ಉಡುಪಿ, ಎ.29: ನಗರಸಭೆಯ ತ್ಯಾಜ್ಯ ನೀರನ್ನು ನೇರವಾಗಿ ಕಲ್ಮಾಡಿ ಹೊಳೆಗೆ ಹರಿದು ಬಿಟ್ಟ ಪರಿಣಾಮ ಹೊಳೆಯಲ್ಲಿದ್ದ ಸಾವಿರಾರು ಮೀನುಗಳು ಸಾವನ್ನಪ್ಪಿವೆ. ಇದರಿಂದ ಕಲ್ಮಾಡಿ, ಕೊಡವೂರು ಪರಿಸರ ಗಬ್ಬು ವಾಸನೆಯಿಂದ ನಾರುತ್ತಿದೆ.
ನಗರಸಭೆಯ ನಿರ್ಲಕ್ಷಕ್ಕೆ ಇಲ್ಲಿ ಪ್ರತಿವರ್ಷ ಸಾವಿರಾರು ಮೀನುಗಳ ಮಾರಣಹೋಮ ನಡೆಯುತ್ತಿರುತ್ತದೆ. ಈ ಬಾರಿ ಕಳೆದ ನಾಲ್ಕೆೃದು ದಿನಗಳಿಂದ ಕಲುಷಿತ ನೀರಿಗೆ ಮೀನುಗಳು ನಿರಂತರವಾಗಿ ಬಲಿಯಾಗುತ್ತಿವೆ. ಇದೆಲ್ಲದರ ಪರಿಣಾಮವಾಗಿ ಹೊಳೆಯ ನೀರು ಸಂಪೂರ್ಣ ಮಲೀನಗೊಂಡಿದೆ.
ನಗರದ ತ್ಯಾಜ್ಯ ನೀರನ್ನು ಕಲ್ಸಂಕ ತೋಡಿನ ಮೂಲಕ ಕಲ್ಮಾಡಿ ಹೊಳೆಗೆ ಬಿಡಲಾಗುತ್ತಿದೆ. ಇದೀಗ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಈ ತ್ಯಾಜ್ಯ ನೀರು ಏಕಾಏಕಿ ಹೆಚ್ಚಾಗಿ ಇಡೀ ಪರಿಸರದಲ್ಲಿ ದುರ್ನಾತ ಆವರಿಸಿದೆ.
ಕೊಡವೂರು ನಾಲ್ಕನೆ ವಾರ್ಡಿನಲ್ಲಿರುವ ಕಲ್ಮಾಡಿ ಕಟ್ಟದಬುಡ ಮಾರಿಕಾಂಬಾ ದೇವಸ್ಥಾನದ ಬಳಿಯ ಕಿಂಡಿ ಅಣೆಕಟ್ಟಿನಲ್ಲಿ ಹೊಳೆಯ ನೀರು ತುಂಬಿದೆ. ಇದರ ಪರಿಣಾಮ ಸಾವಿರಾರು ಮೀನುಗಳು ಸಾವನ್ನಪ್ಪಿವೆ. ಇದರಲ್ಲಿ ಬಹು ಬೇಡಿಕೆಯ ‘ಇರ್ಪೆ’ ಮೀನುಗಳು ಸೇರಿವೆ. ಸತ್ತ ಮೀನುಗಳು ಹಿಂಡುಹಿಂಡಾಗಿ ಹೊಳೆಯ ದಡದಲ್ಲಿ ಕಂಡು ಬರುತ್ತಿದ್ದು, ಪಕ್ಷಿಗಳಿಗೆ ಆಹಾರವಾಗುತ್ತಿವೆ. ಈ ಮೀನುಗಳಿಗಾಗಿ ಪಕ್ಷಿಗಳು ಆಕಾಶದ ತುಂಬೆಲ್ಲ ಹಾರಿ ಗದ್ದಲವೆಬ್ಬಿಸುತ್ತಿವೆ.
ಇದು 20ವರ್ಷಗಳ ಸಮಸ್ಯೆ: ಕಲ್ಮಾಡಿ ಹೊಳೆಯ ದಡದ ವಾಸಿಗಳು ತ್ಯಾಜ್ಯ ನೀರಿನ ದುರ್ನಾತವನ್ನು ಕಳೆದ 20ವರ್ಷಗಳಿಂದ ಅನುಭವಿಸುತ್ತ ಬರುತ್ತಿದ್ದಾರೆ. ಇದಕ್ಕೊಂದು ಪರಿಹಾರ ಕಂಡುಕೊಳ್ಳಿ ಎಂದು ನಗರಸಭೆಯನ್ನು ಆಗ್ರಹಿಸುತ್ತಿದ್ದರೂ ಅದಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ಕಳೆದ ಹಲವು ವರ್ಷಗಳಿಂದ ಈ ಸಮಸ್ಯೆಯ ಬಗ್ಗೆ ನಗರಸಭೆಯಲ್ಲಿ ಚರ್ಚೆ ನಡೆಯುತ್ತಲೇ ಇದೆ. ಕುಡ್ಸೆಂಪ್‌ನ ಡ್ರೈನೇಜ್ ಕೆಲಸ ಮುಗಿಯುವವರೆಗೆ ಇದಕ್ಕೆ ಪರಿಹಾರವಿಲ್ಲ. ಇನ್ನೂ ಅವರ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ನಗರಸಭಾ ಉಪಾಧ್ಯಕ್ಷೆ ಇಂದಿರಾ ಶೇಖರ್ ಹೇಳುತ್ತಾರೆ.
ತ್ಯಾಜ್ಯ ನೀರನ್ನು ಕಲ್ಮಾಡಿ ಹೊಳೆಗೆ ಬಿಡುವುದನ್ನು ನಿಲ್ಲಿಸಿ, ಬೇರೆ ಮಾರ್ಗದ ಮೂಲಕ ತ್ಯಾಜ್ಯವನ್ನು ಸಮುದ್ರಕ್ಕೆ ಬಿಡಬೇಕು ಎಂಬುದು ನಗರಸಭಾ ಸದಸ್ಯೆ ಮೀನಾಕ್ಷಿ ಬನ್ನಂಜೆ ಹಾಗೂ ಸ್ಥಳೀಯರ ಒಕ್ಕೊರಲಿನ ಆಗ್ರಹ. ಇಲ್ಲದಿದ್ದರೆ ಕಲ್ಮಾಡಿ ಹೊಳೆ ಇನ್ನು ಮುಂದೆ ತ್ಯಾಜ್ಯ ಹರಿಯುವ ತೋಡಾಗಿ ಪರಿವರ್ತನೆ ಗೊಳ್ಳುವುದು ನಿಶ್ಚಿತ.
