ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಕೇಂದ್ರ ರೈಲ್ವೇ ಬಜೆಟ್ - ಉತ್ತರ ಕನ್ನಡ ಜಿಲ್ಲೆಗೆ ನಿರಾಶೆ

ಭಟ್ಕಳ: ಕೇಂದ್ರ ರೈಲ್ವೇ ಬಜೆಟ್ - ಉತ್ತರ ಕನ್ನಡ ಜಿಲ್ಲೆಗೆ ನಿರಾಶೆ

Sun, 28 Feb 2010 16:24:00  Office Staff   S.O. News Service

ಭಟ್ಕಳ. ಫೆಬ್ರವರಿ 28: ಕೇಂದ್ರದ ರೇಲ್ವೆ ಬಜೆಟ್ ಉತ್ತರ ಕನ್ನಡ ಜಿಲ್ಲೆಗೆ ನಿರಾಶೆಯನ್ನು ತಂದಿದೆ ಎಂದು ಜಾತ್ಯಾತೀತ ಜನತಾದಳದ ಜಿಲ್ಲಾಧ್ಯಕ್ಷ ಪ್ರಮೋದ್ ಹೆಗಡೆ ಅಭಿಪ್ರಾಯಪಟ್ಟರು.

 

ಅವರು ಇಲ್ಲಿನ ಪ್ರವಾಸಿ ಬಂಗ್ಲೆಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದು ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ಇದನ್ನು ತಡೆಯಲು ರಾಜ್ಯ ಸರಕಾರ ರೈತರ ಸಾಲವನ್ನು ಮನ್ನಾ ಮಾಡಬೇಕು ಎಂದ ಒತ್ತಾಯಿಸಿದ ಅವರು ರಾಜ್ಯ ಸರಕಾರ ಮಂಡಿಸಲಿರುವ ಬಜೆಟ್‌ನಲ್ಲಿ ಈ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಇಲ್ಲದೇ ಕಂಗಾಲಾಗಿದ್ದಾರೆ. ಸಹಕಾರಿ ಸಂಘಗಳು, ಬ್ಯಾಂಕುಗಳಲ್ಲಿ ಮಾಡಿದ ಸಾಲಗಳನ್ನು ಮರುಪಾವತಿ ಮಾಡಲಾಗದೇ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ರೈತರಿಗೆ ಉತ್ತೇಜನ ನೀಡುವ ಸಲುವಾಗಿ ಬಜೆಟ್‌ನಲ್ಲಿ ಸರಕಾರ ರೈತರ ಸಾಲ ಮನ್ನಾ ಮಾಡಿ ಕೃಷಿ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡಬೇಕಿದೆ ಎಂದರು. ವಿವಿಧ ಕಾರಣಗಳಿಗಾಗಿ ರೈತರ ಭೂಮಿಯನ್ನು ಕಬಳಿಕೆ ಮಾಡುವುದನ್ನು ಜೆ ಡಿ ಎಸ್ ವಿರೋಧಿಸುತ್ತದೆ. ಕೇಂದ್ರದ ರೇಲುವೆ ಬಜೆಟ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲೆಯ ಜನರ ಬಹುದಿನಗಳ ಕನಸಾದ ಹೊನ್ನಾವರ ತಾಳಗುಪ್ಪ, ಅಂಕೋಲಾ ಹುಬ್ಬಳ್ಳಿ ರೇಲುವೆ ಯೋಜನೆಗೆ ಬಜೆಟ್‌ನಲ್ಲಿ ಹಣ ಇಟ್ಟಿಲ್ಲ. ಇವೆರಡೂ ಯೋಜನೆಗಳಿಗೆ ಕೇಂದ್ರ ಸರಕಾರದ ರೇಲುವೆ ಇಲಾಖೆ ಸ್ಪಂದಿಸಿದ್ದರೆ ಉತ್ತರ ಕನ್ನಡ ಜಿಲ್ಲೆ ಉತ್ತರ ಕರ್ನಾಟಕದ ಹೆಬ್ಬಾಗಿಲು ಆಗುವುದರಲ್ಲಿ ಸಂಶಯವಿರಲಿಲ್ಲ. ಈ ರೈಲ್ವೆ ಯೋಜನೆಯಿಂದ ಜಿಲ್ಲೆಯ ಅಭಿವೃದ್ದಿಯ ಜೊತೆಗೆ ಕಾರವಾರ, ಬೇಲೇಕೇರಿ, ತದಡಿ ಬಂದರುಗಳು ಇನ್ನಷ್ಟು ಅಭಿವೃದ್ದಿಗೊಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸುತ್ತಿತ್ತು. ಆದರೆ ಕೇಂದ್ರ ಸರಕಾರ ರೈಲ್ವೆ ಬಜೆಟ್‌ನಲ್ಲಿ ಜಿಲ್ಲೆಗೆ ಅನ್ಯಾಯ ಮಾಡಿದ್ದರಿಂದ ಜಿಲ್ಲೆಯ ಅಭಿವೃದ್ದಿಗೆ ಮತ್ತೆ ಹಿನ್ನಡೆಯಾದಂತಾಗಿದೆ ಎಂದರು.

 

ಭಟ್ಕಳದಲ್ಲಿ ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯ ದೃಷ್ಟಿಯನ್ನಿಟ್ಟುಕೊಂಡು ಮಾವಳ್ಳಿ, ಶಿರಾಲಿ,ಜಾಲಿ, ಬೆಳಕೆ ಹಾಗೂ ನಗರ ಸೇರಿದಂತೆ ಒಟ್ಟೂ ಐದು ಸ್ಥಾನೀಯ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇವರೇ ಆಯಾ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಪಕ್ಷದ ಸಂಘಟನೆಯ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ. ಇಡೀ ತಾಲೂಕಿಗೆ ಸಂಬಂಧಪಟ್ಟಂತೆ ಹಿರಿಯ ಮುಖಂಡರನ್ನೊಳಗೊಂಡ ಉಸ್ತುವಾರಿ ಸಮಿತಿಯನ್ನು ರಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲರ ಒಮ್ಮತ ಮೇಲೆ ಅಧ್ಯಕ್ಷರಾಯ್ಕೆಯನ್ನು ಮಾಡಲಾಗುತ್ತದೆ ಎಂದರು. ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ. ಎಲ್ಲರೂ ಒಗ್ಗಟ್ಟಾಗಿ ಸಂಘಟನೆಗೆ ದುಡಿಯುತ್ತಿದ್ದೇವೆ. ಈ ಬಾರಿ ಪ್ರತಿ ತಾಲೂಕಿನಲ್ಲೂ ಸಹ ಹೆಚ್ಚಿನ ಸದಸ್ಯತ್ವವನ್ನು ಮಾಡಬೇಕೆಂಬ ಆಶಯ ಇಟ್ಟುಕೊಳ್ಳಲಾಗಿದ್ದು, ಮುಖಂಡರು ಈ ಬಗ್ಗೆ ಪ್ರಯತ್ನಿಸಬೇಕು ಎಂದರು. ಪತ್ರಿಕಾಗೋಷ್ಟಿಯಲ್ಲಿ ತಾಲೂಕು ಅಧ್ಯಕ್ಷ ಎಂ ಡಿ ನಾಯ್ಕ, ರಾಜ್ಯ ಸಮಿತಿಯ ಉಪಾಧ್ಯಕ್ಷ ಗಣಪಯ್ಯ ಗೌಡ, ಕ್ಷೇತ್ರಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ವೆಂಕಟೇಶ ನಾಯ್ಕ, ಮಂಜು ಗೊಂಡ,ಈಶ್ವರ ನಾಯ್ಕ, ಕೃಷ್ಣಾನಂದ ಪೈ, ರಾಜವರ್ಧನ ನಾಯ್ಕ, ಪಾಂಡುರಂಗ ನಾಯ್ಕ, ಸುರೇಶ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.


Share: