ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರ್ಕಳ: ಉಡುಪಿಯಲ್ಲಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ

ಕಾರ್ಕಳ: ಉಡುಪಿಯಲ್ಲಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ

Sat, 14 Nov 2009 02:48:00  Office Staff   S.O. News Service


ಕಾರ್ಕಳ, ನವೆಂಬರ್ 13: ಉಡುಪಿ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಬೈಲೂರು ಸರಕಾರಿ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ-೨೦೦೯ ಬೈಲೂರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜರಗಿತು. 

ರಾಜ್ಯ ೩ನೇ ಹಣಕಾಸು ಆಯೋಗ ಅನುಷ್ಠಾನ ಸಮಿತಿ ಅಧ್ಯಕ್ಷ ಎ.ಜಿ.ಕೊಡ್ಗಿಯವರು ಉದ್ಘಾಟನೆ ನೆರವೇರಿಸಿ, ಪ್ರತಿಭಾ ಕಾರಂಜಿಯು ಕರ್ನಾಟಕದಲ್ಲಿ ೨೦೦೨ ರಲ್ಲಿ ಆರಂಭವಾಗಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ ಬದಲಾವಣೆಗೆ ನಾಂದಿ ಹಾಡಿದೆ. ವಿವಿಧ ಸ್ಪರ್ಧೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳ ಬದುಕಿನಲ್ಲಿ ನವ ಚೈತನ್ಯ ತುಂಬುತ್ತಿದೆ. ಹಿಂದಿ, ತಮಿಳು ಮೊದಲಾದ ಭಾಷೆಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸುವುದರೊಂದಿಗೆ ಭಾಷಾ ವೈಷಮ್ಯವನ್ನು ಮೆಟ್ಟಿ ನಿಲ್ಲಲು ಅವಕಾಶ ಕಲ್ಪಿಸುತ್ತಿದೆ.

ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳು ಅನಿವಾರ್ಯವಾಗಿದೆ. ವಿದ್ಯಾರ್ಥಿಗಳ ಪ್ರತಿಭೆ ಪ್ರಕಾಶಿಸಬೇಕು. ಸಮಾಜದ ವಿವಿಧ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳುವ ಅವಕಾಶ ಒದಗಿಬರಬೇಕು. ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಎದುರಿಸುವ ಶಿಕ್ಷಣ ಲಭಿಸಿದಲ್ಲಿ ಮಾತ್ರ ದೇಶಕ್ಕೆ ಉತ್ತಮ ಭವಿಷ್ಯವಿದೆ ಎಂದರು. 

ಕಾರ್ಕಳ ಶಾಸಕ ಎಚ್.ಗೋಪಾಲ ಭಂಡಾರಿಯವರು ಸಭೆಯ ಅಧ್ಯಕ್ಷ ಸ್ಥಾನದಿಂದ ಮಾತನಾಡಿ, ಪ್ರತಿಭಾ ಕಾರಂಜಿಯಲ್ಲಿ ಪ್ರತಿಭಾನ್ವೇಷಣೆಯ ಕಾರ್ಯವಾಗಬೇಕು. ಜನಿಸುವ ಮೊದಲೇ ಮಗುವಿನ ಭವಿಷ್ಯ ನಿರ್ಧರಿಸುವ ಪಾಲಕರಿಂದ ಮಗುವಿನಲ್ಲಿ ತುಂಬಿರುವ ಪ್ರತಿಭೆಗೆ ಅಡ್ಡಿಯಾಗುತ್ತಿದೆ. ಪ್ರತಿಯೊಬ್ಬರಿಗೂ ತಮ್ಮಲ್ಲಿರುವ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಲಭಿಸಬೇಕು. ಭಾವನಾತ್ಮಕವಾಗಿ ನಾವೆಲ್ಲರೂ ಒಂದೇ ಎಂಬ ಸಂದೇಶ ಈ ಪ್ರತಿಭಾ ಕಾರಂಜಿ ಸಾರುವಂತಾಗಿ ಶಿಕ್ಷಣದ ಜತೆಗೆ ಸಾಂಸ್ಕೃತಿಕ, ಸಾಹಿತ್ಯಕ್ಕೂ ಪ್ರೋತ್ಸಾಹ ದೊರೆಯಬೇಕು ಎಂದರು.

ನಿಟ್ಟೆ ವಿದ್ಯಾಸಂಸ್ಥೆಯ ಕುಲಪತಿ ಎನ್.ವಿನಯ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಗ್ಲ್ಯಾಡಿಸ್ ಅಲ್ಮೇಡಾ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ವಿ.ಸುನಿಲ್ ಕುಮಾರ್, ತಹಶೀಲ್ದಾರ ಅಚ್ಯುತ ಪಿ., ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಬೇಕಲ್, ತಾಲೂಕು ಪಂಚಾಯತ್ ಅಧ್ಯಕ್ಷ ಉದಯ ಎಸ್.ಕೋಟ್ಯಾನ್, ಜಿಲ್ಲಾ ಪಂಚಾಯತ್ ಸದಸ್ಯ ಎನ್.ಬಿ.ಬಾಬು, ಎಪಿ‌ಎಂಸಿ ಅಧ್ಯಕ್ಷ ಅಂತೋನಿ ಡಿಸೋಜ, ತಾ.ಪಂ. ಸದಸ್ಯ ವಿಕ್ರಂ ಹೆಗ್ಡೆ, ನೀರೆ ಗ್ರಾ.ಪಂ.ಅಧ್ಯಕ್ಷ ಪ್ರಸನ್ನ ಹೆಗ್ಡೆ, ಕಾಲೇಜಿನ ಶಾಲಾಭಿವೃದ್ಧಿ ಸದಸ್ಯ ಡಾ.ದಿನೇಶ್ಚಂದ್ರ ಹೆಗ್ಡೆ, ವಿವಿಧ ಇಲಾಖೆಯ ಅಧಿಕಾರಿಗಳು, ಶಿಕ್ಷಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಡಾ.ಮಹೀದಾಸ್ ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ದಿವಾಕರ ನಾಯಕ್ ಮತ್ತು ಜಯಂತಿ ನೆರವೇರಿಸಿದರು. ಶಾಂತಿ ಶೆಟ್ಟಿ ವಂದಿಸಿದರು.

Share: