ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಕಾರವಾರ: ನೈಸ್ ಯೋಜನೆ ತಂದವರೇ ದೇವೇಗೌಡರು - ಜಮೀನು ಮಾರಾಟ ಮಾಡಲು ಅನುಮತಿ ನೀಡಿದ್ದು ಎಸ್.ಎಂ.ಕೃಷ್ಣ - ಯಡಿಯೂರಪ್ಪ

ಕಾರವಾರ: ನೈಸ್ ಯೋಜನೆ ತಂದವರೇ ದೇವೇಗೌಡರು - ಜಮೀನು ಮಾರಾಟ ಮಾಡಲು ಅನುಮತಿ ನೀಡಿದ್ದು ಎಸ್.ಎಂ.ಕೃಷ್ಣ - ಯಡಿಯೂರಪ್ಪ

Wed, 27 Jan 2010 18:00:00  Office Staff   S.O. News Service
ಕಾರವಾರ, ಜನವರಿ 27:  ರಾಜ್ಯದಲ್ಲಿ ನೈಸ್ ಯೋಜನೆ ತಂದವರು ದೇವೇಗೌಡರು. ನೈಸ್ ಕಂಪನಿಗೆ ಜಮೀನು ಮಾರಾಟ ಮಾಡಲು ಅನುಮತಿ ನೀಡಿದ್ದು ಎಸ್.ಎಂ. ಕೃಷ್ಣ ಸರ್ಕಾರ. ೧೯೯೯ರಲ್ಲಿ ಸರ್ಕಾರಿ ಜಾಗವನ್ನು ೧ ಎಕರೆಗೆ ೧೦ ರೂ.ಯಂತೆ ಮಾರಾಟ ಮಾಡಲಾಗಿದೆ. ಅಂದಿನಿಂದ ಕುಮಾರಸ್ವಾಮಿ ನೇತೃತ್ವ ವಹಿಸಿದ್ದ ನಮ್ಮ ಸಮ್ಮಿಶ್ರ ಸರ್ಕಾರದವರೆಗೂ ಅವರಿಗೆ ಜಾಗ ಮಂಜೂರಿ ಮಾಡಲಾಗಿದೆ. ಆದರೆ ನಮ್ಮ ಸರ್ಕಾರ ಸುಪ್ರೀಂ ಕೋರ್ಟಿನ ನಿರ್ದೇಶನ ಬಿಟ್ಟು ಕಾರ್ಯನಿರ್ವಹಿಸಿಲ್ಲ ಎಂದು ಹೇಳಿದರು.
ಅವರು ಜೊಯಡಾ ತಾಲೂಕಿನ ಶ್ರೀ ಕ್ಷೇತ್ರ ಉಳವಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಆಶ್ಚರ್ಯವೆಂದರೆ ನೈಸ್ ಯೋಜನೆಗೆ ಜಾಗ ಮಾರಾಟ ಮಾಡಲಾಗಿದೆಯೇ ಹೊರತೂ ರಸ್ತೆ ಎಲ್ಲಿಂದ ಹೋಗಬೇಕು ಎಂಬ ಬಗ್ಗೆ ಸರ್ವೆಯೇ ನಡೆದಿರಲಿಲ್ಲ. ನಮ್ಮ ಸರ್ಕಾರ ಈ ಸರ್ವೇ ಕಾರ್ಯವನ್ನು ಆರಂಭಿಸಿದೆ ಎಂದರು.
 
ರೈತರಿಗೆ ಪ್ರತ್ಯೇಕ ಫೀಡರ್
 
ರೈತರಿಗೆ ನಿರಂತರ ವಿದ್ಯುತ್ ನೀಡಲು ಪ್ರತ್ಯೇಕ ಫೀಡರ್ ಅಳವಡಿಸುವ ಕುರಿತು ಸುದೀರ್ಘ ಚಿಂತನೆ ನಡೆದಿದೆ. ಅದರ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳಲಾಗುವದು ಎಂದು ಸೀ‌ಎಂ ಯಡಿಯೂರಪ್ಪ ಹೇಳಿದರು.
 
ಪ್ರತ್ಯೇಕ ಫೀಡರ್ ಅಳವಡಿಸಿದರೆ ರೈತರಿಗೆ ನಿರಂತರ ವಿದ್ಯುತ್ ದೊರಕಲಿದೆ. ಈ ಬಗ್ಗೆ ಎಲ್ಲ ರೀತಿಯ ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚೆ ನಡೆದಿದೆ. ಉಚಿತವಾಗಿ ವಿದ್ಯುತ್ ದೊರಕುತ್ತದೆ ಎಂದು ಅದರ ದುರುಪಯೋಗ ಸಲ್ಲದು ಎಂದರು.
 
ರಾಜ್ಯದಲ್ಲಿ ಉತ್ಪಾದನೆಯಾದ ವಿದ್ಯುತ್ತಲ್ಲಿ ಶೇ. ೪೫ರಷ್ಟು ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. ಶೇ. ೨೫ರಷ್ಟು ವಿದ್ಯುತ್ ಕಳ್ಳತನ, ಸೋರಿಕೆಗಳಿಂದಾಗಿ ಅಪವ್ಯಯವಾಗುತ್ತಿದೆ. ಉಳಿದ ಶೇ. ೩೦ರಷ್ಟು ವಿದ್ಯುತ್‌ನಿಂದ ಇಡೀ ನಾಡನ್ನು ಬೆಳಗಬೇಕಾಗಿದೆ. ರಾಜ್ಯದಲ್ಲಿ ವಿದ್ಯುತ್ ಕೊರತೆಯನ್ನು ನೀಗಿಸಲು ಛತ್ತೀಸಗಡದಲ್ಲಿ ವಿದ್ಯುತ್ ಉತ್ಪಾದಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈಗಾಗಲೇ ಜಾಗ ಗುರುತಿಸಿ, ಟೆಂಡರ್ ಕರೆಯಲಾಗಿದೆ ಎಂದರು.
 
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕಾಂಗ್ರೆಸ್ ಮತ್ತು ಜೆಡಿ‌ಎಸ್ ಪಕ್ಷಗಳು ನೈಸ್, ಹಣಕಾಸಿನ ಕೊರತೆ, ಆಡಳಿತ ವೈಫಲ್ಯ ಮತ್ತಿತರ ನೆಪಗಳನ್ನು ಒಡ್ಡಿ ನಿರಂತರವಾಗಿ ರಾಜೀನಾಮೆಗೆ ಒತ್ತಾಯಿಸುತ್ತಾ ಹಗಲುಗನಸು ಕಾಣುತ್ತಿದ್ದಾರೆ. ಹಣಕಾಸಿನ ಬಗ್ಗೆ ಗೊತ್ತಿರುವಂತಹ ಸಿದ್ದರಾಮಯ್ಯ, ದೇಶಪಾಂಡೆಯಂಥವರು ಸರ್ಕಾರ ದಿವಾಳಿ ಎದ್ದಿದೆ ಎಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ. ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆ ಕಳೆದ ವಿಧಾನ ಮಂಡಲದಲ್ಲಿ ಎಲ್ಲ ಅಂಕಿ‌ಅಂಶಗಳನ್ನು ಇಟ್ಟರೂ ಚರ್ಚೆ ಮಾಡಲಿಲ್ಲ ಎಂದರು.
 
ರಾಜ್ಯ ಸರ್ಕಾರದ ಡಿಸೆಂಬರ್ ತಿಂಗಳವರೆಗಿನ ಸಾಧನೆಗಳ ಬಗ್ಗೆ ಅಂಕಿ‌ಅಂಶಗಳನ್ನು ನೀಡಿ ವಿವರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಕಳೆದ ೯ ತಿಂಗಳ ಅವಧಿಯಲ್ಲಿ ರಾಜ್ಯ ಸರ್ಕಾರ ೨೧೦೫೦ ಕೋ.ರೂ. ತೆರಿಗೆ ಸಂಗ್ರಹಿಸಿ ದಾಖಲೆ ಮಾಡಿದೆ. ನಮ್ಮ ನಿರೀಕ್ಷೆಗಿಂತ ಶೇ. ೬೪.೩ರಷ್ಟು ಹೆಚ್ಚಿಗೆ ತೆರಿಗೆ ಸಂಗ್ರಹವಾಗಿವೆ. ಕೇಂದ್ರ ಸರ್ಕಾರದ ಅನುದಾನ, ತೆರಿಗೆಯೇತರ, ಬಂಡವಾಳ ಸ್ವೀಕೃತಿ ಮತ್ತಿತರ ಆದಾಯಗಳಿಂದ ೩೮೧೦೨ ಕೋ.ರೂ. ಸಂಗ್ರಹಿಸಲಾಗಿದ್ದು, ಕಳೆದ ಸಾಲಿಗಿಂತ (೩೨೦೫೨ ಕೋ.ರೂ.) ಶೇ. ೧೮.೮ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳವರೆಗೆ ೩೨೦೮೨ ಕೋ.ರೂ. ಆರ್ಥಿಕ ವೆಚ್ಚವಾಗಿದ್ದರೆ, ಈ ಸಾಲಿನಲ್ಲಿ ಡಿಸೆಂಬರ್‌ವರೆಗೆ ಶೇ. ೧೮.೨ರಷ್ಟು ಅಂದರೆ ೩೭೯೭೩ ಕೋ.ರೂ. ಖರ್ಚಾಗಿದೆ. ಕಳೆದ ವರ್ಷ ಡಿಸೆಂಬರ್ ತನಕ ೯೫೫೦ ಕೋ.ರೂ ಯೋಜನಾ ವೆಚ್ಚವಾಗಿದ್ದರೆ, ಈ ವರ್ಷ ಶೇ. ೩೦ರಷ್ಟು ಹೆಚ್ಚಳ ಅಂದರೆ ೧೨೪೧೩ ಕೋ.ರೂ. ವೆಚ್ಚವಾಗಿದೆ. ಹಿಂದಿನ ಸರ್ಕಾರಗಳು ಜನವರಿ ಯಿಂದ ಮಾರ್ಚ ವರೆಗೆ ಮಾತ್ರ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದವು. ನಮ್ಮ ಅವಧಿಯಲ್ಲಿ ನಿರಂತರ ವರ್ಷಪೂರ್ತಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು, ಮಂಜೂರಾದ ಎಲ್ಲ ಹಣವನ್ನು ಸಂಪೂರ್ಣ ಸದ್ವಿನಿಯೋಗ ಪಡಿಸಲು ಎಲ್ಲ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದರು.
 
ಸಂಧ್ಯಾ ಸುರಕ್ಷಾ ಯೋಜನೆಯಡಿ ಕಳೆದ ವರ್ಷವರೆಗೆ ೧೧೫೦೩೯ ಜನರು ಲಾಭ ಪಡೆದಿದ್ದರೆ, ಈ ವರ್ಷ ಡಿಸೆಂಬರ್ ತನಕ ೮೮೨೯೫೧ ಫಲಾನುಭವಿಗಳಾಗಿದ್ದಾರೆ. ಕಳೆದ ವರ್ಷ ೮೪೩೫೪೦ ಇದ್ದ ವಿಧವಾ ವೇತನ ಪಡೆದವರ ಸಂಖ್ಯೆ ಈ ವರ್ಷ ೯೭೨೮೫೦ಕ್ಕೆ ಏರಿಕೆಯಾಗಿದೆ. ೭೭೧೩೫೬ರಷ್ಟಿದ್ದ ವೃದ್ಧಾಪ್ಯ ವೇತನ ಪಡೆದವರ ಸಂಖ್ಯೆ ೮೩೪೫೧೪ಕ್ಕೆ ಏರಿದೆ. ಕಳೆದ ವರ್ಷ ೫೧೪೪೩೮ ಅಂಗವಿಕಲರು ವೇತನ ಪಡೆದಿದ್ದರೆ, ಈ ವರ್ಷದವರೆಗೆ ೬೦೪೮೬೪ಕ್ಕೆ ಹೆಚ್ಚಳವಾಗಿದೆ. ಒಟ್ಟು ೩೨೯೫೧೮೦ ಜನರು ಸರ್ಕಾರದಿಂದ ವಿವಿಧ ಯೋಜನೆಗಳ ಪಿಂಚಣಿ ಪಡೆಯುತ್ತಿದ್ದಾರೆ. ೭೦೬೦೦೦ರಷ್ಟು ಭಾಗ್ಯಲಕ್ಷ್ಮೀ ಫಲಾನುಭವಿಗಳಿದ್ದಾರೆ. ನೆಮ್ಮದಿ ಕೇಂದ್ರಗಳಿಂದ ೬೩೫೦೦೦೦ ಜನರಿಗೆ ಬಿಪಿ‌ಎಲ್ ಕಾರ್ಡ ನೀಡಲಾಗಿದೆ. ಹೀಗಾಗಿ ಆಹಾರ ಸಬ್ಸಿಡಿಯಿಂದ ೧೨೦ ಕೋ.ರೂ.ನಷ್ಟು ಹೊರೆಯಾಗಿದೆ. 
 
ಗಡಿಭಾಗದ ಜನರು ಉದ್ಯೋಗಕ್ಕಾಗಿ ನೆರೆ ರಾಜ್ಯಕ್ಕೆ ವಲಸೆ ಹೋಗುವುದನ್ನು ತಪ್ಪಿಸಲು ವೃತ್ತಿಪರ ಕೋರ್ಸುಗಳಿಗೆ ಉತ್ತೇಜನ ನೀಡಿ, ಉದ್ಯೋಗಾವಕಾಶ ಹೆಚ್ಚಿಸಲಾಗುವದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
 
ಉ.ಕ. ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಮೀನುಗಾರಿಕೆ ಸಚಿವ ಆನಂದ ಅಸ್ನೋಟಿಕರ್ ಜೊತೆಗಿದ್ದರು.


Share: