಎರಿಕೆ ಕಂಡಿದೆ. ಅತ್ಯಂತ ಭೀಕರವಾಗಿದ್ದು ಈ ಆರೂ ವರ್ಷಗಳ ಅವಧಿಯಲ್ಲಿ ಒಂದೇ ಪಕ್ಷ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿತ್ತು. ಮತ್ತೊಂದೆಡೆ ಈ ಅತ್ಯಧಿಕ ಆತ್ಮಹತ್ಯೆಗಳು ಕಡಿಮೆಯಾಗುತ್ತಿರುವ ಕೃಷಿಕರ ಜನಸಂಖ್ಯೆಯ ನಡುವೆ ಸಂಭವಿಸಿದೆ. 2001ರಲ್ಲೇ ಮಹಾರಾಷ್ಟ್ರದ ಶೇಕಡ 42ರಷ್ಟು ಜನಸಂಖ್ಯೆ ನಗರ ಪ್ರದೇಶದವರಾಗಿದ್ದರು. ಆ ರಾಜ್ಯದ ಕೃಷಿಕರ ಸಂಖ್ಯೆಯಲ್ಲಿ ಏರಿಕೆಯೇ ಕಂಡಿರುವುದಿಲ್ಲ.
ಹಾಗಾಗಿ ಇಲ್ಲಿ ನಮಗೆ ಸಾಲ ಮನ್ನಾ ವ್ಯರ್ಥವೇ ಎಂಬ ಪ್ರಶ್ನೆ ಎದುರಾಗುತ್ತದೆ. ಸಾಲ ಮನ್ನಾ ಮಾಡಬೇಕೆಂಬ ವಿಚಾರ ಕೆಟ್ಟದ್ದಲ್ಲ. ರೈತರು ಸಂಕಷ್ಟದಲ್ಲಿದ್ದಾಗ ಇಂತಹ ನೆರವು ಯೋಜನೆಗಳನ್ನು ಕಲ್ಪಿಸುವುದು ಸರಿಯಾದ ಕ್ರಮ ಎಂಬುದರಲ್ಲಿ ಎರಡು ಮಾತಿಲ್ಲ. ಇವೆಲ್ಲಕ್ಕಿಂತಲೂ ಹೆಚ್ಚಾಗಿ ಇಲ್ಲಿ ಗಮನಿಸ ಬೇಕಾದ ಪ್ರಮುಖ ಅಂಶ ಎಂದರೆ, ಕೈಗೊಳ್ಳಬೇಕಾದ ಕ್ರಮಗಳನ್ನು ತಪ್ಪುದಾರಿಗೆ ಎಳೆದಿರುವುದು ಮತ್ತು ಸರಿಯಾದ ತಿಳುವಳಿಕೆ ಇಲ್ಲದೆ ತಪ್ಪುತಪ್ಪಾಗಿ ಮಾಡಿರುವುದು. ಆದರೆ ಕೆಲವರು ಇದುವರೆಗೂ ಏನು ಮಾತನಾಡುತ್ತಿದ್ದಾರೆಂದರೆ ಕೊನೆಗೂ ಕೆಲವು ರೈತರಿಗಾದರೂ ಪರಿಹಾರ ಸಿಕ್ಕಿತಲ್ಲ ಎಂದು. ಕೃಷಿ ಸಾಲ ಮನ್ನಾ ರೈತರಿಗೆ ಸ್ವಾಗತಾರ್ಹವಾದ ವಿಷಯವೇ ಆದರೆ ಇದನ್ನು ರೂಪಿಸಿದ ರೀತಿ ದೋಷಪೂರಿತವಾಗಿದೆ. ಈ ಸಾಲ ಮನ್ನಾ ಬ್ಯಾಂಕ್ ಸಾಲಗಳಿಗೆ ಮಾತ್ರ ಅನ್ವಯವಾಯಿತು. ಖಾಸಗಿ ಬಡ್ಡಿ ವ್ಯಾಪಾರಿಗಳಿಂದ ಪಡೆದಿರುವ ಸಾಲವನ್ನು ನಿರ್ಲಕ್ಷಿಸಲಾಯಿತು. ಹಾಗಾಗಿ ಬ್ಯಾಂಕ್ ಗಳು ಮತ್ತು ಸಹಕಾರ ಸಂಘಗಳಿಂದ ಸಾಲ ಪಡೆದವರು ಮಾತ್ರ ಇದರ ಪ್ರಯೋಜನ ಪಡೆದರು. ಆಂಧ್ರಪ್ರದೇಶದಲ್ಲಿ ಭೂಮಿಯನ್ನು ಬೋಗ್ಯಕ್ಕೆ ಪಡೆಯುವ ರೈತ ವಿದರ್ಭಾ ಸೇರಿದಂತೆ ಇತರ ರಾಜ್ಯಗಳಲ್ಲಿನ ರೈತರು ಸಾಲವನ್ನು ಖಾಸಗಿ ಬಡ್ಡಿ ವ್ಯಾಪಾರಿಗಳಿಂದ ಪಡೆಯುತ್ತಾರೆ. ಕೇರಳದಲ್ಲಿ ಪ್ರತಿಯೊಬ್ಬ ರೈತನೂ ಬ್ಯಾಂಕ್ ಖಾತೆಯನ್ನು ಹೊಂದಿದ್ದು ಈ ಸಾಲ ಮನ್ನಾ ಪ್ರಯೋಜನ ಪಡೆದಿದ್ದಾರೆ. (ಕೇರಳ ರಾಜ್ಯಕ್ಕೆ ಸಂಬಂಸಿದಂತೆ ಗಮನಿಸಬೇಕಾದ ಮತ್ತೊಂದು ವಿಷಯ ಎಂದರೆ ಅಲ್ಲಿನ ರೈತರು ಖಾಸಗಿ ಬಡ್ಡಿ ವ್ಯಾಪಾರಿಗಳಿಂದ ಪಡೆದಿರುವ ಸಾಲ ಸಮಸ್ಯೆಗಳನ್ನೂ ಅಲ್ಲಿನ ಸರ್ಕಾರ ಪರಿಹರಿಸಿರುವುದು).
