ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮೂಡಬಿದಿರೆ: ವಿಶ್ವ ದಾಖಲೆಯತ್ತ ಆಳ್ವಾಸ್ ವರ್ಣ ಜಾಗೃತಿ: 1,260 ಕಲಾವಿದರು, 1,260 ಕಲಾಕೃತಿಗಳು

ಮೂಡಬಿದಿರೆ: ವಿಶ್ವ ದಾಖಲೆಯತ್ತ ಆಳ್ವಾಸ್ ವರ್ಣ ಜಾಗೃತಿ: 1,260 ಕಲಾವಿದರು, 1,260 ಕಲಾಕೃತಿಗಳು

Mon, 04 Jan 2010 03:07:00  Office Staff   S.O. News Service

ಮೂಡಬಿದಿರೆ, ಜ. ೩: ಮೊದಲಿದ್ದದ್ದು ೭೫೦ ಮೀ. ಕ್ಯಾನ್ವಾಸ್, ೭೫೦ ಚಿತ್ರ ಕಲಾವಿದರು, ಶುಕ್ರವಾ ರ, ಶನಿವಾರ ಅದು ೧,೦೦೦ಕ್ಕೇರಿತು. ರವಿವಾರ ಮೂಡಬಿದಿರೆಗೆ ಕಲಾವಿದರ ಮಹಾಸಾಗರವೇ ಹರಿದುಬಂದಿತು. ಸಾವಿರದ ಗಡಿ ದಾಟಿತು. ಮತ್ತೆ ಮತ್ತೆ ಕ್ಯಾನ್ವಾಸ್ ಹೊಡೆಯಲಾಯಿತು. ಕಿಟ್ ಕೊಡಲಾಯಿತು. ಮತ್ತೂ ನೂರಾರು ಮಂದಿಗೆ ಅವಕಾಶ ಸಿಗದಾಯಿತು.

ಸಾವಿರ ಕಂಬದ ಬಸದಿಯ ಚಾರಿತ್ರಿಕ ನಗರಿ ಮೂಡಬಿದಿರೆಯ ಪಶ್ಚಿಮ ಭಾಗದಲ್ಲಿರುವ ವಿದ್ಯಾ ಗಿರಿಯಲ್ಲಿ ರವಿವಾರ ನಡೆದ `ಆಳ್ವಾಸ್ ವರ್ಣ ಜಾಗೃತಿ' ಎಂಬ ರಾಜ್ಯ ಮಟ್ಟದ, ರಾಜ್ಯ/ರಾಷ್ಟ್ರ/ ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದರ ಬೃಹತ್ ಶಿಬಿರ ವರ್ಣರಂಜಿತವಾಗಿ ಸಂಪನ್ನ ಗೊಂಡದ್ದು ಹೀಗೆ. ದೇಶದ ಸಂಸ್ಕೃತಿ, ಕಲೆ, ಪ್ರಕೃತಿ... ಎಲ್ಲವೂ ಚಿತ್ರಗಳಾಗಿ ಮೂಡಿಬಂದವು. ೧,೦೦೦ ಅಲ್ಲ, ೧,೨೬೦ ಮೀ. ಕ್ಯಾನ್ವಾಸ್‌ನಲ್ಲಿ, ೧,೨೬೦ ಕಲಾವಿದರಿಂದ.

ಈ ರೀತಿ ಅತ್ಯಂತ ವ್ಯವಸ್ಥಿತವಾಗಿ ಹಿರಿ-ಕಿರಿಯ ಕಲಾವಿದರು ಒಂದೆಡೆ ಕಲೆತದ್ದು, ಚಿತ್ರ ರಚಿಸಿದ್ದು ಪ್ರಾಯಃ ಇದೇ ಮೊದಲು ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ಬಿ. ಕೆ. ಎಸ್. ವರ್ಮಾ ಉದ್ಗರಿಸಿದರು.

ಬೆಳಗಾವಿಯ ಮಹಾಲಿಂಗ ಹೊಸಕೋಟಿ, ಗೋಕಾಕ್ `ಭಾಳಾ ಸಂತೋಷ, ಇಂಥಾದ್ದು ಬಹುಶಃ ಎಲ್ಲೂ ಆಗಿಲ್ಲ. ಇನ್ನು ಆಗೂದಾದ್ರ ಇದರ ಕಾಪಿ ಅಷ್ಟೇನೇ... ವ್ಯವಸ್ಥೆ ಬಾಳಾ ಚಲೋದಾಗಿತ್ತು' ಎಂದು ನುಡಿದರು. ಅವರು ಬಾಹುಬಲಿ-ಹಕ್ಕಿ ನಡುವೆ ಶಾಂತಿ ಸಂದೇಶ ಬೀರುತ್ತಿದ್ದರು.

