ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಒತ್ತಡದ ಜೀವನ ನಿರ್ವಹಣೆಗೆ ಯೋಗಾಭ್ಯಾಸ ಮಹತ್ವದ್ದಾಗಿದೆ -ಎಂ.ಎ.ಮರಿಗೌಡರ

ಒತ್ತಡದ ಜೀವನ ನಿರ್ವಹಣೆಗೆ ಯೋಗಾಭ್ಯಾಸ ಮಹತ್ವದ್ದಾಗಿದೆ -ಎಂ.ಎ.ಮರಿಗೌಡರ

Thu, 09 Jun 2022 04:31:21  Office Staff   SO News

ಧಾರವಾಡ : ಮಾನಸಿಕವಾಗಿ, ಶಾರೀರಿಕವಾಗಿ ಚೈತನ್ಯದಿಂದ ಇರಲು, ಒತ್ತಡಯುತ ಜೀವನದ ನಿರ್ವಹಣೆಗೆ ಯೋಗಾಭ್ಯಾಸ ಮಹತ್ವದ್ದಾಗಿದೆ ಎಂದು ಕೇಂದ್ರ ಉಪಕಾರಾಗೃಹದ ಅಧೀಕ್ಷಕ ಎಂ.ಎ.ಮರಿಗೌಡರ ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕೇಂದ್ರ ಕಾರಾಗೃಹ,  ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಪತಂಜಲಿ ಪೀಠ ಇವರ ಸಂಯುಕ್ತ ಆಶ್ರಯದಲ್ಲಿ  ಕೇಂದ್ರ ಕಾರಾಗೃಹದ ಗಾಂಧೀಭವನದಲ್ಲಿ ಇತ್ತೀಚೆಗೆ ಪ್ರಾರಂಭವಾದ ಯೋಗಾಸನ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. 

ಬಂಧಿಗಳು ಕಾರಾಗೃಹದ ಅವಧಿಯಲ್ಲಿ ಮುಂಜಾನೆ ಮತ್ತು ಸಾಯಂಕಾಲ ಯೋಗದ ಅಭ್ಯಾಸ ರೂಢಿಸಿಕೊಂಡು ತಮ್ಮಲ್ಲಿರುವ ಮಾನಸಿಕ ಒತ್ತಡವನ್ನು ನಿವಾರಿಸಿಕೊಂಡು ಸದೃಢ ಆರೋಗ್ಯವನ್ನು ಹೊಂದಲು ಕರೆ ನೀಡಿದರು. 

ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎ.ಎ.ಖಾಜಿ ಮಾತನಾಡಿ, ಕೇಂದ್ರ ಕಾರಾಗೃಹದ 97 ಜನ ಅನಕ್ಷರಸ್ಥರನ್ನು, ಸಾಕ್ಷರನ್ನಾಗಿ ಮಾಡಿ, ಸ್ವಾವಲಂಬನೆ ಅರಿವು ಮೂಡಿಸಿ, ನಿರಂತರ ಕಲಿಕೆಗೆ ನವಸಾಕ್ಷರರ ಪುಸ್ತಕ ನೀಡಲಾಗಿದೆ. ಸಮಾನ ಶಿಕ್ಷಣಕ್ಕಾಗಿ ಅವಕಾಶ ಕಲ್ಪಿಸಲಾಗಿದೆ. ಜಿಲ್ಲಾ ಪಂಚಾಯತ್ ಅನುದಾನದಲ್ಲಿ ಕಳೆದ ಸಾಲಿನಲ್ಲಿ 5685 ಜನ ಅನಕ್ಷರಸ್ಥರಿಗೆ ಅಕ್ಷರ ಬೋಧಿಸಿ, ಮೌಲ್ಯಮಾಪನ ಪರೀಕ್ಷೆ ಮಾಡಲಾಗುತ್ತಿದೆ.         2022-23 ನೇ ಸಾಲಿನಲ್ಲಿ ಜಿಲ್ಲೆಗೆ 10 ಸಾವಿರ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸುವ ಗುರಿ ನೀಡಲಾಗಿದೆ. ಎಸ್.ಸಿ ಮತ್ತು ಎಸ್.ಟಿ, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಅನಕ್ಷರಸ್ಥರಿರುವ ಗ್ರಾಮ ಪಂಚಾಯತ್‍ಗಳನ್ನು ಆಯ್ಕೆ ಮಾಡಿ ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತಿದೆ. ಸಾಕ್ಷರತೆಯು ರಾಷ್ಟೀಯ ಕಾರ್ಯಕ್ರಮ ಆಗಿರುವುದರಿಂದ ಜನಪ್ರತಿನಿಧಿಗಳು ಹಾಗೂ ಇತರೆ ಇಲಾಖೆಗಳ ಅಧಿಕಾರಿ ವರ್ಗದವರು ಹಾಗೂ ಸರ್ಕಾರೇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
 
ರೇಣುಕಾ ಲಿಂಬಣ್ಣದೇವರಮಠ ಮಾರ್ಗದರ್ಶನದಲ್ಲಿ ಯೋಗಾಸನ ತರಬೇತಿ ಪ್ರಾರಂಭಗೊಂಡಿತು. ಶಿವಕುಮಾರ ಜೋಗಣ್ಣವರ, ಮಹಾಂತೇಶ ಲಿಂಬಣ್ಣದೇವರಮಠ ಕಾರಾಗೃಹದ ಅಧಿಕಾರಿಗಳು ಉಪಸ್ಥಿತರಿದ್ದರು. ಸಂಸ್ಥೆಯ ಶಿಕ್ಷಕ ಪಿ.ಬಿ.ಕುರಬೆಟ್ಟ ಸ್ವಾಗತಿಸಿದರು. ಎಸ್.ಆರ್.ರಾಚಣ್ಣವರ ವಂದಿಸಿದರು.

 


Share: