ಕುಂದಾಪುರ,ಜನವರಿ 8:ಝಿಯಾ ಎಜುಕೇಷನಲ್ ಟ್ರಸ್ಟ್ ಕಂಡ್ಲೂರಿನ ಸ್ಥಾಪಕರು ಮತ್ತು ಅಧ್ಯಕ್ಷರಾದ ಮೌಲಾನಾ ಉಬೈದುಲ್ಲಾ ಅಬೂಬಕರ್ ನದ್ವಿ ಅವರು ಸೌತುಲ್ ಕುರ್ಆನ್ ಪ್ರಶಸ್ತಿ ಗಳಿಸಿದ್ದಾರೆ.
ಸೌತುಲ್ ಕುರ್ಆನ್ ಕಮಿಟಿ ಕರ್ನಾಟಕ ವತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಯ್ದ ೧೩ ಮುಸ್ಲಿಮ್ ವಿದ್ವಾಂಸರ ಸೇವೆಯನ್ನು ಪರಿಗಣಿಸಿ ಜನವರಿ ೪, ೨೦೧೦ ರಂದು ಬೆಂಗಳೂರಿನ ಪುರಭವನದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಅವರಿಗೆ ಈ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಪ್ರಶಸ್ತಿ ಪಡೆದವರಲ್ಲಿ ಮೌಲಾನಾ ಉಬೈದುಲ್ಲಾ ನದ್ವಿಯವರು ಅತೀ ಕಿರಿಯ ವಯಸ್ಸಿನವರಾಗಿದ್ದು, ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ನ ಕಾರ್ಯದರ್ಶಿ ಮೌಲಾನಾ ಶಾಹ್ ಮುಸ್ತಫಾ ರಿಫಾಯಿ ಜೀಲಾನಿ ನದ್ವಿಯವರು ಅವರನ್ನು ಸನ್ಮಾನಿಸಿದರು.
ಸನ್ಮಾನಿತರಾದ ಮೌಲಾನಾ ಉಬೈದುಲ್ಲಾ ನದ್ವಿಯವರು ಸಂಕ್ಷಿಪ್ತವಾಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ಈ ಗೌರವ ನನಗೆ ಸಿಗುತ್ತಿರುವುದಲ್ಲ, ಧಾರ್ಮಿಕ ವಿದ್ಯೆಗೆ ದೊರೆತಿರುವುದಾಗಿದೆ. ಇದರಿಂದ ಯುವ ವಿದ್ವಾಂಸರಿಗೆ ಪ್ರೇರಣೆ ದೊರೆಯುತ್ತದೆ. ಈ ಕ್ಷೆಭೆಯ ಕಾಲದಲ್ಲಿ ಯುವ ವಿದ್ವಾಂಸರು ಸಮಾಜ ಸುಧಾರಣೆಯ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದ ಅವರು, ಈ ಸನ್ಮಾನ ಪಡೆದ ಬಳಿಕ ನಮ್ಮ ಜವಾಬ್ದಾರಿ ಇನ್ನೂ ಹೆಚ್ಚಿದೆ. ಜೀವನ ಪರ್ಯಂತ ಸಂದೇಶ ಪ್ರಚಾರ ಮತ್ತು ಸಮಾಜ ಸುಧಾರಣೆಯ ರಂಗದಲ್ಲಿ ಸೇವೆ ಸಲ್ಲಿಸುವಂತೆ ಅಲ್ಲಾಹನು ಅನುಗ್ರಹಿಸಲಿ ಎಂದು ಪ್ರಾರ್ಥಿಸಿದರು.
ಮೌಲಾನಾ ಉಬೈದುಲ್ಲಾ ಅವರ ಧಾರ್ಮಿಕ, ಸಮಾಜ ಸುಧಾರಣೆ, ಸಂದೇಶಪ್ರಚಾರ ಮತ್ತು ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿನ್ನು ನೀಡಲಾಗಿದೆ. ಮೌಲಾನಾ ಅವರು ಉಡುಪಿ ಜಿಲ್ಲಾ ದಾರುಲ್ ಕಝಾ ಅಮಾರತೆ ಶರಇಯ್ಯಾ ಇದರ ಶರೀಅತ್ ಕಾಝಿ, ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಉಡುಪಿ ಜಿಲ್ಲೆ ಇದರ ಅಧ್ಯಕ್ಷರು, ಝಿಯಾ ಎಜುಕೇಶನಲ್ ಟ್ರಸ್ಟ್ ಕಂಡ್ಲೂರು ಇದರ ಸ್ಥಾಪಕರು ಮತ್ತು ಅಧ್ಯಕ್ಷರು, ಜಾಮಿಯಾ ಝಿಯಾವುಲ್ ಉಲೂಮ್ ರೆಸಿಡೆನ್ಸಿಯಲ್ ಅರೆಬಿಕ್ ಕಾಲೇಜು ಕಂಡ್ಲೂರು ಇದರ ಅಧ್ಯಕ್ಷರು, ಜಾಮಿಯಾ ಆಯಿಶಾ ಲಿಲ್ ಬನಾತ್ ವಿಮೆನ್ಸ್ ಅರಬಿಕ್ ಕಾಲೇಜು ಇದರ ಅಧ್ಯಕ್ಷರು, ಝಿಯಾ ಪಬ್ಲಿಕ್ ಇಂಗ್ಲಿಷ್ ಮಿಡಿಯಂ ಸ್ಕೂಲ್ ಇದರ ಸಂಚಾಲಕರು, ಝಿಯಾ ಕನ್ನಡ ಸಾಹಿತ್ಯ ಕೇಂದ್ರ ಇದರ ನಿರ್ದೇಶಕರು, ದಿವ್ಯಪ್ರಭ ಕನ್ನಡ ಮಾಸಿಕದ ಪ್ರಧಾನ ಸಂಪಾದಕರು ಮತ್ತು ಶಿಫಾ ನರ್ಸಿಂಗ್ ಹೋಮ್ ಇದರ ನಿರ್ದೇಶಕರು ಆಗಿರುತ್ತಾರೆ. ಮೌಲಾನಾರ ಮೇಲ್ನೋಟ ಮತ್ತು ನೇತೃತ್ವದಲ್ಲಿ ಕಂಡ್ಲೂರು ಮತ್ತು ಆಸುಪಾಸಿನಲ್ಲಿ ತಫ್ಸೀರ್, ಹದೀಸ್, ಹಿಫ್ಝ್, ಕಿರಅತ್, ನಅತ್ ಮುಂತಾದ ಬಹಳಷ್ಟು ಪ್ರದರ್ಶನ ಮತ್ತು ಸ್ಪರ್ಧೆಗಳು ನಡೆದಿವೆ.