ಮಂಗಳೂರು : ಉಳ್ಳಾಲ ಖಾಝಿ, ಮರ್ಹೂಂ ಶೈಖುನಾ ತಾಜುಲ್ ಉಲಮಾ ಅಸ್ಸೈಯದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ತಂಙಳ್ ಅವರ ಪುತ್ರ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ (ಕೂರತ್ ತಂಙಳ್) ಜು.8ರಂದು ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ಪ್ರಾಯವಾಗಿತ್ತು.
ಕೇರಳದ ಕಣ್ಣೂರು ಜಿಲ್ಲೆಯ ಎಟ್ಟಿಕ್ಕುಳಂನಲ್ಲಿರುವ ಮನೆಯಲ್ಲಿ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಹೃದಯ ಸ್ತಂಭನದಿಂದ ತಂಙಳ್ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ. ಇಂದು ಅಪರಾಹ್ನ ಉಳ್ಳಾಲ ಸೈಯದ್ ಮದನಿ ದರ್ಗಾ ವಠಾರದಲ್ಲಿ ನಿಗದಿಯಾಗಿದ್ದ ಸೈಯದ್ ಮದನಿ ಶರೀಅತ್ ಕಾಲೇಜು ವಿದ್ಯಾರ್ಥಿಗಳ ನೂತನ ಹಾಸ್ಟೆಲ್ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಬೆಳಗ್ಗೆ ಎಟ್ಟಿಕ್ಕುಳಂನಲ್ಲಿರುವ ಮನೆಯಲ್ಲಿ ಸಿದ್ಧರಾಗುತ್ತಿದ್ದರು. ಈ ವೇಳೆ ಹೃದಯ ಸ್ತಂಭನ ಆಗಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಅಪರಾಹ್ನ 2 ಗಂಟೆಯ ವರೆಗೆ ಎಟ್ಟುಕ್ಕುಳಂನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಪಾರ್ಥಿವ ಶರೀರವು ಸಂಜೆ 7 ಗಂಟೆ ಸುಮಾರಿಗೆ ಉಳ್ಳಾಲ ಜುಮಾ ಮಸೀದಿ ಮತ್ತು ಸೈಯದ್ ಮದನಿ ದರ್ಗಾ ವಠಾರಕ್ಕೆ ತಲುಪಲಿದೆ. ಆ ಬಳಿಕ ಕಡಬ ತಾಲೂಕಿನ ಕೂರತ್ ಗೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ದಫನ ಕಾರ್ಯ ನೆರವೇರಲಿದೆ ಎಂದು ಉಳ್ಳಾಲ ಸೈಯದ್ ಮದನಿ ದರ್ಗಾ ಸಮಿತಿಯ ಅಧ್ಯಕ್ಷ ಬಿ.ಜಿ.ಹನೀಫ್ ಹಾಜಿ ತಿಳಿಸಿದ್ದಾರೆ.
ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯ, ಕಾಸರಗೋಡು ದೇಳಿಯ ಜಾಮಿಯ ಸಅದಿಯ್ಯ ಇದರ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೂರತ್ ತಂಙಳ್ ಅವರು 2014ರಲ್ಲಿ ತಾಜುಲ್ ಉಲಮಾ ನಿಧನರಾದ ಬಳಿಕ ಉಳ್ಳಾಲ ಖಾಝಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಸಂತಾಪ: ಖಾಝಿ ಕೂರತ್ ತಂಙಳ್ ನಿಧನಕ್ಕೆ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ.ಯೆನೆಪೊಯ ಅಬ್ದುಲ್ಲಾ ಕುಂಞಿ, ಮಂಜೇಶ್ವರ ಸಂಯುಕ್ತ ಜಮಾಅತ್ ಅಧ್ಯಕ್ಷ ಸೈಯದ್ ಅಥಾವುಲ್ಲಾ ತಂಙಳ್, ಮಾಜಿ ಸಚಿವ ಬಿ.ರಮಾನಾಥ ರೈ, ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ಬಿ.ಜಿ.ಹನೀಫ್ ಹಾಜಿ, ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕೋಶಾಧಿಕಾರಿ ನಾಝೀಮ್ ಮುಕ್ಕಚ್ಚೇರಿ, ಉಪಾಧ್ಯಕ್ಷರಾದ ಅಶ್ರಫ್ ರೈ ಟ್ ವೇ, ಹಸೈನಾರ್, ಕಾರ್ಯದರ್ಶಿ ಮುಸ್ತಫ ಮದನಿ ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಸಿದ್ದಾರೆ.