ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ನವದೆಹಲಿ:ಖಾಸಗೀಕರಣ, ಶೇರು ಮಾರಾಟದ ವಿರುದ್ಧ ಬಿಎಸ್ಎನ್ಎಲ್, ಕಲ್ಲಿದ್ದಲು ಕಾರ್ಮಿಕರ ಮುಷ್ಕರ

ನವದೆಹಲಿ:ಖಾಸಗೀಕರಣ, ಶೇರು ಮಾರಾಟದ ವಿರುದ್ಧ ಬಿಎಸ್ಎನ್ಎಲ್, ಕಲ್ಲಿದ್ದಲು ಕಾರ್ಮಿಕರ ಮುಷ್ಕರ

Thu, 29 Apr 2010 14:47:00  Office Staff   S.O. News Service
ನವದೆಹಲಿ, ಏಪ್ರಿಲ್ ೩೦:ಯುಪಿಎ-2 ಸರಕಾರದ ಖಾಸಗೀಕರಣದ ಓಟಕ್ಕೆ ಹೆಚ್ಚೆಚ್ಚು ಪ್ರತಿರೋಧ ಬರಲಾರಂಭಿಸಿದೆ. ಮೊದಲೆ ನೋಟೀಸು ಕೊಟ್ಟಂತೆ ಸುಮಾರು 3 ಲಕ್ಷ ಬಿಎಸ್ಎನ್ಎಲ್ ನೌಕರರು ಎಪ್ರಿಲ್ 20ರಿಂದ ಅನಿರ್ಧಿಷ್ಟ ಕಾಲದ ಮುಷ್ಕರ ಆರಂಭಿಸಿದರು. ದೇಶಾದ್ಯಂತ ಬಿಎಸ್ಎನ್ಎಲ್ನ 3000 ಕಚೇರಿಗಳು ಕೆಲಸ ಮಾಡಲಿಲ್ಲ. ಹಲವೆಡೆ ರ್ಯಾಲಿಗಳು, ಸಭೆಗಳು ನಡೆದವು. ಎಲ್ಲಾ ನೌಕರರ ಸಂಘಟನೆಗಳ ಜಂಟಿ ವೇದಿಕೆಯ ಮುಷ್ಕರದ ಕರೆಗೆ ದೊರೆತ ಸಂಪೂರ್ಣ ಬೆಂಬಲವನ್ನು ಕಂಡ ಸರಕಾರ ಕಾರ್ಮಿಕ ಸಂಘಗಳ ಮುಂಖಂಡರನ್ನು ಮಾತುಕತೆಗೆ ಕರೆಯಿತು. ಎರಡು ಗಂಟೆಗಳ ಕಾಲ ಚರ್ಚೆ ನಡೆಯಿತು. ಶೇರು ಮಾರಾಟ, ಬಿಎಸ್ಎನ್ಎಲ್ ಮೂಲರಚನೆಗಳ ಪಾಲುದಾರಿಕೆ, ಕಡ್ಡಾಯ ನಿವೃತ್ತಿ ಇತ್ಯಾದಿಗಳ ಮೇಲೆ ಕಾರ್ಮಿಕ ಸಂಘಗಳೂ ಸೇರಿದಂತೆ ಸಂಬಂಧಪಟ್ಟ ಎಲ್ಲರೊಡನೆ ಚರ್ಚಿಸದೆ ನಿರ್ಣಯ ಕೈಗೊಳ್ಳುವುದಿಲ್ಲ, ಬಿಎಸ್ಎನ್ಎಲ್ಗೆ 3 ಕೋಟಿ ಮೊಬೈಲ್ ಲೈನುಗಳನ್ನು ಕೊಡಲಾಗುವುದು ಇತ್ಯಾದಿ ವಚನಗಳನ್ನು ಸಂಪರ್ಕ ಮತ್ತು ಐಟಿ ಮಂತ್ರಿ ಕೊಡಬೇಕಾಗಿ ಬಂತು. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಬಿಎಸ್ಎನ್ಎಲ್ ನೌಕರರು ತಮ್ಮ ಮುಷ್ಕರವನ್ನು ಹಿಂತೆಗೆದುಕೊಂಡಿದ್ದಾರೆ. ಇದರ ಹಿಂದಿನ ದಿನ ಐದು ಕಲ್ಲಿದ್ದಲು ಕಾರ್ಮಿಕರ ಒಕ್ಕೂಟಗಳ ಕರೆಯಂತೆ ಮೇ 5ರಿಂದ 72ಗಂಟೆಗಳ ಮುಷ್ಕರದ ನೋಟೀಸು ಸಂಬಂಧಪಟ್ಟ ಕಲ್ಲಿದ್ದಲು ಕಂಪನಿಗಳಿಗೆ ನೀಡಲಾಗಿದೆ. ಈ ಮುಷ್ಕರವೂ ಕಲ್ಲಿದ್ದಲು ವಲಯದಲ್ಲಿ ಖಾಸಗೀಕರಣ ಮತ್ತು ಶೇರು ಮಾರಾಟದ ನೀತಿಗಳನ್ನು ವಿರೋಧಿಸಿ ನಡೆಯುತ್ತಿದೆ. ಇದಕ್ಕೆ ಮೊದಲು ಮಾರ್ಚ್ 5 ರಂದು ಕಾರ್ಮಿಕ ಸಂಘಟನೆಗಳ ದೇಶವ್ಯಾಪಿ ಕಾರ್ಯಾಚರಣೆಯಲ್ಲಿ 10 ಲಕ್ಷ ಕಾರ್ಮಿಕರು ಭಾಗವಹಿಸಿದ್ದರು. ಖಾಸಗೀಕರಣ ಮತ್ತು ಶೇರು ಮಾರಾಟದ ವಿರುದ್ಧ ಬಿಎಸ್ಎನ್ಎಲ್ ಮತ್ತು ಕಲ್ಲಿದ್ದಲು ಕಾಮರ್ಿಕರನ್ನು ಬೆಂಬಲಿಸಿ ಎಂದು ಎಲ್ಲ ಸಾರ್ವಜನಿಕ ವಲಯದ ಕಾರ್ಮಿಕರಿಗೆ ಕರೆ ನೀಡಿರುವ ಕೇಂದ್ರ ಕಾರ್ಮಿಕ ಸಂಘಟನೆಗಳು ಕಾರ್ಮಿಕರ ಹೋರಾಟವನ್ನು ಮುಂದೊಯ್ಯಲು ಒಂದು ಬೃಹತ್ ಕೈಗಾರಿಕಾ ಕಾರ್ಯಾಚರಣೆಗೆ ಸಿದ್ಧವಾಗಬೇಕು, ಈ ನಿಟ್ಟಿನಲ್ಲಿ ಜುಲೈ ತಿಂಗಳಲ್ಲಿ ಕಾರ್ಮಿಕ ಸಂಘಟನೆಗಳ ರಾಷ್ಟ್ರೀಯ ಸಮಾವೇಶ ನಡೆಸಲಾಗುತ್ತಿದೆ ಎಂದು ತಿಳಿಸಿವೆ. ಸೌಜನ್ಯ: ಜನಶಕ್ತಿ

Share: