ಬೆಂಗಳೂರು, ಅ 28: ರಾಜ್ಯ ಬಿಜೆಪಿಯ ಬಿಕ್ಕಟ್ಟು ತಕ್ಷಣವೇ ಬಗೆಹರಿಯುವ ಸಾಧ್ಯತೆ ಕಾಣುತ್ತಿಲ್ಲ. ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿರುವ ಬಳ್ಳಾರಿ ರೆಡ್ಡಿಗಳು ಯಾವುದೇ ಕಾರಣಕ್ಕೂ ಅದನ್ನು ಸಡಿಲಿಸುವುದಿಲ್ಲ ಎಂದು ಮುಷ್ಟಿ ಬಿಗಿದು ಕುಳಿತಿದ್ದಾರೆ.
ಆದರೆ, ಯಡಿಯೂರಪ್ಪ ಅದಕ್ಕೆ ಬಗ್ಗದಿರಲು ನಿರ್ಧರಿಸಿದ್ದು, ಬುಧವಾರ ಗಣಿ ಧಣಿಗಳ ನಿಷ್ಠ ಅಧಿಕಾರಿಗಳ ವರ್ಗಾವಣೆ ಮೂಲಕ ಬಲವಾದ ಎದುರೇಟನ್ನೇ ನೀಡಿದ್ದಾರೆ.
ಈ ಜಿದ್ದಾಜಿದ್ದಿ ನಡುವೆ ನಿರೀಕ್ಷೆಯಂತೆ ಹೈಕಮಾಂಡ್ ಪ್ರತಿನಿಧಿಯಾಗಿ ದಿಲ್ಲಿಯಿಂದ ಅರುಣ್ ಜೇಟ್ಲಿ ಆಗಮಿಸಿ, ಎರಡೂ ಬಣಗಳನ್ನು ಪ್ರತ್ಯೇಕವಾಗಿ ಕೂರಿಸಿ ಮಾತುಕತೆ ನಡೆಸಿದರೂ ಅದು ತಕ್ಷಣದ ಫಲವನ್ನೇನೂ ನೀಡಿಲ್ಲ.
ಇದುವರೆಗೆ ತೆರಮರೆಯಲ್ಲಿ ಪರಸ್ಪರ ವಿರೋಧದ ಚಟುವಟಿಕೆ ನಡೆಸುತ್ತಿದ್ದ ಬಳ್ಳಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳ ಬಣಗಳು ಇದೀಗ ನೇರವಾಗಿ ಅಖಾಡಕ್ಕೆ ಧುಮುಕಿವೆ. ತಮ್ಮ ಮೇಲೆ ಸಮರ ಸಾರಿರುವ ರೆಡ್ಡಿಗಳ ಮೇಲೆ ಅವರ ಜಿಲ್ಲೆಯ ಡಿಸಿ, ಎಸ್ ಪಿಯನ್ನೇ ಹಠಾತ್ತನೆ ವರ್ಗಾಯಿಸುವ ಮೂಲಕ ಯಡಿಯೂರಪ್ಪ ಬೌನ್ಸರ್ ಪ್ರಯೋಗಿಸಿದರೆ, ರೆಡ್ಡಿಗಳು ಬಳ್ಳಾರಿಯಲ್ಲಿ ಮುಖ್ಯಮಂತ್ರಿಯಿಲ್ಲದೇ ನೆರೆ ಸಂತ್ರಸ್ತರಿಗೆ ಮನೆ ನಿರ್ಮಿಸಲು ಶಂಕುಸ್ಥಾಪನೆ ನಡೆಸುವ ಮೂಲಕ ಮತ್ತು ಆ ಸಮಾರಂಭದಲ್ಲಿ ಬಹಿರಂಗ ವಾಗ್ದಾಳಿ ನಡೆಸುವ ಮೂಲಕ ತಿರುಗೇಟು ನೀಡಿದ್ದಾರೆ. ಹೀಗಾಗಿ ಬಿಕ್ಕಟ್ಟಿನ ಆಳ ಮತ್ತಷ್ಟು ಹೆಚ್ಚಿದಂತಾಗಿದೆ.
ಆದರೆ, ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರ್ಕಾರವನ್ನು ಆಂತರಿಕ ಭಿನ್ನಮತದಿಂದಾಗಿ ಅಸ್ಥಿರಗೊಳ್ಳಲು ಬಿಡಬಾರದು ಎಂಬ ಉದ್ದೇಶದಿಂದ ಆಗಮಿಸಿರುವ ಜೇಟ್ಲಿ ಬೆಂಗಳೂರಿನಲ್ಲೇ ಮೊಕ್ಕಾಂ ಹೂಡಿ ಕಾರ್ಯತಂತ್ರ ರೂಪಿಸುವಲ್ಲಿ ನಿರತರಾಗಿದ್ದಾರೆ.
‘ಯಡಿಯೂರಪ್ಪ ನಾಯಕತ್ವದಲ್ಲಿ ಸರ್ಕಾರ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ಅದರಲ್ಲೂ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದು, ರಾಜ್ಯ ಬಿಜೆಪಿ ಹಾಗೂ ಸರ್ಕಾರದಲ್ಲಿ ಹೇಳಿಕೊಳ್ಳುವಂಥ ಗಂಭೀರ ಸಮಸ್ಯೆ ಉದ್ಭವಿಸಿಲ್ಲ. ಕರುಣಾಕರರೆಡ್ಡಿ ಸೇರಿದಂತೆ ಕೆಲವು ಸಚಿವರು ಪ್ರಸ್ತಾಪಿಸಿರುವ ಅಂಶಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಅರುಣ್ ಜೇಟ್ಲಿ ಕಂದಾಯ ಸಚಿವ ಗಾಲಿ ಕರುಣಾಕರರೆಡ್ಡಿ ಅವರೊಂದಿಗೆ ನಡೆಸಿದ ಮಾತುಕತೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.
ಬುಧವಾರ ಮಧ್ಯಾಹ್ನದಿಂದ ರಾತ್ರಿವರೆಗೆ ಹಲವಾರು ಮುಖಂಡರೊಂದಿಗೆ ಖುದ್ದಾಗಿ ಸಮಾಲೋಚನೆ ನಡೆಸಿದ ಜೇಟ್ಲಿ ಅವರು ಗುರುವಾರವೂ ಬೆಂಗಳೂರಿನಲ್ಲಿ ವಾಸ್ತವ್ಯ ಮುಂದುವರೆಸಲಿದ್ದು, ಇನ್ನೂ ಹಲವಾರು ನಾಯಕರೊಂದಿಗೆ ಚರ್ಚಿಸಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದಾರೆ.
ಬಂಡಾಯಕ್ಕೆ ಸಾರಥ್ಯ ವಹಿಸಿರುವ ಕರುಣಾಕರರೆಡ್ಡಿ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ಮುಗಿಸಿರುವ ಜೇಟ್ಲಿ ಅವರು ಗುರುವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಆ ಸಂದರ್ಭ ಸರ್ಕಾರಕ್ಕೆ ಅಪಾಯ ಉಂಟು ಮಾಡದೆ ಯಡಿಯೂರಪ್ಪ ನಾಯಕತ್ವ ಬೆಂಬಲಿಸಿ ಮುಂದುವರೆಯುವ ಸಂಬಂಧ ರಾಜೀಸೂತ್ರ ಮುಂದಿಡುವ ನಿರೀಕ್ಷೆಯೂ ಇದೆ ಎನ್ನಲಾಗಿದೆ.
ಅದಕ್ಕೆ ರೆಡ್ಡಿ ಒಪ್ಪದಿದ್ದರೆ ತಕ್ಷಣವೇ ಮುಂದೆ ಕೈಗೊಳ್ಳಲಿರುವ ನಿರ್ಧಾರಗಳನ್ನು ಜೇಟ್ಲಿ ಇಲ್ಲಿಯೇ ಬಹಿರಂಗಪಡಿಸುವುದಿಲ್ಲ. ಇಲ್ಲಿ ಸಂಗ್ರಹಿಸಿದ ಸಮಗ್ರ ಅಭಿಪ್ರಾಯಗಳ ಆಧಾರದ ಮೇಲೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಮೌಖಿಕ ವರದಿ ಸಲ್ಲಿಸಲಿದ್ದಾರೆ. ನಂತರ ಮುಂದಿನ ಹೆಜ್ಜೆ ಪ್ರಕಟವಾಗುವ ಸಾಧ್ಯತೆಯಿದೆ.
ಸಮರಕ್ಕೆ ಸಿದ್ಧ ಯಡಿಯೂರಪ್ಪ: ಪಕ್ಷದ ಹೈಕಮಾಂಡ್ ತಮ್ಮ ಬೆನ್ನಿಗಿರುವುದನ್ನು ಖಚಿತಪಡಿಸಿಕೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗಣಿ ಧಣಿಗಳ ವಿರುದ್ಧ ತೊಡೆತಟ್ಟಿ ನಿಲ್ಲುವ ಮುನ್ಸೂಚನೆ ನೀಡಿದ್ದಾರೆ.
ಬುಧವಾರ ಬೆಳಗ್ಗೆಯೇ ಆರೋಗ್ಯ ಇಲಾಖೆ ಕಾರ್ಯದರ್ಶಿ, ಬಳ್ಳಾರಿಯ ಜಿಲ್ಲಾಧಿಕಾರಿ, ವರಿಷ್ಠಾಧಿಕಾರಿ, ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಏಕಾಏಕಿ ಎತ್ತಂಗಡಿ ಮಾಡುವ ಮೂಲಕ ಗಣಿ ಧಣಿಗಳಿಗೆ ‘ಶಾಕ್’ ನೀಡಿದ್ದಾರೆ. ಈ ಮೂಲಕ ತಾವು ಯಾವುದೇ ಬೆದರಿಕೆಗೆ ಸೊಪ್ಪು ಹಾಕುವುದಿಲ್ಲ ಎಂಬ ಸಂದೇಶವನ್ನೂ ರವಾನಿಸಿದ್ದಾರೆ.
ಗಣಿ ಧಣಿಗಳು ಬಗ್ಗದಿದ್ದರೆ ಯಡಿಯೂರಪ್ಪ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಗಣಿ ಧಣಿಗಳ ಬೆಂಬಲಿಗ ಸಚಿವರ ಪೈಕಿ ಒಂದಿಬ್ಬರಿಗೆ ಕೊಕ್ ನೀಡಿದರೂ ಅಚ್ಚರಿಯಿಲ್ಲ ಎಂದು ಮೂಲಗಳು ತಿಳಿಸಿವೆ.
ತಂತ್ರಕ್ಕೆ ಪ್ರತಿತಂತ್ರ: ಇದೇ ವೇಳೆ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಗಣಿ ದಣಿಗಳ ತಂತ್ರಕ್ಕೆ ಪ್ರತಿತಂತ್ರ ರೂಪಿಸುವಲ್ಲಿಯೂ ನಿರತರಾಗಿದ್ದಾರೆ.
ಒಂದು ವೇಳೆ ಪಕ್ಷದ ಹೈಕಮಾಂಡ್ ಸಲಹೆಗೂ ಬಗ್ಗದೆ ಭಿನ್ನಮತ ಮುಂದುವರೆಸಿ ಸರ್ಕಾರ ಪತನಗೊಳಿಸುವ ಪ್ರಯತ್ನ ಮಾಡಿದಲ್ಲಿ ಕೈಗೊಳ್ಳಬಹುದಾದ ಪರ್ಯಾಯ ಸಿದ್ಧತೆಗಳ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ. ಜೆಡಿಎಸ್ ಬೆಂಬಲ ಪಡೆದುಕೊಳ್ಳುವ ಸಾಧ್ಯತೆಗಳ ಬಗ್ಗೆ ತೆರೆಮರೆಯಲ್ಲಿ ಕಸರತ್ತೂ ಆರಂಭವಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ನ.೨ರ ನಂತರ ಮಾತಾಡುವೆ- ರೆಡ್ಡಿ: ಜೇಟ್ಲಿ ಅವರೊಂದಿಗೆ ಮಾತುಕತೆ ನಡೆಸಿ ಹೊರಬಂದ ನಂತರ ಕರುಣಾಕರರೆಡ್ಡಿ ಅವರ ಮುಖದಲ್ಲಿ ಮತ್ತಷ್ಟು ಗಾಂಭೀರ್ಯತೆ ಮನೆ ಮಾಡಿದ್ದು ಕುತೂಹಲಕರವಾಗಿತ್ತು.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸದ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಈಗ ನಾನೇನೂ ಮಾತನಾಡುವುದಿಲ್ಲ. ನ.೨ರ ನಂತರ ಮಾತನಾಡುತ್ತೇನೆ. ಜೇಟ್ಲಿ ಅವರು ಕರೆದಿದ್ದರಿಂದ ಮಾತುಕತೆಗೆ ಬಂದಿದ್ದೇನೆ. ನಮ್ಮ ಅಭಿಪ್ರಾಯಗಳನ್ನು ಅವರ ಮುಂದಿಟ್ಟಿದ್ದೇನೆ. ಪಕ್ಷದಲ್ಲಿ ಏನು ನಡೆದಿದೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ’ ಎಂದಷ್ಟೇ ಪ್ರತಿಕ್ರಿಯಿಸಿದರು.
ಇದೇ ವೇಳೆ ಬುಧವಾರ ಬೆಳಗ್ಗೆ ಬಳ್ಳಾರಿ ಜಿಲ್ಲೆ ಸಿರಗುಪ್ಪದಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಪರೋಕ್ಷವಾಗಿ ಸಚಿವರಾದ ಜನಾರ್ದನರೆಡ್ಡಿ ಹಾಗೂ ಬಿ.ಶ್ರೀರಾಮುಲು ಅವರು ವಾಗ್ದಾಳಿ ನಡೆಸಿದ್ದು ಮುಂದಿನ ಬೆಳವಣಿಗೆಗಳ ಮುನ್ಸೂಚನೆಯಂತಿತ್ತು.
ಮಧ್ಯಾಹ್ನ ಕರುಣಾಕರರೆಡ್ಡಿ ಅವರೊಂದಿಗೆ ಬೆಂಗಳೂರಿಗೆ ಹೆಲಿಕಾಪ್ಟರ್ನಲ್ಲಿ ಬಂದ ಶ್ರೀರಾಮುಲು ಅವರು ಜೇಟ್ಲಿ ಅವರ ಭೇಟಿಗೆ ತೆರಳಲಿಲ್ಲ.
ಬದಲಿಗೆ ನಗರದ ಹೊರವಲಯದ ರೆಸಾರ್ಟ್ವೊಂದರಲ್ಲಿ ಬೆಂಬಲಿಗ ಸಚಿವರು ಹಾಗೂ ಶಾಸಕರೊಂದಿಗೆ ರಹಸ್ಯ ಸಭೆ
ನಡೆಸಿದರು.
ರೆಡ್ಡಿಗಳು ಈಗೇನು ಮಾಡಬಹುದು?
ಹೈಕಮಾಂಡ್ ಯಡಿಯೂರಪ್ಪ ಬೆನ್ನಿಗೆ ನಿಂತಿರುವುದರಿಂದ
ಸಂಧಾನಕ್ಕೆ ಮುಂದಾಗಬಹುದು.
ನಾಯಕತ್ವ ಬದಲಾವಣೆ ವಿಷಯ ಕೈಬಿಟ್ಟು ಇತರ ಬೇಡಿಕೆಗಳನ್ನು ಈಡೇರಿಸಲು ಷರತ್ತು ವಿಧಿಸಬಹುದು.
ತಮ್ಮ ಬೆಂಬಲಿಗರೊಂದಿಗೆ ತಾವೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಕ್ಕಟ್ಟು ಉಲ್ಬಣಿಸುವಂತೆ ಮಾಡಬಹುದು.
ಬೆಂಬಲಿಗರೊಂದಿಗೆ ಶಾಸಕ ಸ್ಥಾನಕ್ಕೇ ರಾಜೀನಾಮೆ ನೀಡುವ ಮೂಲಕ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ಉಂಟು ಮಾಡಬಹುದು.
ಯಡಿಯೂರಪ್ಪ ಈಗೇನು ಮಾಡಬಹುದು?
ರೆಡ್ಡಿಗಳ ಇತರ ಬೇಡಿಕೆಗೆ ಸಮ್ಮತಿಸಿ ರಾಜಿಗೆ ಸಮ್ಮತಿಸಬಹುದು
ಹೈಕಮಾಂಡ್ ವಿಶ್ವಾಸದೊಂದಿಗೆ ರೆಡ್ಡಿ ಸಹೋದರರನ್ನು ಬಗ್ಗು
ಬಡಿಯಬಹುದು.
ರೆಡ್ಡಿ ಬೆಂಬಲಿಗರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರೆಡ್ಡಿಗಳನ್ನು ಮಾತ್ರ ಮೂಲೆಗುಂಪು ಮಾಡಬಹುದು.
ತಮ್ಮನ್ನು ಕುರ್ಚಿಯಿಂದ ಕೆಳಗಿಳಿಸಲು ಮುಂದಾದರೆ ರೆಡ್ಡಿಗಳನ್ನು ಉಚ್ಚಾಟಿಸಿ ಜೆಡಿಎಸ್ ಒಡೆದು ಅಥವಾ ಪೂರ್ಣವಾಗಿ ಬೆಂಬಲ ಪಡೆಯಲು ಯತ್ನಿಸಬಹುದು.
ಶೆಟ್ಟರ್ಗೆ ಶೀಘ್ರ ಸಚಿವ ಸ್ಥಾನ ಮುಖ್ಯಮಂತ್ರಿ ಸಮ್ಮತಿ
ಬೆಂಗಳೂರು: ಬಿಜೆಪಿ ಸರ್ಕಾರದ ಪರ್ಯಾಯ ನಾಯಕನ ರೂಪದಲ್ಲಿ ಬಿಂಬಿತವಾಗುತ್ತಿರುವ ವಿಧಾನಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಅವರನ್ನು ಮಂತ್ರಿಯನ್ನಾಗಿ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಯಡಿಯೂರಪ್ಪನವರ ಆಪ್ತ ಸಚಿವರು ಶೆಟ್ಟರ್ ಅವರನ್ನು ಭೇಟಿ ಮಾಡಿ ಶೀಘ್ರದಲ್ಲೇ ಸಂಪುಟಕ್ಕೆ ಸೇರಿಸಿಕೊಳ್ಳಲಾಗುವುದು. ಜತೆಗೆ ಪ್ರಮುಖವಾದ ಖಾತೆಯನ್ನೂ ನೀಡಲಾಗುವುದು ಎಂಬ ಸಂದೇಶವನ್ನು ರವಾನಿಸಿದ್ದಾರೆ ಎನ್ನಲಾಗಿದೆ.
ಇಂದಿನ ಸಂಧಾನ
ಅರುಣ್ ಜೇಟ್ಲಿ ಅವರಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ರೆಡ್ಡಿ ಸೋದರರ ನಡುವೆ ಸಂಧಾನ. ಪರಿಹಾರ ಸಾಧ್ಯವಾದರೆ ರಾಜಿಸೂತ್ರ ಸಿದ್ಧಪಡಿಸಿ ಉಭಯ ಬಣಗಳನ್ನು ಒಪ್ಪಿಸಬಹುದು. ಇಲ್ಲದೇ ಹೋದರೆ ಜೇಟ್ಲಿ ಅವರು ದೆಹಲಿಗೆ ಹಾರಿ ರಾಷ್ಟ್ರೀಯ ನಾಯಕರಿಗೆ ಮೌಖಿಕ ವರದಿಯನ್ನು ನೀಡಬೇಕು.
ಬುಧವಾರದ ಘಟನಾವಳಿ
ಬೆಳಗ್ಗೆ ೩.೦೦: ಮೈಸೂರಿಂದ ತರಾತುರಿಯಲ್ಲಿ ಯಡಿಯೂರಪ್ಪ ಬೆಂಗಳೂರಿಗೆ ಆಗಮನ
ಬೆಳಗ್ಗೆ ೯.೦೦: ಹಿರಿಯ ಸಚಿವರ ಜೊತೆ ಮುಖ್ಯಮಂತ್ರಿ ನಿವಾಸದಲ್ಲಿ ಚರ್ಚೆ
ಮಧ್ಯಾಹ್ನ ೧.೦೦: ಬೆಂಗಳೂರಿಗೆ ಅರುಣ್ ಜೇಟ್ಲಿ. ಮುಖ್ಯಮಂತ್ರಿ ಜೊತೆ ಚರ್ಚೆ
ಮಧ್ಯಾಹ ೨.೩೦: ಡಿವಿಎಸ್, ಆಚಾರ್ಯ, ಬೊಮ್ಮಾಯಿ, ಸುರೇಶ್ಕುಮಾರ್, ಜೇಟ್ಲಿ ಚರ್ಚೆ
ಸಂಜೆ ೪.೨೫: ಹೋಟೆಲ್ನಲ್ಲಿ ಜೇಟ್ಲಿ, ಡಿವಿಎಸ್, ಸುರೇಶ್ ಕುಮಾರ್ ಚರ್ಚೆ
ಸಂಜೆ ೫.೧೦: ಜೇಟ್ಲಿ ಜತೆ ಕರುಣಾಕರರೆಡ್ಡಿ, ಜಾರಕಿಹೊಳಿ, ಶಿವನಗೌಡ ನಾಯಕ್ ಭೇಟಿ
ರಾತ್ರಿ ೮.೦೦: ಇತರ ಮುಖಂಡರ ಜತೆ ಜೇಟ್ಲಿ ಮಾತುಕತೆ ಮುಂದುವರಿಕೆ
ರಾತ್ರಿ ೯.೦೦: ಯಡಿಯೂರಪ್ಪ ಅವರಿಂದ ಮತ್ತೊಮ್ಮೆ ಅರುಣ್ ಜೇಟ್ಲಿ ಭೇಟಿ
ಸೌಜನ್ಯ: ಕನ್ನಡಪ್ರಭ