ಅದು ಜನವರಿ 12ರ ನಡುರಾತ್ರಿ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತ ಸಿಬ್ಬಂದಿ ಹಗಲೆಲ್ಲಾ ದುಡಿದು ನಡುರಾತ್ರಿಯಾದರೂ ದುಡಿಯುತ್ತಲೇ ಇದ್ದಾರೆ. ಹಗಲು ರಾತ್ರಿ ಎನ್ನದೇ ಹೀಗೆ ದುಡಿಯಲು ಏನು ಪ್ರೇರಣೆ? ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರ್ಕಾರ. ಹೌದು ಅದರ ಅಣತಿಯಂತೆ ಅಲ್ಲಿ ನಡುರಾತ್ರಿಯಲ್ಲಿ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿನ 3300 ಕೋಟಿ ರೂಪಾಯಿಗಳ ಮೊತ್ತದ ರಸ್ತೆ, ಸೇತುವೆ ಇತ್ಯಾದಿ ಕಾಮಗಾರಿಗಳ ಹರಾಜು ಪ್ರಕಿಯೆ (ಟೆಂಡರ್) ನಡೆಯಿತು. ’ಅಭಿವೃದ್ದ”ಯ ಕಾಳಜಿ ಎಂದರೆ ಇದು. ಅಭಿವೃದ್ದಿಆಗಬೇಕು. ಆಗುತ್ತದೆ. ಯಾರ ಅಭಿವೃದ್ದಿ ಅಂತ ಮಾತ್ರ ಕೇಳಬೇಡಿ. ಹರಾಜು ಕೂಗಿ ಪಡೆಯುವ ಸಂಸ್ಥೆಗಳಿಗೆ ಕಾಮಗಾರಿ ಸಮರ್ಪಕವಾಗಿ ನಡೆಸುವ ಅರ್ಹತೆ ಇದೆಯೇ? ಅವರ ಇತಿಹಾಸ ಏನು? ಅವರ ಚರಿತ್ರೆ ಏನು? ಮಾಹಿತಿ ಪಡೆಯಲಾಗಿದೆಯೇ? ಈ ಎಲ್ಲಾ ಒಟ್ಟು ಹರಾಜು ಪ್ರಕ್ರಿಯೆ ಸಾರ್ವಜನಿಕರ ಗಮನಕ್ಕೆ ಬರುವಂತೆ ಪಾರದರ್ಶಕವಾಗಿ ಇದೆಯೆ? ಇಂತಹ ಯಾವ ಪ್ರಶ್ನೆಯನ್ನು ನೀವು ಕೇಳಬಾರದು. ಏಕೆಂದರೆ ಅಭಿವೃದ್ದಿಯ ಪ್ರಶ್ನೆ.
ನೂರಾರು ಜನರ ಪ್ರತಿಭಟನೆ ಜನವರಿ 13, 2010 ರ ಮಧ್ಯಾಹ್ನ 2-30ಕ್ಕೆ ಬೆಂಗಳೂರು ಮಹಾನಗರ ಪಾಲಿಕೆಯ ಕಛೇರಿಯ ಮುಂದೆ ನೂರಾರು ಜನ ಜಮಾಯಿಸಿದರು. ನಾಗರೀಕ ರಂಗದ ಕಾರ್ಯಕರ್ತರು, ಮುಖಂಡರು ಅವರು. ಸಿ.ಪಿ.ಐ(ಎಂ), ಸಿ.ಪಿ.ಐ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯ (ಅಥಾವಳೆ). ಇಂಡಿಯನ್ ನ್ಯಾಷನಲ್ ಲೀಗ್ (ಐ.ಎನ್.ಎಲ್) ದಲಿತ ಸಂಘರ್ಷ ಸಮಿತಿ(ಎ) ಟಿಪ್ಪು ಸಂಯುಕ್ತ ರಂಗ (ಟಿ.ಯು.ಎಫ್), ಎ.ಐ.ಎ.ಡಿ.ಎಂ.ಕೆ., ಪಿವಿಸಿ, ಡಿಪಿಐ ಹೀಗೆ ವಿವಿಧ ಪಕ್ಷಗಳು ಸಂಘಟನೆಗಳ ಕಾರ್ಯಕರ್ತರು ಅಲ್ಲಿ ನೆರೆದರು. ಬಿಬಿಎಂಪಿ ಚುನಾವಣೆ ಮೇಲೆ ಕಣ್ಣಿರಿಸಿ-ನೀತಿ ಸಂಹಿತೆಯು ಜಾರಿಗೆ ಬರುವ ಮುನ್ನ ಕೊನೆ ಗಳಿಗೆಯಲ್ಲಿ ನಡೆಸಲಾಗಿರುವ ಕಾಮಗಾರಿಗಳ ಹರಾಜು ಪ್ರಕಿಯೆಯನ್ನು ರದ್ದುಮಾಡಬೇಕು ಎಂದು ಅವರು ತ್ರೀವ್ರವಾಗಿ ಒತ್ತಾಯಿಸಿದರು. ಕಾನೂನು ಬಾಹಿರವಾದ ಈ ಹರಾಜು ಪ್ರಕಿಯೆಗೆ ತಡೆಹಾಕಿ ಅಕ್ರಮಗಳ ಬಗೆಗೆ ಸ್ವಜನ ಪಕ್ಷಪಾತ, ಭ್ರಷ್ಟಾಚಾರಗಳ ಬಗೆಗೆ ತನಿಖೆಯಾಗಬೇಕೆಂದು ಒತ್ತಾಯಿಸಿದರು. ಸಿ.ಪಿ.ಐ(ಎಂ)ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಸ್.ಪ್ರಸನ್ನ ಕುಮಾರ್,ಜಿಲ್ಲಾ ಕಾರ್ಯದರ್ಶಿ ಹರಿಗೋವಿಂದ್, ಆರ್.ಪಿ.ಐ. (ಎ)ನ ಮುಖಂಡರಾದ ಎಂ. ವೆಂಕಟಸ್ವಾಮಿ, ಟಿ.ಯು.ಎಫ್.ನ ಮುಖಂಡರಾದ ಸರ್ದಾರ ಖುರೇಷಿ, ಐ.ಎನ್.ಎಲ್.ನ ಮುಖಂಡರಾದ ಅಸ್ಗರ್ ರಫೀಮುದ್ದೀನ್, ಎ.ಐ.ಎ.ಡಿ.ಎಂ ಕೆಯ ಮುಖಂಡರಾದ ಕೃಷ್ಣರಾಜು ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಅಂಗವಿಕಲರ ಹಣವೂ, ಬೆಂಗಳೂರು ಸೌಂದರ್ಯವೂ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಅಂಗವಿಕಲರ ಬಗೆಗೆ ಎಷ್ಟು ಕಾಳಜಿ ಇದೆ ಅಂತ ನೋಡಿ. ಮಹಾನಗರ ಪಾಲಿಕೆಯ ಪ್ರಸಕ್ತ ಬಜೆಟ್ನಲ್ಲಿ ಅಂಗವಿಕಲರ ಕಲ್ಯಾಣಕ್ಕಾಗಿ ಇಡಲಾಗಿದ್ದ 7.57 ಕೋಟಿ ರೂಪಾಯಿಯಲ್ಲಿ ಕೇವಲ 14 ಲಕ್ಷ ರೂಪಾಯಿಗಳನ್ನು ಮಾತ್ರ ಖರ್ಚು ಮಾಡಲಾಗಿದೆ. ಇರುವ ಹಣವನ್ನು ಖರ್ಚು ಮಾಡಿ ಅಂಗವಿಕಲರಿಗೆ ಸೌಲಭ್ಯ ಒದಗಿಸಲು ಪಾಲಿಕೆ ಅಧಿಕಾರಿಗಳಿಗೆ ಅದೇನು ದಾಡಿಯೋ. ತರಾತುರಿಯಲ್ಲಿ 330 ಕೋಟಿ ರೂಪಾಯಿಗಳ ಕಾಮಗಾರಿಗಳ ಗುತ್ತಿಗೆ ಅಂತಿಮಗೊಳಿಸಲು ಹಗಲು, ರಾತ್ರಿ `ಶ್ರಮಿಸುವ’ ಅಧಿಕಾರಿ ಸಿಬ್ಬಂದಿ ವರ್ಗಕ್ಕೆ ಅಂಗವಿಕಲ ಕಲ್ಯಾಣಕ್ಕಾಗಿ ಮಾಡಲೇಬೇಕಾದ ಕೆಲಸವನ್ನು ಮಾಡಲಾಗದು ಎಂದರೆ ಎಂತಹ ನಾಚಿಕೆಗೇಡಿನ ಸಂಗತಿ ಇದು.
ಪಾಲಿಕೆಗೆ ಈಗ ಚುನಾಯಿತ ಪ್ರತಿನಿಧಿಗಳ ನಿಯಂತ್ರಣ, ನಿರ್ವಹಣೆ ಇಲ್ಲ. ಅಧಿಕಾರಿಗಳದ್ದೇ ಆಡಳಿತ. ಅರ್ಥಾತ್ ಬಿಜೆಪಿ ಸರ್ಕಾರ ಮಂತ್ರಿಗಳದ್ದೇ ಇಲ್ಲಿ ದರ್ಬಾರು. ಬೆಂಗಳೂರನ್ನು ಸುಂದರಗೊಳಿಸುವ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿ ಸಾರ್ವಜನಿಕ ಕಟ್ಟಡ ಗೋಡೆಗಳ ಮೇಲೆಲ್ಲ ತೈಲವರ್ಣ ಚಿತ್ರ ಬಡಿಸುತ್ತಿರುವ ಬಿಬಿಎಂಪಿಗೆ ಅಂಗವಿಕಲರ ಬದುಕು ಹಸನಾದರೆ ಅದರಿಂದ ಬೆಂಗಳೂರಿನ `ಸೌಂದರ್ಯ’ ಹೆಚ್ಚುತ್ತದೆ ಎಂದು ಹೊಳೆಯುವುದಾದರೂ ಹೇಗೆ? ಅದು ರಿಯಲ್ ಎಸ್ಟೇಟ್ ಲಾಭಿಗಳೇ ಬಂಡವಾಳವಾಗಿರುವ ಕಟ್ಟಾ, ಅಶೋಕರಂತಹ ಘನಂದಾರಿ ಮಂತ್ರಿಗಳು ಪಾಲಿಕೆಯ ಸ್ಟೇರಿಂಗ್ ಹಿಡಿದಿರುವಾಗ?