ಕುಂದಾಪುರ: ಕಳೆದ ಮೂರು ವರ್ಷಗಳಿಂದ ಕಳವುಗೈದಿದ್ದ ಬೈಕ್ ಗಳ ಸಹಿತ ಇಬ್ಬರು ಬೈಕ್ ಕಳ್ಳರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಅತ್ತಿಗುಡ್ಡ ಎಂಬಲ್ಲಿನ ಈಶ್ವರ ದೇವಸ್ಥಾನದ ಬಳಿಯ ನಿವಾಸಿ ಯಲ್ಲನಗೌಡ ಎಂಬಾತನ ಮಗ ಸೋಮಶೇಖರ (21) ಹಾಗೂ ಬಾಗಲಕೋಟೆ ಜಿಲ್ಲೆ ಹುನಗುಂಡ ತಾಲ್ಲೂಕು
ಚಿಕ್ಕೆರನಕೇರಿ, ಹೊಸಮನೆ ಎಂಬಲ್ಲಿನ ನಿವಾಸಿ ಯಲ್ಲನ ಗೌಡ ಎಂಬಾತನ ಮಗ ಶಂಕರ ಗೌಡ (23) ಎಂಬವರೇ ಆರೋಪಿಗಳು.

ಜೂನ್ ಒಂಭತ್ತರಂದು ಕೋಟ ಪೊಲೀಸರು ಗಸ್ತಿನಲ್ಲಿದ್ದಾಗ ವಡ್ಡರ್ಸೆ ಗ್ರಾಮದ ರೈಲ್ವೇ ಬ್ರಿಡ್ಜ್ ಬಳಿ ನಂಬರ್ ಪ್ಲೇಟ್ ಇಲ್ಲದ ಸ್ಪ್ಲೆಂಡರ್ ವಾಹನವನ್ನು ಸಂಶಯಾಸ್ಪದವಾಗಿ ನಿಲ್ಲಿಸಿರುವುದು ಗಮನಕ್ಕೆ ಬಂದು ಬೈಕ್ ಸಮೀಪ ನಿಂತಿದ್ದ ಇಬ್ಬರನ್ನು ವಿಚಾರಿಸಿದ್ದರು. ಈ ಸಂದರ್ಭ ಯಾವುದೇ ದಾಖಲೆಗಳು ಪತ್ತೆಯಾಗದ ಹಿನ್ನೆಲೆ ತನಿಖೆ ಚುರುಕುಗೊಳಿಸಿದಾಗ ಬೈಕ್ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಮೂರು ವರ್ಷಗಳಲ್ಲಿ ಹನ್ನೆರಡು ಬೈಕ್ ಕಳವು ನಡೆಸಿದ್ದು, ಅದರಲ್ಲಿ ಒಂಭತ್ತು ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ.

ಉಡುಪಿ, ಚಿಕ್ಕಮಗಳೂರು, ದಾವಣಗೆರೆ, ವಿಜಯನಗರ ಜಿಲ್ಲೆಗಳಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತಿದ್ದ ಈ ಇಬ್ಬರು ಆರೋಪಿಗಳು, ಉಡುಪಿ ನಗರ ಠಾಣೆ ವ್ಯಾಪ್ತಿಯಲ್ಲಿ 7, ಬ್ರಹ್ಮಾವರ ಠಾಣೆಯ 1, ಶಂಕರಾನಾರಾಯಣ ಠಾಣೆಯ 1, ಶೃಂಗೇರಿ ಠಾಣೆಯ 1, ವಿಜಯನಗರದ ಜಿಲ್ಲೆಯ ಇಟಗಿ ಠಾಣೆಯ 1 ಮತ್ತು ದಾವಣಗೆರೆ ಠಾಣೆಯ 1 ಪ್ರಕರಣಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇವುಗಳಲ್ಲಿ 3 ಪಲ್ಸರ್, 5 ಸ್ಪ್ಲೆಂಡರ್, ಹಾಗೂ 1 ಹೀರೋ ಹೆಚ್.ಎಫ್. ಡಿಲಕ್ಸ್ ಬೈಕ್ ಸೇರಿ ಅಂದಾಜು ನಾಲ್ಕೂವರೆ ಲಕ್ಷ ರೂಪಾಯಿ ಮೌಲ್ಯದ ಒಂಭತ್ತು ಬೈಕ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.