ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಲಬುರಗಿ ಪ್ರತ್ಯೇಕ ಅಪಘಾತ: ಐವರ ಸಾವು

ಕಲಬುರಗಿ ಪ್ರತ್ಯೇಕ ಅಪಘಾತ: ಐವರ ಸಾವು

Mon, 02 May 2022 23:36:07  Office Staff   S.O. News Service


ಕಲಬುರಗಿ:ನಗರದ ಹುಮನಾಬಾದ ರಸ್ತೆಯ ತಾವರಗೇರಾ ಕ್ರಾಸ್ ಬಳಿಯ ಸಲಾಮ್ ಟೇಕಡಿ ಮತ್ತು ಹುಮನಾಬಾದ ರಿಂಗ್ ರಸ್ತೆಯ ಮಣೂರ ಆಸ್ಪತ್ರೆ ಹತ್ತಿರ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಐವರು ಮೃತಪಟ್ಟಿದ್ದಾರೆ.
ತಾವರಗೇರಾ ಕ್ರಾಸ್ ನ ಸಲಾಮ್ ಟೇಕಡಿ ಬಳಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಮೇಲೆ ಹೊರಟಿದ್ದ ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಶ್ರೀರಾಮಪಲ್ಲಿಯ ಸಾಯಿಕಿರಣ್ ರೆಡ್ಡಿ (25) ಮತ್ತು 25 ವರ್ಷ ವಯಸ್ಸಿನ ಇನ್ನೋರ್ವ ಯುವಕ ಮೃತಪಟ್ಟಿದ್ದು, ಆತನ ಹೆಸರು ತಿಳಿದುಬಂದಿಲ್ಲ.
ಇನ್ನು ನಗರದ ಹುಮನಾಬಾದ ರಿಂಗ್ ರಸ್ತೆಯ ಮಣೂರ ಆಸ್ಪತ್ರೆ ಹತ್ತಿರ ಲಾರಿಗೆ ಹಿಂದಿನಿಂದ ಬೈಕ್ ಡಿಕ್ಕಿ ಹೊಡೆದು ಸುಲ್ತಾನಪುರ ಕ್ರಾಸ್ ನ ವೆಂಕಟೇಶ ತಂದೆ ಅಂಬಾದಾಸ (21), ನಗರದ ಬಸವೇಶ್ವರ ಕಾಲೋನಿಯ ಶಿವಕುಮಾರ ತಂದೆ ಮಹೇಶ (20), ಆದರ್ಶ ನಗರದ ಲಿಂಗರಾಜ ತಂದೆ ಸಿದ್ದಣ್ಣ (17) ಮೃತಪಟ್ಟಿದ್ದಾರೆ. ಇದರಲ್ಲಿ ವೆಂಕಟೇಶ ಸ್ಥಳದಲ್ಲಿಯೇ ಮೃತಪಟ್ಟರೆ, ಶಿವಕುಮಾರ ಮತ್ತು ಲಿಂಗರಾಜ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.

ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಪಿಐ ಶಾಂತಿನಾಥ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಹೆಲ್ಮೆಟ್ ಧರಿಸಿದ್ದರೂ ಜೀವ ಉಳಿಯಲಿಲ್ಲ
ನಗರದ ಹುಮನಾಬಾದ ರಸ್ತೆಯ ತಾವರಗೇರಾ ಹತ್ತಿರದ ಸಲಾಮ್ ಟೇಕಡಿ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಇಬ್ಬರು ಬೈಕ್ ಸವಾರರು ಹೆಲ್ಮೆಟ್ ಧರಿಸಿದ್ದರು ಎಂದು ತಿಳಿದುಬಂದಿದೆ.
ಆದರೆ, ಬೈಕ್‍ಗೆ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರರ ತಲೆಯ ಮೇಲೆ ಹಾದು ಹೋಗಿರುವುದರಿಂದ ಅವರ ಜೀವ ಉಳಿಯಲಿಲ್ಲ ಎಂದು ತಿಳಿದುಬಂದಿದೆ. ಅದೆಷ್ಟೋ ಅಪಘಾತ ಪ್ರಕರಣಗಳಲ್ಲಿ ಹೆಲ್ಮೆಟ್ ಧರಿಸಿದ್ದರಿಂದ ಬೈಕ್ ಸವಾರರ ಪ್ರಾಣ ಉಳಿದಿದೆ. ಆದರೆ ಈ ಪ್ರಕರಣದಲ್ಲಿ ಹೆಲ್ಮೆಟ್ ಧರಿಸಿದ್ದರೂ ಜೀವ ಉಳಿದಿಲ್ಲ. ಇದನ್ನು ವಿಧಿಯಾಟಯೆನ್ನದೆ ಬೇರೆ ವಿಧಿಯಿಲ್ಲ.


Share: