ಕಾರವಾರ : ನಗರದಲ್ಲಿರುವ ಕರಾವಳಿ ದೋಣಿ ವಿಹಾರ ಮತ್ತು ಸಾಹಸ ಕೇಂದ್ರದ ವತಿಯಿಂದ ಭಾನುವಾರ ಅಲಿಗದ್ದಾ ಕಡಲತೀರ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.
ಕಳೆದ ಕೆಲ ದಿನಗಳಿಂದ ಅಲಿಗದ್ದಾ ಕಡಲತೀರದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಯುವಕರಿಗಾಗಿ ಈಜು ತರಬೇತಿ ಶಿಬಿರ ಆರಂಭಿಸಲಾಗಿದ್ದು, ಈಜು ತರಬೇತಿಯಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳು ಒಟ್ಟಾಗಿ ಸೇರಿ ಕಡಲ ತೀರದಲ್ಲಿ ಕಂಡಕಂಡಲೆಲ್ಲಾ ಕುಡಿದು ಏಸೆದ ಖಾಲಿ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್, ಎಲ್ಲೆಂದರಲ್ಲಿ ಬಿದ್ದಿರುವ ಹಾಳಾದ ಬಲೆಗಳು, ಕಸಕಡ್ಡಿಗಳನ್ನ ಸ್ವಚ್ಚಗೊಳಿಸಿ ರಾಶಿ ಹಾಕಿದರು. ಬಳಿಕ ನಗರಸಭೆ ವಾಹನದ ಮುಖಾಂತರ ಡಂಪಿಂಗ್ ಯಾರ್ಡ್ಗೆ ರವಾನಿಸಿದರು.
ಸುಂದರವಾಗಿರುವ ಅಲಿಗದ್ದಾ ಕಡಲತೀರ ಇತ್ತೀಚಿನ ದಿನಗಳಲ್ಲಿ ಕುಡುಕರ ಮೋಜು ಮಸ್ತಿನ ತಾಣವಾಗಿ ಮಾರ್ಪಟ್ಟಿದೆ. ಸಿಕ್ಕಸಿಕ್ಕ ಕಡೆಗಳಲ್ಲಿ ಬಾಟಲಿಗಳನ್ನ ಏಸೆಯುತ್ತಿದ್ದಾರೆ. ನಾವು ನಮ್ಮ ಮಕ್ಕಳೊಂದಿಗೆ ಇಂದು ಸ್ವಚ್ಚಗೊಳಿಸಿದ್ದೇವೆ. ಬೀಚ್ಗೆ ತೆರಳುವ ಮಾರ್ಗದಲ್ಲಿ ಬೋಟೊಂದನ್ನ ಅನೇಕ ದಿನಗಳಿಂದ ಇಡಲಾಗಿದ್ದು, ಪ್ರವಾಸಿಗರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಬೋಟ್ ತೆರವುಗೊಳಿಸಿ ಬೀಚ್ ಚೆಂದವಾಗಿ ಇಡಲು ಸಂಬಂಧಪಟ್ಟವರು ಗಮನಹರಿಸಬೇಕೆಂದು ಮಕ್ಕಳ ಪಾಲಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಕರಾವಳಿ ದೋಣಿ ವಿಹಾರ ಕೇಂದ್ರದ ಪ್ರಕಾಶ ಹರಿಕಂತ್ರ, ಚಂದ್ರಕಾಂತ ಹರಿಕಂತ್ರ, ಈಜು ತರಬೇತುದಾರ ಗುರುರಾಜ ತಾಂಡೇಲ, ಮೋಹನ ತಾಂಡೇಲ, ಉಲ್ಲಾಸ ಹರಿಕಂತ್ರ, ಸೇರಿದಂತೆ ಶಿಬಿರಾರ್ಥಿಗಳ ಪಾಲಕರು ಉಪಸ್ಥಿತರಿದ್ದರು