ಹುಬ್ಬಳ್ಳಿಯ ರಾಜಶೇಖರ್ ಅವರು ಹೇಳುವಂತೆ ``ನಮ್ ನಮ್ಮ `ಜಗ'ದ ಸಂಸ್ಕೃತಿಯನ್ನು ಇಲ್ಲಿ ತೋರಿಸೋದಿಕ್ಕೆ ಇದೊಂದು ಸುವರ್ಣ ಅವಕಾಶ; ಯುವಜನರು ನಮ್ಮ ರಾಜ್ಯದ ಸಂಸ್ಕೃತಿ ಬಗ್ಗೆ ತಿಳ್ಕೋಳ್ಳೋದಿಕ್ಕೆ ಇದಕ್ಕಿಂತ ಒಳ್ಳೆಯ ಸಂದರ್ಭವಿದೆಯೇ?"

ಕಲಾ ಶಿಕ್ಷಕರನ್ನು ಇನ್ನಾದರೂ ನೇಮಕ ಮಾಡಿ

ಗದಗದ ಕಲಾ ಶಿಕ್ಷಕಿ ಪ್ರೇಮಾ ಹಂದಿಗೋಳ ಅವರು, `ಸಾಂಪ್ರದಾಯಿಕ ಶಿಕ್ಷಣದಲ್ಲಿ ಕಲಾ ಶಿಕ್ಷಣ ಕ್ಕೆ ಆದ್ಯತೆ ನೀಡುತ್ತಿಲ್ಲ. ಯಾವುದೇ ಉನ್ನತ ಶಿಕ್ಷಣಕ್ಕೂ ಕಲಾ ಶಿಕ್ಷಣ ಬೇಕು. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಪ್ರಾಥಮಿಕ ಹಂತದಿಂದಲೇ ಕಲಾ ಶಿಕ್ಷಣಕ್ಕೆ ಅವಕಾಶ ಕೊಡಲು ಕಲಾ ಶಿಕ್ಷಕರನ್ನು ನೇಮಿಸಬೇಕಾಗಿದೆ' ಎಂದು ಆಗ್ರಹಿಸಿದರು.

ದೂರದ ಬಂಗಾಲದವರಾಗಿದ್ದು, ಬೆಂಗಳೂರಿನಲ್ಲಿ ಎಂ.ಎಸ್ಸಿ. ಬಯೋಟೆಕ್ನಾಲಜಿ ಓದಿ, ಪಿ‌ಎಚ್.ಡಿ. ಮಾಡುತ್ತಾ ಇರುವ ಆಶಿಶ್ ಅಗ್ರಹಾರಿ ಪಿ.ಎಸ್. ಪುಣಿಂಚತ್ತಾಯರ ಶಿಷ್ಯ! ಅವರು ಹೇಳಿದ್ದಿಷ್ಟು - ``ಹೆಚ್ಚು ಹೆಚ್ಚು ಪ್ರತಿಭಾವಂತ, ಬಹುಮುಖಿ ಕಲಾ ಕುಶಲಿಗರೊಂದಿಗೆ ಬೆರೆಯುವುದರಿಂದ ಬೆಳೆ ಯುತ್ತಿರುವ ಕಲಾವಿದರಿಗೆ ಖಂಡಿತ ಲಾಭ ಇದೆ. ಕಲಾ ಕಲಿಕೆಯ ಆವರಣ ವಿಸ್ತರಿಸಿಕೊಳ್ಳಲು ಇದೊಂದು ಒಳ್ಳೇ ಅವಕಾಶ."

ಹೀಗೆ ಹಲವಾರು ಮಂದಿ ಚಿತ್ರ ರಚಿಸುತ್ತಲೇ ವೀಕ್ಷಕರೊಂದಿಗೆ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದರು. ಕೆಲವರು ಒಂದ್ ನಿಮಿಷ... ಎಂದು ನಗುತ್ತ ಬಿಡುವು ಮಾಡಿ ಮಾತನಾಡಿದರು.

ದೂರದ ಮುಂಬೈನಿಂದ `ಚಿತ್ರಮಿತ್ರ'ರು ತಡವಾದರೂ ಬಂದು ಮಧ್ಯಾಹ್ನದ ವೇಳೆ ತಮ್ಮ ಪ್ರೀತಿಯ ಹನುಮನ ಚಿತ್ರ ರಚನೆಗೆ ತೊಡಗಿದ್ದರು.

ಕರೆಯದೆಯೂ ಬಂದವರು

ಕರೆಯದೇ ಬರುವವರೇ `ಅತಿಥಿಗಳಂತೆ'. ಹಾಗೆ `ಸುದ್ದಿ' ಕೇಳಿ ಬಂದ ಕಲಾವಿದರು ಮುನ್ನೂರ ಕ್ಕೂ ಅಧಿಕ. ಕರೆದರೆ ಬರುವವರೇ ನೂರೆಂಟು ತಾಪತ್ರಯ ಹೇಳಿಕೊಳ್ಳುವ, `ಸಹಜ ಬಿಸಿ'ಯಾಗಿ ರುವ ಇಂದಿನ ದಿನಗಳಲ್ಲಿ ಹೀಗೆ ಹತ್ತಿರ ಹತ್ತಿರ ೧,೩೦೦ ಕಲಾವಿದರು ಜಮಾಯಿಸಿದ್ದು, ಸಂಘಟಕ ಡಾ| ಎಂ. ಮೋಹನ ಆಳ್ವರಲ್ಲಿ ಸಂತೃಪ್ತಿ, ಸಂತಸದ ಭಾವ ಮೂಡಿಸಿದೆ. ಸಂಚಾಲಕರಾದ ಕೋಟಿ ಪ್ರಸಾದ ಆಳ್ವ, ಗಣೇಶ ಸೋಮಯಾಜಿ, ಪುರುಷೋತ್ತಮ ಅಡ್ವೆ, ಸಂಯೋಜಕ ಚಿ. ಸು. ಕೃಷ್ಣ ಶೆಟ್ಟಿ... ಹೀಗೆ ಹಲವು ಕಲಾ ಕೈಗಳು ಸೇರಿಕೊಂಡು ಕಲಾವಿದರನ್ನು ಮೂಡಬಿದಿರೆಗೆ ಬರಮಾಡಿ ಕೊಂಡು ವಿಶ್ವದಾಖಲೆಯತ್ತ ಹೆಜ್ಜೆ ಹಾಕುವ `ಆಳ್ವಾಸ್ ವರ್ಣ ಜಾಗೃತಿ'ಯನ್ನು ಸಾಕಾರಗೊಳಿ ಸಲು ಅದೆಷ್ಟೋ ಸಮಯದಿಂದ ಕನಸಿಸಿದ್ದಾರೆ, ಪರಿಶ್ರಮಿಸಿದ್ದಾರೆ. ಕಲಾಸಕ್ತರೂ ಸಾಕಷ್ಟು ಸಂಖ್ಯೆಯಲ್ಲಿ `ವರ್ಣ ಜಾಗೃತಿ'ಯ ಹಂತಗಳನ್ನು ವೀಕ್ಷಿಸಿ ಸಂತಸಪಟ್ಟಿದ್ದಾರೆ.

`ಕಂಡಿಲ್ಲದ ಕಲಾ ಸ್ನೇಹಿತರನ್ನು ಒಂದುಗೂಡಿಸಿದ ವರ್ಣ ಜಾಗೃತಿ'

ಮೂಡಬಿದಿರೆ: `ಆಳ್ವಾಸ್ ವರ್ಣ ಜಾಗೃತಿ ಎಲ್ಲೋ, ಯಾವುದೋ ದಿಕ್ಕುದೆಸೆಯಲ್ಲಿರುವ ಕಲಾವಿದ ರನ್ನು, ಕಲಾಸ್ನೇಹಿತರನ್ನು ಒಂದುಗೂಡಿಸಿದೆ. ಮುಖಾಮುಖಿಗೆ, ಅಭಿಪ್ರಾಯ ವಿನಿಮಯಕ್ಕೆ ಅವಕಾಶ ನೀಡಿದೆ. ಕಲಾ ಜಗತ್ತಿನ ಮಂದಿಯ ಕುರಿತು ತಿಳಿದುಕೊಳ್ಳಲು ಸಹಾಯಕವಾಗಿದೆ ವರ್ಣ ಜಾಗೃತಿ' ಎಂದು ಹಿರಿಯ ಕಲಾವಿದ ಎಂ. ಬಿ. ಪಾಟೀಲ್ ಅಭಿಪ್ರಾಯಪಟ್ಟರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯಲ್ಲಿ ರವಿವಾರ ವಿಶ್ವ ದಾಖಲೆಯ ಆಶಯ ದಲ್ಲಿ ನಡೆದ ಆಳ್ವಾಸ್ ವರ್ಣ ಜಾಗೃತಿ ರಾಜ್ಯಮಟ್ಟದ ಚಿತ್ರ ಕಲಾವಿದರ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಖ್ಯಾತ ಕಲಾವಿದ, ವಿಮರ್ಶಕ ಟಿ. ಸು. ಕೃಷ್ಣ ಶೆಟ್ಟಿ ಅವರು ಸಮಾರೋಪ ಭಾಷಣ ಮಾಡಿದರು. `ಹೊಯ್ಸಳರು, ಚಾಲುಕ್ಯರಾದಿಯಾಗಿ ನಾಡನ್ನಾಳಿದವರು ನೆನಪಿನಲ್ಲಿ ಉಳಿಯುವುದು ಅವರು ನಡೆಸಿದ ಯುದ್ಧಗಳಿಂದಲ್ಲ; ಅವರು ಚಿತ್ರ, ಶಿಲ್ಪ ಮತ್ತಿತರ ಕಲೆಗಳಿಗೆ ನೀಡಿದ ಪ್ರೋತ್ಸಾಹದಿಂದ; ಕಲಾವಿದರು ಇವತ್ತಿನ ಸಂದರ್ಭದಲ್ಲಿ ಸಾಮಾಜಿಕ ಸಾಮರಸ್ಯ ಕಾಪಾಡಲು, ಬೆಳೆಸಲು ಸಹಕಾರಿ ಯಾಗುವ ಕಲಾ ವ್ಯವಸಾಯ ನಡೆಸಬೇಕಾಗಿದೆ' ಎಂದರು.

ಮಂಗಳೂರು ವಿಶೇಷ ವಿತ್ತ ವಲಯದ ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಎ. ಜಿ. ಪೈ, ಕೊಡಿ ಯಾಲ್‌ಗುತ್ತು ಚಾರಿಟೆಬಲ್ ಟ್ರಸ್ಟ್‌ನ ಕೆ. ಅಜಿತ್ ಕುಮಾರ್ ರೈ ಮಾಲಾಡಿ ಮುಖ್ಯ ಅತಿಥಿಯಾಗಿ ದ್ದರು.

``ಈ ಕಲಾಕೃತಿಗಳನ್ನು ಜೋಪಾನವಾಗಿ ಕಾಪಾಡಿಕೊಳ್ಳುತ್ತೇವೆ. ಇಂಥ ಶಿಬಿರಗಳಿಂದ ಕಲಾವಿದ ರ ನಡುವೆ ಕೊಡು-ಕೊಳ್ಳುವಿಕೆ ನಡೆಯಬೇಕಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಮೋಹನ್ ಆಳ್ವರು ತಮ್ಮ ಸ್ವಾಗತ ಭಾಷಣದಲ್ಲಿ ತಿಳಿಸಿದರು.

ವೇದಿಕೆಯಲ್ಲಿ ಸಂಚಾಲಕರಾದ ಕೋಟಿಪ್ರಸಾದ್ ಆಳ್ವ, ಗಣೇಶ್ ಸೋಮಯಾಜಿ, ಪುರುಷೋತ್ತಮ ಅಡ್ವೆ, ಸಂಯೋಜಕ ಚಿ. ಸು. ಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಉಪನ್ಯಾಸಕ ರಾಂಪ್ರಸಾದ್ ಕಾಂಚೋಡು ಕಾರ್ಯಕ್ರಮ ನಿರೂಪಿಸಿದರು. ದೇವಿಪ್ರಸಾದ್ ಶೆಟ್ಟಿ ವಂದಿಸಿದರು.

ಇಂದು, ನಾಳೆ ವೀಕ್ಷಣೆಗೆ ಮುಕ್ತ

ವಿದ್ಯಾಗಿರಿಯಲ್ಲಿ ರವಿವಾರ ನಡೆದ `ಆಳ್ವಾಸ್ ವರ್ಣ ಜಾಗೃತಿ'ಯಲ್ಲಿ ಮೂಡಿಬಂದ ಕಲಾಕೃತಿಗಳ ನ್ನು ಕಲಾಸಕ್ತರ ಕೋರಿಕೆ ಮೇರೆಗೆ ಜ. ೪ ಮತ್ತು ೫ರಂದು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಮೋಹನ ಆಳ್ವ ತಿಳಿಸಿದ್ದಾರೆ.

`ಶಿಲ್ಪ ವಿರಾಸತ್' ವೀಕ್ಷಣೆಗೂ ಅವಕಾಶ ಕಲ್ಪಿಸಲಾಗಿದೆ.

 ಸೌಜನ್ಯ: ಉದಯವಾಣಿ 


Share: