ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉತ್ತರಪ್ರದೇಶ: ಶೌಚಗುಂಡಿ ಸ್ವಚ್ಛಗೊಳಿಸುತ್ತಿದ್ದ ನಾಲ್ವರ ಸಾವು

ಉತ್ತರಪ್ರದೇಶ: ಶೌಚಗುಂಡಿ ಸ್ವಚ್ಛಗೊಳಿಸುತ್ತಿದ್ದ ನಾಲ್ವರ ಸಾವು

Tue, 30 May 2023 17:47:20  Office Staff   Vb

ಲಕ್ನೋ: ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ಶೌಚ ಗು೦ಡಿಯೊಂದರಲ್ಲಿ ವಿಷಾನಿಲ ಸೇವಿಸಿ ರವಿವಾರ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.

ಜಿಲ್ಲೆಯ ರಾಮನಗರ ಗ್ರಾಮದಲ್ಲಿ ದುರ್ಘಟನೆ ಸಂಭವಿಸಿದೆ. ಮೃತರನ್ನು ನಂದಕುಮಾರ್ (45), ನಿತೇಶ್ (25), ದಿನೇಶ್ (40) ಮತ್ತು ಆನಂದ್ (22) ಎಂಬುದಾಗಿ ಗುರುತಿಸಲಾಗಿದೆ.

ಗ್ರಾಮದಲ್ಲಿನ ಶೌಚಗುಂಡಿಯೊಂದನ್ನು ಶುಚಿಗೊಳಿಸುವ ಕೆಲಸವನ್ನು ನಂದಕುಮಾರ್‌ಗೆ ವಹಿಸಲಾಗಿತ್ತು. ಶುಚಿ ಮಾಡುತ್ತಿರುವಾಗ, ಅವರು ಗುಂಡಿಯ ಒಳಗೆ ಬಿದ್ದು ಸಿಕ್ಕಿಹಾಕಿಕೊಂಡರು. ಅವರನ್ನು ರಕ್ಷಿಸಲು ಮಗ ನಿತೇಶ್ ಗುಂಡಿಗೆ ಜಿಗಿದರು. ಆದರೆ ಅವರು ಕೂಡ ಅಲ್ಲಿ ಸಿಕ್ಕಿಹಾಕಿಕೊಂಡರು.

ಆಗ ಅವರ ಸಂಬಂಧಿಕರಾದ ದಿನೇಶ್ ಮತ್ತು ಆನಂದ್ ತಮ್ಮ ನೆರೆಮನೆಯವರಾದ ರಾಜ್‌ ಕುಮಾರ್ ಜೊತೆ ಗುಂಡಿಗೆ ಜಿಗಿದರು. ಆದರೆ, ಅವರೂ ಪ್ರಜ್ಞಾಹೀನರಾದರು. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಬಂದು ಶೌಚಗುಂಡಿಯನ್ನು ಸ್ವಚ್ಛಗೊಳಿಸಲು ಸಕ್ಷನ್ ಟ್ಯಾಂಕೊಂದನ್ನು ಬಳಸಿದರು.

ಐವರನ್ನು ಕೊತ್ವಾ ಆರೋಗ್ಯ ಕೇಂದ್ರಕ್ಕೆ ಒಯ್ಯಲಾಯಿತು. ನಾಲ್ವರು ಮೃತಪಟ್ಟಿದ್ದಾರೆ ಎಂಬುದಾಗಿ ಅಲ್ಲಿ ಘೋಷಿಸಲಾಯಿತು. ಗಂಭೀರ ಸ್ಥಿತಿಯಲ್ಲಿರುವ ರಾಜ್‌ಕುಮಾರ್‌ರನ್ನು ದೇವರಿಯ ವೈದ್ಯಕೀಯ ಕಾಲೇಜ್ ಸೇರಿಸಲಾಗಿದೆ.

ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.


Share: