ಭಟ್ಕಳ: ಅರಣ್ಯವಾಸಿಗಳ ಸಮಸ್ಯೆ ಬಗೆಹರಿಸುವಲ್ಲಿ ಕಾಂಗ್ರೇಸ್ ಸರಕಾರ ಬದ್ಧವಾಗಿದೆ ಅಲ್ಲದೇ, ಅರಣ್ಯ ಭೂಮಿ ಹಕ್ಕು ನೀಡುವಲ್ಲಿ ಸರಕಾರ ಗಂಭೀರವಾಗಿ ಪರಿಗಣಿಸುತ್ತದೆ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ ಆಶ್ವಾಸನೆ ನೀಡಿದ್ದಾಗಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತಂತೆ ಮಂಗಳವಾರ ಬೆಂಗಳೂರಿನ ವಿಧಾನಸೌಧದಲ್ಲಿರುವ ಸಚಿವರ ಕಚೇರಿಯಲ್ಲಿ ಮಾಂಕಾಳರನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ರವೀಂದ್ರ ನಾಯ್ಕ, ಉತ್ತರಕನ್ನಡ ಜಿಲ್ಲೆಯಲ್ಲಿ ಅರಣ್ಯವಾಸಿಗಳು ಅನುಭವಿಸುತ್ತಿರುವ ನರಕಯಾತನೆ ಬಗ್ಗೆ ಮನವಿಯೊಂದನ್ನು ಸಲ್ಲಿಸಿದ್ದಾರೆ.
ಅರಣ್ಯ ಹಕ್ಕು ಕಾಯಿದೆ ಅನುಷ್ಟಾನದ ವೈಫಲ್ಯತೆಯಿಂದ ಜಿಲ್ಲೆಯಲ್ಲಿ ೬೯,೭೩೩ ಅರ್ಜಿ ತೀರಸ್ಕಾರಗೊಂಡಿವೆ, ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಜಿಲ್ಲೆಯಲ್ಲಿ ಬುಡಕಟ್ಟು ೧೩೩೧, ಪಾರಂಪರಿಕ ಅರಣ್ಯವಾಸಿಗಳಿಗೆ ೩೯೮ ಹಾಗೂ ಸಮುದಾಯ ಉದ್ದೇಶಕ್ಕೆ ೧೧೨೬ ಒಟ್ಟೂ ೨೮೫೫ ಹೀಗೆ ಶೇಕಡವಾರು ಬಂದಿರುವ ಗ್ರಾಮೀಣ ಭಾಗದ ಅರ್ಜಿಯಲ್ಲಿ ಶೇ. ೩.೨೦ ರಷ್ಟು ಮಾತ್ರ ಹಕ್ಕು ಪ್ರಾಪ್ತವಾಗಿದೆ ಎಂದು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲೆಯ ಅರಣ್ಯವಾಸಿಗಳ ಸಮಸ್ಯೆಗಳ ಕುರಿತು, ಅರಣ್ಯವಾಸಿಗಳೊಂದಿಗೆ ಮುಕ್ತ ಚರ್ಚೆ ಏರ್ಪಡಿಸಿ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ ಜರುಗಿಸಲು ತೀರ್ಮಾನ ತೆಗೆದುಕೊಳ್ಳಲಾಗುವುದೆಂದು ಉಸ್ತುವಾರಿ ಸಚಿವರಾದ ಮಂಕಾಳ ವೈಧ್ಯ ಭರವಸೆ ನೀಡಿದ್ದಾಗಿ ರವೀಂದ್ರ ನಾಯ್ಕ ಮಾಹಿತಿ ನೀಡಿದ್ದಾರೆ.