
ಗಂಗೊಳ್ಳಿ, ನ.22: ಹೊಟೇಲ್‌ನಲ್ಲಿದ್ದ ಗ್ಯಾಸ್ ಸಿಲಿಂಡರಿಗೆ ಬೆಂಕಿ ಹತ್ತಿದ ಪರಿಣಾಮ ಹೊಟೇಲ್ ಭಾಗಶ ಸುಟ್ಟು ಹೋದ ಘಟನೆ ಇಲ್ಲಿಗೆ ಸಮೀಪದ ಮೀನು ಮಾರುಕಟ್ಟೆ ಬಳಿ ರವಿವಾರ ಬೆಳಗ್ಗೆ ನಡೆದಿದೆ.
ಇಂದು ಬೆಳಗ್ಗೆ ೧೦:೪೫ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಗ್ಯಾಸ್ ಸಿಲಿಂಡರ್‌ನ ಪೈಪ್‌ನಲ್ಲಿ ಸೋರಿಕೆ ಯುಂಟಾದುದೇ ಘಟನೆಗೆ ಕಾರಣವೆನ್ನಲಾಗಿದೆ. ಘಟನೆ ಯಿಂದ ಹೊಟೇಲ್‌ನಲ್ಲಿದ್ದ ಸೋಲಾರ್ ಉಪಕರಣ, ವಿದ್ಯುತ್ ಉಪಕರಣ, ವೈರಿಂಗ್, ಫೈಬರ್ ಶೀಟ್‌ಗಳು ಹಾಗೂ ಪಾತ್ರೆ ಸೇರಿದಂತೆ ದಿನಸಿ ಸಾಮಗ್ರಿಗಳು ಸುಟ್ಟು ಹೋಗಿದ್ದು, ಸುಮಾರು ೬೫ ಸಾವಿರ ರೂ. ನಷ್ಟ ಸಂಭವಿಸಿರಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ.




ತಡವಾಗಿ ಬಂದ ಅಗ್ನಿಶಾಮಕ ದಳ
ಹೊಟೇಲ್‌ಗೆ ಬೆಂಕಿ ಹತ್ತಿಕೊಂಡ ತಕ್ಷಣ ಕುಂದಾಪುರದ ಅಗ್ನಿ ಶಾಮಕದಳಕ್ಕೆ ಕರೆ ಮಾಡಲಾಯಿತಾದರೂ, ಅಗ್ನಿ ಶಾಮಕ ದಳ ಘಟನಾ ಸ್ಥಳಕ್ಕೆ ತಲುಪಿದಾಗ ೧೨:೧೫ಗಂಟೆ ಆಗಿತ್ತು. ಈ ಕುರಿತು ಅಗ್ನಿ ಶಾಮಕ ದಳದವರನ್ನು ಸ್ಥಳೀಯರು ತರಾಟೆಗೆ ತೆಗೆದು ಕೊಂಡಾಗ “ರಸ್ತೆ ತಡೆಯುಂಟಾದ ಕಾರಣ ಸ್ಥಳಕ್ಕೆ ತಲುಪಲು ವಿಳಂಬವಾಯಿತು. ಹಾಗೂ ನಮಗೆ ಕರೆ ಮಾಡಿದ ಪೊಲೀಸರು, ಪೊಲೀಸ್ ಠಾಣೆಗೆ ಬಂದ ಬಳಿಕ ಅಗ್ನಿ ಅನಾಹುತ ನಡೆದ ಸ್ಥಳಕ್ಕೆ ತೆರಳಲು ಸೂಚಿಸಿದ್ದರು” ಎಂದು ಪೊಲೀಸರ ಮೇಲೆ ಆರೋಪ ಹೊರಿಸಿದರು. ಈ ಕುರಿತು ಗಂಗೊಳ್ಳಿ ಠಾಣೆಯಲ್ಲಿ ವಿಚಾರಿಸಿದಾಗ “ನಾವು ಅಗ್ನಿ ಶಾಮಕ ದಳಕ್ಕೆ ಗಂಗೊಳ್ಳಿ ಮೀನುಮಾರುಕಟ್ಟೆ ಬಳಿ ಹೋಗಲು ಹೇಳಿದ್ದೇವೆಯೇ ಹೊರತು, ಠಾಣೆಗೆ ಬರಲು ಹೇಳಲಿಲ್ಲ” ಎಂದು ಪೊಲೀಸರು ಸ್ಪಷ್ಪಪಡಿಸಿದರು.
ಪ್ರಶಂಸೆಗೆ ಪಾತ್ರರಾದ ಠಾಣಾಧಿಕಾರಿ ಹಾಗೂ ಸಾರ್ವಜನಿಕರು:
ಸಿಲಿಂಡರ್‌ಗೆ ಬೆಂಕಿ ತಗುಲಿ ಸ್ಫೋಟಗೊಳ್ಳುವ ಸಂಭವವಿದ್ದರೂ, ಇದನ್ನು ಲೆಕ್ಕಿಸದ ಗಂಗೊಳ್ಳಿ ಠಾಣಾಧಿಕಾರಿ ಎಂ.ಗೋಪಾಲ ನಾಯ್ಕ ಹಾಗೂ ಕಾರು ಚಾಲಕ ಎಂ.ಎಚ್.ಸಾಯ್ಬು, ಲಾರಿ ಚಾಲಕ ಚಂದ್ರ ಹಾಗೂ ಗಂಗೊಳ್ಳಿ ಸಾರ್ವಜನಿಕರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಚಿತ್ರ, ವರದಿ: ಇಬ್ರಾಹಿಂ, ಗಂಗೊಳ್ಳಿ