ಬೆಂಗಳೂರು: ಪಿಎಸ್ ಐ ನೇಮಕಾತಿ ಪರೀಕ್ಷೆಯ ಅಕ್ರಮ ಕೇವಲ ಕಲಬುರಗಿಯಲ್ಲಿ ಮಾತ್ರ ನಡೆದಿಲ್ಲ, ಬೆಂಗಳೂರಿನಲ್ಲೂ ಭಾರೀ ಅಕ್ರಮ ನಡೆದಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ 22 ಪಿಎಸ್ ಐ ಅಭ್ಯರ್ಥಿಗಳ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಈ ಸಂಬಂಧ ತನಿಖಾ ತಂಡ ಈಗಾಗಲೇ 12 ಅಭ್ಯರ್ಥಿಗಳನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದೆ. ಇನ್ನು ಆರೋಪಿಗಳ ಪೈಕಿ 10 ಅಭ್ಯರ್ಥಿಗಳು ತಲೆಮರೆಸಿಕೊಂಡಿದ್ದಾರೆ. 22 ಅಭ್ಯರ್ಥಿಗಳ ಪೈಕಿ ಮೂವರು ಕಾನ್ಸ್ ಟೇಬಲ್ ಗಳ ಮೇಲೂ ಎಫ್ ಐ ಆರ್ ದಾಖಲಾಗಿದೆ. ಪಿಎಸ್ ಐ ಗೆ ಸೆಲೆಕ್ಟ್ ಆಗಿ ಈ ಮೂವರು ಕಾನ್ಸ್ ಟೇಬಲ್ ಗಳು ಈಗ ಅಕ್ರಮದಲ್ಲಿ ಸಿಲುಕಿಕೊಂಡಿದ್ದಾರೆ.
ಕಾನ್ಸ್ ಟೇಬಲ್ ಮಮತೇಸ್ ಗೌಡ ಪಿಎಸ್ ಐ ಪರೀಕ್ಷೆಯಲ್ಲಿ 27 ನೇ ರ್ಯಾಂಕ್ ಪಡೆದಿದ್ದಾನೆ. ಆದರೆ ಈತ ರೆಡ್ ಸ್ಯಾಂಡಲ್ ಅಕ್ರಮ ಮಾರಾಟ ಕೇಸ್ ನಲ್ಲಿ ಸಿಲುಕಿಕೊಂಡಿದ್ದು ಸಸ್ಪೆಂಡ್ ಸಹ ಆಗಿದ್ದ. ಈತನ ವಿರುದ್ಧ ಕ್ರಿಮಿನಲ್ ಕೇಸ್ ಇದ್ದರೂ ಸಹ ಈತ ಪಿಎಸ್ ಐ ಪರೀಕ್ಷೆಯಲ್ಲಿ ಸೆಲೆಕ್ಟ್ ಆಗಿದ್ದ. ಇನ್ನುಳಿದಂತೆ ಇನ್ ಸರ್ವೀಸ್ ವಿಭಾಗದಲ್ಲಿ ಮೊದಲ ರ್ಯಾಂಕ್ ಪಡೆದಿದ್ದ ಗಜೇಂದ್ರ ಮತ್ತು 3 ನೇ ರ್ಯಾಂಕ್ ಪಡೆದಿದ್ದ ಯಶವಂತ್ ದೀಪ್ ವಿರುದ್ಧವೂ ಎಫ್ ಐ ಆರ್ ದಾಖಲಾಗಿದೆ.
ಇನ್ನು ನಿನ್ನೆ ಪಿಎಸ್ ಐ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿಜಯಪುರ ಮೂಲದ ರಚನಾ ಹನುಮಂತ ಮೇಲೂ ಎಫ್ ಐ ಆರ್ ದಾಖಲಾಗಿದೆ. ಮಹಿಳೆಯರ ವಿಭಾಗದಲ್ಲಿ ರಚನಾ ಟಾಪರ್ ಆಗಿದ್ದು, ಈ ಪ್ರಕರಣದಲ್ಲಿ ಅವರು 17 ನೇ ಆರೋಪಿಯಾಗಿದ್ದಾರೆ.
ತನಗೆ ಅನ್ಯಾಯ ಆಗಿದೆ, ಕಷ್ಟ ಪಟ್ಟು ಓದಿ ಪರೀಕ್ಷೆ ಬರೆದಿದ್ದ ಎಂದು ರಚನಾ ಹೇಳಿಕೊಂಡಿದ್ದರು. ಆದೆರ ರಚನಾ ಒಎಂಆರ್ ಶೀಟ್ ನಲ್ಲಿ ವ್ಯಾತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಆಕೆಯ ವಿರುದ್ಧ ಕೇಸ್ ದಾಖಲಾಗಿದೆ. ರಚನಾ ಮೊದಲ ಪೇಪರ್ ನಲ್ಲಿ 25 ಅಂಕ ಪಡೆದಿದ್ದರೆ, ಎರಡನೇ ಪೇಪರ್ ನಲ್ಲಿ 128.25 ಅಂಕ ಪಡೆದಿದ್ದರು. ಒಟ್ಟು 153.25 ಅಂಕ ಪಡೆಯುವ ಮೂಲಕ ಮಹಿಳೆಯರ ವಿಭಾಗದಲ್ಲಿ ಟಾಪರ್ ಆಗಿದ್ದರು.