ಭಟ್ಕಳ: ತಾಲೂಕಿನ ಬೆಳಕೆ ಎಂಡೋಸಲ್ಫಾನ್ ಪೀಡಿತ ಅಂಗವಿಕಲ ಮಕ್ಕಳ ಆರೈಕೆಗೆ ಸೇವಾ ಕೇಂದ್ರ (ಡೇ ಕೇರ್ ಸೆಂಟರ್) ಆರಂಭಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರಿಗೆ ವೃಕ್ಷಲಕ್ಷ ಆಂದೋಲನ ಮನವಿ ಮಾಡಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿದ ಅನಂತ ಹೆಗಡೆ ಅಶೀಸರ ಅವರ ನೇತೃತ್ವದ ಪರಿಸರ ನಿಯೋಗ ಮೀನುಗಾರಿಕಾ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಮಂಕಾಳ ವೈದ್ಯ ಅವರನ್ನು ಅವರ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಜಿಲ್ಲೆಯ ಸುಸ್ಥಿರ ಅಭಿವೃದ್ಧಿ ಹಾಗೂ ಅರಣ್ಯ ಅಭಿವೃದ್ಧಿ ಬಗ್ಗೆ ವಿಶೇಷ ಶಿಫಾರಸು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮೀನುಗಾರಿಕಾ ಇಲಾಖೆ ಮೂಲಕ ಕರಾವಳಿ ಮಲೆನಾಡಿನ ನದಿಗಳಲ್ಲಿ ಈಗಾಗಲೇ ಗುರುತಿಸಿರುವ ೧೫ ಮತ್ಸಧಾಮಗಳ ಅಧ್ಯಯನ ವರದಿಯನ್ನು ಜೀವವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷ ಅನಂತ ಅಶೀಸರ ಮೀನುಗಾರಿಕಾ ಸಚಿವರಿಗೆ ಸಲ್ಲಿಸಿದರು. ವಿಜ್ಞಾನಿ ಡಾ| ಪ್ರೀತಂ ಅವರು ಈಗಾಗಲೇ ೧೧ ಸ್ಥಳಗಳನ್ನು ಇಲಾಖೆ ೨೦೧೨ರಲ್ಲೇ ಘೋಷಣೆ ಮಾಡಿದೆ ಎಂಬ ಮಾಹಿತಿ ನೀಡಿದರು.
ಭಟ್ಕಳ ತಾಲೂಕಿನ ಬೆಳಕೆಯ ಎಂಡೋಸಲ್ಫಾನ್ ಪೀಡಿತರ ಅಂಗವಿಕಲ, ಬುದ್ಧಿಮಾಂದ್ಯ ಮಕ್ಕಳ ಸಲುವಾಗಿ ಆರೈಕೆ ಕೇಂದ್ರ (ಡೇಕೇರ್ ಸೆಂಟರ್) ಪ್ರಾರಂಭಿಸಬೇಕು. ಅಂಗವಿಕ ಮಕ್ಕಳಿಗೆ ಮಾಶಾಸನ ನೀಡಬೇಕು ಎಂದು ಅನಂತ ಹೆಗಡೆ ಅಶೀಸರ ಸಚಿವರ ಗಮನ ಸೆಳೆದರು. ೨೦೧೦-೧೧ರಲ್ಲಿ ಬೆಳಕೆಯಲ್ಲಿ ಕೈಗೊಂಡ ಅಧ್ಯಯನ ಸಮೀಕ್ಷೆ ಬಗ್ಗೆ ಮಾಹಿತಿ ನೀಡಿದರು. ಇದಕ್ಕೆ ಸ್ಪಂದಿಸಿದ ಸಚಿವ ಮಂಕಾಳ ವೈದ್ಯ ಅವರು ಬೆಳಕೆ ಎಂಡೋ ಪೀಡಿತರ ವಿಶೇಷ ಮಕ್ಕಳಿಗೆ ಡೇಕೇರ್ ಸೆಂಟರ್ ಆರಂಭಿಸುತ್ತೇವೆ ಎಂದು ಭರವಸೆ ನೀಡಿದರು. ಉ.ಕ. ಜಿಲ್ಲೆಯ ಅರಣ್ಯ ಅಭಿವೃದ್ಧಿ ಬಗ್ಗೆ ಶೀಘ್ರ ಭಟ್ಕಳದಲ್ಲಿ ಜಿಲ್ಲೆಯ ಅರಣ್ಯ ಅಧಿಕಾರಿಗಳ ಸಭೆ ನಡೆಸುತ್ತೇವೆ ಎಂದು ವೃಕ್ಷಲಕ್ಷ ನಿಯೋಗಕ್ಕೆ ತಿಳಿಸಿದ ಮಂಕಾಳ ವೈದ್ಯ ಜಿಲ್ಲೆಯ ಅಭಿವೃದ್ಧಿಯ ಕುರಿತು ವಿಶೇಷವಾಗಿ ಪರಿಸರದ ಕುರಿತು ಕಾಳಜಿ ವ್ಯಕ್ತಿಪಡಿಸಿದ್ದಾರೆ ಎಂದು ನಿಯೋಗ ಅಭಿಪ್ರಾಯ ಪಟ್ಟಿದೆ.