ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ವಿಶೇಷ ಪುಟ / ಲಕ್ನೋಮಾಯಾವತಿ ನೋಟಿನ ಹಾರದಲ್ಲಿ 22 ಕೋಟಿ ರೂಪಾಯಿ!

ಲಕ್ನೋಮಾಯಾವತಿ ನೋಟಿನ ಹಾರದಲ್ಲಿ 22 ಕೋಟಿ ರೂಪಾಯಿ!

Thu, 18 Mar 2010 02:48:00  Office Staff   S.O. News Service

ಕೆಂಡಾಮಂಡಲವಾದ ಕಾಂಗ್ರೆಸ್...
ಬಹುಜನ ಸಮಾಜವಾದಿ ಪಕ್ಷದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಪಕ್ಷದ ಅಧಿನಾಯಕಿ ಮಾಯಾವತಿ ಕೊರಳಿಗೆ ಹಾಕಿರುವ ಹಾರ ವಿವಾದಕ್ಕೆ ಕಾರಣವಾದ ನಂತರ ಉತ್ತರ ಪ್ರದೇಶ ಮುಖ್ಯಮಂತ್ರಿ ಸಾಕ್ಷ್ಯಗಳನ್ನು ನಾಶಪಡಿಸಲು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿದೆ.
img1100317029_1_1.jpg
PR


ಈ ಸಂಬಂಧ ವಾರ್ತಾವಾಹಿನಿಯೊಂದರ ಜತೆ ಮಾತನಾಡಿರುವ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್, ಈ ನೋಟಿನ ಮಾಲೆಯಲ್ಲಿ 22.5 ಕೋಟಿ ರೂಪಾಯಿ ಹಣವಿದೆ ಎಂದು ಲೆಕ್ಕ ಹಾಕಿದ್ದಾರೆ.

ಹಾರದ ಪ್ರತೀ ಸುತ್ತಿನಲ್ಲಿ 1,000 ರೂಪಾಯಿಯ 45 ನೋಟುಗಳನ್ನು ಬಳಸಲಾಗಿದೆ. ಅಂದರೆ ಒಂದು ಸುತ್ತಿನಲ್ಲಿ 45,000 ರೂಪಾಯಿ ಹಣವನ್ನು ಪೋಣಿಸಲಾಗಿದೆ. ಇಂತಹ ಪ್ರತೀ ಒಂದು ಸೆಂಟಿ ಮೀಟರ್ ಹಾರದಲ್ಲಿ ಇಂತಹ ಐದು ಸುತ್ತುಗಳ ಅಗತ್ಯವಿರುತ್ತದೆ. ಅಂದರೆ 5 x 45,000= 2,25,000ರೂಪಾಯಿಗಳಾಗುತ್ತದೆ.

ಮಾಯಾವತಿಯವರಿಗೆ ಹಾಕಲಾಗಿರುವ ಮಾಲೆ ಸುಮಾರು 10 ಮೀಟರ್ ಉದ್ದವಿತ್ತು. ಅಂದರೆ 2.25 ಲಕ್ಷ x 1,000 = 22.5 ಕೋಟಿ ರೂಪಾಯಿಗಳಾಗುತ್ತದೆ ಎಂದು ದಿಗ್ವಿಜಯ್ ಸಿಂಗ್ ವಿವರಣೆ ನೀಡಿದ್ದಾರೆ.

ಇಲ್ಲ.. ಕೇವಲ 21 ಲಕ್ಷ ಮಾತ್ರ...
ಮಾಯಾವತಿಯವರಿಗೆ ಹಾಕಿ ಹಾರದಲ್ಲಿ ಕೋಟಿಗಟ್ಟಲೆ ಹಣವಿರಲಿಲ್ಲ. ಕೇವಲ 21 ಲಕ್ಷ ರೂಪಾಯಿ ಮಾತ್ರ ಇತ್ತು. ಇದನ್ನು ಲಕ್ನೋದ ಬಿಎಸ್‌ಪಿ ಘಟಕ ತಯಾರಿಸಿದೆ. ಇಲ್ಲಿನ ಕಾರ್ಯಕರ್ತರಿಂದ ಮಾತ್ರ ಮಾಲೆಗಾಗಿ ಹಣ ಸಂಗ್ರಹಿಸಲಾಗಿದೆ ಎಂದು ಉತ್ತರ ಪ್ರದೇಶ ಸರಕಾರದ ಸಚಿವ ನಸೀಮುದ್ದೀನ್ ಸಿದ್ಧಿಕಿ ಸ್ಪಷ್ಟನೆ ನೀಡಿದ್ದಾರೆ.

ಸಚಿವರು ಇದು ಲಕ್ನೋದಿಂದ ಅರ್ಪಣೆ ಮಾಡಲ್ಪಟ್ಟಿದೆ ಎಂದು ಪುನರುಚ್ಛರಿಸುತ್ತಿದ್ದರೂ, ಮೂಲಗಳ ಪ್ರಕಾರ ಈ ಮಾಲೆ ಕರ್ನಾಟಕ ಬಿಎಸ್‌ಪಿ ಘಟಕದಿಂದ ನೀಡಲ್ಪಟ್ಟಿದೆ. ಆದರೆ ಕರ್ನಾಟಕ ಘಟಕದ ಸದಸ್ಯರು ಅಥವಾ ಅಧ್ಯಕ್ಷರು ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸುತ್ತಿದ್ದಾರೆ.

ಈ ಮಾಲೆಯನ್ನು ನಾವೇ ನೀಡಿದ್ದು ಎಂದು ಕರ್ನಾಟಕದ ಹೆಸರು ಹೇಳಲಿಚ್ಛಿಸದ ಬಿಎಸ್‌ಪಿ ನಾಯಕರೊಬ್ಬರು ಹೇಳಿಕೊಂಡಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ಧಿಕಿ, ನಾನು ಹೇಳುತ್ತಿರುವುದೇ ಸತ್ಯ; ಕರ್ನಾಟಕದಿಂದ ಈ ರೀತಿಯ ಹೇಳಿಕೆಯನ್ನು ಯಾರು ನೀಡಿದ್ದಾರೋ ನನಗೆ ಗೊತ್ತಿಲ್ಲ ಎಂದಿದ್ದಾರೆ.

ನಿನ್ನೆ ಲೋಕಸಭೆಯಲ್ಲಿ ಮಾಯಾವತಿ ಹಾರ ಭಾರೀ ಗದ್ದಲಕ್ಕೆ ಕಾರಣವಾಗಿತ್ತು. ಸಮಾಜವಾದಿ, ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ಬಹುತೇಕ ಪಕ್ಷಗಳ ಸದಸ್ಯರು ದುಬಾರಿ ಹಾರದ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದವು.

ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆಯು ಮಾಯಾ ಹಾರ ಪ್ರಕರಣವನ್ನು ತನಿಖೆ ನಡೆಸಲಿದೆ ಎಂದು ಮೂಲಗಳು ಹೇಳಿವೆ.
 
ಸೌಜನ್ಯ: ೨೪ ದುನಿಯಾ 

Share: