ಬೆಂಗಳೂರು,ಮಾ,೧೦:ಕಳೆದ ಮೂರು ವರ್ಷಗಳ ಅವಧಿಯಲ್ಲಿ ಹೊಸದಾಗಿ ೨೧, ೭೮೧ ಬಾರ್ ಅಂಡ್ ರೆಸ್ಟೋರೆಂಟ್‌ಗಳಿಗೆ ರಾಜ್ಯ ಸರ್ಕಾರ ಅನುಮತಿ ನೀಡಿರುವ ಸಂಗತಿ ಬೆಳಕಿಗೆ ಬಂದಿದೆ.
ಇದರಲ್ಲಿ ೧೧,೪೧೫ ಮದ್ಯದಂಗಡಿಗಳು, ೧೦,೩೬೬ ಬಾರ್ ಅಂಡ್ ರೆಸ್ಟೋರೆಂಟ್‌ಗಳಿಗೆ ಪರವಾನಗಿ ಕೊಡಲಾಗಿದೆ. ವಿಧಾನಸಭೆಯಲ್ಲಿಂದು ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರೇ ಈ ಕುರಿತು ಮಾಹಿತಿ ಬಹಿರಂಗಪಡಿಸಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಸರ್ಕಾರ ಸದ್ದಿಲ್ಲದೇ ಹೊಸದಾಗಿ ಮದ್ಯದಂಗಡಿಗಳಿಗೆ ಪರವಾನಗಿ ನೀಡಿದ್ದು, ಪ್ರತಿ ವರ್ಷ ಸರಾಸರಿಯಂತೆ ಏಳು ಸಾವಿರ ಮದ್ಯದಂಗಡಿಗಳಿಗೆ ಅನುಮತಿ ಕೊಟ್ಟಿದೆ.
೨೦೦೭ - ೦೮ ರಲ್ಲಿ ೩೭೬೨, ೨೦೦೮ - ೦೯ ರಲ್ಲಿ ೩೮೦೭ ಹಾಗೂ ೨೦೦೯ - ೧೦ ರಲ್ಲಿ ೩೮೪೬ ಮದ್ಯದಂಗಡಿಗಳಿಗೆ ಪರವಾನಗಿ ಕೊಟ್ಟಿದೆ. ಇನ್ನು ೨೦೦೭ - ೦೮ ರಲ್ಲಿ ೩೪೩೮, ೨೦೦೮ - ೦೯ ರಲ್ಲಿ ೩೪೩೬ ಹಾಗೂ ೨೦೦೯ - ೧೦ ರಲ್ಲಿ ೩೪೬೫ ಬಾರ್ ಅಂಡ್ ರೆಸ್ಟೋರೆಂಟ್‌ಗಳಿಗೆ ಅನಮತಿ ನೀಡಿದೆ.
ಆದರೆ ಇದೇ ಸಚಿವರು ನೀಡಿರುವ ಮತ್ತೊಂದು ಅಂಕಿಅಂಶಗಳನ್ನು ಗಮನಿಸಿದರೆ ರಾಜ್ಯದಲ್ಲಿ ಒಟ್ಟು ೩೮೪೬ ಸಿ.ಎಲ್ - ೨, ೩೪೬೫ - ಸಿ.ಎಲ್. ೯ ಗಳು ಸೇರಿ ಒಟ್ಟು ೭೩೧೧ ಮದ್ಯದಂಗಡಿ ಮತ್ತು ಬಾರ್ ಅಂಡ್ ರೆಸ್ಟೋರೆಂಟ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.
ಮದ್ಯದಂಗಡಿಗಳಿಗೆ ಬೆಳಿಗ್ಗೆ ೧೦ ರಿಂದ ರಾತ್ರಿ ೧೦.೩೦ ಗಂಟೆವರೆವಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಬಾರ್ ಅಂಡ್ ರೆಸ್ಟೋರೆಂಟ್‌ಗಳಿಗೆ ಬೆಳಿಗ್ಗೆ ೧೦ ರಿಂದ ರಾತ್ರಿ ೧೧. ೩೦ ರ ವರೆವಿಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಉಡುಪಿ ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟದ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದ್ದು, ಒಟ್ಟು ೧೩ ಪ್ರಕರಣಗಳನ್ನು ದಾಖಲಿಸಲಾಗಿದೆ. ಕೋಲಾರದಲ್ಲಿ ೫, ದಕ್ಷಿಣ ಕನ್ನಡದಲ್ಲಿ ೬ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.