ಕೈಬಿಟ್ಟ ರೈತರು2008
ರಲ್ಲಿನ ಸಾಲ ಮನ್ನಾ ಐದು ಎಕರೆಗಿಂತಲೂ ಹೆಚ್ಚು ಜಮೀನು ಹೊಂದಿರುವ ರೈತರನ್ನು ಕೈಬಿಟ್ಟಿತು. ಈ ಐದು ಎಕರೆ ನೀರಾವರಿ ಭೂಮಿಯೆ ಅಥವಾ ನೀರಾವರಿಯೇತರ ಭೂಮಿಯೇ ಎಂಬುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಇದು 5 ರಿಂದ 10 ಎಕರೆ ಬರಡು ಭೂಮಿ ಹೊಂದಿ ಹೆಣಗಾಡುತ್ತಿರುವ ರೈತರನ್ನು ನಾಶ ಮಾಡಿತು. ಇದೇ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ ಬಹುತೇಕ ರೈತರು ಕಡಿಮೆ ಭೂಮಿಯನ್ನು ಹೊಂದಿದ್ದು ಅತಿ ಹೆಚ್ಚು ಅನುಕೂಲ ಪಡೆದರು.
ರೈತರ ಪ್ರತಿಯೊಂದು ಆತ್ಮಹತ್ಯೆಗೂ ಹಲವಾರು ಕಾರಣಗಳಿವೆ. ಆದರೆ ಎರಡು ಲಕ್ಷ ರೈತರ ಆತ್ಮಹತ್ಯೆ ಗಳನ್ನು ನೋಡುವಾಗಿ ಅವರ ನಡುವಿರುವ ಕಾರಣಗಳ ಮಧ್ಯೆಯೇ ಸಮಾನ ಕಾರಣಗಳನ್ನು ಗಮನಿಸಬೇಕಾಗುತ್ತದೆ. ಯಾವ ಪ್ರದೇಶದಲ್ಲಿ ಕೃಷಿಯನ್ನು ಹೆಚ್ಚು ವಾಣಿಜ್ಯೀಕರಣಗೊಳಿಸಲಾಗಿದೆಯೋ ಮತ್ತು ಯಾವ ಪ್ರದೇಶದಲ್ಲಿ ಹೆಚ್ಚು ಸಾಲ ಇದೆಯೋ ಅಲ್ಲಿ ಹೆಚ್ಚು ಆತ್ಮಹತ್ಯೆಗಳು ಸಂಭವಿಸಿವೆ ಎಂದು ಡಾ. ನಾಗರಾಜ್ ಮತ್ತೆ ಮತ್ತೆ ಹೇಳುತ್ತಾರೆ. ಆಹಾರ ಧಾನ್ಯಗಳನ್ನು ಬೆಳೆಯುವ ರೈತರಿಗಿಂತಲೂ ವಾಣಿಜ್ಯ ಬೆಳೆಗಳನ್ನು ಬೆಳೆಯುವ ರೈತರು ಹೆಚ್ಚು ಹೆಚ್ಚು ಆತ್ಮಹತ್ಯೆಗೆ ಮುಂದಾಗಿದ್ದಾರೆ. ಇದಕ್ಕೆ ಅತ್ಯಂತ ಮೂಲಭೂತವಾದ, ಈ ಕೆಳಗೆ ಹೇಳಿರುವ ಕಾರಣಗಳಿಗೆ ಸಂಬಂಸಿದಂತೆ ಇದುವರೆಗೂ ಯಾರೂ ಸಹ ಗಮನ ಹರಿಸಿಲ್ಲ. ಗ್ರಾಮೀಣ ಪ್ರದೇಶವನ್ನು ಲೂಟಿಕೋರ ವಾಣಿಜ್ಯೀಕರಣಗೊಳಿಸುತ್ತಿರುವುದು, ಕೃಷಿ ಕ್ಷೇತ್ರದಲ್ಲಿನ ಹೂಡಿಕೆ ತೀವ್ರವಾಗಿ ಕುಂಠಿತ ಗೊಂಡಿರುವುದು, ಹೂಡಿಕೆ ವೆಚ್ಚ ವಿಪರೀತವಾಗಿ ಏರಿಕೆ ಕಾಣುವ ಸಂದರ್ಭದಲ್ಲಿ ಬ್ಯಾಂಕ್ ಸಾಲಗಳ ನಿರಾಕರಣೆ, ಕೃಷಿ ಮಾಡುವುದು ದುಬಾರಿಯಾಗಿರುವ ಸಂದರ್ಭದಲ್ಲೇ ಇದರಿಂದ ಬರುವ ಆದಾಯ ತೀವ್ರವಾಗಿ ಕುಸಿಯುವುದು, ಎಲ್ಲ ಬಿಕ್ಕಟ್ಟುಗಳ ಮಧ್ಯೆಯೂ ಕೃಷಿಕರನ್ನು ಆಹಾರ ಧಾನ್ಯಗಳ ಬೆಳೆಗಳಿಂದ ವಾಣಿಜ್ಯ ಬೆಳೆಗಳತ್ತ ವರ್ಗವಣೆ, ಕೃಷಿ ಕ್ಷೇತ್ರದಲ್ಲಿ ಅತ್ಯಂತ ಮುಖ್ಯವಾದ ಬಿತ್ತನೆ ಬೀಜದಂತಹ ಪ್ರಮುಖ ಅಗತ್ಯಗಳು ಬಹುರಾಷ್ಟ್ರೀಯ ಕಂಪನಿಗಳ ಸುಪರ್ದಿಗೆ ಹೋಗುತ್ತಿರುವುದು, ಅಗತ್ಯ ನೀರಿನ ಹಾಹಾಕಾರ ಮತ್ತು ಇತರ ಸಂಪನ್ಮೂಲಗಳನ್ನು ಖಾಸಗೀಕರಣ ಗೊಳಿಸುವತ್ತ ಹೊರಟಿರುವುದು ಇವುಗಳಲ್ಲಿ ಪ್ರಮುಖ ಮತ್ತು ಅತ್ಯಂತ ಗಮನಾರ್ಹವಾದ ಅಂಶಗಳಾಗಿವೆ. ಈ ಮೇಲಿನ ಎಲ್ಲ ಸಮಸ್ಯೆಗಳನ್ನೂ ಬಿಟ್ಟು ಸರ್ಕಾರ ಒಮ್ಮೆ ಸಾಲ ಮನ್ನಾ ಮಾಡಿ ಕೃಷಿ ಕ್ಷೇತ್ರದಲ್ಲಿನ ಬಿಕ್ಕಟ್ಟನ್ನು ನಿವಾರಿಸಲು ಮುಂದಾಗಿದೆ. ಮತ್ತು 2005ರ ನಡುವೆ ಹತಾಶೆಯಿಂದಾಗಿ 1,50,000 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಎನ್ ಸಿಆರ‍್ ಬಿ ಅಂಕಿಅಂಶಗಳ ಕುರಿತು ಅಧ್ಯಯನ ನಡೆಸಿರುವ ಡಾ. ನಾಗರಾಜ್ ಹೇಳಿರುವ ಸುದ್ದಿಯನ್ನು ನವೆಂಬರ್ 12-15ರ ನಡುವಿನ ಸಂಚಿಕೆಯಲ್ಲಿ ದಿ ಹಿಂದೂ ಪತ್ರಿಕೆ ವರದಿ ಮಾಡಿತ್ತು. ಕೆಲವೇ ದಿನಗಳ ನಂತರ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಈ ವಿಷಯವನ್ನು ದೃಢೀಕರಿಸಿದ್ದರು. ದುರಂತ ಎಂದರೆ ಇದಾದ 27 ತಿಂಗಳ ನಂತರ ರೈತರ ಆತ್ಮಹತ್ಯೆಗಳ ಸಂಖ್ಯೆ 2 ಲಕ್ಷಕ್ಕೆ ತಲುಪಿದ್ದು.
ಭಾರತದಲ್ಲಿ ಕೃಷಿ ಬಿಕ್ಕಟ್ಟು ಗಂಭೀರವಾಗಿದೆ. ಆತ್ಮಹತ್ಯೆ ಮಾಡಿಕೊಂಡ ರೈತರನ್ನು ಅಣಕ ಮಾಡಲಾಗುತ್ತಿದೆ. ಬಿಕ್ಕಟ್ಟಿನ ಕುರಿತು ವಿಮರ್ಶಿಸುವವರನ್ನು ಲೇವಡಿ ಮಾಡಲಾಗುತ್ತಿದೆ. ಮೇಲ್ನೋಟಕ್ಕೆ ಕೆಲವು ಬದಲಾವಣೆಗಳನ್ನು ಮಾಡಿದರೆ ಬಿಕ್ಕಟ್ಟು ನಿವಾರಣೆಯಾಗುವುದಿಲ್ಲ.
|
(ಕನ್ನಡಕ್ಕೆ - ಅಪ್ಪು)
ಸೌಜನ್ಯ: ಜನಶಕ್ತಿ