ಹಾವೇರಿ, ಜನವರಿ ೨೫:ಪ್ರಜಾಪ್ರಭುತ್ವದ ಸಂರಕ್ಷರು ತಾವು ಎಂದು ಬೊಬ್ಬೆ ಹಾಕುವ ಶಾಸಕರು ಮತ್ತು ಪೊಲೀಸ್ ಅಧಿಕಾರಿಗಳೇ ಪ್ರಜಾಪ್ರಭುತ್ವ ಹಕ್ಕುಗಳ ಕತ್ತು ಹಿಸುಕಿದ ಘಟನೆ ಇತ್ತೀಚೆಗೆ ಹಾವೇರಿಯಲ್ಲಿ ನಡೆದಿದೆ. ತಾವು ವಾಸ ಮಾಡುತ್ತಿರುವ ಹಾಸ್ಟೆಲ್ನ ವಸ್ಥೆಯನ್ನು ಸರಿಪಡಿಸಲು ಮತ್ತು ಪೌಷ್ಠಿಕ ಆಹಾರಕ್ಕಾಗಿ ಒತ್ತಾಯಿಸಿ ಪ್ರತಿಭಟಿಸಿದ 21 ದಲಿತ ವಿದ್ಯಾರ್ಥಿಗಳನ್ನುಹಾಸ್ಟೆಲ್ನಿಂದ ಹೊರ ಹಾಕಲಾಗಿತ್ತು. ಈ ವಿದ್ಯಾರ್ಥಿಗಳನ್ನು ಮರುಸೇರ್ಪಡೆ ಮಾಡಿಕೊಳ್ಳಬೇಕೆಂದು ಆಗ್ರಹಿಸಿ ಎಸ್ಎಫ್ಐ ಪ್ರತಿಭಟನೆ ನಡೆಸಿ ಶಾಸಕರೊಂದಿಗೆ ಮಾತುಕತೆಗೆ ಹೋದಾಗ ಬಿಜೆಪಿ ಶಾಸಕ ನೆಹರು ಓಲೇಕಾರ್ ಸ್ವತ: ತಾನೇ ಎಸ್ಎಫ್ಐ ನ ಜಿಲ್ಲಾ ಮುಖಂಡರ ಮೇಲೆ ಹಲ್ಲೆ ನಡೆಸಿದ್ದರು.
ಈ ಇಡೀ ಪ್ರಕರಣದ ವಿರುದ್ಧ ಒಂದೆಡೆ ನ್ಯಾಯಾಲಯದಲ್ಲಿ ಕೇಸು ದಾಖಲಿಸಿ, ಮಾನವ ಹಕ್ಕುಗಳ ಆಯೋಗ ಮತ್ತು ರಾಜ್ಯಪಾಲರಿಗೆ ದೂರು ನೀಡಲಾಗಿತ್ತು. ಮತ್ತೊಂದೆಡೆ ಇದನ್ನು ರಾಜಕೀಯವಾಗಿ ಎದುರಿಸಲು ನಿರ್ಧರಿಸಿದ ಎಸ್ಎಫ್ಐ ರಾಜ್ಯಸಮಿತಿ ಜನವರಿ 8 ರಿಂದ ಹಾವೇರಿಯಲ್ಲಿ ರಾಜ್ಯ ಮಟ್ಟದ ರ್ಯಾಲಿಯೊಂದನ್ನು ಆಯೋಜಿಸಿತು. ಈ ಹೋರಾಟಕ್ಕೆ ಸ್ಥಳೀಯ ರೈತಸಂಘ, ಕೂಲಿಕಾರರ ಸಂಘ, ಆಟೋ ಚಾಲಕರ ಸಂಘ, ಅಹಿಂದ, ರಕ್ಷಣಾ ವೇದಿಕೆ ಮುಂತಾದ ಸಂಘಟನೆಗಳು ಬೆಂಬಲ ನೀಡಿದ್ದವು.
ಬೆದರಿಕೆ ತಂತ್ರ
ಶಾಸಕರ ವಿರುದ್ಧದ ಈ ಹೋರಾಟಕ್ಕೆ ಬೆಂಬಲ ನೀಡಿದ ಒಂದೊಂದೇ ಸಂಘಟನೆಗಳ ಮೇಲೆ ಶಾಸಕರು ಪೊಲೀಸ್ ಇಲಾಖೆ ಮೂಲಕ ಒತ್ತಡ ಹಾಕಿಸಿ ಅವನ್ನು ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಮಾಡಿದರು. ಇದಿಷ್ಟೇ ಅಲ್ಲದೆ ಆಟೋ ಚಾಲಕರ ಸಂಘಟನೆಯ ತಾಲ್ಲೂಕು ಅಧ್ಯಕ್ಷನನ್ನು ಹಿಗ್ಗಾಮುಗ್ಗಾ ಥಳಿಸಿ, ಬೆದರಿಸಿ, ನಗರಸಭೆಯ ಉಪಾಧ್ಯಕ್ಷ ಬಿಜೆಪಿಯ ಮುಖಂಡ ತನ್ನ ಕಾರಿನಲ್ಲಿ ಆತನನ್ನು ಕೂಡಿಸಿಕೊಂಡ ಎಸ್ಎಫ್ಐ ಹೋರಾಟಕ್ಕೆ ಆಟೋ ಚಾಲಕರ ಬೆಂಬಲವಿಲ್ಲ ಎಂಬ ಹೇಳಿಕೆಯನ್ನು ಎಲ್ಲಾ ಪತ್ರಿಕೆಗಳಿಗೂ ಕೊಡಿಸಿದ್ದಾರೆ.
ಎ.ಬಿ.ವಿ.ಪಿ ಪ್ರತಿಭಟನೆ :
ಹಾವೇರಿ ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಶೈಕ್ಷಣಿಕ ಸಮಸ್ಯೆಗಳನ್ನು ಕೈಗೆತ್ತಿಕೊಂಡು ವಿದ್ಯಾರ್ಥಿಗಳ ಪರ ಹೋರಾಟ ನಡೆಸದ ಎ.ಬಿ.ವಿ.ಪಿ. ಇದ್ದಕ್ಕಿದ್ದಂತೆ ಉದ್ಭವಮೂರ್ತಿಯ ರೂಪದಲ್ಲಿ ಕಾಣಿಸಿಕೊಂಡು ಜನವರಿ 9 ರಂದೇ ಬಿಜೆಪಿ ಶಾಸಕರ ಪರವಾಗಿ ಎಸ್ಎಫ್ಐ ಮುಖಂಡರ ವಿರುದ್ಧ ಪ್ರತಿಭಟನೆಗೆ ಸಜ್ಜಾಯಿತು. ಕುತೂಹಲದ ಸಂಗತಿಯೆಂದರೆ ಶಾಸಕರು ಹಲ್ಲೆ ನಡೆಸುವ ಮುನ್ನ ಎ.ಬಿ.ವಿ.ಪಿ. ಸಂಘಟನೆಯಿಂದ ಹೊರ ಹಾಕಿದ 21 ಹಾಸ್ಟೆಲ್ ವಿದ್ಯಾರ್ಥಿಗಳನ್ನು ಮರು ಸೇರ್ಪಡೆಗೊಳಿಸಬೇಕೆಂದು ಪತ್ರಿಕಾ ಹೇಳಿಕೆಯೊಂದನ್ನು ನೀಡಲಾಗಿತ್ತು. ಅಂದು ನಡೆದ ಪ್ರತಿಭಟನೆಯಲ್ಲಿ ಹೆಸರೂ ಬ್ಯಾನರ್, ಬಾವುಟ ಮತ್ತು ಎ.ಬಿ.ವಿ.ಪಿ ಯದ್ದು. ಆದರೆ ಅದರಲ್ಲಿ ಭಾಗವಹಿಸಿದ್ದು ಬಿಜೆಪಿಯ ನಗರಸಭಾ ಸದಸ್ಯರೂ ತಾಲ್ಲೂಕು, ಜಿಲ್ಲಾ ಪಂಚಾಯತ್ ಸದಸ್ಯರು ಮತ್ತು ಶಾಸಕರ ಬೆಂಬಲಿಗರು.
ಪ್ರತಿಭಟನೆಗೆ ಪೊಲೀಸರಿಂದ ಅಡ್ಡಿ
ಜನವರಿ 8 ರಂದೇ ಎಸ್ಎಫ್ಐ ಮತ್ತು ಎ.ಬಿ.ವಿ.ಪಿ. ಪ್ರತಿಭಟನೆಗಳನ್ನು ಹಮ್ಮಿಕೊಂಡಿರುವುದರಿಂದ ಎರಡೂ ಸಂಘಟನೆಗಳಿಗೆ ಮೆರವಣಿಗೆಗೆ ಅವಕಾಶ ಕಲ್ಪಿಸುವುದಿಲ್ಲ. ಶಾಂತರೀತಿಯಿಂದ ಬಹಿರಂಗ ಸಭೆ ನಡೆಸಿ ಎಂದ ಸರ್ಕಲ್ ಇನ್ಸ್ಪೆಕ್ಟರ್ ಮನವಿಗೆ ಎಸ್ಎಫ್ಐ ಮುಖಂಡರು ಒಪ್ಪಿ ನಗರದ ಗಾಂಧಿ ಪ್ರತಿಮೆಯ ಬಳಿ ಶಾಂತಿಯುತವಾದ ಬಹಿರಂಗ ಸಭೆಯನ್ನು ನಡೆಸಲು ಪ್ರಾರಂಭಿಸಿತು. ಈ ಪ್ರತಿಭಟನೆಗೆ ಭಾಗವಹಿಸಲೆಂದು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಮತ್ತು ನಗರದ ಕಾಲೇಜುಗಳಿಂದ ಸಾವಿರಾರು ವಿದ್ಯಾರ್ಥಿಗಳು ಆಗಮಿಸಿದ್ದರು. ಇವರೆಲ್ಲರೂ ತಮ್ಮ ತಮ್ಮ ಪ್ರದೇಶಗಳಿಂದ ಬಹಿರಂಗ ಸಭೆಗೆ ಬರುವುದು ಒಂದು ರೀತಿಯ ಮೆರವಣಿಗೆಯಾಗಿ ಮಾರ್ಪಟ್ಟಿತ್ತು. ಬಹಿರಂಗ ಸಭೆಯಲ್ಲಿ ಮೊದಲಿಗೆ ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ಅನಂತ್ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದ ನಂತರ ಮಾಜಿ ಶಾಸಕರಾದ ಜಿ.ವಿ.ಶ್ರೀರಾಮರೆಡ್ಡಿಯವರು ಭಾಷಣ ಆರಂಭವಾದ ಕೆಲವೇ ಕ್ಷಣಗಳಲ್ಲಿ ವೇದಿಕೆಯನ್ನು ಸುತ್ತುವರೆದ ಪೊಲೀಸರು ಅಡಿಶನಲ್ ಎಸ್.ಪಿ.ಯ ನೇತೃತ್ವದಲ್ಲಿ ಸಭೆಗೆ ಅಡ್ಡಿಪಡಿಸಲು ಆರಂಭಿಸಿದರು. ಮೊದಲಿಗೆ ಧ್ವನಿವರ್ಧಕವನ್ನು ಕಿತ್ತುಕೊಂಡರು. ಆಗ ಶ್ರೀರಾಮರೆಡ್ಡಿಯವರು ಹಾಗೇ ಮಾತನ್ನು ಮುಂದುವರೆಸಿದರು. ಅದಕ್ಕೂ ಪೊಲೀಸರು ಅಡ್ಡಿಪಡಿಸಿದರು. ಮುಂಚಿತವಾಗಿಯೇ ಬಹಿರಂಗ ಸಭೆಗೆ ಮತ್ತು ಧ್ವನಿವರ್ಧಕ ಬಳಸಲು ಅನುಮತಿ ಪಡೆದಿದ್ದರೂ ಸಭೆಗೆ ಅಡ್ಡಿಪಡಿಸಿದ ಪೊಲೀಸರ ಕ್ರಮದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಗೆ ಚಾಲನೆ
ಪೊಲೀಸರ ದೌರ್ಜನ್ಯ, ದಬ್ಬಾಳಿಕೆಯನ್ನು ಖಂಡಿಸಿ ಪ್ರತಿಭಟನಾ ಕಾರ್ಯಕ್ರಮವನ್ನು ಮುಂದುವರೆಸಲಾಯಿತು. ಆದರೆ ಯಾವುದೇ ಭಾಷಣಗಳಿರಲಿಲ್ಲ ಬದಲಾಗಿ ಅಲ್ಲಿ ಭಾಗವಹಿಸಿದ್ದವರೆಲ್ಲರೂ ಮೌನವಾಗಿ ಕುಳಿತು ಪ್ರತಿಭಟನೆಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀರಾಮರೆಡ್ಡಿಯವರು ಹಾವೇರಿಯಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಶಾಸಕರು ಮತ್ತು ಪೊಲೀಸ್ ಅಧಿಕಾರಿಗಳಿಂದ ನಡೆಯುತ್ತಿದೆ. ಪ್ರಜಾಪ್ರಭುತ್ವ ರೀತಿಯಲ್ಲಿ ಪ್ರತಿಭಟನೆ ಮಾಡಲು, ಮೆರವಣಿಗೆ ನಡೆಸಲು, ಕೊನೆಗೆ ಮಾತನಾಡಲು ಅವಕಾಶಗಳಿಲ್ಲವೆಂದರೆ ನಾವು ಭಾರತದಲ್ಲಿದ್ದೇವೋ ಅಥವಾ ಉಗಾಂಡದಲ್ಲಿದ್ದೇವೋ ಎನ್ನುವ ಅನುಮಾನ ಬರುತ್ತದೆ. ಯಾವುದೇ ಭಾಷಾ ವ್ಯಕ್ತಿಯ ವಾಕ್ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವುದು ಅತ್ಯಂತ ಖಂಡನಾರ್ಹ ಕ್ರಮ. ಇದನ್ನು ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದರು. ಹಾವೇರಿ ನಗರವನ್ನು ಇಂತಹ ಸ್ಥಿತಿಗೆ ತಂದಿರುವ ಶಾಸಕರ ವಿರುದ್ಧ ಜನರು ತಕ್ಕ ಪಾಠ ಕಲಿಸಬೇಕೆಂದು ಮನವಿ ಮಾಡಿದರು.
ಪ್ರತಿಭಟನಾ ಸಭೆಯಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷರಾದ ನಿತ್ಯಾನಂದಸ್ವಾಮಿ ಭಾಗವಹಿಸಿದ್ದರು. ಎಸ್ಎಫ್ಐ ಜಿಲ್ಲಾ ಅಧ್ಯಕ್ಷ ನಾರಾಯಣ ಕಾಳೆ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಬಸವರಾಜ್ ಪೂಜಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಎಸ್ಎಫ್ಐ ರಾಜ್ಯಾಧ್ಯಕ್ಷರಾದ ಹೆಚ್.ಆರ್.ನವೀನ್ಕುಮಾರ್ ಬೇಡಿಕೆಗಳು ಈಡೇರುವವರೆಗೂ ಈ ಹೋರಾಟವನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟಕ್ಕೆ ಚಾಲನೆ ನೀಡಲಾಗುವುದೆಂದು ಘೋಷಿಸಿದರು.
ಎಸ್ಎಫ್ಐ ಹೋರಾಟದಲ್ಲಿ ಬಿಜೆಪಿ ಮುಖಂಡರ ಮಕ್ಕಳು
ಎಸ್ಎಫ್ಐ ಹಾವೇರಿಯಲ್ಲಿ ಹಿಂದಿನಿಂದಲೂ ರಾಜಿರಹಿತ ಹೋರಾಟ ನಡೆಸುತ್ತಾ ವಿದ್ಯಾರ್ಥಿಗಳ ಆಶಾಕಿರಣವಾಗಿ ಬೆಳೆದಿದೆ. ಆ ಕಾರಣಕ್ಕಾಗಿ ಶಾಸಕರ ವಿರುದ್ಧ ಎಸ್ಎಫ್ಐ ಕರೆ ನೀಡಿದ್ದ ಪ್ರತಿಭಟನಾ ಕರೆಗೆ ಓಗೊಟ್ಟು ನಗರದ ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿಗಳು ಆಗಮಿಸಿದ್ದರು. ವಿಶೇಷವೆಂದರೆ ಶಾಸಕರ ಬೆಂಬಲಿಗರು ಹಾಗೂ ಬಿಜೆಪಿ ನಾಯಕರ ಮಕ್ಕಳು ಕೂಡ ಎಸ್ಎಫ್ಐ ಹೋರಾಟದಲ್ಲಿ ಭಾಗವಹಿಸಿದ್ದರು. ಇದನ್ನು ಕಂಡ ಈ ಮುಖಂಡರುಗಳು ನಾವು ಶಾಸಕರ ಪರ ಹೋರಾಟದಲ್ಲಿದ್ದೇವೆ, ನೀವು ಶಾಸಕರ ವಿರುದ್ಧ ಹೋರಾಟದಲ್ಲಿರುವಿರೆಂದು ವಿದ್ಯಾರ್ಥಿಗಳಿಗೆ ಗದರಿಸುತ್ತಿದ್ದರು. ಅನ್ಯಾಯದ ವಿರುದ್ಧ ನಮ್ಮ ಹೋರಾಟ. ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವವರೆಗೂ ನಾವು ಎಸ್ಎಫ್ಐನ ಜೊತೆ ಇರುತ್ತೇವೆಂದು ವಿದ್ಯಾರ್ಥಿಗಳು ಸ್ಪಷ್ಟವಾಗಿ ಘೋಷಿಸಿದರು.
- ಎಚ್.ಆರ್.ನವೀನ್ ಕುಮಾರ್
ಸೌಜನ್ಯ: ಜನಶಕ್ತಿ